ಪ್ರಧಾನಿ ಮೋದಿ ತಮ್ಮ ತವರುನೆಲದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. 2022ರ ವಿಧಾನಸಭಾ ಎಲೆಕ್ಷನ್​​ ಕಣ್ಣಿನಲ್ಲಿಟ್ಕೊಂಡ ಮೋದಿ, ಗುಜರಾತ್​ನಲ್ಲಿ ಹೊಸ ರಾಜಕೀಯ ಸೂತ್ರವೊಂದನ್ನ ಜಾರಿಗೆ ತಂದಿದ್ದಾರೆ. ಈ ಮೂಲಕ ಭೂಪೇಂದ್ರ ಪಟೇಲ್ ಸರ್ಕಾರದಲ್ಲಿ ಹೊಸ ಮುಖಗಳಿಗೆ, ಯುವ ಸಮುದಾಯಕ್ಕೆ ಮಣೆ ಹಾಕಿದ್ದಾರೆ ನಮೋ. ಇದುವೇ ನೋ ರಿಪೀಟ್ ನೀತಿ.
ಹೊಸಬರೇ ತುಂಬಿದ ‘ನೋ ರಿಪೀಟ್’ ಕ್ಯಾಬಿನೆಟ್ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ, ಇತ್ತೀಚೆಗೆ ಹಲವು ಅಚ್ಚರಿಗಳನ್ನ ನೀಡುತ್ತಲೇ ಬಂದಿದೆ. ಯಾವಾಗ ನರೇಂದ್ರ ಮೋದಿ 2014ರಲ್ಲಿ ಪಕ್ಷ ವನ್ನ ಅಧಿಕಾರಕ್ಕೆ ತಂದರೋ, ಬಿಜೆಪಿಯಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಒತ್ತು ನೀಡುತ್ತಾ ಬಂದಿರೋದು ಹೊಸ ಸುದ್ದಿಯೇನಲ್ಲ. ಈ ಹಿಂದೆಯೂ ಹಲವಾರು ರಾಜ್ಯಗಳಿಗೆ ಯಾರೂ ನಿರೀಕ್ಷಿಸದ ಹಾಗೆ ಡಾರ್ಕ್​ ಹಾರ್ಸ್​ಗಳನ್ನೇ ಮುಖ್ಯಮಂತ್ರಿಗಾದಿಗೆ ಕೂರಿಸಿದ ಮೋದಿ- ಶಾ ಜೋಡಿ, ಇದೀಗ ತವರು ರಾಜ್ಯದಲ್ಲೂ ಹೊಸ ಸೂತ್ರ ಆಳವಡಿಸಿದೆ. ಅದುವೇ ನೋ ರಿಪೀಟ್ ಫಾರ್ಮುಲಾ!
ರಾಜಕಾರಣದಲ್ಲಿ ಯಾವುದೇ ಪಕ್ಷವೇ ಆದರೂ, ಹಳಬರು-ಹೊಸಬರ ಹದಬೆರೆತ ಸಂಪುಟ ಅಸ್ತಿತ್ವಕ್ಕೆ ತರೋಕೆ ಬಯಸೋದು ಕಾಮನ್. ಹೊಸ ಮುಖಗಳಿಗೆ ಅವಕಾಶ ಕೊಟ್ಟರೂ, ಅದು 10-20 ಪ್ರತಿಶತದಷ್ಟಿರಬಹುದು ಅಷ್ಟೇ. ಉಳಿದಂತೆ ಅನುಭವಿಗಳಿಗೆ ಮಣೆ ಹಾಕೋದೇ ಹೆಚ್ಚು. ಆದ್ರೆ, ಈ ಸಿದ್ಧಸೂತ್ರವನ್ನೇ ಉಲ್ಟಾ ಮಾಡಿದ್ದಾರೆ ಪ್ರಧಾನಮಂತ್ರಿ ನರೇಂದ್ರ ಮೋದಿ. ರಾಜ್ಯ ಗುಜರಾತ್​ನಲ್ಲಿ ಯಾವಾಗ ಕಳೆದ ವಾರ ವಿಜಯ್ ರೂಪಾನಿ ರಾಜೀನಾಮೆ ಕೊಟ್ಟರೋ, ಆಗ ಹೊಸ ನಾಯಕನಾಗಿ ಆಯ್ಕೆಯಾಗಿದ್ದು ಯಾರೂ ನಿರೀಕ್ಷಿಸದ ಭೂಪೇಂದ್ರ ಪಟೇಲ್.
ಖುದ್ದು ಭೂಪೇಂದ್ರ ಪಟೇಲ್​ಗೇ ಆಶ್ಚರ್ಯ ತಂದ ಈ ಆಯ್ಕೆ ಬಗ್ಗೆ ಇಡೀ ದೇಶವೇ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದು ಸತ್ಯ. 59 ವರ್ಷದ ಪಟೇಲ್, ಮೊದಲ ಸಲ ಶಾಸಕನಾಗಿ ಆಯ್ಕೆಯಾಗಿರೋದು ಅಷ್ಟೇ. ಕನಿಷ್ಟ ಯಾವುದೇ ಮಂತ್ರಿ ಸ್ಥಾನದ ಅನುಭವವೂ ಇಲ್ಲದ ಭೂಪೇಂದ್ರ ಪಟೇಲ್​​ರನ್ನ ಸಿಎಂ ಆಗಿ ಆಯ್ಕೆ ಮಾಡಿತು ಮೋದಿ- ಶಾ ಜೋಡಿ. ಇದರಂತೆ ಕಳೆದ ಸೋಮವಾರವಷ್ಟೇ ಭೂಪೇಂದ್ರ ಪಟೇಲ್ ಹೊಸ ಮುಖ್ಯಮಂತ್ರಿ ಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಇದಾದ ನಂತರ ಸಂಪುಟ ರಚನೆ ಸಂದರ್ಭದಲ್ಲೂ ಮೋದಿ- ಶಾ ಬಳಸಿದ್ದು ಅಚ್ಚರಿ ಅನಿಸೋ ತಂತ್ರವನ್ನೇ.
2022ರ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟ ಮೋದಿ- ಶಾ, ಇದಕ್ಕಾಗಿ ರಾಜ್ಯದಲ್ಲಿ ಪರಿಶುದ್ಧ, ವಿವಾದರಹಿತ ಸರ್ಕಾರ ಇರುವಂತೆ ನೋಡಿ ಕೊಳ್ಳೋ ಉಮೇದಿನಲ್ಲಿದ್ದಾರೆ. ಹೀಗಾಗಿ 6-7 ವರ್ಷ ಕಾಲ ಅಧಿಕಾರ ನಡೆಸಿದ ಕಾರಣವೋ ಏನೋ, ಆಡಳಿತವಿರೋಧಿ ಅಲೆ ಎದುರಿಸಿದ್ದ, ಈ ಹಿಂದಿನ ವಿಜಯ್ ರೂಪಾನಿ ಸರ್ಕಾರವನ್ನ ಮೋದಿ ಸಂಪೂರ್ಣವಾಗಿ ಬದಲಿಸಿದ್ದಾರೆ. ಹೊಸ ಮುಖಗಳ ಮೂಲಕ ಮುಂದಿನ ಚುನಾವಣೆ ಎದು ರಿಸೋ ಪ್ಲಾನ್ ಮಾಡಿದ್ದಾರೆ ನಮೋ-ಅಮಿತ್ ಶಾ. ಹೇಗಿದ್ರೂ, ಗುಜರಾತ್​ ನಲ್ಲಿ ಯಾರೇ ಸಿಎಂ ಆಗಿದ್ರೂ, ಚುನಾವಣೆ ಬಂದ್ರೆ ಜನತೆ ಪ್ರಧಾನಿ ಮೋದಿ ಮುಖ ನೋಡಿಯೇ ಮತ ಹಾಕೋದು. ಆದ್ರೆ, ಸ್ಥಳೀಯವಾಗಿ ಹೆಸರು ಕೆಡಿಸಿಕೊಂಡ ನಾಯಕರು ಇರದಂತೆ ನೋಡಿಕೊಳ್ಳಬೇಕು ಅಷ್ಟೇ. ಮಿಕ್ಕಿದ್ದು ಸಲೀಸು ಎಂಬುದು ಅಮಿತ್ ಶಾ ತಂತ್ರ. ಹೀಗಾಗಿಯೇ ದೇಶದಲ್ಲೇ ಬಹುಶಃ ಮೊಟ್ಟ ಮೊದಲ ಬಾರಿ ಎನಿಸುವಂತೆ ಅಸ್ತಿತ್ವಕ್ಕೆ ಬಂದಿದೆ ನೋ ರಿಪೀಟ್ ಸರ್ಕಾರ.
ಎಲ್ಲರ ನಿರೀಕ್ಷೆಗಳನ್ನ ಬುಡಮೇಲು ಮಾಡಿದ ಪ್ರಧಾನಿ ಮೋದಿ-ಗೃಹಸಚಿವ ಅಮಿತ್ ಶಾ, 24 ಸದಸ್ಯರ ಹೊಸ ಸಂಪುಟಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದರಂತೆ ಗುರುವಾರ ಮಧ್ಯಾಹ್ನ 1.30ಕ್ಕೆ ಗುಜರಾತ್​ ನಲ್ಲಿ ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಹೊಸ ಸಚಿವರಿಗೆ ರಾಜ್ಯಪಾಲ ಆಚಾರ್ಯ ದೇವವೃತ ಪ್ರಮಾಣವಚನ ಬೋಧಿಸಿದ್ದಾರೆ. ಸಂಪುಟ ಪ್ರತಿಜ್ಞಾವಿಧಿ ಸ್ವೀಕರಿಸಿದ ಶಾಸಕರಲ್ಲಿ 10 ಮಂದಿ ಸಂಪುಟ ದರ್ಜೆ ಸಚಿವರು, 5 ಮಂದಿ ರಾಜ್ಯ ಸಚಿವ ಸ್ವತಂತ್ರ ಖಾತೆ ನಿರ್ವಹಿಸಿದ್ರೆ, ಉಳಿದ 9 ಮಂದಿ ರಾಜ್ಯ ಸಚಿವರು. ಗುಜರಾತ್ ವಿಧಾನಸಭೆ ಸ್ಪೀಕರ್ ಆಗಿದ್ದ ರಾಜೇಂದ್ರ ತ್ರಿವೇದಿ ಕೂಡ ಹೊಸ ಕ್ಯಾಬಿನೆಟ್ ಬಸ್ ಹತ್ತಿದ್ದಾರೆ.
ಇನ್ನು, ಪ್ರಮಾಣ ವಚನ ಸ್ವೀಕಾರ ಮಾಡಿದ ಮಾತ್ರಕ್ಕೆ ಇಲ್ಲಿ ವಿಶೇಷ ಏನು ಅಂತೀರಾ? ಬಹುಶಃ ರಾಷ್ಟ್ರ ರಾಜಕಾರಣದಲ್ಲೇ ಅತಿ ವಿರಳ ಎಂಬಂತೆ ಹಿಂದಿನ ಸರ್ಕಾರದ ವಿಜಯ ರೂಪಾನಿ ಸಂಪುಟದಲ್ಲಿ ಸಚಿವರಾಗಿದ್ದ ಯಾರೊಬ್ಬರಿಗೂ ಭೂಪೇಂದ್ರ ಪಟೇಲ್ ಸಂಪುಟದಲ್ಲಿ ಅವಕಾಶ ಕೊಟ್ಟಿಲ್ಲ. ಸಿಎಂ ಮಾಡದ ಕಾರಣ ಸ್ವಲ್ಪ ಮುನಿದಿದ್ದ ಡಿಸಿಎಂ ನಿತಿನ್ ಪಟೇಲ್​ರನ್ನೂ ಮೋದಿ-ಶಾ ಪರಿಗಣಿಸದೇ ಡ್ರಾಪ್ ಮಾಡಿದೆ. ರೂಪಾನಿ ಕೆಳಗೆ ಸಚಿವ ರಾಗಿದ್ದ ಒಬ್ಬರೇ ಒಬ್ಬರನ್ನೂ ಈ ಬಾರಿ ಸಂಪುಟದಲ್ಲಿ ಉಳಿಸಿಕೊಂಡಿಲ್ಲ. ಇದಕ್ಕೇ ಹೇಳಿದ್ದು ನೋ ರಿಪೀಟ್ ಎಕ್ಸ್​​ಪಿರೀಮೆಂಟ್..ಅರ್ಥಾತ್ ಪುನಾವರ್ತನೆ ರಹಿತ ಪ್ರಯೋಗ.!
ಹಿಂದಿನ ಸರ್ಕಾರದ ಎಲ್ಲಾ ಸಚಿವರಿಗೂ ‘ಗುಡ್​ಬೈ!ಇಲ್ಲಿನ ಇನ್ನೂ ಒಂದು ಸ್ಪೆಷಾಲಿಟಿ ಎಂದ್ರೆ ಹೊಸ ಸರ್ಕಾರದ 24 ಸಚಿವರಲ್ಲಿ 21 ಮಂದಿ, ಇದೇ ಫಸ್ಟ್ ಟೈಂ ಸಚಿವರಾಗುತ್ತಿರೋದು. ಇದರಲ್ಲಿ ಹಲವು ಹೊಸ ಮುಖಗಳಾದ್ರೆ, ಇನ್ನೂ ಕೆಲವು ಮಂದಿ 2-3-4 ಅವಧಿ ಶಾಸಕರಾಗಿದ್ರೂ, ಸಚಿವರಾಗಿ ಅಧಿಕಾರ ಪಡೆದಿದ್ದು ಇದೇ ಮೊದಲ ಸಲ. ಉಳಿದಂತೆ ಮೂರು ಹಳೇ ಕುದುರೆಗಳಿಗೆ ಅದೃಷ್ಟವಶಾತ್ ಹೊಸ ಸಂಪುಟದಲ್ಲಿ ಚಾನ್ಸ್ ಸಿಕ್ಕಿದೆ. ರಾಜೇಂದ್ರ ತ್ರಿವೇದಿ, ರಾಘವ್​​ ಭಾಯಿ ಪಟೇಲ್ ಹಾಗೂ ಕಿರೀಟ್ ಸಿನ್ಹಾಜಿ ರಾಣಾ ಮಾತ್ರ ಈ ಹಿಂದೆ ಸಚಿವರಾಗಿ ಅನುಭವ ಹೊಂದಿದ್ದಾರೆ. ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಜಿತೂ ವಘಾನಿಗೆ ಹೊಸ ಸಂಪುಟ ದಲ್ಲಿ ಅವಕಾಶ ಸಿಕ್ಕಿದೆ.
ಇನ್ನ, ಭೂಪೇಂದ್ರ ಪಟೇಲ್ ಸಂಪುಟದ ಇನ್ನೂ ಹಲವು ಸ್ಪೆಷಾಲಿಟಿ ಅಂದ್ರೆ ಈ ಸರ್ಕಾರದ ಅವಧಿಯಲ್ಲಿ ಆಪರೇಷನ್ ಕಮಲಕ್ಕೆ ತುತ್ತಾದ ಇಬ್ಬರಿಗೆ ಸಚಿವ ಸ್ಥಾನ ದೊರೆತಿರೋದು. ಕಾಂಗ್ರೆಸ್ ಶಾಸಕರಾಗಿದ್ದ ಬ್ರಿಜೇಶ್ ಮರ್ಜಾ ಹಾಗೂ ಜಿತೂ ಚೌಧರಿ 2020ರಲ್ಲಿ ರಾಜೀನಾಮೆ ನೀಡಿದ ಬಳಿಕ ಬಿಜೆಪಿ ಸೇರಿದ್ದರು. ಉಪಚುನಾವಣೆಯಲ್ಲಿ ಆಯ್ಕೆಯಾದ ಬೆನ್ನಲ್ಲೇ ಈ ಇಬ್ಬರೂ ಶಾಸಕರಿಗೆ ಭೂಪೇಂದ್ರ ಕ್ಯಾಬಿನೆಟ್​​ನಲ್ಲಿ ಲಕ್ ಖುಲಾಯಿಸಿದೆ. ಇನ್ನ, ಹೊಸ ಸಚಿವ ಸಂಪುಟಕ್ಕೆ ಪ್ರಧಾನಿ ಮೋದಿ ಶುಭಾಶಯ ಕೋರಿದ್ದಾರೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಜವಾಬ್ದಾರಿ ದೊರೆತಿದೆ ಎಂದು ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಬಿಜೆಪಿ ನೋ ರಿಪೀಟ್ ನೀತಿಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್ ಜನತೆ ಕೂಡ ಬಿಜೆಪಿ ಸರ್ಕಾರವನ್ನ ನೋ ರಿಪೀಟ್ ಮಾಡಲಿದ್ದಾರೆ ಎಂಬುದನ್ನ ಅರಿತೇ ಬಿಜೆಪಿ ಈ ಹೊಸ ನೀತಿ ಅನುಷ್ಠಾನಕ್ಕೆ ತಂದಿದೆ ಎಂದು ಗುಜರಾತ್ ಕಾಂಗ್ರೆಸ್ ನಾಯಕ ಸರಳ್ ಪಟೇಲ್ ಟ್ವೀಟ್ ಮಾಡಿದ್ದಾರೆ.
ಒಟ್ಟಾರೆ, ಗುಜರಾತ್​ನಲ್ಲಿ ಪ್ರಧಾನಿ ಮೋದಿ ಹೊಸ ನೀತಿ ಆಳವಡಿಸಿಕೊಳ್ಳೋ ಮೂಲಕ ಗುಜರಾತ್ ಸರ್ಕಾರವನ್ನ ಅಗ್ನಿಪರೀಕ್ಷೆಗೆ ಒಡ್ಡಿದ್ದಾರೆ. ಅನುಭವವೇ ಇಲ್ಲದ ಯುವಮುಖಗಳ ಗುಜರಾತ್ ಹೊಸ ಬಿಜೆಪಿ ಸರ್ಕಾರ ಯಾವ ರೀತಿ ಆಡಳಿತ ನಡೆಸಲಿದೆ? ಜನರ ನಿರೀಕ್ಷೆಗಳಿಗೆ ತಕ್ಕಂತೆ ಈ ನೂತನ ಸರ್ಕಾರ ಕಾರ್ಯನಿರ್ವಹಿಸುತ್ತಾ? ಹೊಸ ಪ್ರಯೋಗ ಬಿಜೆಪಿ ಪಾಲಿಗೆ ಲಾಭ ತರುತ್ತಾ..ಅಥವಾ ನಷ್ಟ ತರುತ್ತಾ? ಇಂಥಾ ಅನೇಕ ಪ್ರಶ್ನೆಗಳು ರಾಜಕೀಯ ಚಾವಡಿಯಲ್ಲಿ ಹರಿದಾಡುತ್ತಿವೆ. ಇದಕ್ಕೆ ಉತ್ತರ ಕಂಡುಕೊಳ್ಳೋಕೆ ಮುಂದಿನ ಎಲೆಕ್ಷನ್​ವರೆಗೂ ಕಾಯಲೇಬೇಕು.
ಗುಜರಾತ್​ನಲ್ಲಿ ಇನ್ನೊಂದು ವರ್ಷಕ್ಕೆ ವಿಧಾನಸಭಾ ಚುನಾವಣೆ ನಡೆಯಲಿದೆ. ಇಂತಹ ಸಮಯದಲ್ಲಿ ವಿವಾದರಹಿತ, ಶುದ್ಧಹಸ್ತ ಎನಿಸಿದ ನಾಯಕ ನನ್ನ ಸಾರಥಿಯನ್ನಾಗಿ ಮಾಡೋದು ಮೋದಿ-ಶಾ ಗುರಿಯಾಗಿತ್ತು. ಆಗ ಕಂಡವರೇ ಆನಂದಿ ಬೆನ್ ಪಟೇಲ್​​​ರ ಬೆಂಬಲಿಗ ಭೂಪೇಂದ್ರ ಪಟೇಲ್. ಇನ್ನ, ಸಂಪುಟದ ಪ್ರಶ್ನೆ ಬಂದಾಗ, ಯುವ ಮುಖಗಳಿಗೆ ಅವಕಾಶ ಕೊಡೋಕೆ ರೂಪಿಸಿದ್ದೇ ಈ ನೋ ರಿಪೀಟ್ ಪ್ಲಾನ್. ಈ ಪ್ಲಾನ್ ಜಾರಿ ಬಗ್ಗೆ 2017 ರಲ್ಲೇ ಮೋದಿ ಚಿಂತಿಸಿದ್ದಾದರೂ, ಅಂತಿಮವಾಗಿ ಈಗ ಅನುಷ್ಠಾನಗೊಂಡಿದೆ.
ತವರಿನಲ್ಲಿ ‘ನೋ ರಿಪೀಟ್’ ಎಂದಿದ್ದೇಕೆ ಮೋದಿ?ಗುಜರಾತ್​ನಲ್ಲಿ ಹೊಚ್ಚಹೊಸ ಮುಖಗಳ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯದಲ್ಲಿ ಹೊಸ ಪ್ರಯೋಗಕ್ಕೆ ಕಮಲ ತೆರೆದುಕೊಂಡಿದೆ. ಇಡೀ ರಾಷ್ಟ್ರದಲ್ಲೇ ಅಪರೂಪದ ರಾಜಕೀಯ ವಿದ್ಯಮಾನಕ್ಕೆ ಈಗ ಸಾಕ್ಷಿಯಾದಂತಾಗಿದೆ ಗುಜರಾತ್.
ಯಾವುದೇ ಸರ್ಕಾರವಾಗಲೀ..ಮಧ್ಯಂತರದಲ್ಲಿ ಸಿಎಂ ಬದಲಾದ್ರೆ, ಬಹುತೇಕ ಕಡೆ ಕೆಲವು ಬದಲಾವಣೆಗಳನ್ನ ಹೊರತುಪಡಿಸಿದ್ರೆ ಹಳೇ ಸಂಪುಟ ವನ್ನೇ ಉಳಿಸಿಕೊಳ್ಳೋದು ಸಹಜ. ಕರ್ನಾಟಕ ಸೇರಿದಂತೆ ಇತ್ತೀಚೆಗೆ ಬಿಜೆಪಿ ಸರ್ಕಾರ ಇರೋ ರಾಜ್ಯಗಳಲ್ಲಿ, ನಾಯಕತ್ವ ಬದಲಾದಂತೆ, ಸರ್ಕಾರ ದಲ್ಲೇನೂ ದೊಡ್ಡ ಮಟ್ಟದ ಬದಲಾವಣೆ ಕಾಣಬರಲಿಲ್ಲ. ರಾಜ್ಯದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಚೇಂಜ್ ಆಗಿ ಬಸವರಾಜ ಬೊಮ್ಮಾಯಿ ಅಧಿಕಾರಕ್ಕೇರಿದರೂ, ಬಿಎಸ್​ವೈ ಸರ್ಕಾರದಲ್ಲಿದ್ದ ಬಹುತೇಕ ಸಚಿವರು ಸ್ಥಾನ ಉಳಿಸಿಕೊಂಡಿದ್ದಾರೆ. ಇದೇ ಸೂತ್ರ ಹಲವಡೆ ಅನುಸರಿಸೋದು ಮಾಮೂಲಿ. ಆದ್ರೆ, ಗುಜರಾತ್​ನಲ್ಲಿ ಮಾತ್ರ ಹೊಸ ಕಸರತ್ತಿಗೆ ಕೈಹಾಕಿದೆ ಮೋದಿ-ಶಾ ಜೋಡಿ.
ಅಷ್ಟಕ್ಕೂ ಗುಜರಾತ್​ನಲ್ಲಿ ಮೋದಿ ನೋ ರಿಪೀಟ್ ನೀತಿ ಜಾರಿಗೆ ಮುಂದಾಗಿದ್ದೇಕೆ? ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷವಷ್ಟೇ ಬಾಕಿ ಇರುವಾಗ ಇಂತಹ ಅಪಾಯಕಾರಿ ಪ್ರಯೋಗಕ್ಕೆ ನಮೋ ಕೈಹಾಕಿದ್ದೇಕೆ? ಇಂಥಾ ಪ್ರಶ್ನೆಗಳು ರಾಜಕೀಯ ಪಡಸಾಲೆಯಲ್ಲಿ ಅನುರಣಿಸ್ತಿರುವಾಗ ಮೇಲ್ನೋಟಕ್ಕೆ ಕಂಡು ಬಂದ ಉತ್ತರ.. ಗುಜರಾತ್​​ನಲ್ಲಿ ಬಿಜೆಪಿಯನ್ನ ಮತ್ತೆ ಅಧಿಕಾರಕ್ಕೆ ತರೋ ಬಗೆಗಿನ ನಮೋ-ಶಾ ಅಚಲ ಗುರಿ.!
ಯಸ್..ಯಾರು ಏನೇ ಹೇಳಿದರೂ, ಗುಜರಾತ್ ವಿಧಾನಸಭಾ ಚುನಾವಣೆ ಎಂದ್ರೆ ಅದು ಮೋದಿ ಹಾಗೂ ಅಮಿತ್ ಶಾಗೆ ಪ್ರತಿಷ್ಟೆ ಪ್ರಶ್ನೆ. ದೇಶದ ಯಾವುದೇ ಭಾಗದಲ್ಲಿ ಬಿಜೆಪಿ ಸೋತರೂ, ಅದಕ್ಕಿಂತ ಹೆಚ್ಚು ಎಫೆಕ್ಟ್ ಅನಿಸೋದು ಗುಜರಾತ್​ನಲ್ಲಿ ಬಿಜೆಪಿ ಪರಾಭವ. ದೂರಗಾಮಿ ನೆಲೆಗಟ್ಟಿನಲ್ಲಿ ನೋಡಿದ್ರೆ, ಒಂದೊಮ್ಮೆ ಗುಜರಾತ್​​ನಲ್ಲಿ ಮಂಡಿಯೂರಿದ್ರೆ, ಇದು ಮೂಡಿಸೋ ಸಂಚಲನ ಬಿಜೆಪಿ ಭವಿಷ್ಯಕ್ಕೇ ಸಂಚಕಾರ ತರಬಹುದು. ಇದು ಮುಂಬರೋ ಹಲವಾರು ರಾಜ್ಯಗಳ ವಿಧಾನಸಭಾ ಚುನಾವಣೆ ಸೇರಿದಂತೆ 2024ರ ಲೋಕಸಭಾ ಚುನಾವಣೆ ಮೇಲೂ ಗಾಢ ಪರಿಣಾಮ ಬೀರೋದು ಗ್ಯಾರೆಂಟಿ.
ಹೀಗಾಗಿ ಗುಜರಾತ್​ನ ರಾಜಕೀಯ ಪರಿಸ್ಥಿತಿ ಬಗ್ಗೆ ನಮೋ- ಶಾ ಸ್ಕ್ಯಾನ್ ಮಾಡಿದಾಗ ಸಿಕ್ಕ ಫಲಿತಾಂಶ..ತೀವ್ರವಾಗಿದ್ದ ಆಡಳಿತವಿರೋಧಿ ಅಲೆ. 19 98 ರಿಂದಲೂ ಸತತವಾಗಿ ಗುಜರಾತ್​ ಚುಕ್ಕಾಣಿ ಹಿಡಿದ ಬಿಜೆಪಿ, ಸಹಜವಾಗೇ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. 2001ರಿಂದ ಇಲ್ಲಿ ಅಧಿ ಕಾರ ಹಿಡಿದ ನರೇಂದ್ರ ಮೋದಿ, ಆ ಬಳಿಕ 2014ರವರೆಗೂ ಸತತ 13 ವರ್ಷಗಳ ಕಾಲ ಗುಜರಾತ್ ಸಿಎಂ ಆಗಿ ರಾಜ್ಯಭಾರ ನಡೆಸಿದರು. ತಮ್ಮದೇ ಅಭಿವೃದ್ಧಿ ಅಜೆಂಡಾದಿಂದ ಪಕ್ಷವನ್ನ ಸತತವಾಗಿ ಅಧಿಕಾರಕ್ಕೆ ತಂದರು ನರೇಂದ್ರ ಮೋದಿ. ಆ ಬಳಿಕ ಮೋದಿ ಪ್ರಧಾನಿಯಾದ ಕಾರಣ ಗುಜರಾತ್​ ತ್ಯಜಿಸಬೇಕಾಯಿತು. ನಂತರ 2017ರ ಚುನಾವಣೆಯಲ್ಲಿ ಬಿಜೆಪಿ ಗುಜರಾತ್​ನಲ್ಲಿ ಬಹುಮತ ಗಳಿಸಿದ್ದು ಕೂಡ ಮೋದಿ ನಾಮಬಲದಿಂದಲೇ. ಆದ್ರೆ, 2017ರಲ್ಲಿ ಪಕ್ಷದ ಗೆಲುವು ಅನಾಯಾಸವಾಗಿರಲಿಲ್ಲ..ಕಾಂಗ್ರೆಸ್ ಜತೆ ತಿಣುಕಾಡಿ ಕೊನೆಗೆ ವಿಜಯಮಾಲೆ ಧರಿಸಿತು ಬಿಜೆಪಿ. ಆದ್ರೆ, ಈ ಸಲ ಅಂಥಾ ಕಠಿಣ ಪರಿಸ್ಥಿತಿ ಬಾರದಿರಲಿ ಎಂಬುದು ಮೋದಿ- ಶಾ ಮುನ್ನೆಚ್ಚರಿಕೆ.
ಇನ್ನ, ಸುಮಾರು 7 ವರ್ಷಗಳ ಕಾಲ ಅಧಿಕಾರ ನಡೆಸಿದ ವಿಜಯ್ ರೂಪಾನಿ ದಿಢೀರ್ ಬದಲಾವಣೆ ಯಾಕೆ? ಇಲ್ಲೂ ಮೋದಿ ಅಳೆದೂ ತೂಗಿಯೇ ಡಿಸಿಷನ್ ತೆಗೆದುಕೊಂಡಿದ್ದು. ಜೈನ ಸಮುದಾಯದ ವಿಜಯ್ ರೂಪಾನಿ ಯಾವುದೇ ವಿವಾದಕ್ಕೆ ಈಡಾಗದೇ ಆಡಳಿತ ನಡೆಸಿದ್ದು ಸತ್ಯ. ಆದ್ರೆ, ಚುನಾವಣೆ ಗೆಲುವಿಗೆ ಇಷ್ಟು ಮಾತ್ರ ಸಾಲಲ್ಲವಲ್ಲ. ಮೋದಿ ವರ್ಚಸ್ಸಿನ ಜತೆಯಾಗಿ ಸ್ವಲ್ಪ ಸಾಥ್ ಕೊಡುವಷ್ಟರ ಮಟ್ಟಿಗೂ ರೂಪಾನಿ ಸ್ವಯಂ ಪ್ರಭೆ ಮೂಡಿಸಲಿಲ್ಲ. ಮೋದಿ-ಶಾ ನೆರಳಲ್ಲೇ ಕಾಲ ದೂಡಿದ ವಿಜಯ್ ರೂಪಾನಿ ಬಗ್ಗೆ ಗುಜರಾತ್ ಜನತೆ ಪೂರ್ಣ ಪ್ರಮಾಣದ ಭರವಸೆ ಇಡುವಂತಿ ರಲಿಲ್ಲ. ಇದಲ್ಲದೆ, ರಾಜ್ಯದಲ್ಲಿ ಬಹುಸಂಖ್ಯಾತ ಪಟೇಲ್ ಸಮುದಾಯದ ಮತವನ್ನ ಹಿಡಿದಿಟ್ಟುಕೊಳ್ಳಲು ಏನಾದರೂ ಜಾದೂ ಮಾಡಲೇಬೇಕಾದ ಅನಿವಾರ್ಯತೆ ಮೋದಿಗಿತ್ತು.
ಮೊದಲೇ ಈ ಬಾರಿ ಪಟೇಲ್-ಪಾಟೀದಾರ್ ಸಮುದಾಯದ ಯುವ ನಾಯಕ ಹಾರ್ದಿಕ್ ಪಟೇಲ್, ಕಾಂಗ್ರೆಸ್ ಪಾಳೆಯದಲ್ಲಿ ಸಂಚಲನ ಮೂಡಿ ಸಿದ್ದಾರೆ. ಈ ಹೊತ್ತಿನಲ್ಲಿ ಬಿಜೆಪಿ ಪರಂಪಾರಗತ ಮತಬ್ಯಾಂಕ್ ಎನಿಸಿದ ಪಟೇಲ್ ಮತಗಳು ಚದುರಿಹೋಗೋ ಭೀತಿ ಆವರಿಸಿತ್ತು. ಕಳೆದ ಸಲವೇ ಕೈ ನಿಂದ ತೀವ್ರ ಪೈಪೋಟಿ ಎದುರಿಸಿದ ಬಿಜೆಪಿ, ಬಹುಮತದ ಹೊಸ್ತಿಲು ದಾಟಲು ಏದುಸಿರು ಪಟ್ಟಿದ್ದನ್ನ ಮೋದಿ-ಶಾ ಮರೆತಿರಲಿಲ್ಲ. ಹೀಗಾಗಿ ಕೊನೇ ಹಂತದ ಸರ್ಜರಿ ನಡೆಸಿದ ಮೋದಿ-ಶಾ, ರೂಪಾನಿ ಬದಲಾವಣೆ ನಿರ್ಧಾರ ಕೈಗೊಂಡರು. ಇದರ ಜತೆಗೇ ವಿಜಯ್ ರೂಪಾನಿ ಸಂಪುಟದಲ್ಲೂ ಪಕ್ಷಕ್ಕೆ ಮತ ತಂದುಕೊಡಬಲ್ಲ ಛಾತಿ ಹೊಂದಿದ ಸಚಿವರು ಕಾಣಲಿಲ್ಲ. ಬದಲಾಗಿ ಭ್ರಷ್ಟಾಚಾರ ಸೇರಿದಂತೆ ವಿವಾದಗಳ ಮೂಟೆ ಹೊತ್ತ ಸಚಿವರಿಂದ ಪಕ್ಷಕ್ಕೆ ನಷ್ಟವೇ ಹೊರತು ಲಾಭ ಬರುವಂತೆ ತೋರಲಿಲ್ಲ. ಇದೇ ಸಂಪುಟ ಮುಂದುವರೆಸಿದರೆ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಯಶಸ್ಸು ಕಬ್ಬಿಣದ ಕಡಲೆ ಎಂಬುದು ನಮೋ ತರ್ಕ. ಹೀಗಾಗಿಯೇ ಮೋದಿ ತಲೆಯಲ್ಲಿ ಓಡಿದ ಮಾಸ್ಟರ್ ಪ್ಲ್ಯಾನ್ ನೋ ರಿಪೀಟ್ ಫಾರ್ಮುಲಾ.
ಅಲ್ಲದೇ, ಮೋದಿ ನೋ ರಿಪೀಟ್ ಸೂತ್ರಕ್ಕೆ ಇನ್ನೂ ಒಂದು ಕಾರಣವಿದೆ. ಮೊದಲ ಸಲ ಶಾಸಕರಾದರೂ, ಸಿಎಂ ಆಗಿ ಬಡ್ತಿ ಪಡೆದ ಭೂಪೇಂದ್ರ ಪಟೇಲ್, ಹಿರಿಯ, ಅನುಭವೀ ಸಚಿವರನ್ನ, ನಿಭಾಯಿಸೋದು ಕೂಡ ಸುಲಭವಲ್ಲ. ಸಿಎಂ ಕೂಡ ಹೊಸಬರು..ಹಾಗೆಯೇ ಹೊಸಬರನ್ನ, ಯುವ ಮುಖಗಳನ್ನ ಮಂತ್ರಿಗಳನ್ನಾಗಿ ಮಾಡಿದರೆ, ಎಲ್ಲರೂ ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಯಾವುದೇ ಅಡೆತಡೆಯಿಲ್ಲದೇ ಅಭಿವೃದ್ಧಿ ಕಡೆ ಗಮನ ಕೇಂದ್ರೀಕರಿಸೋಕೆ ಸುಲಭವಾಗಲಿದೆ. ಇದು ಮುಂದಿನ ಎಲೆಕ್ಷನ್​​ನಲ್ಲಿ ಪಕ್ಷಕ್ಕೆ ಲಾಭ ತರಲಿದೆ ಎಂಬುದು ನಮೋ ಲೆಕ್ಕಾಚಾರ.
ಕರ್ನಾಟಕ ಬಗ್ಗೆ ನಮೋ ಫ್ಯೂಚರ್ ಪ್ಲಾನ್ ಏನು?ದೇಶದ ರಾಜಕೀಯ ಇತಿಹಾಸದಲ್ಲಿ ಅತ್ಯರೂಪ ಎನಿಸಿದ ಗುಜರಾತ್ ಮಾಡೆಲ್ ಅಸ್ತಿತ್ವಕ್ಕೆ ಬಂದಂತಾಗಿದೆ. ಹಿಂದಿನ ಸಚಿವ ಸಂಪುಟ, ಅದೇ ಅವ ಧಿಯ, ಅದೇ ಪಕ್ಷದ ಮುಂದಿನ ಸರ್ಕಾರದಲ್ಲಿ ಸಾರಾಸಗಟಾಗಿ ಇಲ್ಲದೇ ಇರೋದು ಅಂದ್ರೆ ರಾಜಕೀಯದಲ್ಲಿ ಊಹೆಗೂ ನಿಲುಕದ ಸಂಗತಿ. ಇಂಥಹ ವಿಶಿಷ್ಟ ಮಾದರಿಯನ್ನ ಜಾರಿಗೆ ತಂದಿದ್ದಾರೆ ಪ್ರಧಾನಿ ಮೋದಿ- ಗೃಹಸಚಿವ ಅಮಿತ್ ಶಾ. ಈ ಗುಜರಾತ್ ಮಾದರಿ ಮುಂಬರೋ ದಿನಗಳಲ್ಲಿ ದೇಶ ಕ್ಕೂ ವಿಸ್ತರಿಸುತ್ತಾ? ಕರ್ನಾಟಕದಲ್ಲೂ ಮುಂದಿನ ದಿನಗಳಲ್ಲಿ ಇದು ಅನುಷ್ಠಾನಕ್ಕೆ ಬರುತ್ತಾ? ಇದೇ ಈಗ ಕಾಡುತ್ತಿರೋ ಪ್ರಶ್ನೆಗಳು.
ಹೌದು..ಯಾವಾಗ ಗುಜರಾತ್​ನಲ್ಲಿ ಯಾರೂ ನಿರೀಕ್ಷಿಸದಂತೆ ಮೋದಿ ನೋ ರಿಪೀಟ್ ನೀತಿ ಜಾರಿಗೆ ತಂದರೋ, ಇದು ಇಡೀ ದೇಶದಲ್ಲಿ ಸಂಚಲನ ತಂದಿರೋದು ಸತ್ಯ. ಕರ್ನಾಟಕದಲ್ಲೂ ಕಳೆದ ಅವಧಿಯಲ್ಲಿ ಇದೇ ರೀತಿ ಪದ್ಧತಿ ಜಾರಿಗೆ ತರೋ ಪ್ಲಾನ್ ಮೋದಿಗಿತ್ತಾ? ಅಥವಾ ಮುಂಬರೋ ದಿನ ಗಳಲ್ಲಿ ಕರ್ನಾಟಕ ಇಂತಹ ನೋ ರಿಪೀಟ್ ಸೂತ್ರಕ್ಕೊಳಪಡುತ್ತಾ? ಇಂತಹ ಊಹಾಪೋಹಗಳು ಆಗಲೇ ಅನೇಕ ಜನರ ತಲೆಯಲ್ಲಿ ಗಿರಕಿ ಹೊಡೆ ಯುತ್ತಿವೆ.
ಸದ್ಯಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇನ್ನೂ ಒಂದೂ ಮುಕ್ಕಾಲು ವರ್ಷದಷ್ಟು ಆಡಳಿತಾವಧಿ ಬಾಕಿ ಉಳಿದಿದೆ. ಸದ್ಯದ ಬೆಳವಣಿಗೆ ನೋಡಿದ್ರೆ, ಬಸವ ರಾಜ ಬೊಮ್ಮಾಯಿ ಇನ್ನುಳಿದ ಅವಧಿ ಪೂರೈಸೋದು ಕಷ್ಟಕರ ಎನಿಸುತ್ತಿಲ್ಲ. ಈಗಾಗಲೇ ರಾಜ್ಯಕ್ಕೆ ಬಂದಿದ್ದ ಅಮಿತ್ ಶಾ ಕೂಡ ಮುಂದಿನ ಚುನಾ ವಣೆ ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ ಎಂಬ ಅರ್ಥದ ಮಾತುಗಳನ್ನಾಡಿ ಹೋಗಿದ್ದಾರೆ. ಈಗ ಏನಿದ್ರೂ ಎದ್ದಿರೋ ಪ್ರಶ್ನೆ, ಮುಂದಿನ ಚುನಾ ವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರಿದ್ರೆ, ಇಲ್ಲೂ ಜಾರಿಗೆ ಬರಲಿದ್ಯಾ ನೋ ರಿಪೀಟ್ ಪಾಲಿಸಿ?
ಮೋದಿ-ಶಾ ಮನಸ್ಸಿನಲ್ಲಿ ಇದೇ ಇರಬಹುದು..ಕರ್ನಾಟಕದಲ್ಲಿ ಕೂಡ ಹೊಸ ಹಾಗೂ ಯುವ ಮುಖಗಳಿಗೆ ಅವಕಾಶ ಕೊಡೋ ಮೂಲಕ ಹೊಸ ನಾಯಕತ್ವ ಹುಟ್ಟುಹಾಕೋ ಪ್ಲ್ಯಾನ್ ಮೋದಿ-ಶಾಗಿರಬಹುದು. ಹಿರಿಯ ನಾಯಕರನ್ನ ತೆರೆಮರೆಗೆ ತಳ್ಳಿ ಅಥವಾ ಪಕ್ಷಸಂಘಟನೆಗೆ ಬಳಸಿಕೊಂಡು, ಹೊಸಬರ ಕೈಗೇ ಚುಕ್ಕಾಣಿ ಕೊಡೋ ಬಗ್ಗೆ ಮೋದಿ ರಣವ್ಯೂಹ ರೂಪಿಸಿರಬಹುದು.
ಆದ್ರೆ, ಅಧಿಕಾರ ಬಿಡೋಕೆ ಯಾರು ತಾನೇ ಸಿದ್ಧರಿರುತ್ತಾರೆ ಹೇಳಿ? ಪಕ್ಷಕ್ಕಾಗಿ ದಶಕಗಳ ಕಾಲ ದುಡಿದ ನಾಯಕರು, ಏಕಾಏಕಿ ಸನ್ಯಾಸಿಗಳಾಗಿ ಎಂದ್ರೆ ಅದಕ್ಕೆ ಸಿದ್ಧವಿರಲ್ಲ. ಇಷ್ಟು ವರ್ಷ ಕಷ್ಟಪಟ್ಟಿದ್ದಕ್ಕೆ ಪ್ರತಿಫಲ ಎಂಬಂತೆ ಅಧಿಕಾರ ಸಿಗದಿದ್ದಾಗ ನಾಯಕರು, ತಮ್ಮದೇ ಆದ ಪರ್ಯಾಯಗಳನ್ನ ಆಯ್ಕೆ ಮಾಡಿಕೊಳ್ಳೋ ಅಪಾಯ ಇದ್ದೇ ಇದೆ. ಇದು ಪಕ್ಷಕ್ಕೂ ಹೊಡೆತ ಕೊಡೋದರಲ್ಲಿ ಅನುಮಾನವಿಲ್ಲ.
ಹೇಳಿಕೇಳಿ ಗುಜರಾತ್​ ಮೋದಿ-ಶಾ ಆಡುಂಬೊಲ. ಇಲ್ಲಿ ಮೋದಿ ಹೆಸರಿನಲ್ಲಿ ಮತಗಳ ರಾಶಿಯೇ ಬಿಜೆಪಿಗೆ ಬಂದು ಬೀಳಬಹುದು. ಮೋದಿ ಅಧಿ ಕಾರಕ್ಕೇರೋ ಮುಂಚೆ ಅಂದ್ರೆ,1995 ರಿಂದಲೂ ಬಿಜೆಪಿ ಅಲ್ಲಿ ಸೋತಿಲ್ಲ. ಆದ್ರೆ, ಕರ್ನಾಟಕದ ರಾಜಕೀಯ ಪರಿಸ್ಥಿತಿ ಭಿನ್ನ. ಇಲ್ಲಿ ಬಿಜೆಪಿಗೆ ಸ್ಥಳೀಯ ನಾಯಕತ್ವ ಹಾಗೂ ಸ್ಥಳೀಯ ಪರಿಸ್ಥಿತಿ ಕೂಡ ನಿರ್ಣಾಯಕ. ಮೋದಿ ಹೆಸರಿನಲ್ಲೇ ಕರ್ನಾಟಕ ಚುನಾವಣೆಯಲ್ಲಿ ಬಹುಮತ ಸಾಧಿಸಿದ್ರೆ, ಆಗ ನಮೋ ನೋ ರಿಪೀಟ್ ಅನ್ನಬಹುದು. ಆದ್ರೆ, ರಾಜ್ಯದ ರಾಜಕೀಯ ಸ್ಥಿತಿಗತಿ ಸೂಕ್ಷ್ಮವಾಗಿ ಅವಲೋಕಿಸಿದ್ರೆ, ನೋ ರಿಪೀಟ್..ನಾಟ್ ಈಸಿ.!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + sixteen =
Remember me
