ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ, ಉಭಯಗಾನ ವಿಶಾರದ ಶ್ರೀ ಪುಟ್ಟರಾಜ ಕವಿಗವಾಯಿಗಳ ಪುಣ್ಯತಿಥಿಯ ಮುನ್ನಾ ದಿನವಾದ ಬುಧವಾರ “ವಿಜಯವಾಣಿ ಕ್ಲಬ್​ ಹೌಸ್​’ನಲ್ಲಿ ಜರುಗಿದ ಪುಣ್ಯಸ್ಮರಣೆ ಕಾರ್ಯಕ್ರಮವು ಶ್ರೋತೃಗಳನ್ನು ಗಾನಲೋಕದಲ್ಲಿ ಪಯಣಿಸುವಂತೆ ಮಾಡಿತು. ನಾಡಿನಾದ್ಯಂತ ಜನಪ್ರಿಯತೆ ಗಳಿಸಿರುವ ಪುಟ್ಟರಾಜರ ಅನೇಕ ಪಟ್ಟಶಿಷ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಒಡನಾಟವನ್ನು ಹಂಚಿಕೊಳ್ಳುವ ಮೂಲಕ ನುಡಿಮನ ಸಲ್ಲಿಸಿದರು. ಪುಟ್ಟರಾಜರ ರಚನೆಯ ವಚನ ಗಾಯನಗಳನ್ನು ಪ್ರಸ್ತುತಪಡಿಸುವ ಮೂಲಕ ಸಂಗೀತದ ರಸದೌತಣವನ್ನೇ ಬಡಿಸಿದರು.
ಕಣ್ಣು- ಕಾಲು ಇಲ್ಲದ ಸಾವಿರಾರು ಜನರಿಗೆ ಅನ್ನ, ಆಶ್ರಯ, ಸಂಸ್ಕಾರ ನೀಡಿ ಗಾಯನ- ವಾದನ ಕಲೆ ಕಲಿಸಿ ಬದುಕಿಗೆ ನೆಲೆ ಕಲ್ಪಿಸಿಕೊಟ್ಟ, ಸಂಗೀತ- ಸಾಹಿತ್ಯ- ಸಾಂಸತಿಕ ಹಾಗೂ ಅಧ್ಯಾತ್ಮ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಪುಟ್ಟರಾಜ ಕವಿಗವಾಯಿಗಳ ಸ್ಮರಣೆಗಾಗಿ ಆಯೋಜಿಸಿದ “ಗಾನಗಂಧರ್ವನಿಗೆ ನುಡಿ-ನಾದ ನಮನ’ ಎಂಬ ಕಾರ್ಯಕ್ರಮದಲ್ಲಿ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಶ್ರೀ ಕಲ್ಲಯ್ಯಜ್ಜನವರು, ಶಿಷ್ಯಂದಿರಾದ ಪ್ರಸಿದ್ಧ ಗಾಯಕರಾದ ಪದ್ಮಶ್ರೀ ಪಂ. ವೆಂಕಟೇಶಕುಮಾರ, ಪಂ. ಸೋಮನಾಥ ಮರಡೂರ, ಗವಾಯಿಗಳ ಸಾಹಿತ್ಯದ ಕುರಿತು ಅಧ್ಯಯನ ಮಾಡಿರುವ ಮಾರ್ತಾಂಡಪ್ಪ ಕತ್ತಿ, ಪ್ರೊ. ಸಿದ್ದು ಯಾಪಲಪರವಿ ಮೊದಲಾದವರು ಪಾಲ್ಗೊಂಡು ತಮ್ಮ ಒಡನಾಟ, ಅನುಭವ ಹಂಚಿಕೊಂಡಿದ್ದು ಕೇಳುಗರಿಗೆ ವಿಶಿಷ್ಟ ಅನುಭವ ನೀಡಿತು.ಅನನ್ಯವಾದ ಸಾಧನೆಯಿಂದ ನಾಡಿನ ಸಾಂಸತಿಕ ಸಮೃದ್ಧಿಯನ್ನು ಹೆಚ್ಚಿಸಿರುವ ದಿವಂಗತ ಶ್ರೀ ಪಂಚಾಕ್ಷರಿ ಗವಾಯಿಗಳು ಹಾಗೂ ಶ್ರೀ ಪುಟ್ಟರಾಜ ಕವಿ ಗವಾಯಿಗಳ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಬೇಕು. ಗವಾಯಿಗಳು ತಮ್ಮೆಲ್ಲ ಶ್ರದ್ಧೆ, ಶ್ರಮ ಧಾರೆ ಎರೆದು, ಅಪಾರ ಕಾಳಜಿ ಮತ್ತು ಪರಿಶ್ರಮದಿಂದ ಕಟ್ಟಿರುವ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಸದ್ಯ 1600ಕ್ಕಿಂತ ಹೆಚ್ಚು ವಿದ್ಯಾಥಿರ್ಗಳು ನಾದೋಪಾಸನೆ ಮಾಡುತ್ತಿದ್ದಾರೆ. ನಿರಂತರವಾಗಿ ಸರಸ್ವತಿದೇವಿಯ ಸೇವೆ ನಡೆಯುತ್ತಿರುವ ಆಶ್ರಮದ ಕಾಲೇಜುಗಳಿಗೆ ಸರ್ಕಾರ ಅನುದಾನ ನೀಡಬೇಕು. ವಿದ್ಯಾಥಿರ್ ನಿಲಯ, ಆಶ್ರಮಕ್ಕೆ ಬರುವ ಭಕ್ತರಿಗಾಗಿ ಯಾತ್ರಿ ನಿವಾಸ ಸೇರಿ ಕೆಲವು ಅಗತ್ಯ ನಿರ್ಮಾಣ ಕಾಮಗಾರಿಗಾಗಿ ಅಂದಾಜು 13 ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಲಾಗಿದೆ. ಇದಕ್ಕೂ ಸರ್ಕಾರ ನೆರವಾಗಬೇಕು ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು, ಅಭಿಮಾನಿಗಳು ಒತ್ತಾಯಿಸಿದರು.ಉಭಯ ಗಾನ ವಿಷಾರದ ಶ್ರೀ ಪುಟ್ಟರಾಜ ಗವಾಯಿಗಳ ಸಂಗೀತಕ್ಕೆ ಸಿಕ್ಕಷ್ಟು ಮಹತ್ವ ಅವರ ಸಾಹಿತ್ಯಕ್ಕೆ ಸಿಕ್ಕಿಲ್ಲ. ಮೂರು ಭಾಷೆಗಳಲ್ಲಿ ಸಾಕಷ್ಟು ಕೃತಿಗಳನ್ನು ರಚಿಸಿರುವ ಅವರ ಸಾಹಿತ್ಯಿಕ ಕೊಡುಗೆಯ ಮೇಲೆ ಸಮರ್ಪಕವಾದ ರೀತಿಯಲ್ಲಿ ಬೆಳಕು ಚೆಲ್ಲುವ ಕೆಲಸ ಆಗಬೇಕು ಎಂಬ ಪ್ರೀತಿಪೂರ್ವಕ ಒತ್ತಾಯವೂ ಕೇಳಿಬಂದಿತು.ದಾಸೋಹಕ್ಕೆ ಸಹಾಯ ಮಾಡಿ ಸರ್ಕಾರಕ್ಕೆ ಕಲ್ಲಯ್ಯಜ್ಜ ಮನವಿಎಲ್ಲೋ ಭಿೆ ಬೇಡಿ ತಿನ್ನುತ್ತಿದ್ದ ಎಷ್ಟೋ ಜನರನ್ನು ಆಶ್ರಮಕ್ಕೆ ಕರೆ ತಂದು ಅವರಿಗೆ ಸಂಗೀತ ದೀೆ ನೀಡಿದವರು ಪಂಚಾಕ್ಷರಿ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳು. ಇವರು ಯಾರಲ್ಲಿಯೂ ಭೇದ ಮಾಡದೇ ಎಲ್ಲರನ್ನೂ ಒಂದೇ ಸಾಲಿನಲ್ಲಿ ಕುಳ್ಳಿರಿಸಿ ಪ್ರಸಾದ ನೀಡಿದರು. ದಾನವಾಗಿ ಪಡೆದ ಜಮೀನಿನಲ್ಲಿ ಆಶ್ರಮ ಕಟ್ಟಿದರು. ಇಂತಹ ಆಶ್ರಮಕ್ಕೆ ಸರ್ಕಾರದಿಂದ ಒಂದಿಷ್ಟು ನೆರವು ಸಿಕ್ಕರೆ ಇನ್ನಷ್ಟು ಕೆಲಸ ಮಾಡಬಹುದು. ನಮಗೆ ಬಂಗಾರ ಬೆಳ್ಳಿ ಕೊಡಬೇಡಿ, ಕಟ್ಟಡದ ಏಳ್ಗೆಗೆ, ದಾಸೋಹಕ್ಕೆ ಸಹಾಯ ಮಾಡಿ, ಉಭಯ ಪೂಜ್ಯರ ಜಯಂತಿಯನ್ನು ಸರ್ಕಾರದಿಂದ ಆಚರಿಸಿ. ನಮ್ಮ ಆಶ್ರಮಗಳಲ್ಲಿ ಒಂದು ರೂ. ಕೂಡ ಎಲ್ಲೂ ಹೋಗದಂತೆ ಅಚ್ಚುಕಟ್ಟಾಗಿ ಬಳಸಲಾಗುತ್ತದೆ. ದಾವಣಗೆರೆ, ಶಿವಮೊಗ್ಗದಲ್ಲಿ ಆಶ್ರಮ ಇವೆ. ಕಾಲು, ಕಣ್ಣಿಲ್ಲದವರನ್ನು ಜನರು ಅಲ್ಲಿ ತಂದು ಬಿಡುತ್ತಾರೆ. ಗದಗ ಆಶ್ರಮದಲ್ಲಿ 1600ಕ್ಕೂ ಹೆಚ್ಚು ವಿದ್ಯಾಥಿರ್ಗಳು ಇದ್ದಾರೆ. ಪುಟ್ಟರಾಜರ ತುಲಾಭಾರದಿಂದ ಆಶ್ರಮಕ್ಕೆ ಸಾಕಷ್ಟು ದವಸ ಧಾನ್ಯ ಹರಿದು ಬರುತ್ತಿತ್ತು. ಇದೀಗ ನಮಗೂ ತುಲಾಭಾರಗಳು ನಡೆಯುತ್ತಿವೆ. 1564ನೇ ತುಲಾಭಾರ ಬಾಗಲಕೋಟೆಯಲ್ಲಿ ಆಗಿದೆ. ಇದರ ಜತೆ ಸರ್ಕಾರ ಕೂಡ ಕೈಜೋಡಿಸಬೇಕು. ಪ್ರಸಾದ ನಿಲಯ, ವಸತಿ ನಿಲಯ, ಯಾತ್ರಿ ನಿವಾಸದ ನಿರ್ಮಾಣಕ್ಕಾಗಿ 15 ಕೋಟಿ ರೂ. ಅಂದಾಜು ವೆಚ್ಚವಾಗುತ್ತದೆ. ಸರ್ಕಾರ ನೆರವು ನೀಡಬೇಕು” ಎಂದು ವೀರೇಶ್ವರ ಪುಣ್ಯಾಶ್ರಮದ ಈಗಿನ ಪೀಠಾಧಿಪತಿ ಶ್ರೀ ಕಲ್ಲಯ್ಯಜ್ಜನವರು ಮನವಿ ಮಾಡಿದರು.ಪುರಾಣ ಪ್ರಸಿದ್ಧರು- ಮಾರ್ತಾಂಡಪ್ಪ ಕತ್ತಿಪುಟ್ಟರಾಜ ಗವಾಯಿ ಕಲಾ ಪ್ರತಿಷ್ಠಾನದ ಪ್ರಧಾನ ಕಾರ್ಯದಶಿರ್, ಸಾಹಿತಿ ಮಾರ್ತಾಂಡಪ್ಪ ಕತ್ತಿ ಮಾತನಾಡಿ, “”ಪುಟ್ಟರಾಜರು ಹುಟ್ಟಿದಾಗ ಕಣ್ಣು ಇದ್ದವು. ನಂತರ ಅವರಿಗೆ ಕಣ್ಣು ಬೇನೆ ಬಂದಿತ್ತು. ಐದು ವರ್ಷದವರಿದ್ದಾಗ ಕಣ್ಣಿನ ಪೊರೆ ಬಂತು. ಹಳ್ಳಿ ನಾಟಿ ವೈದ್ಯರ ಸಲಹೆಯಂತೆ ಪೊರೆ ತೆಗೆಯಲು ತೋಣಸಿ ಹುಳ ಬಿಡಲಾಯಿತು. ಆದರೆ, ಈ ಹುಳಗಳು ಪೊರೆ ಜತೆಗೆ ಗುಡ್ಡೆಯನ್ನೂ ತಿಂದಿದ್ದರಿಂದ ಬಾಲಕ ಕಣ್ಣು ಕಳೆದುಕೊಳ್ಳುವಂತಾಯಿತು. ಸ್ವತಃ ಅಂಧರಾದರೂ ಪುಟ್ಟರಾಜರ ಕಲ್ಪನಾಶಕ್ತಿ ಅದ್ಭುತವಾಗಿತ್ತು. ಅವರ ನಾಟಕಗಳನ್ನು ಓದುತ್ತ ಹೋದರೆ ಮೈ ನವಿರೇಳುತ್ತದೆ. ಪುಟ್ಟರಾಜರು ಪುರಾಣಕ್ಕೆ ಹಳ್ಳಿಗಳಿಗೆ ಬಂದಾಗ, ಆಶ್ರಮದಲ್ಲಿ ಬಡ ಮಕ್ಕಳಿಗೆ ವಿದ್ಯೆ ಕಲಿಸಲು ನೀವು ಕೊಟ್ಟಿದ್ದನ್ನು ಬಳಸುತ್ತೇನೆ ಎಂದು ಹೇಳಿದ ಎರಡೇ ತಾಸಿನಲ್ಲಿ ಚಕ್ಕಡಿ, ಟ್ರಾ$್ಯಕ್ಟರ್​ ಗಟ್ಟಲೇ ದವಸ ಧಾನ್ಯಗಳ ರಾಶಿ ಸಂಗ್ರಹವಾಗುತ್ತಿತ್ತು. ನಾವು 17 ವರ್ಷದಿಂದ ಅಜ್ಜನವರ ಹೆಸರಲ್ಲಿ ಕಲಾ ಪ್ರತಿಷ್ಠಾನ ಕಟ್ಟಿಕೊಂಡು ಪ್ರತಿ ವರ್ಷ ಒಬ್ಬ ಮಗುವಿಗೆ ಶಿಷ್ಯ ಪರಂಪರೆಯಲ್ಲಿ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ದನಿ ಚಲೋ ಅದ… ಆದ್ರ ಚಂಚಲ ಅದಾನ- ನೆನಪು ಮೆಲುಕು ಹಾಕಿದ ಪಂ. ವೆಂಕಟೇಶಕುಮಾರ್​
“ನೀನೆನಗೆ ಗುರುವಾಗಬೇಕೆಂದು ಅನಂತಕಾಲ ತಪಿಸಿರಬೇಕು, ಅಂತೆ ನೀನು ಗುರುವಾದೆ, ಅಂತೆಯೇ ನಾನು ಶಿಷ್ಯನಾದೆ…’ ಎಂಬ ವಚನ ಗಾಯನದೊಂದಿಗೆ ತಮ್ಮ ಗುರು ಗಾನಗಂಧರ್ವ ಪಂ. ಪುಟ್ಟರಾಜ ಗವಾಯಿಗಳಿಗೆ ನಮನ ಸಲ್ಲಿಸಿ, ಗುರುಗಳ ಜತೆಗಿನ ಒಡನಾಟವನ್ನು ಹಂಚಿಕೊಂಡವರು ಖ್ಯಾತ ಹಿಂದುಸ್ತಾನಿ ಗಾಯಕ, ಪದ್ಮಶ್ರೀ ಪ್ರಶಸ್ತಿ ಪುರಸತ ಪಂ. ವೆಂಕಟೇಶಕುಮಾರ್​. “”1968ರ ಶ್ರಾವಣ ಮಾಸದಲ್ಲಿ ತಮ್ಮ ತಂದೆ, ತಾಯಿ, ಸೋದರಮಾವನೊಂದಿಗೆ ಗುರುಗಳ ಆಶ್ರಮಕ್ಕೆ ಮೊದಲ ಬಾರಿ ಕಾಲಿಟ್ಟೆ. ಇವನಿಗೆ ಸಂಗೀತ ಕಲಿಸಲು ಕರೆದುಕೊಂಡು ಬಂದಿದ್ದೇವೆ ಎಂದು ನನ್ನ ಪಾಲಕರು ಹೇಳಿದಾಗ, ಒಂದು ಹಾಡು ಹಾಡುವಂತೆ ಗುರುಗಳು ಸೂಚಿಸಿದರು. ಆಗ ನಾನು ಪೌರಾಣಿಕ ನಾಟಕದ ಪದ ಹಾಡಿದ್ದೆ. ಆಗ ಗುರುಗಳು, “ದನಿ ಚಲೋ ಅದ, ಆದ್ರ, ಇವ ಚಂಚಲ ಅದಾನ’ ಎಂದಿದ್ದರು. ಕಲಿಕೆ ಮುಗಿದ ಬಳಿಕ, 1980&81ರಲ್ಲಿ ಬೆಳಗಾವಿಯಲ್ಲಿ ಏರ್ಪಡಿಸಿದ್ದ ಯುವಕರ ಸಂಗೀತ ಮಹೋತ್ಸವದಲ್ಲಿ ನಾನು ನೀಡಿದ ಕಛೇರಿ ಬಗ್ಗೆ ಮರಾಠಿ ಪತ್ರಿಕೆಯೊಂದರಲ್ಲಿ “ಯಾವ ರಾಗದ ಬಳಿಕ ಯಾವ ರಾಗ ಹಾಡಬೇಕು ಎಂಬುದು ಆ ಹುಡುಗನಿಗೆ ಗೊತ್ತಿಲ್ಲ’ ಎಂದು ಬರೆದಿದ್ದರು. ಆ ಬಗ್ಗೆ ಗುರುಗಳ ಬಳಿ ಪ್ರಸ್ತಾಪಿಸಿದಾಗ, “ಹೌದು ಅವರು ಬರೆದಿದ್ದು ಸರಿ ಇದೆ. ಶಿಷ್ಯರು ಕಾರ್ಯಕ್ರಮಕ್ಕೆ ಹೋಗುವಾಗ ಯಾವ ರಾಗ ಹಾಡುತ್ತೇನೆ ಎಂಬುದನ್ನೂ ನನಗೆ ಹೇಳೋದಿಲ್ಲ್ಲ’ ಎಂದಿದ್ದರು. ತಮ್ಮ ಶಿಷ್ಯ ಎಂದ ಮಾತ್ರಕ್ಕೆ ತಪ್ಪನ್ನು ಸಮಥಿರ್ಸಿಕೊಳ್ಳುತ್ತಿರಲಿಲ್ಲ. ಸತ್ಯವನ್ನೇ ಹೇಳುತ್ತಿದ್ದರು. ಅಂದಿನಿಂದ ಗುರುಗಳು ಇರುವವರೆಗೂ ನಾನು ಯಾವುದೇ ಕಛೇರಿಯಲ್ಲಿ ಹಾಡುವ ಮುಂಚೆ, ಯಾವ ರಾಗ ಹಾಡಬೇಕು ಎಂಬುದನ್ನು ಗುರುಗಳ ಬಳಿ ಚಚಿರ್ಸುತ್ತಿದ್ದೆ. ಇಂದಿಗೂ ನಮ್ಮ ಮನೆಯ ದೇವರ ಕೋಣೆಯಲ್ಲಿ ಪುಟ್ಟರಾಜ ಗವಾಯಿಗಳ ಭಾವಚಿತ್ರ ಇಟ್ಟು ಪೂಜಿಸುತ್ತೇನೆ” ಎಂದು ಭಾವುಕರಾದರು. “”ಆಶ್ರಮಕ್ಕೆ ಆಥಿರ್ಕ ಸಮಸ್ಯೆ ಎದುರಾದಾಗ ಗದಗನಲ್ಲಿ ಪುಟ್ಟರಾಜ ಗವಾಯಿಗಳೇ ನಾಟಕ ಕಂಪನಿ ಪ್ರಾರಂಭಿಸಿದ್ದರು. ಆದರೆ, ಸಿ ಪಾತ್ರಗಳೂ ಇರುತ್ತವಲ್ಲ ಎಂಬ ಪ್ರಶ್ನೆ ಬಂತು. ಸ್ತ್ರೀ ಪಾತ್ರವನ್ನು ಪುರುಷರಿಂದಲೇ ಮಾಡಿಸಬಹುದಲ್ಲ ಎಂಬ ಸಲಹೆ ಬಂದಾಗ ಸಮಸ್ಯೆ ಬಗೆಹರಿಯಿತು. ಆಗಿನ ಕಾಲದಲ್ಲಿ ಹೇಮರೆಡ್ಡಿ ಮಲ್ಲಮ್ಮ ನಾಟಕ 375 ಪ್ರಯೋಗ ಕಂಡಿತು. ಆ ನಾಟಕದಿಂದ ಬಂದ ಹಣದಿಂದ ಹೊಲ ಖರೀದಿಸಲಾಗಿತ್ತು. ಆ ಹೊಲಕ್ಕೆ ಇಂದಿಗೂ ಜನರು ಮಲ್ಲಮ್ಮನ ಹೊಲ ಎನ್ನುತ್ತಾರೆ” ಎಂದು ಪಂ. ವೆಂಕಟೇಶಕುಮಾರ್​ ಹೇಳಿದರು.
ಪುಟ್ಟರಾಜರು ಶಿಷ್ಯ ಪ್ರೇಮಿ: ಸೋಮನಾಥ ಮರಡೂರ
ಶಿಷ್ಯರು ಏನೇ ತಪು$್ಪ ಮಾಡಿದರೂ ಪುಟ್ಟರಾಜ ಗವಾಯಿಗಳು ಕ್ಷಮಿಸುತ್ತಿದ್ದರು. ಅವರು ಶಿಷ್ಯ ಪ್ರೇಮಿಯಾಗಿದ್ದರು. ನಾನು ಧಾರವಾಡ ಮುರುಘಾಮಠದ ಶ್ರೀ ಮೃತ್ಯುಂಜಯಪ್ಪ ಸ್ವಾಮೀಜಿ ಸಲಹೆಯಂತೆ 1955ರಲ್ಲಿ ಗದುಗಿನ ಆಶ್ರಮ ಸೇರಿದೆ. ಅದಕ್ಕೂ ಮೊದಲು ಪಂಚಾಕ್ಷರಿ ಗವಾಯಿಗಳ ಶಿಷ್ಯರಾಗಿದ್ದ ಮರೋಳದ ವೀರಪ್ಪ ಸ್ವಾಮಿಗಳ ಬಳಿ ಸಂಗೀತ ಅಭ್ಯಾಸ ಮಾಡಿದ್ದೆ. ದೊಡ್ಡ ನಸೀಬು ಇದ್ದವರಿಗೆ ಮಾತ್ರ ಇಂತಹ ಗುರುಗಳು ಸಿಗುತ್ತಾರೆ. ಬೆಳಗಿನ ಜಾವ 4 ರಿಂದ 7 ಗಂಟೆಯವರೆಗೆ ಸಂಗೀತ ಅಭ್ಯಾಸ ಮಾಡಿಸುತ್ತಿದ್ದರು. ಗದುಗಿನ ವೀರೇಶ್ವರ ಪುಣ್ಯಾಶ್ರಮವು ನನಗೆ ಅನ್ನ, ಆಶ್ರಯ ಕೊಟ್ಟು ಬೆಳೆಸಿದೆ. ಗುರುಗಳದ್ದು ವಿಶ್ರಾಂತಿರಹಿತ ಜೀವನವಾಗಿತ್ತು. ಮಧ್ಯಾಹ್ನವೂ ವಿಶ್ರಾಂತಿ ಪಡೆಯುತ್ತಿರಲಿಲ್ಲ. ತಮ್ಮನ್ನು ಭೇಟಿಯಾಗಲು ಬಂದವರ ಕುಶಲೋಪರಿ ವಿಚಾರಿಸುತ್ತಿದ್ದರು. ಅವರು ತ್ರಿಕಾಲ ಜ್ಞಾನಿ. ಶಿಷ್ಯರ ಪಾಲಿಗೆ ಭಗವಂತ. ಆಶ್ರಮಕ್ಕೆ ಬಂದವರು, “ಎಷ್ಟು ಚಲೋ ಶಿಷ್ಯರನ್ನು ತಯಾರು ಮಾಡಿದ್ದೀರಿ’ ಅಂದರೆ, “ನಾನು ಮಾಡಿಲ್ಲ, ಅಜ್ಜಾರು ಮಾಡ್ಯಾರ’ ಎನ್ನುತ್ತಿದ್ದರು. ಆಶ್ರಮದಲ್ಲಿರುವವರು ಜಾಸ್ತಿ ಕೂದಲು ಬಿಡಬಾರದು, ಸಿನಿಮಾ ನೋಡಬಾರದು ಎಂಬ ನಿಯಮಗಳು ಇದ್ದವು. ಸಂಗೀತ ಕಲಿಕೆಗೆ ಬರುವವರು ಆಶ್ರಮದಲ್ಲಿ 12 ವರ್ಷ ಇರಬೇಕಿತ್ತು. ಕನಿಷ್ಠ 6 ವರ್ಷವಾದರೂ ಇರಲೇಬೇಕಿತ್ತು. ಗುರುಗಳು ಹಳ್ಳಿ, ಶಹರಗಳಲ್ಲಿ ಪುರಾಣ, ಪ್ರವಚನ ಮಾಡುತ್ತಿದ್ದರು. ಅಲ್ಲಿಂದ ಬಂದ ಆದಾಯದಿಂದ ಆಶ್ರಮದಲ್ಲಿದ್ದ ಮಕ್ಕಳನ್ನು ಪೋಷಿಸುತ್ತಿದ್ದರು” ಎಂಬುದನ್ನು ಗವಾಯಿಗಳ ಶಿಷ್ಯರಲ್ಲಿ ಒಬ್ಬರಾದ ರಾಜ್ಯೋತ್ಸವ ಪ್ರಶಸ್ತಿ ಪುರಸತ ಪಂ. ಸೋಮನಾಥ ಮರಡೂರ ಸ್ಮರಿಸಿದರು.
ಎರಡು ದಶಕ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಬಸ್​ ನಿಲ್ದಾಣದಲ್ಲಿ ಹಾಡು ಹೇಳುತ್ತಿದ್ದ ಕುರುಡರನ್ನು ಕರೆ ತಂದು ಸಂಗೀತ ಕಲಿಸಿದರು. ಅಂಧರು ಹೀನಾಯ ಬದುಕು ಸಾಗಿಸಬಾರದು ಎಂಬ ಉದ್ದೇಶದಿಂದ ಈ ಸೇವೆ ಮಾಡಿದರು. ಅಂತರ್ದೃಷ್ಟಿ ಶಕ್ತಿ ಹೊಂದಿದ್ದ ಅವರು ಬೆಲ್​ ಲಿಪಿ ಇಲ್ಲದ ಕಾಲದಲ್ಲೂ 75 ಕೃತಿ ಬರೆದರು. ಅವರ ಸಾಹಿತ್ಯ ಕೃತಿಗಳ ಕುರಿತು ಸುದೀರ್ ಚರ್ಚೆ ಆಗಬೇಕು. ಮರು ವ್ಯಾಖ್ಯಾನ, ಮರು ಅಧ್ಯಯನ ಆಗಬೇಕು.| ಸಿದ್ದು ಯಾಪಲಪರವಿ ಉಪನ್ಯಾಸಕಪುಟ್ಟರಾಜ ಗವಾಯಿಗಳದ್ದು ಸಂಗೀತ ಲೋಕಕ್ಕೆ ದೊಡ್ಡ ಕೊಡುಗೆ. ಮುಂಡರಗಿ ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಜಾತ್ರಾ ಮಹೋತ್ಸವಕ್ಕೆ ಬಂದು ಸಂಗೀತ ಸೇವೆ ಮಾಡುತ್ತಿದ್ದರು. ಆಶ್ರಮ ಕಟ್ಟುವ ಸಂದ ರ್ಭದಲ್ಲಿ ಶ್ರೀಮಠದ ಹಿಂದಿನ ಗುರುಗಳಿಗೆ ಸಹಾಯ ಕೋರಿ ಅವರು ಪತ್ರ ಬರೆದಿದ್ದರು. ಅದು ಈಗಲೂ ಮಠದಲ್ಲಿ ಇದೆ.| ಮುಂಡರಗಿ ಅನ್ನದಾನೇಶ್ವರ ಮಠದ ಸ್ವಾಮೀಜಿಪುಟ್ಟರಾಜರ ಬಗ್ಗೆ ನಾವು ಹೇಳುತ್ತ ಹೋದರೆ ಅಕ್ಷರಗಳು ಸಣ್ಣವು ಆಗುತ್ತವೆ. ಪುಟ್ಟಯ್ಯಜ್ಜನವರಲ್ಲಿ ಎಲ್ಲವೂ ಇತ್ತು. ಎಲ್ಲರಿಗೂ ಬೇಡವಾದ ಮನುಷ್ಯನನ್ನು ಎಲ್ಲರೂ ಬೇಡುವ ವ್ಯಕ್ತಿಯಾಗಿ ಪರಿವತಿರ್ಸಿದರು. > | ||ಕಲ್ಲೂರಿನ ಸಿದ್ದೇಶ್ವರ ಶಾಸ್ತ್ರಿಪುಟ್ಟರಾಜರು ಅಖಂಡ ಬ್ರಹ್ಮಚಾರಿಯಾಗಿದ್ದರು. ಎಲ್ಲ ಮಕ್ಕಳನ್ನು ಅಪ್ಪಿಕೊಂಡರು. ಒಂದು ದಿನ ಕೂಡ ಕಾರ್ಯದಿಂದ ವಿಮುಖರಾಗಿರಲಿಲ್ಲ. ಅನಾರೋಗ್ಯ ಎಂದು ಹೇಳಲಿಲ್ಲ. ಪಂಡಿತ ಜಸರಾಜ, ಬಾಲಮುರಳಿ ಕೃಷ್ಣ ಮುಂತಾದ ಸಂಗೀತಗಾರರು ಇವರನ್ನು ರಸ ಋಷಿ ಎಂದಿದ್ದಾರೆ. ಅಂತಹ ಭವ್ಯ ಬದುಕು ಅವರದು.| ಕಲ್ಲಿನಾಥ ಶಾಸ್ತ್ರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + four =
Remember me
