ನವದೆಹಲಿ:ಕಳೆದ 29 ವರ್ಷಗಳಿಂದ ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಅಜೇಯ ಸಾಧನೆ ಮಾಡಿದ್ದ ಭಾರತದ ಗೆಲುವಿನ ಓಟಕ್ಕೆ ಕೊನೆಗೂ ಬ್ರೇಕ್ ಬಿದ್ದಿತು. ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ಅ.24) ನಡೆದ 7ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ವಿರಾಟ್ ಕೊಹ್ಲಿ ಬಳಗ 10 ವಿಕೆಟ್‌ಗಳಿಂದ ಬಾಬರ್ ಅಜಮ್ ಪಡೆಗೆ ಮಣಿಯಿತು. ಏಕದಿನ ಹಾಗೂ ಟಿ20 ವಿಶ್ವಕಪ್ ಟೂರ್ನಿಗಳ ಇತಿಹಾಸದಲ್ಲಿ ಭಾರತ ತಂಡ ಮೊದಲ ಬಾರಿಗೆ ಪಾಕ್ ವಿರುದ್ಧ ಸೋಲನುಭವಿಸಿತು.
ಪಾಕ್​ ವಿರುದ್ಧ ಟೀಮ್​ ಇಂಡಿಯಾ ಸೋಲನ್ನು ಭಾರತದ ಕ್ರೀಡಾಭಿಮಾನಿಗಳು ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟೀಮ್​ ಇಂಡಿಯಾವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸುತ್ತಿದ್ದಾರೆ. ಕ್ರೀಡಾ ಮನೋಭಾವವನ್ನು ಮರೆತು ಅಶ್ಲೀಲ ಪದ ಪ್ರಯೋಗದೊಂದಿಗೆ ನಿಂದಿಸುತ್ತಿದ್ದಾರೆ. ಇದರ ನಡುವೆ ಈ ವಿಚಾರದ ಧರ್ಮದ ಆಯಾಮ ಪಡೆದುಕೊಂಡಿದ್ದು, ಜಾಲತಾಣದಲ್ಲಿ ಆರೋಪ-ಪ್ರತ್ಯಾರೋಪದ ವೇದಿಕೆಯಾಗಿ ಮಾರ್ಪಟ್ಟಿದೆ.
ಟೀಮ್​​ ಇಂಡಿಯಾದ ವೇಗಿ ಮೊಹಮ್ಮದ್​ ಶಮಿ ಅವರನ್ನು ಕೆಟ್ಟದಾಗಿ ಟ್ರೋಲ್​ ಮಾಡಲಾಗುತ್ತಿದೆ. ಶಮಿ ಎಸೆದ ಓವರ್​ನಲ್ಲಿ ಪಾಕ್​ ವಿಜಯೋತ್ಸವ ಆಚರಿಸಿತು. ಹೀಗಾಗಿ ಕೆಲ ನೆಟ್ಟಿಗರು ಶಮಿ ಅವರನ್ನು ಟಾರ್ಗೆಟ್​ ಮಾಡಿದ್ದು, ಕೆಟ್ಟ ಮಾತುಗಳಿಂದ ನಿಂದಿಸುತ್ತಿದ್ದಾರೆ. ನೀನೊಬ್ಬ ದೇಶದ್ರೋಹಿ. ನೀನು ಪಾಕಿಸ್ತಾನಕ್ಕೆ ಹೋಗು ಮತ್ತು ಪಾಕ್​ನಿಂದ ಎಷ್ಟು ಹಣ ತೆಗೆದುಕೊಂಡಿದ್ದೀಯ ಹೇಳು ಎಂದು ಜಾಲತಾಣದಲ್ಲಿ ಜರಿಯುತ್ತಿದ್ದಾರೆ.
ಇದರ ಬೆನ್ನಲ್ಲೇ ಶಮಿ ಪರ ಬ್ಯಾಟ್​ ಬೀಸಿರುವ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಂಇಎಂ) ಪಕ್ಷದ ಸಂಸ್ಥಾಪಕ ಹಾಗೂ ಹೈದರಾಬಾದ್​ ಹಾಲಿ ಸಂಸದರಾಗಿರುವ ಅಸಾದುದ್ದೀನ್​ ಓವೈಸಿ, ನೀತಿ ಪಾಠ ಮಾಡಿದ್ದಾರೆ. ಆಟ ಅಂದಮೇಲೆ ಸೋಲು-ಗೆಲುವು ಸಾಮಾನ್ಯ. ಒಂದು ತಂಡದಲ್ಲಿ 11 ಜನ ಆಟಗಾರರಿದ್ದರು ಮುಸ್ಲಿಂನನ್ನೇ ಟಾರ್ಗೆಟ್​ ಮಾಡಿ ಟೀಕಿಸಲಾಗುತ್ತಿದೆ. ಬಿಜೆಪಿ ಸರ್ಕಾರ ಇದನ್ನು ಖಂಡಿಸುತ್ತದೆಯೇ? ಎಂದು ಓವೈಸಿ ಕೇಳಿದ್ದಾರೆ.
ದೇಶದ ಪ್ರತಿಯೊಂದು ವಿಚಾರಗಳು ಕೂಡ ಅಂತರ್​ ಧರ್ಮೀಯ ಘರ್ಷಣೆಗಳಾಗುತ್ತಿವೆ. ಅಲ್ಪಸಂಖ್ಯಾತ ಧರ್ಮಗಳನ್ನು ಶೋಷಿಸುವ ಮತ್ತು ಬಹುಸಂಖ್ಯಾತ ಧರ್ಮಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವ ರಾಜಕಾರಣ ಹೆಚ್ಚುತ್ತಿದೆ. ತಂಡದಲ್ಲಿ 11 ಆಟಗಾರರಿರುವಾಗ ಮುಸ್ಲಿಂ ವ್ಯಕ್ತಿಯನ್ನು ಏಕೆ ಟಾರ್ಗೆಟ್ ಮಾಡಲಾಗುತ್ತಿದೆ? ಕಾಶ್ಮೀರದಲ್ಲಿ ಭಾರತೀಯರು ಮತ್ತು ಸೈನಿಕರು ಸಾಯುತ್ತಿದ್ದಾರೆ. ಪಕ್ಕದ ದೇಶದಿಂದ ಬರುವ ಉಗ್ರರು ನಮ್ಮ ದೇಶವಾಸಿಗಳ ಪ್ರಾಣ ತೆಗೆಯುತ್ತಿದ್ದಾರೆ. ಭಾರತ-ಪಾಕಿಸ್ತಾನ ನಡುವೆ ನಡೆಯುತ್ತಿರುವ ಪಂದ್ಯಗಳಲ್ಲೂ ಇದೇ ಬಿಗುವಿನ ವಾತಾವರಣ ಕಂಡು ಬರುತ್ತಿದೆ. ತಂಡದಲ್ಲಿರುವ 11 ಆಟಗಾರರಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿ. ಹಾಗಾದರೆ ಸೋಲಿಗೆ ಒಬ್ಬ ವ್ಯಕ್ತಿ ಹೇಗೆ ಹೊಣೆಯಾಗುತ್ತಾನೆ? ಇದು ಮುಸ್ಲಿಮರ ವಿರುದ್ಧ ದ್ವೇಷವನ್ನು ಪ್ರಚೋದಿಸುವ ರಾಜಕೀಯ ಪ್ರೇರಿತ ಪಿತೂರಿಯ ಭಾಗವಾಗಿದೆ ಎಂದು ಓವೈಸಿ ಹೇಳಿದ್ದಾರೆ.
11 ಮಂದಿಯ ತಂಡದಲ್ಲಿ ಮೊಹಮ್ಮದ್ ಶಮಿ ವಿರುದ್ಧ ಆರೋಪ ಮಾಡಲು ಮುಸ್ಲಿಂ ಎಂಬ ಒಂದೇ ಕಾರಣವೇ ಎಂದು ಓವೈಸಿ ಪ್ರಶ್ನಿಸಿದ್ದಾರೆ. ಶಮಿ ಮುಸ್ಲಿಂ ಎಂಬ ಕಾರಣಕ್ಕೆ ಟ್ರೋಲ್ ಮಾಡಲಾಗುತ್ತಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಈ ಧೋರಣೆಯನ್ನು ಖಂಡಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಶಮಿ ಮಾತ್ರವಲ್ಲದೆ ನಾಯಕ ವಿರಾಟ್ ಕೊಹ್ಲಿಯನ್ನೂ ನೆಟ್ಟಿಗರು ಬಿಟ್ಟಿಲ್ಲ. ಕೊಹ್ಲಿ ಕುರಿತ ಮೀಮ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೀಸೆ ಇಲ್ಲದ ಮೀಸೆ ಇರುವ ವಿರಾಟ್ ಕೊಹ್ಲಿ ಚಿತ್ರವನ್ನು ಹಂಚಿಕೊಂಡು ‘ವಿರಾಟುದ್ದೀನ್ ಕೊಹ್ ಅಲಿ’ ಎಂದು ಪ್ರಚಾರ ಮಾಡುತ್ತಿದ್ದಾರೆ.
ಬಹುಕಾಲದ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಸಂಪೂರ್ಣ ವಿಫಲರಾದರು. ಪಾಕ್​ ವಿರುದ್ಧ ಅವರು ಯಾವುದೇ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಇನ್ನು ಶಮಿ 3.5 ಓವರ್‌ಗಳಲ್ಲಿ 43 ರನ್‌ ನೀಡಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಭಾರತದ ಸೋಲನ್ನು ಅರಗಿಸಿಕೊಳ್ಳಲಾಗದವರ ಕೆಂಗಣ್ಣಿಗೆ ಅವರು ಗುರಿಯಾಗಿದ್ದಾರೆ.
ಅಂದಹಾಗೆ ಕೆಲ ನೆಟ್ಟಿಗರು ಶಮಿ ಪರ ನಿಂತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶಮಿ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿದ್ದಾರೆ. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಶಮಿ ಬೆಂಬಲಕ್ಕೆ ನಿಂತಿದ್ದಾರೆ. ಆಟಗಾರರ ಮೇಲೆ ಜಾಲತಾಣದಲ್ಲಿ ಸಾಮೂಹಿಕ ದಾಳಿಗಳು ಸರಿಯಲ್ಲ ಎಂದು ಹೇಳಿದ್ದಾರೆ. ಭಾರತ ಕ್ಯಾಪ್ ಧರಿಸಿದ ಪ್ರತಿಯೊಬ್ಬ ಕ್ರಿಕೆಟಿಗನ ಹೃದಯದಲ್ಲಿ ಭಾರತವಿದೆ ಎಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶಮಿ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.(ಏಜೆನ್ಸೀಸ್​)
ಪಾಕಿಸ್ತಾನ ಎದುರು ಭಾರತ ತಂಡಕ್ಕೆ 10 ವಿಕೆಟ್ ಸೋಲು

ಟಿ20 ವಿಶ್ವಕಪ್ ಸೂಪರ್-12 ಹಂತ ; ಇಂದು ಅಫ್ಘಾನಿಸ್ತಾನ-ಸ್ಕಾಟ್ಲೆಂಡ್ ಮುಖಾಮುಖಿ

ಕ್ಯಾಚ್ ಬಿಟ್ಟು ಕೆಟ್ಟ ಬಾಂಗ್ಲಾ ತಂಡ ; ಶ್ರೀಲಂಕಾ ತಂಡಕ್ಕೆ ಭರ್ಜರಿ ಜಯ

ಟೀಸರ್ ಸಖತ್; 25 ಗಂಟೆಗಳಲ್ಲಿ 1.5 ಮಿಲಿಯನ್ ವೀಕ್ಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − nine =
Remember me
