ತಿರುವನಂತಪುರ:ಬಾಳಿ ಬದುಕಬೇಕಾದ ಹಾಗೂ ಅನೇಕರ ಬದುಕಿನ ಆಶಾಕಿರಣವಾಗಿದ್ದ ಕೇರಳ ಯುವ ವೈದ್ಯೆ ವಿಸ್ಮಯ ನಾಯರ್​ ಆತ್ಮಹತ್ಯೆ ಪ್ರಕರಣ ಇಡೀ ಕೇರಳದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಗಂಡ ಕಿರಣ್​ ಕುಮಾರ್​ ಹಣ ದಾಹಕ್ಕೆ ಯುವ ವೈದ್ಯೆ ಸಾವಿನ ಹಾದಿ ಹಿಡಿದಳು. ಅದಕ್ಕೂ ಮುಂಚೆ ಗಂಡನ ಅಸಲಿ ಮುಖವಾಡವನ್ನು ಮೃತ ವೈದ್ಯೆ ಬಿಚ್ಚಿಟ್ಟಿದ್ದಳು. ಅಷ್ಟಕ್ಕೂ ಆಕೆಯ ಗಂಡ ಅನಾಗರಿಕನೇನಲ್ಲ. ಆದರೆ, ಆತ ಮಾಡಿದ ಕೆಲಸ ಮಾತ್ರ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು, ವೃತ್ತಿಯಲ್ಲಿ ಕೇರಳದ ಮೋಟಾರು ವಾಹನ ವಿಭಾಗದ ಅಧಿಕಾರಿಯಾಗಿದ್ದ. ಒಳ್ಳೆಯ ಉದ್ಯೋಗ, ಕೈತುಂಬ ಸಂಬಳ ಪಡೆಯುತ್ತಿದ್ದರೂ ಆತನ ಅತಿಯಾದ ದುರಾಸೆ ಯುವ ವೈದ್ಯೆಯ ಪ್ರಾಣವನ್ನೇ ಕಸಿದುಕೊಂಡಿತು. ಅದಕ್ಕೆ ಶಿಕ್ಷೆಯಾಗಿ ಕೇರಳ ಸರ್ಕಾರ ಆರೋಪಿಯ ಸರ್ಕಾರಿ ಕೆಲಸವನ್ನೇ ಕಸಿದುಕೊಂಡು ಕಂಬಿ ಹಿಂದೆ ತಳ್ಳಿದೆ.
ಈ ಪ್ರಕರಣದಲ್ಲಿ ತಾಜಾ ಬೆಳವಣಿಗೆಯೊಂದು ನಡೆದಿದ್ದು, ಆರೋಪಿ ಕಿರಣ್​ ಕುಮಾರ್​ಗೆ ಕೇರಳ ಹೈಕೋರ್ಟ್​ ಬಿಗ್​ ಶಾಕ್​ ಒಂದನ್ನು ನೀಡಿದೆ. ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್​ ನಿರಾಕರಿಸಿದೆ. ಅರ್ಜಿದಾರರ ವಿರುದ್ಧದ ಆರೋಪಗಳ ಸ್ವರೂಪ ಮತ್ತು ಗಂಭೀರತೆಯನ್ನು ನ್ಯಾಯಾಲಯವು ಮೌಲ್ಯಮಾಪನ ಮಾಡಿತು. ಕಿರಣ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ.ಆರ್.ಅನಿತಾ, ಜಾಮೀನು ಅರ್ಜಿದಾರನ ಮೇಲೆ ವರದಕ್ಷಿಣೆ ಸಾವಿನ ಗಂಭೀರ ಅಪರಾಧವನ್ನು ಹೊರಿಸಲಾಗಿದೆ. ಇದು ಒಂದು ಸಾಮಾಜಿಕ ಪೆಡಂಭೂತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಜೂನ್​ 22ರಿಂದಲೂ ಆರೋಪಿ ಕಿರಣ್​ ಕುಮಾರ್​ ಜೈಲಿನಲ್ಲೇ ದಿನ ದೂಡುತ್ತಿದ್ದಾನೆ. ಪ್ರಕಣದ ಹಿನ್ನೆಲೆಯನ್ನು ನೋಡುವುದಾದರೆ, ಒಂದು ವರ್ಷದ ಹಿಂದಷ್ಟೇ ಅಂದರೆ, 2020ರ ಮೇ ತಿಂಗಳಲ್ಲಿ ವಿಸ್ಮಯ ಮತ್ತು ಕಿರಣ್​ ಇಬ್ಬರು ಮದುವೆ ಆಗಿದ್ದರು. ವಿಸ್ಮಯಳ ಮದುವೆಯನ್ನ ಕುಟುಂಬಸ್ಥರು ಅದ್ದೂರಿಯಾಗಿ ಮಾಡಿಕೊಟ್ಟಿದ್ದರು. ದಂಪತಿ ಇಬ್ಬರೂ ಕೇರಳದ ಕೊಲ್ಲಂನಲ್ಲಿ ವಾಸವಿದ್ದರು. ಆದರೆ, ಗಂಡನ ಹಣದಾಹ ಮತ್ತು ಕಿರುಕುಳ ಸಹಿಸದೇ ಜೂನ್​ 21ರ ಸೋಮವಾರ ಬೆಳಗ್ಗೆ ಗಂಡನ ಮನೆಯಲ್ಲಿಯೇ ವಿಸ್ಮಯ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ದೇಹದ ಮೇಲೆ ಗಾಯದ ಗುರುತುಗಳಾಗಿತ್ತು. ಗಂಡನ ಹಣದಾಹಕ್ಕೆ ವಿಸ್ಮಯ ಬಲಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಸಾವಿಗೂ ಮುನ್ನ ಅಂದರೆ ಭಾನುವಾರ ರಾತ್ರಿ ವಾಟ್ಸ್ಆ್ಯಪ್​ ಮತ್ತು ಫೇಸ್​ಬುಕ್​ನಲ್ಲಿಯೂ ಸೋದರ ಸಂಬಂಧಿ ಜತೆ ಚಾಟ್​ ಮಾಡಿದ್ದ ವಿಸ್ಮಯ, ಬಹುಶಃ ಇದೇ ನನ್ನ ಕೊನೇ ಮೆಸೇಜ್​ ಆಗಬಹುದು. ಗಂಡನ ಕಿರುಕುಳ ಸಹಿಸಲಾಗ್ತಿಲ್ಲ ಎಂದು ಹೇಳಿದ್ದರು. ಗಂಡ ಹಿಂಸೆ ನೀಡಿರುವ ಕೆಲವು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದರು.
ಮುಖ್ಯಮಂತ್ರಿಯಿಂದಲೂ ಖಂಡನೆವಿಸ್ಮಯ ಸಾವಿನ ಪ್ರಕರಣ ಕೇರಳದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರೇ ಘಟನೆಯನ್ನು ಖಂಡಿಸಿದ್ದರು. ಅಲ್ಲದೆ, ವಿಶೇಷ ತನಿಖೆ ನಡೆಸುವಂತೆ ಆದೇಶಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ವಿಸ್ಮಯ ಪ್ರಕರಣದ ಬಗ್ಗೆ ಬಹಳ ಚರ್ಚೆ ನಡೆದಿತ್ತು.
ಅದ್ಧೂರಿ ಮದುವೆಸಾರಿಗೆ ಅಧಿಕಾರಿಯಾಗಿದ್ದ ಕಿರಣ್​ ಜತೆ ಮದುವೆ ಮಾಡಿಕೊಡಲು ವರದಕ್ಷಿಣೆಯಾಗಿ 800 ಗ್ರಾಂ ಚಿನ್ನ, ಒಂದು ಎಕರೆಗೂ ಅಧಿಕ ಜಮೀನು, 10 ಲಕ್ಷ ಮೌಲ್ಯದ ಕಾರನ್ನು ವಿಸ್ಮಯ ಪಾಲಕರು ನೀಡಿದ್ದರು. ಮದುವೆ ನಂತರವೂ ಕಿರಣ್​ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದ. ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ. ಇದನ್ನು ಸಹಿಸದ ವಿಸ್ಮಯ ಒಮ್ಮೆ ತವರಿಗೂ ಹೋಗಿದ್ದಳು. ಬಳಿಕ ಹಿರಿಯರ ಮುಂದೆ ಸಂಧಾನ ನಡೆದು ಮತ್ತೆ ಗಂಡನ ಮನೆ ಸೇರಿದ್ದಳು. ಕೊನೆಗೆ ಆತನ ಕಾಟವನ್ನು ಸಹಿಸದೇ ಇನ್ನೆಂದು ಮತ್ತೆ ಬಾರದ ಲೋಕಕ್ಕೆ ಕಣ್ಣೀರಿನ ವಿದಾಯ ಹೇಳಿದ್ದಾಳೆ.
ಕೆಲಸದಿಂದಲೇ ವಜಾಘಟನೆಯ ಬೆನ್ನಲ್ಲೇ ಕಿರಣ್​ನನ್ನು ಕೇರಳ ಪೊಲೀಸರು ಬಂಧಿಸಿದ್ದರು. ಅಲ್ಲದೆ, ಅವರನ್ನು ಕೆಲಸದಿಂದ ಆ ಕ್ಷಣದಲ್ಲಿ ಅಮಾನತುಗೊಳಿಸಲಾಗಿತ್ತು. ಇದೀಗ ಪ್ರಕರಣದ ತನಿಖೆ ನಡೆಯುತ್ತಿದ್ದು, ಆರೋಪಿಯ ವಿರುದ್ಧ ಬಲವಾದ ಸಾಕ್ಷಿಗಳು ಲಭ್ಯವಾಗಿವೆ. ಇದರ ನಡುವೆ ಕಿರಣ್​ರನ್ನು ಶಾಶ್ವತವಾಗಿ ಸರ್ಕಾರಿ ಕೆಲಸದಿಂದ ವಜಾಗೊಳಿಸಲಾಗಿದೆ. 35 ವರ್ಷದ ಕಿರಣ್​ ಕುಮಾರ್​ ಕೇರಳ ಮೋಟಾರು ವಾಹನ ವಿಭಾಗದ ಅಧಿಕಾರಿಯಾಗಿದ್ದ.
ಕೇರಳದ ಸಾರಿಗೆ ಸಚಿವ ಆಂಟೋನಿ ರಾಜು ಇಲಾಖೆಯ ಕಾಳಜಿ ದೃಷ್ಟಿಯಿಂದ ಕಿರಣ್​ ಕುಮಾರ್​ ವಿರುದ್ಧ ತನಿಖೆ ನಡೆಸಲು 45 ದಿನಗಳ ಕಾಲಾವಕಾಶ ನೀಡಿದ್ದರು. ನಿನ್ನೆಗೆ ತನಿಖೆ ಸಂಪೂರ್ಣವಾಗಿದ್ದು, ಪೊಲೀಸರು ತನಿಖಾ ವರದಿಯನ್ನು ಸಚಿವರ ಮುಂದೆ ಪ್ರಸ್ತುತ ಪಡಿಸಿದ್ದಾರೆ. ಅದರಲ್ಲಿ ಕಿರಣ್​ ಕುಮಾರ್​ ಸೇವಾ ನಿಯಮಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿರುವುದರಿಂದ ಕೆಲಸದಿಂದಲೇ ವಜಾಗೊಳಿಸಲಾಗಿದೆ. ಸದ್ಯ ಆರೋಪಿ ಕಿರಣ್​ ವಿರುದ್ಧ ತನಿಖೆ ಮುಂದುವರಿದಿದ್ದು, ಬಂಧನದಲ್ಲಿದ್ದಾನೆ.(ಏಜೆನ್ಸೀಸ್​)
ವಿಸ್ಮಯ ದುರಂತ ಸಾವು ಪ್ರಕರಣ: ಸರ್ಕಾರಿ ಕೆಲಸ ಕಳೆದುಕೊಂಡ ಹಣದಾಹಿ ಗಂಡ..!

ಗಂಡನ ಕಿರುಕುಳಕ್ಕೆ ಯುವ ವೈದ್ಯೆ ಸಾವು: 2 ವರ್ಷದ ಹಿಂದೆ ನಟನಿಗೆ ಲವ್​ ಲೆಟರ್​ ಬರೆದಿದ್ದ ವಿಸ್ಮಯ!

ವಿಸ್ಮಯ ದುರಂತ ಸಾವು ಪ್ರಕರಣ: ಸರ್ಕಾರಿ ಕೆಲಸ ಕಳೆದುಕೊಂಡ ಹಣದಾಹಿ ಗಂಡ..!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eight − five =
Remember me
