ಮುಂಬೈ:ಏಳನೇ ವಯಸ್ಸಿನಲ್ಲಿ ಶಾಲೆಯ ಸಮೀಪ ನಾಪತ್ತೆಯಾಗಿದ್ದ ಹುಡುಗಿಯೊಬ್ಬಳು ಬರೋಬ್ಬರಿ 9 ವರ್ಷಗಳ ಬಳಿಕ ಗುರುವಾರ (ಆ.4) ಮರಳಿ ತನ್ನ ಕುಟುಂಬವನ್ನು ಸೇರಿರುವ ಅಪರೂಪದ ಘಟನೆ ಮುಂಬೈನಲ್ಲಿ ನಡೆದಿದೆ.
ಈ ಪ್ರಕರಣದಲ್ಲಿ ಹ್ಯಾರಿ ಡಿಸೋಜಾ (50) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತನಗೆ ಮಕ್ಕಳು ಇಲ್ಲದಿದ್ದಾಗ ಹುಡುಗಿಯನ್ನು ಅಪಹರಿಸಿದ್ದ ಹ್ಯಾರಿ, ತನಗೆ ಹೆಣ್ಣು ಮಗು ಜನಿಸಿದ ಬಳಿಕ ಸಂತ್ರಸ್ತ ಹುಡುಗಿಯನ್ನು ಬಲವಂತವಾಗಿ ಕೆಲಸಕ್ಕೆ ದೂಡಿದ್ದ ಎಂದು ಮುಂಬೈನ ಡಿ.ಎನ್​. ನಗರ ಪೊಲೀಸರು ತಿಳಿಸಿದ್ದಾರೆ.
ವಿವರಣೆಗೆ ಬರುವುದಾದರೆ, ಪೂಜಾ ಗೌಡ್​ ಹೆಸರಿನ ಹುಡುಗಿ ಅಂಧೇರಿಯಲ್ಲಿರುವ ಗಿಲ್ಬರ್ಟ್​ ಏರಿಯಾದಲ್ಲಿ ತನ್ನ ಪಾಲಕರೊಂದಿಗೆ ವಾಸವಿದ್ದಳು. ಅಂಧೇರಿಯ ಕಾಮಾ ರಸ್ತೆಯಲ್ಲಿರುವ ಮುನ್ಸಿಪಾಲ್​ ಶಾಲೆಯಲ್ಲಿ ಪೂಜಾ ಓದುತ್ತಿದ್ದಳು. 2013ರ ಜನವರಿ 22ರಂದು ಶಾಲೆಗೆ ಹೋದ ಪೂಜಾ ಮತ್ತೆ ಹಿಂದಿರುಗಲೇ ಇಲ್ಲ. ಆಗ ಆಕೆಗೆ 7 ವರ್ಷ ವಯಸ್ಸಾಗಿತ್ತು. ಯಾವಾಗ ಆಕೆ ಮರಳಲಿಲ್ಲವೋ, ಗಾಬರಿಗೊಂಡ ಕುಟುಂಬ ಹುಡುಕಾಡಲು ಶುರು ಮಾಡಿತು. ಸಾಕಷ್ಟು ಹುಡುಕಾಟದ ನಡುವೆಯೂ ಪೂಜಾ ಸಿಗದಿದ್ದಾಗ ಆಕೆಯ ಪಾಲಕರು ತಕ್ಷಣ ಪೊಲೀಸ್​ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಹ ಸಾಕಷ್ಟು ಹುಡುಕಾಡಿದರೂ ಯಾವುದೇ ಮಾಹಿತಿ ದೊರೆಯಲೇ ಇಲ್ಲ. ಪೂಜಾ ಸಿಗುವುದು ಇನ್ನು ಅನುಮಾನ ಎಂದೇ ಭಾವಿಸಿದ್ದರು.
ಸದ್ಯ ಪೂಜಾ ಮರಳಿ ಗೂಡಿಗೆ ಸೇರಿದ್ದಾಳೆ. ಈ ಬಗ್ಗೆ ಡಿ.ಎನ್​. ನಗರ ಪೊಲೀಸ್​ ಠಾಣೆಯ ಹಿರಿಯ ಪೊಲೀಸ್​ ಇನ್ಸ್​ಪೆಕ್ಟರ್​ ಮಿಲಿಂದ್​ ಕುರ್ದೆ ಮಾತನಾಡಿದ್ದಾರೆ. ಪೂಜಾ ಕಾಣೆಯಾದಾಗಿನಿಂದ ನಾವು ನಿರಂತರವಾಗಿ ಹುಡುಕುತ್ತಿದ್ದೆವು. ಸಾಕಷ್ಟು ಪ್ರಯತ್ನಗಳು ವಿಫಲವಾಗಿ ಬೇಸರವಾಗಿತ್ತು. ಆದರೆ, ಈ ವಾರದ ಆರಂಭದಲ್ಲಿ ಮಹಿಳೆಯೊಬ್ಬರಿಂದ ಬಂದ ಸುಳಿವು ಪೂಜಾಳ ನಾಪತ್ತೆ ಪ್ರಕರಣಕ್ಕೆ ಮಹತ್ವದ ತಿರುವನ್ನೇ ನೀಡಿತು. ವಿಲೆ ಪಾರ್ಲೆದಲ್ಲಿರುವ ನೆಹರು ನಗರ ಕೊಳಗೇರಿಯಲ್ಲಿ ಒಂದು ಹದಿಹರೆಯದ ಹುಡುಗಿ ಮೇಲೆ ಅನುಮಾನವಿದೆ ಎಂದು ಮಹಿಳೆ ಸುಳಿವು ನೀಡಿದಳು. ಆಕೆಯ ಮನೆಗೆ ಒಂದು ಪೊಲೀಸ್​ ತಂಡವನ್ನು ಕಳುಹಿಸಿ, ವಿಚಾರಣೆ ನಡೆಸಿ, ಮಾಹಿತಿ ತೆಗೆದುಕೊಂಡು ಬರಲು ಹೇಳಿದೆವು ಎಂದರು.
ಸ್ಲಮ್​ನ ಮನೆಯೊಂದರಲ್ಲಿ ವಾಸವಿದ್ದ ದಂಪತಿ ಆರಂಭದಲ್ಲಿ ಸೂಕ್ತ ಮಾಹಿತಿ ಕೊಡಲು ನಿರಕಾರಿಸಿದರು. ವಿಚಾರಣೆಯನ್ನು ತೀವ್ರಗೊಳಿಸಿದಾಗ, ತಮ್ಮ ಬಳಿ ಇರುವ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬಳು ನಮ್ಮ ಮಗಳಲ್ಲ, ಆಕೆಯನ್ನು ನಾವೇ ಬೆಳೆಸಿದೆವು ಎಂದು ತಪ್ಪು ಒಪ್ಪಿಕೊಂಡರು. ತಕ್ಷಣ ಹೆಚ್ಚಿನ ವಿಚಾರಣೆಗೆಂದು ಇಡೀ ಕುಟುಂಬವನ್ನು ಪೊಲೀಸ್​ ಠಾಣೆಗೆ ಕರೆತರಲಾಯಿತು. ಸದ್ಯ 16ನೇ ವಯಸ್ಸಿನಲ್ಲಿರುವ ಸಂತ್ರಸ್ತ ಪೂಜಾಳನ್ನು ಬೇರೆ ಕೋಣೆಯಲ್ಲಿ ಕೂರಿಸಿ, ದಂಪತಿಯನ್ನು ಪೊಲೀಸ್​ ಶೈಲಿಯಲ್ಲಿ ವಿಚಾರಿಸಲಾಯಿತು. ಬಳಿಕ ನಡೆದ ಒಂದೊಂದೆ ಕರಾಳ ಸತ್ಯವನ್ನು ಪೊಲೀಸರ ಮುಂದೆ ತೆರೆದಿಟ್ಟರು. ಅವರ ಬಳಿಯಿದ್ದ ಪೂಜಾ 9 ವರ್ಷಗಳ ಹಿಂದೆ ಶಾಲೆ ಸಮೀಪ ನಾಪತ್ತೆಯಾಗಿದ್ದ ಹುಡುಗಿ ಎಂಬುದು ಪೊಲೀಸರಿಗೆ ಖಚಿತವಾಯಿತು ಎಂದು ಮಿಲಿಂದ್​ ಕುರ್ದೆ ತಿಳಿಸಿದರು.
9 ವರ್ಷಗಳ ಹಿಂದೆ ಶಾಲೆಯ ಸಮೀಪ ಪೂಜಾಳನ್ನು ಆರೋಪಿ ಹ್ಯಾರಿ ಅಪಹರಿಸಿ, ಮನೆಗೆ ತಂದಿದ್ದ. ಅಂದಿನಿಂದ ಹ್ಯಾರಿ ಮತ್ತು ಆತನ ಪತ್ನಿ ವ್ಯಂಕಟಮ್ಮ (37) ತಮ್ಮ ಮಗಳಂತೆ ಆಕೆಯನ್ನು ಬೆಳೆಸುತ್ತಿದ್ದರು. ಏಕೆಂದರೆ, ದಂಪತಿಗೆ ಮಕ್ಕಳಾಗಿರಲಿಲ್ಲ. ಪೂಜಾಳನ್ನು ಸಾಕಲು ಶುರು ಮಾಡಿದ ಮೂರು ವರ್ಷಗಳ ಬಳಿಕ ದಂಪತಿಗೆ ಒಂದು ಹೆಣ್ಣು ಮಗು ಜನಿಸಿತು. ಅಲ್ಲಿಂದಾಚೆಗೆ ಪೂಜಾ ಜೀವನದಲ್ಲಿ ಕರಾಳ ಅಧ್ಯಾಯ ಆರಂಭವಾಯಿತು. ಅಲ್ಲಿಂದ ಆರು ವರ್ಷಗಳವರೆಗೆ ಪೂಜಾಳನ್ನು ಕೆಟ್ಟದಾಗಿ ನಡೆಸಿಕೊಂಡ ಕುಟುಂಬ, ಆಕೆಯನ್ನು ಮನೆಗೆಲಸಕ್ಕೆ ದೂಡಿದರು. ಆಕೆ ದುಡಿದ ಹಣವನೆಲ್ಲ ಕಸಿದುಕೊಳ್ಳುತ್ತಿದ್ದರು ಎಂದು ಕುರ್ದೆ ವಿವರಿಸಿದ್ದಾರೆ.
ಕೊನೆಗೂ ಪೂಜಾ ಬಾಳಲ್ಲಿ ಹೊಸ ಬದುಕು ಸಿಕ್ಕಿದೆ. ಅವಳನ್ನು ಅಪಹರಿಸಿದಕ್ಕೆ ಹ್ಯಾರಿ ಮತ್ತು ಆತನ ಪತ್ನಿ ವ್ಯಂಕಟಮ್ಮ ವಿರುದ್ಧ ಕಿಡ್ನಾಪ್​, ತಪ್ಪಾದ ಬಂಧನ, ಅಪ್ರಾಪ್ತರ ಕಳ್ಳಸಾಗಾಣೆ ಮತ್ತು ಕಾನೂನುಬಾಹಿರ ಕಾರ್ಮಿಕ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೇ ಸಂದರ್ಭದಲ್ಲಿ ಪೂಜಾ ಕುಟುಂಬಕ್ಕೆ ತಮ್ಮ ಮಗಳು ಮತ್ತೆ ಸಿಕ್ಕಿದ್ದನ್ನು ಕೇಳಿ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಸುದ್ದಿ ಕೇಳಿ ಪೊಲೀಸ್​ ಠಾಣೆಗೆ ದೌಡಾಯಿಸಿದ ಪೂಜಾ ಪಾಲಕರು ತಮ್ಮ ಮಗಳನ್ನು ನೋಡಿ ಆನಂದಭಾಷ್ಪ ಸುರಿಸಿ, ಬಾಚಿ ತಬ್ಬಿಕೊಂಡು, ಮುದ್ದಾಡಿದರು. ಮಗಳನ್ನು ಪತ್ತೆ ಮಾಡಿದ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದರು.(ಏಜೆನ್ಸೀಸ್​)
ಉಪರಾಷ್ಟ್ರಪತಿ ಚುನಾವಣೆ: ಮತದಾನ ಆರಂಭ, ಹಕ್ಕು ಚಲಾಯಿಸಿದ ಪ್ರಧಾನಿ ಮೋದಿ

ನಾಗಮಂಗಲ ಶಾಸಕ ಸುರೇಶ್‌ಗೌಡ ವಿರುದ್ಧ ಎಫ್​ಐಆರ್​! ಸಾಕ್ಷ್ಯವಾಗಿ ವಿಡಿಯೋ-ಫೋಟೋ ಸಲ್ಲಿಕೆ

ವಿವಾದವನ್ನೇ ಬಂಡವಾಳ ಮಾಡಿಕೊಂಡ್ರಾ ಪವಿತ್ರಾ ಲೋಕೇಶ್​? ಟಾಲಿವುಡ್​ನಲ್ಲಿ ಹೀಗೊಂದು ಬಿಸಿ ಬಿಸಿ ಚರ್ಚೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − sixteen =
Remember me
