ಪಂಚರಾಜ್ಯಗಳ ಫಲಿತಾಂಶ ರಾಷ್ಟ್ರ ರಾಜಕಾರಣಕ್ಕೆ ಹಲವು ಸಂದೇಶಗಳನ್ನು ರವಾನಿಸಿದೆ. ಮಮತಾ ಬ್ಯಾನರ್ಜಿ ಮತ್ತಷ್ಟು ಬಲಿಷ್ಠ ನಾಯಕಿಯಾಗಿ ಹೊರಹೊಮ್ಮಿದ್ದರೆ, ರಾಹುಲ್ ಗಾಂಧಿ ರಾಜಕೀಯ ತಂತ್ರಗಾರಿಕೆ, ಸಾಮರ್ಥ್ಯ ಮತ್ತೊಮ್ಮೆ ಪ್ರಶ್ನೆಗೊಳಪಡಲಿದೆ. ಬಂಗಾಳದಲ್ಲಿ ಬಿಜೆಪಿಗೆ ವಿಪಕ್ಷ ಸ್ಥಾನ ಸಿಕ್ಕರೂ, ನಿರೀಕ್ಷೆಗಳು ತಲೆಕೆಳಗಾಗಿವೆ. ಅಸ್ಸಾಂ ಗೆಲುವು ಈಶಾನ್ಯದಲ್ಲಿ ಶಕ್ತಿ ತುಂಬಿಸಿದರೆ, ತ.ನಾಡು, ಕೇರಳದಲ್ಲಿ ಮತ ಪ್ರಮಾಣ ಸ್ವಲ್ಪ ಮಟ್ಟಿಗೆ ಏರಿಕೆಯಾಗಿರುವುದು ಕೇಸರಿಪಡೆಗೆ ಸಮಾಧಾನಕರ. ಆದರೆ, ಬಿಜೆಪಿಗೆ ಸ್ಥಳೀಯ ಪ್ರಬಲ ನಾಯಕರಿಲ್ಲದೆ ರಾಜ್ಯ ಚುನಾವಣೆಗಳನ್ನು ಕೇವಲ ದಿಲ್ಲಿ ನಾಯಕರ ವರ್ಚಸ್ಸಿನಿಂದ ಗೆಲ್ಲಲು ಸಾಧ್ಯವಿಲ್ಲ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಈ ಕುರಿತು ವಿಶ್ಲೇಷಿಸಿದ್ದಾರೆ ವಿಜಯವಾಣಿ ದೆಹಲಿ ಪ್ರತಿನಿಧಿರಾಘವ ಶರ್ಮ ನಿಡ್ಲೆ
ದೀದಿ ದರ್ಬಾರ್
ಕಳೆದ ಮೂರು ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ನೆಲೆಯೂರಿ, ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯನ್ನು ಬಗ್ಗುಬಡಿಯಲೇಬೇಕೆಂಬ ಆರ್​ಎಸ್​ಎಸ್, ಬಿಜೆಪಿ ಮುಖಂಡರು, ಕಾರ್ಯಕರ್ತರ ಮಹತ್ವಾಕಾಂಕ್ಷೆಯ ‘ಬಂಗಾಳ ಹೋರಾಟ’ಕ್ಕೆ ಸೋಲಾಗಿದೆ. ಆದರೆ, 2016ರಲ್ಲಿ ಕೇವಲ 3 ಸೀಟುಗಳನ್ನು ಹೊಂದಿದ್ದ ಪಕ್ಷ ಪ್ರಾದೇಶಿಕ ಪಕ್ಷಗಳ ಪಾರಮ್ಯ ಹೊಂದಿರುವ ಬಂಗಾಳದಂಥ ರಾಜ್ಯದಲ್ಲಿ ಪ್ರಧಾನ ವಿಪಕ್ಷವಾಗಿ ಹೊರಹೊಮ್ಮಿರುವುದು ಅಭೂತಪೂರ್ವ ಸಾಧನೆಯೇ ಸರಿ. ನಂದಿಗ್ರಾಮದಲ್ಲಿ ದೀದಿ ಸೋತಿದ್ದರೂ, ರಾಜ್ಯಾದ್ಯಂತ ಅವರ ನಾಯಕತ್ವವನ್ನೇ ಮತದಾರರು ನೆಚ್ಚಿಕೊಂಡಿದ್ದಾರೆ. ಆದರೆ, ಗ್ರಾಮೀಣ ಭಾಗದ ಜನತೆ ಬದಲಾವಣೆ ಬಯಸಿದ್ದರು ಎಂಬುದಕ್ಕೆ ಬಿಜೆಪಿ 80 ಕ್ಷೇತ್ರ ಗೆದ್ದುಕೊಂಡಿರುವುದೇ ಸಾಕ್ಷಿ.
ಬಂಗಾಳದಲ್ಲಿ ಬಿಜೆಪಿ ಇನ್ನೂ ಬೆಳೆಯುತ್ತಿರುವ ಪಕ್ಷ. ಗುಜರಾತ್, ಮಧ್ಯಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ, ರಾಜಸ್ತಾನದಂತೆ ಅಲ್ಲಿ ಬಿಜೆಪಿ ಸಂಘಟನೆ ಬೆಳೆದಿಲ್ಲ. ಚುನಾವಣೆ ಹೊಸ್ತಿಲಲ್ಲಿ ಟಿಎಂಸಿ ಬಿಟ್ಟು ಪಕ್ಷ ಸೇರಿದ ಹಾಗೂ ಎಡಪಕ್ಷಗಳ ಜನಪ್ರಿಯತೆ ಕುಸಿತದಿಂದ ತನ್ನ ಬೆಂಬಲಕ್ಕೆ ನಿಂತವರನ್ನೇ ಬಿಜೆಪಿ ಬಹುವಾಗಿ ನಂಬಿಕೊಂಡಿತ್ತು. ರಾಜಕೀಯ ಹಿಂಸಾಚಾರ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಜನಪ್ರಿಯತೆ ಪಕ್ಷವನ್ನು ಅಧಿಕಾರದ ಗದ್ದುಗೆ ಏರಿಸಲು ನೆರವಾಗಿಲ್ಲ. ರಾಷ್ಟ್ರೀಯವಾಗಿ ಇಬ್ಬರಿಗೂ ಮಾನ್ಯತೆಯಿದ್ದರೂ, ರಾಜ್ಯ ಮಟ್ಟದಲ್ಲಿ ಬಲಿಷ್ಠ ಸ್ಥಳೀಯ ನಾಯಕತ್ವ ಬೇಕೆಂಬುದು ಮತ್ತೊಮ್ಮೆ ಸಾಬೀತಾಗಿದೆ.
ಮಮತಾ ಬ್ಯಾನರ್ಜಿ ನಾಯಕತ್ವದ ಮುಂದೆ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್​ರನ್ನು ಜನ ಸ್ವೀಕರಿಸಿಲ್ಲ. ಅನೇಕ ಕ್ಷೇತ್ರಗಳಲ್ಲಿ ಹಿಂದು-ಮುಸ್ಲಿಂ ಮತವಿಭಜನೆಯಾಗಿದ್ದರೂ, ಹಿಂದು ಮತಗಳ ಕ್ರೋಡೀಕರಣದ ಪೂರ್ಣ ಲಾಭ ಬಿಜೆಪಿಗಾಗಿಲ್ಲ. ಮಹಾಮೈತ್ರಿ ಪಾಲುದಾರ ಪಕ್ಷ, ಅಬ್ಬಾಸ್ ಸಿದ್ದಿಕಿ ನೇತೃತ್ವದ ಇಂಡಿಯನ್ ಸೆಕ್ಯುಲರ್ ಫ್ರಂಟ್ ಟಿಎಂಸಿಯ ಮುಸ್ಲಿಂ ಮತಬ್ಯಾಂಕ್ ವಿಭಜನೆಗೊಳಿಸುವಲ್ಲಿ ವಿಫಲವಾಗಿದೆ. ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ 26 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಅಸಾದುದ್ದಿನ್ ಓವೈಸಿಯ ಎಐಎಂಐಎಂ ಪಕ್ಷ ಒಂದು ಸೀಟನ್ನೂ ಗೆದ್ದುಕೊಂಡಿಲ್ಲ.
ಬಿಜೆಪಿ ವಿರುದ್ಧದ ಗೆಲ್ಲಬಲ್ಲ (ಟಿಎಂಸಿಯ) ಅಭ್ಯರ್ಥಿಗೆ ಮುಸ್ಲಿಂ ಮತದಾರರು ಮತ ಹಾಕಿರುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ. ನಂದಿಗ್ರಾಮದಲ್ಲಿ ಶೇ.35ರಷ್ಟು ಮುಸ್ಲಿಂ ಮತದಾರರಿದ್ದು, ಅವರೆಲ್ಲರೂ ಮಮತಾಗೆ ಮತ ಹಾಕಿದ್ದಾರೆ. ಅದೇ ರೀತಿಯಾಗಿ, ಈ ಚುನಾವಣೆ ತ್ರಿಕೋನ ಕದನಕ್ಕೆ ಸಾಕ್ಷಿಯಾಗಲಿಲ್ಲ. ಬಹುಪಾಲು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಟಿಎಂಸಿ ಅಭ್ಯರ್ಥಿಗಳ ಮಧ್ಯೆಯೇ ಸ್ಪರ್ಧೆಯಿದ್ದುದರಿಂದ ಬಿಜೆಪಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸೀಟುಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಕಳೆದ ಚುನಾವಣೆಯಲ್ಲಿ 44 ಸೀಟು ಗೆದ್ದಿದ್ದ ಕಾಂಗ್ರೆಸ್​ನದ್ದು ಈ ಬಾರಿ ಶೂನ್ಯ ಸಂಪಾದನೆ. ಬಂಗಾಳದಲ್ಲಿ ಏಕಾಂಗಿ ಹೋರಾಟ ನಡೆಸಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ, ಲೋಕಸಭೆಯಲ್ಲಿ ಪಕ್ಷದ ನಾಯಕ ಅಧಿರ್ ರಂಜನ್ ಚೌಧುರಿ ಸಪ್ಪೆಮೋರೆ ಹಾಕಿದ್ದಾರೆ. 2011ರಲ್ಲಿ ಟಿಎಂಸಿ ಅಧಿಕಾರಕ್ಕೆ ಬಂದ ಬಳಿಕ ನಿಧಾನವಾಗಿ ನೆಲೆ ಕಳೆದುಕೊಂಡಿದ್ದ ಎಡಪಕ್ಷಗಳಂತೂ ಈ ಚುನಾವಣೆಯಲ್ಲಿ ನಾಮಾವಶೇಷಗೊಂಡಿವೆ. ಎಡಪಕ್ಷಗಳ ಒಂದಿಷ್ಟು ಕೇಡರ್ ಬಿಜೆಪಿ ಕಡೆ ಶಿಫ್ಟ್ ಆಗಿದ್ದರೆ, ಮತ್ತೆ ಕೆಲವರು ಬಿಜೆಪಿಯನ್ನು ಸೋಲಿಸಲೆಂದೇ ಅನಿವಾರ್ಯವಾಗಿ ಟಿಎಂಸಿ ನೆಚ್ಚಿಕೊಂಡರು. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 18 ಸೀಟು ಗೆದ್ದುಕೊಂಡಿದ್ದಲ್ಲದೆ, 121 ವಿಧಾನಸಭೆ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು.
ತಮಿಳುನಾಡು
ಕಳೆದ 10 ವರ್ಷಗಳಿಂದ ತಮಿಳುನಾಡಿನಲ್ಲಿ ಅಧಿಕಾರದಲ್ಲಿದ್ದ ಎಐಎಡಿಎಂಕೆಗೆ ಆಡಳಿತ ವಿರೋಧಿ ಅಲೆಯ ಸವಾಲಿತ್ತು. ಆದರೆ ನಿರೀಕ್ಷೆಯಂತೆ ಡಿಎಂಕೆ-ಕಾಂಗ್ರೆಸ್ ಮೈತ್ರಿ ದಿಗ್ವಿಜಯ ಸಾಧಿಸಿದೆ. ತಂದೆ ಎಂ. ಕರುಣಾನಿಧಿ ನಿಧನದ ಬಳಿಕ ಪಕ್ಷ ಸಂಘಟನೆ ನಾಯಕತ್ವ ವಹಿಸಿದ ಎಂ.ಕೆ. ಸ್ಟಾಲಿನ್ ಪರ ಜನಾದೇಶ ಬಂದಿದೆ. ಜೆ. ಜಯಲಲಿತಾ ನಿಧನದ ಬಳಿಕ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಒ. ಪನ್ನೀರ್​ಸೆಲ್ವಂ ಮಧ್ಯೆ ಅಧಿಕಾರಕ್ಕಾಗಿ ಮುಸುಕಿನ ಗುದ್ದಾಟ ನಡೆದರೂ, ಪಕ್ಷ ಇಬ್ಭಾಗವಾಗದಂತೆ ನೋಡಿಕೊಂಡರು. ಕಳೆದ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿದ್ದ ಮೈತ್ರಿ ಪಕ್ಷ ಬಿಜೆಪಿ ಮೊದಲ ಬಾರಿಗೆ 4 ಸೀಟುಗಳನ್ನು ಗೆದ್ದು ಬೀಗಿದೆ.
ಅಸ್ಸಾಂ
ಈಶಾನ್ಯದ ಹೆಬ್ಬಾಗಿಲು ಅಸ್ಸಾಂನಲ್ಲಿ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್), ಬೋಡೋ ಪೀಪಲ್ಸ್ ಫ್ರಂಟ್ ಸೇರಿದಂತೆ ಸಣ್ಣಪುಟ್ಟ ಪಕ್ಷಗೊಂದಿಗೆ ಮಹಾಮೈತ್ರಿ ರಚಿಸಿದ್ದರಿಂದಲೇ ಬಿಜೆಪಿ ವಿರೋಧಿ ಮತಗಳ ಕ್ರೋಡೀಕರಣದಿಂದ ಅಧಿಕಾರಕ್ಕೇರುವ ಕಾಂಗ್ರೆಸ್ ಕನಸು ನುಚ್ಚುನೂರಾಗಿದೆ. ಬಿಜೆಪಿ ನಾಯಕ, ಸಿಎಂ ಸರ್ಬಾನಂದ ಸೋನೊವಾಲ್ ಮತ್ತು ಜನಪ್ರಿಯ ನಾಯಕ ಹಿಮಾಂತ ಬಿಸ್ವಾ ಶರ್ಮರನ್ನೇ ಅಸ್ಸಾಂ ಜನತೆ ನೆಚ್ಚಿಕೊಂಡಿದ್ದಾರೆ. ವಾಸ್ತವದಲ್ಲಿ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾಗಿಂತ ಸೋನೊವಾಲ್ ಮತ್ತು ಹಿಮಾಂತ ಶರ್ಮ ಸ್ಥಳೀಯವಾಗಿ ಬಲಿಷ್ಠ ನಾಯಕರು. ಡಬಲ್ ಎಂಜಿನ್ ಸರ್ಕಾರ ಕೈಗೊಂಡ ಅಭಿವೃದ್ಧಿ ಯೋಜನೆಗಳೇ ಬಿಜೆಪಿಯ 2ನೇ ಗೆಲುವಿಗೆ ಮುನ್ನುಡಿ ಬರೆದಿದೆ. ಈಶಾನ್ಯ ರಾಜ್ಯಗಳ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್​ಇಡಿಎ) ಸಂಚಾಲಕರಾಗಿರುವ ಹಿಮಾಂತ ಶರ್ಮ, ಅಸ್ಸಾಂನಲ್ಲಿ ಮಾತ್ರವಲ್ಲ, ಉಳಿದ ರಾಜ್ಯಗಳಲ್ಲೂ ಬಿಜೆಪಿಯ ರಾಜಕೀಯ ಪ್ರಾಬಲ್ಯಕ್ಕೆ ಪ್ರಮುಖ ಕಾರಣಕರ್ತ. ಇದೇ ಕಾರಣಕ್ಕೆ ಹಿಮಾಂತ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದರು. ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸದಿದ್ದರೂ, ಸೋನೊವಾಲ್ ಸಿಎಂ ಆಗಿ ಮರು ಆಯ್ಕೆಯಾಗುತ್ತಾರಾ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಈ ಗೊಂದಲ ಚುನಾವಣೆ ಮೇಲೆ ಪರಿಣಾಮ ಬೀರಿಲ್ಲ. ಎಐಯುಡಿಎಫ್​ನ ಬದ್ರುದ್ದಿನ್ ಅಜ್ಮಲ್ ಜತೆಗೆ ಮೈತ್ರಿ ಮಾಡಿಕೊಂಡಿದ್ದೇ ಕಾಂಗ್ರೆಸ್​ಗೆ ತಿರುಗುಬಾಣವಾದಂತಿದೆ. ಕಳೆದ ಚುನಾವಣೆಯಲ್ಲಿ ಬದ್ರುದ್ದಿನ್ ಅಜ್ಮಲ್ ಪ್ರತ್ಯೇಕವಾಗಿ ಸ್ಪರ್ಧಿಸಿದ್ದರಿಂದ ಕಾಂಗ್ರೆಸ್-ಎಐಯುಡಿಎಫ್ ಮಧ್ಯೆ ಮುಸ್ಲಿಂ ಮತಗಳು ವಿಭಜನೆಗೊಂಡಿತ್ತು. ಇದರಿಂದ ಬಿಜೆಪಿಗೆ 20-25 ಹೆಚ್ಚುವರಿ ಸೀಟು ಸಿಕ್ಕಿತ್ತು. ಆದರೆ, ಈ ಬಾರಿ ಬದ್ರುದ್ದಿನ್-ಕಾಂಗ್ರೆಸ್ ಮೈತ್ರಿಯಾಗಿದ್ದರೂ, ಕಳೆದ ಬಾರಿಗಿಂತ ಹೆಚ್ಚು ಸೀಟು, ಮತಗಳು ಎನ್​ಡಿಎಗೆ ಬಿದ್ದಿರುವುದು ರಾಜ್ಯ ಸರ್ಕಾರದ ಆಡಳಿತವನ್ನು ಜನ ನೆಚ್ಚಿಕೊಂಡಿದ್ದಾರೆ ಎನ್ನುವುದಕ್ಕೆ ಸಾಕ್ಷಿ. 42 ಸೀಟುಗಳ ಮೇಲೆ ಪರಿಣಾಮ ಬೀರಬಲ್ಲ ಟೀ ಗಾರ್ಡನ್ ಕಾರ್ವಿುಕರಲ್ಲಿ ಅನೇಕರು ಮತ್ತೊಮ್ಮೆ ಎನ್​ಡಿಎಗೆ ಮತ ಹಾಕಿದ್ದಾರೆ. ಪ್ರಿಯಾಂಕಾ ಗಾಂಧಿ ಟೀ ಕಾರ್ವಿುಕರನ್ನು ಭೇಟಿ ಮಾಡಿ ದಿನಗೂಲಿಯನ್ನು ಏರಿಸುತ್ತೇವೆ ಎಂದು ಭರವಸೆ ನೀಡಿದರೂ, ಈ ಮತವರ್ಗ ಎನ್​ಡಿಎಯನ್ನೇ ಬೆಂಬಲಿಸಿದೆ. 2016ರ ಸೋಲಿನ ಬಳಿಕ ರಾಜ್ಯ ಕಾಂಗ್ರೆಸ್ ಸಂಘಟನೆ ದುರ್ಬಲಗೊಂಡಿತ್ತು.
ಕೇರಳ
ಸತತ 2ನೇ ಬಾರಿಗೆ ಅಧಿಕಾರಕ್ಕೇರುವ ಮೂಲಕ ‘ದೇವರ ನಾಡ’ಲ್ಲಿ 40 ವರ್ಷಗಳ ಬಳಿಕ ಎಲ್​ಡಿಎಫ್ (ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್) ಇತಿಹಾಸ ಸೃಷ್ಟಿಸಿದೆ. ಸಿಎಂ ಪಿಣರಾಯಿ ವಿಜಯನ್ ಜನಪ್ರಿಯತೆ ಅಲೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್) ನೆಲಕಚ್ಚಿದೆ. ಕಾಂಗ್ರೆಸ್ ನಾಯಕರಾದ ರಮೇಶ್ ಚೆನ್ನಿತ್ತಾಲ-ಓಮೆನ್ ಚಾಂಡಿ ಗುಂಪುಗಳ ಆಂತರಿಕ ಕಿತ್ತಾಟ ಪಕ್ಷದ ಮೇಲೆ ಪರಿಣಾಮ ಬೀರಿತ್ತಾದರೂ ಚುನಾವಣೆ ಹೊಸ್ತಿಲಲ್ಲಿ ಒಗ್ಗಟ್ಟು ಮೂಡಿತ್ತು. ಆದರೆ, ಜನರ ವಿಶ್ವಾಸ ಗಳಿಸುವಲ್ಲಿ ಸಫಲವಾಗಲಿಲ್ಲ. ಎನ್​ಡಿಎಗೆ ಯಾವುದೇ ರೀತಿಯಲ್ಲಿ ಅವಕಾಶ ನೀಡಬಾರದು ಎಂದೇ ಯುಡಿಎಫ್ ಮೈತ್ರಿಕೂಟದಲ್ಲಿರುವ ಇಂಡಿಯನ್ ಮುಸ್ಲಿಂ ಲೀಗ್ ಪಕ್ಷದ ಬೆಂಬಲಿಗರು ಅನೇಕ ಕ್ಷೇತ್ರಗಳಲ್ಲಿ ಎಲ್​ಡಿಎಫ್ ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೆ ಎಂಬ ಮಾತುಗಳೂ ಇವೆ. ರಾಹುಲ್ ಗಾಂಧಿ ಹಲವು ರ್ಯಾಲಿಗಳನ್ನು ಕೈಗೊಂಡರೂ, ಕಾಂಗ್ರೆಸ್ ಪರ ಜನ ಮನಸ್ಸು ಮಾಡಲಿಲ್ಲ.
ಪ್ರಾದೇಶಿಕ ಶಕ್ತಿಗಳಿಗೆ ಬಲ?
ಒಂದೆಡೆ ಕಾಂಗ್ರೆಸ್ ಸಂಘಟನೆ ಗಣನೀಯವಾಗಿ ಕುಸಿಯುತ್ತಿದ್ದರೆ, ಇನ್ನೊಂದೆಡೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತೆ ಅಧಿಕಾರಕ್ಕೆ ಬಂದಿರುವುದು ಕಾಂಗ್ರೆಸ್ ಹೊರತುಪಡಿಸಿದ ಪ್ರಾದೇಶಿಕ ಪಕ್ಷಗಳ ಮೈತ್ರಿಗೆ ಬಲತುಂಬಿರುವುದು ಸುಳ್ಳಲ್ಲ. ದೀದಿ ಗೆಲುವನ್ನು ಬಿಜೆಪಿ ವಿರೋಧಿಸುವ ಎಲ್ಲಾ ಪ್ರಾದೇಶಿಕ ಪಕ್ಷಗಳು ಕೊಂಡಾಡಿವೆ. ಕಾಂಗ್ರೆಸ್​ನ ರಾಹುಲ್ ಗಾಂಧಿ ನಾಯಕತ್ವವನ್ನು ಪ್ರಾದೇಶಿಕ ಪಕ್ಷಗಳು ರಾಜಕೀಯವಾಗಿ ಬೆಂಬಲಿಸುತ್ತಿಲ್ಲ. ಕಾಂಗ್ರೆಸ್​ನಲ್ಲೂ ಈ ವಿರೋಧ ಮತ್ತೆ ಮುಂದುವರಿಯಬಹುದು. ಹೀಗಾಗಿ, ರಾಷ್ಟ್ರ ರಾಜಕಾರಣದಲ್ಲಿ ದೀದಿ ನಾಯಕತ್ವ ಪ್ರಾದೇಶಿಕ ಪಕ್ಷಗಳನ್ನು ಬಿಜೆಪಿ ವಿರುದ್ಧ ಮತ್ತೆ ಒಗ್ಗೂಡಿಸಿ, ಬಲ ಹೆಚ್ಚಿಸಬಹುದು. 2024ರ ಲೋಕಸಭೆ ಚುನಾವಣೆಗೆ ಪ್ರಾದೇಶಿಕ ಪಕ್ಷಗಳ ರಾಷ್ಟ್ರೀಯ ಮೈತ್ರಿಕೂಟಕ್ಕೆ ಮಮತಾ ಬ್ಯಾನರ್ಜಿ ನಾಯಕತ್ವ ವಹಿಸಿಕೊಳ್ಳುತ್ತಾರಾ ಎಂಬ ಚರ್ಚೆಗಳು ಶುರುವಾಗಿದ್ದರೂ, ಕಾಲಕ್ಕೆ ತಕ್ಕಂತೆ ಬಣ್ಣಬದಲಿಸುವ ಪ್ರಾದೇಶಿಕ ಪಕ್ಷಗಳ ಮಧ್ಯೆ ಈಗಲೇ ಇದನ್ನು ಊಹಿಸುವುದು ಕಷ್ಟ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
