| ರಮೇಶ ಮೈಸೂರು
ಜಗತ್ತಿನ ಅತಿದೊಡ್ಡ ಎಂಬ ಹೆಗ್ಗಳಿಕೆ ಮಾತ್ರವಲ್ಲದೆ, ಅತಿ ಹೆಚ್ಚು ಭಕ್ತರನ್ನು ಸೆಳೆಯುತ್ತದೆ ಪುರಿ ಜಗನ್ನಾಥ ರಥಯಾತ್ರೆ. ಅತ್ಯಂತ ಪುರಾತನ ಎಂಬ ಶ್ರೇಯವೂ ಇದಕ್ಕಿದೆ. ಪ್ರತಿವರ್ಷ ಆಷಾಢ ಶುಕ್ಲ ಪಕ್ಷದ ದ್ವಿತೀಯದಿಂದ ಆರಂಭವಾಗಿ ಒಂಬತ್ತು ದಿನಗಳ ಕಾಲ ಅತಿ ವಿಜೃಂಭಣೆಯಿಂದ ಜರುಗುವ ಈ ರಥೋತ್ಸವ ಸ್ಕಂದಪುರಾಣದಲ್ಲೂ ಉಲ್ಲೇಖವಾಗಿದೆ. ಆದರೆ, ಜಗನ್ನಾಥ ಬುಡಕಟ್ಟು ದೈವವೆಂದೇ ಜನಜನಿತ.
ಬೃಹತ್ ಜಗನ್ನಾಥ ಮಂದಿರದಿಂದ ಹೊರಡುವ ಮೂರು ರಥಗಳೆಂದರೆ ಜಗನ್ನಾಥ (ಕೃಷ್ಣ), ಬಲಭದ್ರ (ಬಲರಾಮ ) ಹಾಗೂ ಸುಭದ್ರೆ. ಇವುಗಳನ್ನು ಕ್ರಮವಾಗಿ ನಂದಿಘೋಷ, ತಾಳಧ್ವಜ ಹಾಗೂ ದರ್ಪದಲನ ರಥಗಳೆಂದು ಕರೆಯಲಾಗುತ್ತದೆ. ಭವ್ಯತೆಯಿಂದ ಮನಸೂರೆಗೊಳ್ಳುವ ಇವುಗಳ ನಿರ್ವಣದ ಹಿಂದೆಯೂ ಅಷ್ಟೇ ರೋಚಕತೆಯಿದೆ.
ಆಷಾಢದ ಮಹಾರಥೋತ್ಸವಕ್ಕೆ ವೈಶಾಖದಲ್ಲಿ ಮುಹೂರ್ತ ನೆರವೇರುತ್ತದೆ. ವೈಶಾಖದ ಮೂರನೇ ದಿನವಾದ ಅಕ್ಷಯ ತೃತೀಯದಂದು ಪುರಿಯ ರಾಜನ ಸಮ್ಮುಖದಲ್ಲಿ ನಿರ್ಮಾಣ ಕಾರ್ಯ ಶುರುವಾಗುತ್ತದೆ. ವಿಶೇಷವೆಂದರೆ ರಥದ ಮುಂಭಾಗದಲ್ಲಿ ಚಿನ್ನದ ಪೊರಕೆಯಿಂದ ಕಸ ಗುಡಿಸುವ ಮೂಲಕ ಜಗನ್ನಾಥ ರಥಯಾತ್ರೆಗೆ ರಾಜನೇ ಚಾಲನೆ ನೀಡುತ್ತಾನೆ. ಒಟ್ಟು 42 ದಿನಗಳ ಕಾಲ ನಡೆಯುವ ನಿರ್ಮಾಣ ಕೈಂಕರ್ಯವನ್ನು ಎರಡು ಹಂತಗಳಲ್ಲಿ ವಿಂಗಡಿಸಲಾಗಿದೆ. 21 ದಿನಗಳವರೆಗೆ ರಥಧ ಬಾಹ್ಯ ನಿರ್ಮಾಣ ನಡೆದರೆ, ಮತ್ತೆ 21 ದಿನ ವಿವಿಧ ಧಾರ್ವಿುಕ ವಿಧಿ-ವಿಧಾನಗಳನ್ನು ಒಳಗೊಂಡಿರುತ್ತದೆ. ಪ್ರತಿ ರಥಕ್ಕೂ 9 ಪಾರ್ಶ್ವ ದೇವತೆಗಳಿರುತ್ತವೆ. ರಥದ ಸುತ್ತ ಈ ದೇವರ ಮೂರ್ತಿಗಳನ್ನು ಕೆತ್ತಲಾಗುತ್ತದೆ ಅಥವಾ ಪ್ರತಿಷ್ಠಾಪಿಸಲಾಗುತ್ತದೆ.
ಚಂದನ ಯಾತ್ರೆ ಎಂದೇ ರಥ ನಿರ್ವಣವನ್ನು ಕರೆಯಲಾಗುತ್ತದೆ. ರಥಗಳು ಸಿದ್ಧವಾಗುತ್ತಿರುವ ನಡುವೆಯೇ, ಇತ್ತ ದೇವರನ್ನು ಸಜ್ಜುಗೊಳಿಸಲಾಗುತ್ತಿರುತ್ತದೆ. ಇದರ ಪ್ರಮುಖ ಘಟ್ಟವೆಂದರೆ ಜ್ಯೇಷ್ಠದ ಹುಣ್ಣಿಮೆಯಂದು ನಡೆಯುವ ಜಗನ್ನಾಥ ದೇವರ ಸ್ನಾನಯಾತ್ರೆ. ಬಲರಾಮ ಹಾಗೂ ಸುಭದ್ರೆಯರೊಂದಿಗೆ ದೇಗುಲದ ಸಮೀಪದಲ್ಲೇ ಇರುವ ನರೇಂದ್ರ ಸರೋವರದಲ್ಲಿ 108 ಕೊಡಗಳ ನೀರಿನಿಂದ ಅಭಿಷೇಕ ನಡೆಯುತ್ತದೆ. ಪರಿಣಾಮ ದೇವರಿಗೆ ಶೀತಬಾಧೆ ಕಾಣಿಸಿಕೊಂಡು ಎರಡು ವಾರಗಳ ವಿರಾಮದ ಅವಧಿ ಘೋಷಿಸಲಾಗುತ್ತದೆ. ಈ ವೇಳೆ ದೇವರ ದರ್ಶನ ಇರುವುದಿಲ್ಲ. ಇಷ್ಟೇ ಅಲ್ಲ, ದೇವರು ಶೀಘ್ರ ಗುಣಮುಖರಾಗಲಿ ಎಂಬ ಕಾರಣಕ್ಕೆ ಪಥ್ಯವೂ ನಡೆಯುತ್ತದೆ. ನೈವೇದ್ಯವಾಗಿ ಕಂದಮೂಲ, ಸೊಪು್ಪ, ಫಲಾಹಾರ ಅರ್ಪಿಸಲಾಗುತ್ತದೆ. ಈ ವೇಳೆ ಬಿದಿರಿನ ಹೊದಿಕೆ ಮೇಲೆ ಓಡಿಶಾ ಸಾಂಪ್ರದಾಯಿಕ ಶೈಲಿಯಲ್ಲಿ ಬಿಡಿಸಲಾದ ಚಿತ್ರಗಳನ್ನು ದೇವರನ್ನು ಮರೆಮಾಚಲು ತೂಗು ಹಾಕಲಾಗಿರುತ್ತದೆ. ಜಗನ್ನಾಥನೊಂದಿಗೆ ಬುಡಕಟ್ಟು ಸಂಪ್ರದಾಯಗಳು ಹಾಸುಹೊಕ್ಕಾಗಿರುವುದನ್ನು ಇದು ಪ್ರತಿನಿಧಿಸುತ್ತದೆ. ಈ ಅವಧಿಯಲ್ಲಿ ದೇವರ ಆರೈಕೆಯೂ ಬುಡಕಟ್ಟು ಸಮುದಾಯದ ಪ್ರತಿನಿಧಿಯ ಹೊಣೆ ಹಾಗೂ ಪರಮಾಧಿಕಾರವೂ ಹೌದು.
ರಥೋತ್ಸವದ ದಿನಗಳಂದು ಇಡೀ ಪುರಿ ನಗರದಲ್ಲಿ ಜೈ ಜಗನ್ನಾಥ ಮಂತ್ರ ಅನುರಣಿಸುತ್ತದೆ. ಹಿಂದಿನ ದಿನ ರಾತ್ರಿಯೇ ನಗರಕ್ಕೆ ವಾಹನ ಸಂಚಾರ ನಿರ್ಬಂಧಿಸಲ್ಪಟ್ಟಿರುತ್ತದೆ. ಮೈಲಿಗಟ್ಟಲೇ ದೂರದಿಂದ ರಥ ಸಾಗುವ ‘ಬಡಾ ದಂಡಾ’ ಅಥವಾ ಗ್ರ್ಯಾಂಡ್ ರೋಡ್​ಗೆ ಕಾಲ್ನಡಿಗೆಯಲ್ಲೇ ತಲುಪುವುದು ಅನಿವಾರ್ಯ. ಈ ಪುರುಷೋತ್ತಮ ಕ್ಷೇತ್ರದಲ್ಲಿ ಭಕ್ತರ ಮಹಾ ಸಾಗರವೇ ನೆರೆದಿರುತ್ತದೆ. ರಸ್ತೆಯ ಎರಡೂ ಬದಿಯಲ್ಲಿ ಒತ್ತೊತ್ತಾಗಿ ನಿಂತಿರುವ ಜನರು ತೇರು ಹತ್ತಿರಕ್ಕೆ ಬರುತ್ತಿದ್ದಂತೆ ಭಕ್ತಿಪರವಶರಾಗುತ್ತಾರೆ. ತೇರು ಎಳೆದರೆ ಅದಕ್ಕಿಂತ ಪುಣ್ಯ ಇನ್ನೊಂದಿಲ್ಲ, ತೇರಿನ ಹಗ್ಗವನ್ನು ರ್ಸ³ಸಿದರೂ ಭಗವಂತನ ಕೃಪೆಗೆ ಪಾತ್ರರಾದೆವು ಎನ್ನುವ ಪುನೀತ ಭಾವ. ರಥ ಸಾಗುವ ದಾರಿಯುದ್ದಕ್ಕೂ ಸಾವಿರಾರು ಕೈಗಳು ಬದಲಾಗುತ್ತಲೇ ಇರುತ್ತವೆ. ಒಮ್ಮೆ ಒಳಹೊಕ್ಕು ಹೊರಬರುವುದು ಯಾವ ಚಕ್ರವ್ಯೂಹವನ್ನು ಭೇದಿಸುವ ಸಾಹಸಕ್ಕೆ ಕಡಿಮೆಯಿಲ್ಲದ್ದು. ಹೆಚ್ಚು ಪೊಲೀಸರ ನಿಯೋಜನೆ, ರಥದ ಸುತ್ತಲೂ ರಕ್ಷಾ ಕವಚವಾಗಿ ಹಗ್ಗ ಹಿಡಿದು ಸಾಗುವ ಪೊಲೀಸರು, ಜನರ ಮಧ್ಯದಲ್ಲೇ ಸಾಗುವ ಅಂಬುಲೆನ್ಸ್ ಗಳು ಅವಘಡಗಳಿಗೆ ತುರ್ತಾಗಿ ಪ್ರತಿಕ್ರಿಯಿಸುತ್ತವೆ. ಸುಡುವ ಬಿಸಿಲಿನಲ್ಲಿ ರಸ್ತೆ ಹಾಗೂ ಭಕ್ತರನ್ನು ತಂಪಾಗಿಸಲು ಹತ್ತಾರು ಅಗ್ನಿಶಾಮಕ ವಾಹನಗಳು ತುಂತುರು ಮಳೆಗರೆಯುತ್ತ ಸಾಗುತ್ತವೆ. ದಣಿವು ನಿವಾರಿಸಿ ಭಕ್ತರ ಉತ್ಸಾಹವನ್ನು ಕಾಪಿಡುವ ಸಂಗತಿಗಳು ಹೌದು. ಬಿಸಿಲಿನ ಹೊಡೆತಕ್ಕೆ, ವಾತಾವರಣದ ಆರ್ದ್ರತೆಗೆ ರಸ್ತೆಗಿಳಿದ ಕೆಲ ನಿಮಿಷದಲ್ಲೇ ಬೆವರಿನಿಂದ ಒದ್ದೆಯಾಗುತ್ತೇವೆ. ಇದರ ನಡುವೆಯೂ ಜಗನ್ನಾಥನ ದರ್ಶನಕ್ಕೆ ಇಡೀ ದಿನ ಕಾದು ನಿಂತಿರುತ್ತಾರೆ. ರಥಯಾತ್ರೆಯಲ್ಲಿ ಮೂಲ ವಿಗ್ರಹಗಳನ್ನೇ ಕೊಂಡೊಯ್ಯುವುದು ಇಲ್ಲಿನ ವಿಶೇಷ. ಹೀಗಾಗಿ, ದರ್ಶನಕ್ಕೆ ವಿಶೇಷ ಧನ್ಯತಾಭಾವವೂ ಮೇಳೈಸಿಕೊಳ್ಳುತ್ತದೆ.
ಪ್ರತಿವರ್ಷ ಜಗನ್ನಾಥನ ರಥಯಾತ್ರೆಯಲ್ಲಿ 20 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುತ್ತಾರೆ. ಜಗನ್ನಾಥ ಮಂದಿರದಿಂದ ಗುಂಡಿಚಾ ಮಂದಿರಕ್ಕೆ ತೆರಳುವ ಅಂದರೆ ಮೊದಲ ದಿನದ ರಥಯಾತ್ರೆಯಲ್ಲಿ ಸಾಮಾನ್ಯವಾಗಿ 10 ಲಕ್ಷಕ್ಕೂ ಹೆಚ್ಚು ಭಕ್ತರು ಭಾಗಿಯಾಗುತ್ತಾರೆ. ನಂತರದ ‘ಬಹುದಾ’ (ಗುಂಡಿಚಾದಿಂದ ಜಗನ್ನಾಥ ಮಂದಿರಕ್ಕೆ ಮರಳುವ) ಯಾತ್ರೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳುತ್ತಾರೆ. ಈ ಎರಡು ಯಾತ್ರೆಗಳ ನಡುವಿನ ಅವಧಿಯಲ್ಲಿ ಗುಂಡಿಚಾ ಮಂದಿರದಲ್ಲಿ ಪ್ರತಿದಿನವೂ ಲಕ್ಷಾಂತರ ಜನರು ದೇವರ ದರ್ಶನ ಪಡೆಯುತ್ತಾರೆ. ದೇವರನ್ನು ಮರಳಿ ಜಗನ್ನಾಥ ಮಂದಿರಕ್ಕೆ ಕೊಂಡೊಯ್ಯುವ ಮುನ್ನ ರಥದಲ್ಲೇ ತೊಡಿಸಲಾಗುವ ಸ್ವರ್ಣಾಭರಣದ ‘ಸುನಾ ಬೇಷ್’ ಕಣ್ತುಂಬಿಕೊಳ್ಳಲು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಾರೆ. ಒಟ್ಟಾರೆ 208 ಕೆಜಿ ಚಿನ್ನದ ಆಭರಣಗಳನ್ನು ದೇವರಿಗೆ ತೊಡಿಸಲಾಗಿರುತ್ತದೆ.
ಕರಾವಳಿಯ ಪುರಿ ನಗರವನ್ನು ಶ್ರೀಕೃಷ್ಣ ನಗರಿ ಉಡುಪಿಗೆ ಹೋಲಿಸಬಹುದು. ಚಾರ್​ಧಾಮ್ಳಲ್ಲಿ ಒಂದೆನಿಸಿರುವ ಇಲ್ಲಿನ ಜನಸಂಖ್ಯೆ ಅಂದಾಜು 2.25 ಲಕ್ಷ. ಭೌಗೋಳಿಕ ವಿಸ್ತಾರದಲ್ಲಿ ಉಡುಪಿಯ 68.28 ಚದರ ಕಿ.ಮೀ.ಗೆ ಹೋಲಿಸಿದಲ್ಲಿ ನಾಲ್ಕುಪಟ್ಟು ಚಿಕ್ಕದೆನಿಸುತ್ತದೆ. ವಾತಾವರಣ, ಮಳೆ ಎಲ್ಲವೂ ಸಾದೃಶ್ಯ. ತಾಪಮಾನ ಕಡಿಮೆ ಎನಿಸಿದರೂ ಬೆವರಿಳಿಸದೆ ಬಿಡದು. ನಿತ್ಯ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಒಂದು ಲಕ್ಷಕ್ಕೂ ಹೆಚ್ಚು. ರಥಯಾತ್ರೆ ದಿನಗಳಲ್ಲಿ ಬರುವ ಭಕ್ತರಿಗೆ ವಸತಿ ವ್ಯವಸ್ಥೆಯೂ ಸವಾಲು. ಹೀಗಾಗಿ ಮನೆಗಳೆಲ್ಲವೂ ಆತಿಥ್ಯ ಕೇಂದ್ರಗಳೇ, ರಸ್ತೆಯುದ್ದಕ್ಕೂ ಬಜೆಟ್ ತಕ್ಕ ಹೋಟೆಲ್​ಗಳು. ಜಗನ್ನಾಥನ ದರ್ಶನಕ್ಕೆಂದು ಸುತ್ತಲಿನ ಪ್ರದೇಶಗಳಿಂದ ಬರುವ ಜನರು ಪಕ್ಕದ ಕಡಲ ತೀರವನ್ನೇ ನೆಚ್ಚಿಕೊಳ್ಳುತ್ತಾರೆ. ಗ್ರಾ್ಯಂಡ್ ರೋಡಿನಲ್ಲಿ ಜಮಾಯಿಸಿದ್ದ ಜನರೆಲ್ಲ ಇಲ್ಲೇ ತಂಗಿದ್ದಾರೆ ಎನ್ನುವಂತೆ ಮರಳು ಹಾಸಿನ ಮೇಲೆಯೇ ಪವಡಿಸಿ ರಾತ್ರಿ ಕಳೆಯುತ್ತಾರೆ. ಕಡಲ ತೀರವೆಲ್ಲ ನಿದ್ರಿಸದ ನಗರವೇ ಆಗಿರುತ್ತದೆ. ಇದಷ್ಟೇ ಅಲ್ಲದೆ, ಪುರಿಯ ರಸ್ತೆ, ತೆರೆದ ಪ್ರದೇಶಗಳು, ದೇವಾಲಯದ ಸುತ್ತಲಿನ ಸಿಕ್ಕ ಜಾಗಗಳಲ್ಲೇ ಜನರು ಮಲಗಿರುವುದು ಕಂಡುಬರುತ್ತದೆ.
ರಥಯಾತ್ರೆಗೆ ಆಗಮಿಸಿದ ಭಕ್ತರಿಗೆ ನಗರದಲ್ಲೆಲ್ಲ ಉಟೋಪಚಾರ, ತಂಪು ಪಾನೀಯದ ವ್ಯವಸ್ಥೆಯಲ್ಲಿ ಸಹೃದಯರು, ಸಂಘ-ಸಂಸ್ಥೆಗಳು ಉದಾರವಾಗಿ ತೊಡಗಿಕೊಂಡಿರುತ್ತಾರೆ. ಗ್ರಾಂಡ್ ರೋಡಿನ ಉದ್ದಕ್ಕೂ ಇದು ಕಂಡುಬರುತ್ತದೆ. ಅದರಲ್ಲೂ ಇಸ್ಕಾನ್ ಸಂಸ್ಥೆ ಲಕ್ಷಾಂತರ ಜನರಿಗೆ ರುಚಿಕಟ್ಟಾದ ಊಟದ ವ್ಯವಸ್ಥೆಯನ್ನು ಅಷ್ಟೇ ಅಚ್ಚುಕಟ್ಟಾಗಿ ನಡೆಸಿಕೊಡುತ್ತದೆ. ಗೌರಂಗ್ ಸೇವಾ ಪ್ರತಿಷ್ಠಾನ ಇದರಲ್ಲಿ ತೊಡಗಿಕೊಂಡಿರುತ್ತದೆ. ಈ ಸಂಸ್ಥೆಯ ಸದಸ್ಯರು ನಡೆಸಿಕೊಡುವ ಹರಿನಾಮ ಸಂಕೀರ್ತನೆ, ಭಜನೆಯೂ ಜನಾಕರ್ಷಣೀಯ. ಇನ್ನು ಜಗನ್ನಾಥ ರಥಯಾತ್ರೆ ಭಾರತದಲ್ಲಷ್ಟೇ ಅಲ್ಲ, ವಿಶ್ವದ ಹತ್ತಾರು ದೇಶಗಳಲ್ಲಿ ನಡೆಯುತ್ತದೆ. ಅಮೆರಿಕ, ಯುಕೆ, ಫ್ರಾನ್ಸ್, ರಷ್ಯಾ, ಸ್ವಿಡನ್, ರೋಮ್ ಆಸ್ಟ್ರೇಲಿಯಾ, ಮೆಕ್ಸಿಕೋ, ಬ್ಯಾಂಕಾಕ್ ಆಫ್ರಿಕಾ ರಾಷ್ಟ್ರಗಳಲ್ಲೂ ಇಸ್ಕಾನ್ ರಥಯಾತ್ರೆಯನ್ನು ನಡೆಸುತ್ತದೆ. ಇಷ್ಟೇ ಅಲ್ಲ, ದುಬೈ, ನೆರೆಯ ಪಾಕಿಸ್ತಾನದ ಕರಾಚಿಯಲ್ಲೂ ಜಗನ್ನಾಥ ರಥದಲ್ಲಿ ವಿರಾಜಮಾನನಾಗಿ ದರ್ಶನ ನೀಡುತ್ತಾನೆ ಎನ್ನುವುದು ವಿಶೇಷ. ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘ (ಇಸ್ಕಾನ್) ಇದನ್ನು ನೈಜತೆಯಲ್ಲೇ ಜಾಗತಿಕಮಟ್ಟಕ್ಕೆ ಕೊಂಡೊಯ್ದಿದೆ. ಅಷ್ಟಕ್ಕೂ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರಿಂದ ಇಸ್ಕಾನ್ ಸ್ಥಾಪನೆಯಾಗಿದ್ದು ಕೂಡ ನ್ಯೂಯಾರ್ಕ್​ನಲ್ಲಿ. ಈ ಭಕ್ತಿಪಂಥವೀಗ ಜಗದ್ವ್ಯಾಪಿಯಾಗಿದೆ. ಶ್ರೀಕೃಷ್ಣ ಪ್ರಜ್ಞೆ ಪಸರಿಸುವುದು ಮಾತ್ರವಲ್ಲದೆ, ಅಕ್ಷಯ ಪಾತ್ರೆ ಮೂಲಕ ಶಿಕ್ಷಣ ಕ್ಷೇತ್ರದ ಸೇವೆಯಲ್ಲಿ ತೊಡಗಿದೆ. ಸಾಮಾಜಿಕ ಸೇವಾ ಕಾರ್ಯದಲ್ಲೂ ತೊಡಗಿಸಿಕೊಂಡಿದೆ ಎನ್ನುತ್ತಾರೆ ಇಸ್ಕಾನ್ ಬೆಂಗಳೂರಿನ ಮಹೋತ್ಸಾಹ ಚೈತನ್ಯ ದಾಸ ಹಾಗೂ ವಿಮಲಕೃಷ್ಣ ದಾಸ.
ಉತ್ತರದ ದೇವಾಲಯಗಳಲ್ಲಿ ನಮ್ಮಲ್ಲಿರುವಂತೆ ದಾಸೋಹದ ಪರಿಕಲ್ಪನೆಯಿಲ್ಲ. ಇಲ್ಲಿ ದೇವರಿಗೆ ನೈವೇದ್ಯವಾದುದನ್ನೇ ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆ. ನೈವೇದ್ಯದ ಉದ್ದೇಶಕ್ಕಾಗಿಯೇ ನಿರ್ವಿುಸಲಾಗಿರುವ ದೇವರ ಎದುರಿನ ಪ್ರಾಂಗಣವನ್ನು ‘ಬೋಗ್ ಶಾಲಾ’ ಎಂದೇ ಕರೆಯಲಾಗುತ್ತದೆ. ನೂರಾರು ಮಡಿಕೆಗಳಲ್ಲಿ ದೇವರಿಗಾಗಿ ನೈವೇದ್ಯ ತಯಾರಾಗುತ್ತದೆ. ಒಮ್ಮೆ ಬಳಸಿದ ಮಡಕೆಯನ್ನು ಇನ್ನೊಮ್ಮೆ ಬಳಸುವುದಿಲ್ಲ. ದೇವಾಲಯಗಳ ಪಕ್ಕದಲ್ಲೇ ಪ್ರಸಾದ ವಿತರಣೆಗೆ ‘ಆನಂದ ಬಜಾರ್’ ಎಂಬ ಪ್ರಾಂಗಣವಿರುತ್ತದೆ. 50ರಿಂದ 500ರೂ.ವರೆಗೆ ಬೆಲೆ ತೆತ್ತು ತಮಗಿಷ್ಟವಾದ ಪ್ರಸಾದ ಸ್ವೀಕರಿಸುತ್ತಾರೆ. ಲಕ್ಷಾಂತರ ಭಕ್ತರಿಗೆ ಆಹಾರ ತಯಾರಿಸಬೇಕಿರುವುದರಿಂದ ಜಗನ್ನಾಥ ದೇವಾಲಯದ ಅಡುಗೆ ಮನೆಗೆ ಬಿಡುವೇ ಇರುವುದಿಲ್ಲ. ದೇವರು ಗುಂಡೀಚಾ ದೇವಾಲಯಕ್ಕೆ ತೆರಳಿದಾಗ ದೇವಾಲಯ ಹಾಗೂ ಅಡುಗೆ ಮನೆ ನವೀಕರಣ ಅಥವಾ ದುರಸ್ತಿ ಕಾರ್ಯ ನಡೆಸಲಾಗುತ್ತದೆ. ಸೌದೆ ಬಳಸಿಯೇ ಅಡುಗೆ ತಯಾರಿಸುವುದು ಇಲ್ಲಿನ ಸಂಪ್ರದಾಯ.
ಶುಲ್ಕ ಪಾವತಿಗಾಗಿ ಪಾರ್ಟ್​ ಟೈಂ ಕೆಲಸ ಮಾಡಿ ಓದಿದ್ದ ವಿದ್ಯಾರ್ಥಿನಿಗೆ 2 ಚಿನ್ನದ ಪದಕ!

ಯಥಾಸ್ಥಿತಿ ಕಾಪಾಡಿ, ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ: ಮದ್ಯಪಾನಪ್ರಿಯರ ಸಂಘದಿಂದ ಸರ್ಕಾರಕ್ಕೆ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
