ನವದೆಹಲಿ: ಕಾಂಗ್ರೆಸ್ ನಾಯಕತ್ವ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದ್ದು, ರಾಹುಲ್ ಗಾಂಧಿ ಮರಳಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿದ್ದಾರೆ ಎಂಬ ಮಾತು ಅವರ ಆಪ್ತ ವಲಯದಿಂದ ಕೇಳಿಬರುತ್ತಿದೆ. ಲೋಕಸಭೆ ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ರಾಹುಲ್ ಗಾಂಧಿಯನ್ನು ಪಕ್ಷದ ಮುಖಂಡರು ಮನವೊಲಿಸಿದ್ದು, ಸಂಸತ್ ಬಜೆಟ್ ಅಧಿವೇಶನ ಪೂರ್ಣಗೊಂಡ ಬಳಿಕ ರಾಹುಲ್ ಮತ್ತೆ ಪಕ್ಷದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ತಿಳಿದುಬಂದಿದೆ.
ರಾಹುಲ್ ಗಾಂಧಿ ದೇಶಾದ್ಯಂತ ಪ್ರಭಾವ ಬೀರುವ ನಾಯಕರಾಗಿದ್ದು, ಪಕ್ಷದ ನೇತೃತ್ವ ವಹಿಸಲು ಅವರೇ ಸಮರ್ಥರು ಎಂಬ ಅಭಿಪ್ರಾಯ ಬಹುತೇಕ ಕಾಂಗ್ರೆಸ್ ನಾಯಕರಲ್ಲಿ ವ್ಯಕ್ತವಾಗಿದೆ. ಗಾಂಧಿ ಕುಟುಂಬದ ಸದಸ್ಯರಲ್ಲದೇ ಹೊರಗಿನವರಿಗೆ ಪಕ್ಷ ಮುನ್ನಡೆಸುವ ಜವಾಬ್ದಾರಿ ನೀಡುವುದಕ್ಕೆ ಪಕ್ಷದಲ್ಲಿ ಅನೇಕರ ವಿರೋಧವಿದೆ. ಹೀಗಾಗಿ ಮರಳಿ ರಾಹುಲ್ ಗಾಂಧಿಯವರನ್ನೇ ಅಧ್ಯಕ್ಷ ಸ್ಥಾನಕ್ಕೇರಿಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಚುನಾವಣೆಗೆ ಆಗ್ರಹ:ಪಕ್ಷದ ಅಧ್ಯಕ್ಷ ಸ್ಥಾನ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲು್ಯಸಿ) ಸದಸ್ಯರ ನೇಮಕಕ್ಕೂ ಎಐಸಿಸಿ ಹಾಗೂ ಪಿಸಿಸಿಯ 10 ಸಾವಿರ ಪ್ರತಿನಿಧಿಗಳಿಂದ ಮತದಾನ ನಡೆಯಲಿ ಎಂದು ಶಶಿ ತರೂರ್ ಮತ್ತು ಸಂದೀಪ್ ದೀಕ್ಷಿತ್ ಬೇಡಿಕೆ ಇಟ್ಟಿದ್ದಾರೆ. ರಾಹುಲ್ ಮರಳಿ ಅಧ್ಯಕ್ಷ ಸ್ಥಾನಕ್ಕೇರಿದರೂ ಕೂಡ ಸಂಪೂರ್ಣ ನಾಮನಿರ್ದೇಶಿತ ಸದಸ್ಯರ ಬದಲಿಗೆ ಚುನಾಯಿತ ಸಿಡಬ್ಲು್ಯಸಿ ಇರಬೇಕು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಪಕ್ಷದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಸಿಡಬ್ಲು್ಯಸಿಯೇ ಪಕ್ಷದ ಅಧ್ಯಕ್ಷರನ್ನು ನೇಮಕ ಮಾಡುತ್ತದೆ. ಈ ಬಗ್ಗೆ ಯಾರಿಗಾದರೂ ಸಂದೇಹಗಳಿದ್ದರೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆಗಳನ್ನು ನೀಡುವ ಮೊದಲು ಅವರು ಸಿಡಬ್ಲು್ಯಸಿ ನಿರ್ಣಯವನ್ನು ಓದಬೇಕು ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ ಹೇಳಿದ್ದಾರೆ. ದೀಕ್ಷಿತ್ ಮತ್ತು ತರೂರ್​ರಂತಹ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದರೆ ಕಾಂಗ್ರೆಸ್ ಜಯ ಸಾಧಿಸುತ್ತಿತ್ತು. ಈ ರೀತಿ ಹೇಳಿಕೆ ನೀಡುವ ಮೊದಲು ತಮ್ಮ ಕೆಲಸದಿಂದ ಪಕ್ಷಕ್ಕೆ ಏನು ಲಾಭವಾಗಿದೆ ಎಂಬುದನ್ನು ಅವರು ತೋರಿಸಲಿ ಎಂದಿದ್ದಾರೆ.
ಸರಣಿ ಸೋಲಿನ ಬಳಿಕ ರಾಜೀನಾಮೆ
2014ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್​ರನ್ನು ಪ್ರಧಾನಿ ಅಭ್ಯರ್ಥಿಯೆಂದು ಕಾಂಗ್ರೆಸ್ ಬಿಂಬಿಸಿತ್ತು. ಆದರೆ ಆಘಾತಕಾರಿ ಸೋಲು ಕಂಡಿತ್ತು. 2017ರಲ್ಲಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಬಳಿಕ ನಡೆದ ಪಂಚರಾಜ್ಯ ಚುನಾವಣೆಗಳಲ್ಲಿ 3 ರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು ಬಿಟ್ಟರೆ ರಾಹುಲ್ ಪಕ್ಷವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ವಿಫಲವಾಗುತ್ತ ಹೋದರು. ಕಳೆದ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಮತ್ತೆ ನಿರಾಸೆ ಆಗಿತ್ತು. ಸರಣಿ ಸೋಲುಗಳಿಂದ ಕಂಗೆಟ್ಟಿದ್ದ ರಾಹುಲ್, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಸೋನಿಯಾ ಗಾಂಧಿ ಸೇರಿ ಪಕ್ಷದ ಮುಖಂಡರು ಮನವೊಲಿಸಲು ಪ್ರಯತ್ನಿಸಿದರೂ ರಾಹುಲ್ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಬಳಿಕ ಅನಿವಾರ್ಯವಾಗಿ ಆಗಸ್ಟ್ ವೇಳೆ ಸೋನಿಯಾ ಗಾಂಧಿಯವರನ್ನೇ ಪಕ್ಷದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಪ್ರಿಯಾಂಕಾ ಆಯ್ಕೆಗೂ ನಡೆದಿತ್ತು ಚರ್ಚೆ
ರಾಹುಲ್ ಗಾಂಧಿ ರಾಜೀನಾಮೆ ನಂತರ ಅಧ್ಯಕ್ಷ ಸ್ಥಾನಕ್ಕೆ ಯಾರು ಸೂಕ್ತ ಎಂಬ ಚರ್ಚೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಹೆಸರೂ ಕೂಡ ಪ್ರಸ್ತಾಪ ವಾಗಿತ್ತು. ರಾಹುಲ್ ಬಿಟ್ಟರೆ ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ಹಾಗೂ ಗಾಂಧಿ ಕುಟುಂಬದ ಹಿನ್ನೆಲೆ ಇರುವ ಕಾರಣ ಪ್ರಿಯಾಂಕಾರನ್ನು ಅಧ್ಯಕ್ಷರನ್ನಾಗಿ ಮಾಡಲು ಕೆಲ ನಾಯಕರು ಸಲಹೆ ನೀಡಿದ್ದರು.
ನಾಮನಿರ್ದೇಶನ ವ್ಯವಸ್ಥೆ
ಸೋನಿಯಾ ಗಾಂಧಿ 1998ರಲ್ಲಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲುಸಿ)ಯಲ್ಲಿ ನಾಮನಿರ್ದೇಶನ ವ್ಯವಸ್ಥೆ ತರಲಾಯಿತು. ಇದರಿಂದ ಪಕ್ಷ ಅಪಾರ ನಷ್ಟ ಅನುಭವಿಸಿತು ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಪೃಥ್ವಿರಾಜ್ ಚವಾಣ್ ಬೇಸರ ವ್ಯಕ್ತಪಡಿಸಿದ್ದಾರೆ. ಪಿ.ವಿ. ನರಸಿಂಹ ರಾವ್ ಮತ್ತು ಸೀತಾರಾಮ್ ಕೇಸರಿ ಅಧಿಕಾರಾವಧಿಯಲ್ಲಿ ಸಿಡಬ್ಲು್ಯಸಿಯ 10 ಸ್ಥಾನಗಳಿಗೆ ಮತದಾನ ನಡೆದು, ಉತ್ತಮ ನಾಯಕರು ಮುಂಚೂಣಿಗೆ ಬರುತ್ತಿದ್ದರು. ಆದರೆ ಸೋನಿಯಾ ಗಾಂಧಿ ಸಿಡಬ್ಲು್ಯಸಿಯಲ್ಲಿ ತಂದ ನಾಮನಿರ್ದೇಶನ ವ್ಯವಸ್ಥೆಯಿಂದಾಗಿ ಉತ್ತಮ ನಾಯಕರು ಹೊರಹೊಮ್ಮುತ್ತಿಲ್ಲ ಮತ್ತು ಪಕ್ಷ ಹೊಸ ನಾಯಕರ ಕೊರತೆ ಅನುಭವಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
