ಕೊಚ್ಚಿ:ಕೇರಳ ಮಾಡೆಲ್​ಗಳಿಬ್ಬರ ದುರಂತ ಸಾವಿನ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ‘ನಂಬರ್​ 18’ ಹೋಟೆಲ್ ಮಾಲೀಕ ರಾಯ್​ ಜೆ ವಯಲತ್​ ವಿರುದ್ಧ ಇದೀಗ ಫೋರ್ಟ್​ ಕೊಚ್ಚಿ ಪೊಲೀಸ್​ ಠಾಣೆಯಲ್ಲಿ ಪೊಕ್ಸೊ ಕಾಯ್ದೆ ಅಡಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಕೊಯಿಕ್ಕೋಡ್​ ಮೂಲದ ತಾಯಿಯೊಬ್ಬಳು ಮುಂದೆ ಬಂದು ತನ್ನ ಅಪ್ರಾಪ್ತ ಮಗಳ ಮೇಲೆ ಆರೋಪಿ ರಾಯ್​ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ರಾಯ್​ ಸ್ನೇಹಿತ ಸೈಜು ಥಾಂಕಚನ್​ ಮತ್ತು ಸೈಜು ಸ್ನೇಹಿತೆ ಅಂಜಲಿ ಹೆಸರು ಕೂಡ ಆರೋಪಿಗಳ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ದೂರಿನ ಪ್ರಕಾರ ಮಾಡೆಲ್​ಗಳಿದ್ದ ಕಾರು ಅಪಘಾತವಾಗುವ ಒಂದು ವಾರಕ್ಕೂ ಮುನ್ನ ನಂಬರ್​ 18 ಹೋಟೆಲ್​ನಲ್ಲಿ ಮಾಲೀಕ ರಾಯ್​, ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಆರೋಪಿಸಲಾಗಿದೆ. ಅಲ್ಲದೆ, ದೌರ್ಜನ್ಯವನ್ನು ತನ್ನ ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡ್​ ಸಹ ಮಾಡಿಕೊಂಡಿದ್ದಾನೆ. ದೌರ್ಜನ್ಯ ಸಂಬಂಧ ಪೊಲೀಸ್​ ಠಾಣೆಯ ಮೆಟ್ಟಿಲೇರಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಆರೋಪಿ ಅಂಜಲಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ಸದ್ಯ ಪೊಕ್ಸೊ ಪ್ರಕರಣವನ್ನು ಮಾಡೆಲ್​ಗಳಿಬ್ಬರ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರ ಮಾಡಲಾಗಿದೆ. ದೂರು ದಾಖಲಿಸಿದ ಮಹಿಳೆ ಮತ್ತು ಆಕೆಯ ಸಂತ್ರಸ್ತ ಮಗಳ ಹೇಳಿಕೆ ಪಡೆದುಕೊಂಡ ಬಳಿಕ ಆರೋಪಿ ರಾಯ್​ನನ್ನು ಬಂಧಿಸುವ ಸಾಧ್ಯತೆ ಇದೆ.
ಮಾಡೆಲ್​ಗಳಿಬ್ಬರ ಸಾವಿನ ಪ್ರಕರಣದಲ್ಲೂ ರಾಯ್​ ಮತ್ತು ಸೈಜು ಆರೋಪಿಗಳಾಗಿದ್ದಾರೆ. ಅಲ್ಲದೆ, ಡ್ರಗ್ಸ್​ ಬಳಕೆ ಮತ್ತು ಡ್ರಗ್ಸ್​ ಮಾರಾಟ ಜಾಲಕ್ಕೆ ಸಂಬಂಧಿಸಿದಂತೆ ಆರೋಪಿ ಸೈಜು ವಿರುದ್ಧ ವಿವಿಧ ಪೊಲೀಸ್​ ಠಾಣೆಗಳಲ್ಲಿ ಸುಮಾರು 7 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಸದ್ಯ ಮಾಡೆಲ್​ಗಳಿಬ್ಬರ ಸಾವಿನ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ.
ಮಾಡೆಲ್​ಗಳಿಬ್ಬರ ಸಾವಿನ ಪ್ರಕರಣವೇನು?2021ರ ನವೆಂಬರ್​ 1ರಂದು ಫೋರ್ಟ್​ ಕೊಚ್ಚಿಯಲ್ಲಿ ನಡೆದ ಡಿಜೆ ಪಾರ್ಟಿ ಮುಗಿಸಿಕೊಂಡು ಹಿಂದಿರುಗುವಾಗ ಕೇರಳದ ವ್ಯಟ್ಟಿಲ-ಪಲರಿವಟ್ಟಮ್​ ರಾಷ್ಟ್ರೀಯ ಹೆದ್ದಾರಿಯ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಭರವಸೆಯ ಮಾಡೆಲ್​ಗಳು ದುರ್ಮರಣಕ್ಕೀಡಾಗಿದರು. ಘಟನೆಯಲ್ಲಿ 2019ರ ಮಿಸ್​ ಕೇರಳ ವಿಜೇತೆ ಅಟ್ಟಿಂಗಲ್​ ಮೂಲದ ಅನ್ಸಿ ಕಬೀರ್​ (25), ತ್ರಿಸ್ಸೂರ್​ ಮೂಲದ ರನ್ನರ್​ ಅಪ್​ ಅಂಜನಾ ಶಾಜನ್​ (24) ಮತ್ತು ಕೆ.ಎ. ಮಹಮ್ಮದ್​ ಆಶಿಕ್​ (25) ದಾರುಣವಾಗಿ ಮೃತಪಟ್ಟಿದ್ದರು. ಕಾರು ಚಲಾಯಿಸುತ್ತಿದ್ದ ಚಾಲಕ ಅಬ್ದುಲ್​ ರೆಹಮಾನ್​ನನ್ನು ಅತಿವೇಗದ ಚಾಲನೆ ಆರೋಪದಡಿಯಲ್ಲಿ ಬಂಧಿಸಲಾಗಿತ್ತು. ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.
ಅಪಘಾತಕ್ಕೀಡಾದ ಕಾರನ್ನು ಹಿಂಬಾಲಿಸಿದ್ದ ಆಡಿ ಕಾರಿನಲ್ಲಿದ್ದ ಸೈಜು ಎಂಬಾತನಿಗೂ ಹೋಟೆಲ್​ ನಂಬರ್​ 18 ಮಾಲೀಕ ರಾಯ್​ಗೂ ಸಂಬಂಧವಿದೆ. ಅದಕ್ಕೆ ಪುಷ್ಟಿ ನೀಡುವಂತೆ ಅಪಘಾತವಾದ ಕೆಲವೇ ಸಮಯದಲ್ಲಿ ಸೈಜು, ರಾಯ್​ರನ್ನು ಸಂಪರ್ಕಿಸಿದ್ದ. ಅಪಘಾತದ ಬೆನ್ನಲ್ಲೇ ಸೈಜು, ರಾಯ್​ ಮತ್ತು ಹೋಟೆಲ್​ ಸಿಬ್ಬಂದಿಗಳಿಗೆ ಕರೆ ಮಾಡಿರುವುದು ತಿಳಿದುಬಂದಿದೆ.
ಇನ್ನೊಂದೆಡೆ ಪಾರ್ಟಿ ನಡೆದ ಹಾಲ್​ಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳನ್ನು ಆರೋಪಿ ರಾಯ್​, ಪೊಲೀಸರಿಗೆ ಸಲ್ಲಿಸಿದ್ದ. ಆದರೆ, ಡಿಜೆ ಪಾರ್ಟಿಯ ದೃಶ್ಯಗಳು ಇರಲಿಲ್ಲ. ಇದಾದ ಬಳಿಕ ಪೊಲೀಸರು ಹೋಟೆಲ್​ ಮೇಲೆ ದಾಳಿ ಮಾಡಿದರು. ಆದರೆ, ಸಿಸಿಟಿವಿ ಡಿವಿಆರ್​ ಪತ್ತೆ ಆಗಿರಲಿಲ್ಲ. ಹೋಟೆಲ್​ ಸಿಬ್ಬಂದಿಯ ಹೇಳಿಕೆ ಪ್ರಕಾರ ರಾಯ್​, ಡಿವಿಆರ್​ ಅನ್ನು ನಾಶಪಡಿಸಿ ಕೆರೆಯೊಂದರ ಒಳಗೆ ಎಸೆದಿರುವುದಾಗಿ ತಿಳಿಸಿದ್ದ. ಹೀಗಾಗಿ ಹಾರ್ಡ್​ ಡಿಸ್ಕ್​ ಪತ್ತೆ ಹಚ್ಚಲು ಸಿಬ್ಬಂದಿಯನ್ನು ಕೆರೆಯ ಸಮೀಪ ಪೊಲೀಸರು ಕರೆದೊಯ್ದಿದ್ದರು. ಆದರೆ, ಡಿವಿಆರ್​ ಪತ್ತೆಯಾಗಿಲ್ಲ.
ಈ ನಿಗೂಢ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಇದೀಗ ರಾಯ್​ ವಿರುದ್ಧ ಅಪ್ರಾಪ್ತ ಮೇಲಿನ ಲೈಂಗಿಕ ದೌರ್ಜನ್ಯ ಆರೋಪವೂ ಕೇಳಿಬಂದಿದ್ದು, ಮಾಡೆಲ್​ಗಳಿಬ್ಬರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸ್ಫೋಟಕ ಮಾಹಿತಿ ಬರುವ ಸಾಧ್ಯತೆ ಇದೆ.(ಏಜೆನ್ಸೀಸ್​)
ಮಾಡೆಲ್​ಗಳಿಬ್ಬರ ದುರಂತ ಸಾವು: ಪಾರ್ಟಿ ನಡೆದ ಹೋಟೆಲ್​ ಮಾಲೀಕನ ದುಷ್ಕೃತ್ಯ ಬಿಚ್ಚಿಟ್ಟ ಸಿಬ್ಬಂದಿ!

ಮಾಡೆಲ್​ಗಳಿಬ್ಬರ ದುರ್ಮರಣ: ಪಾರ್ಟಿ ನಡೆದ ಹೋಟೆಲ್​ ಮಾಲೀಕ ಮಾಡಿದ ಈ ಕೃತ್ಯದಿಂದ ಸಂಶಯ ದುಪ್ಪಟ್ಟು!

ಮಾಡೆಲ್​ಗಳಿಬ್ಬರ ದುರ್ಮರಣ: ಕೇಸ್​ ಕ್ಲೋಸ್​ ಆಯ್ತು ಅನ್ನುವಷ್ಟರಲ್ಲಿ ಪ್ರಕರಣಕ್ಕೆ ಹೊಸ ತಿರುವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
