ನವದೆಹಲಿ:ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷಗಳನ್ನು ರಾಜಕೀಯವಾಗಿ ಎದುರಿಸಲು, ಪಕ್ಷಕ್ಕೆ ಸಂಬಂಧಿಸಿ ದಿಟ್ಟ ತೀರ್ವನಗಳನ್ನು ಕೈಗೊಳ್ಳಲು ಹಾಗೂ ಸಂಘಟನೆಯನ್ನು ಸಮರ್ಥವಾಗಿ ಮುನ್ನಡೆಸಲು ಕಾಂಗ್ರೆಸ್ ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರು ಬೇಕು ಎಂಬ ಬೇಡಿಕೆಗಳ ನಡುವೆ, ರಾಹುಲ್ ಗಾಂಧಿ ಅಧ್ಯಕ್ಷ ಹುದ್ದೆಯನ್ನು ಮತ್ತೊಮ್ಮೆ ಅಲಂಕರಿಸುವ ಸುಳಿವು ನೀಡಿದ್ದಾರೆ. ರಾಹುಲ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಬೇಕು ಎಂದು ಪ್ರತಿಪಾದಿಸುತ್ತಾ ಪಕ್ಷದ ಜಿ-23 ಬಂಡಾಯ ಗುಂಪಿನ ವಿರುದ್ಧ ಪರೋಕ್ಷ ಸಮರ ಸಾರಿದ್ದ ರಾಹುಲ್ ಬೆಂಬಲಿಗ ಗುಂಪಿಗೆ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಶನಿವಾರದಂದು ನಡೆದ ಕೇಂದ್ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ತಕ್ಕಮಟ್ಟಿಗೆ ತೃಪ್ತಿ ತಂದುಕೊಟ್ಟಿದೆ.
‘ನಾನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಮತ್ತೊಮ್ಮೆ ಅವಿರೋಧವಾಗಿ ಆಯ್ಕೆಯಾಗಬೇಕು ಎಂಬ ನಿಮ್ಮೆಲ್ಲರ ಬೇಡಿಕೆಗಳನ್ನು ಪರಿಗಣಿಸುತ್ತೇನೆ’ ಎಂದು ರಾಹುಲ್ ಗಾಂಧಿ ಸಭೆಯಲ್ಲಿ ತಿಳಿಸಿದ ಬಗ್ಗೆ ಕಾಂಗ್ರೆಸ್ ಮುಖಂಡರೊಬ್ಬರು ವಿಜಯವಾಣಿ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.
ಪಕ್ಷದ ಈ ಉನ್ನತ ಹುದ್ದೆಗೆ ಆಂತರಿಕ ಚುನಾವಣೆ ನಡೆಸುವ ತೀರ್ವನವನ್ನೂ ಸಭೆಯಲ್ಲಿ ಕೈಗೊಳ್ಳಲಾಗಿದ್ದು, 2022ರ ಆಗಸ್ಟ್ 21ರಿಂದ ಸೆ.22ರ ಮಧ್ಯೆ ಚುನಾವಣೆ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಾಹಿತಿ ಹಂಚಿಕೊಂಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಲು ಯಾರೂ ಮುಂದೆ ಬಾರದಿದ್ದಲ್ಲಿ ಚುನಾವಣೆ ನಡೆಯುವುದಿಲ್ಲ. ನಂತರ ನಡೆಯುವ ಎಐಸಿಸಿ ಅಧಿವೇಶನದಲ್ಲಿ ಅವರನ್ನು ಅಧಿಕೃತವಾಗಿ ನೇಮಕ ಮಾಡಲಾಗುತ್ತದೆ.
ಪಕ್ಷದ ನಾಯಕತ್ವ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸಾಮರ್ಥ್ಯಗಳನ್ನು ಪರೋಕ್ಷವಾಗಿ ಪ್ರಶ್ನಿಸಿದ್ದ ಬಂಡಾಯ ಗುಂಪಿನ ಹಿರಿಯ ನಾಯಕರ ವಿರುದ್ಧ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ತಮ್ಮ ಭಾಷಣದಲ್ಲಿ ಅಸಮಾಧಾನ ಹೊರಹಾಕಿದ್ದು ಸಭೆಯ ಮಹತ್ವದ ಬೆಳವಣಿಗೆಗಳಲ್ಲೊಂದು. ‘ಪಕ್ಷದ ಪುನಶ್ಚೇತನವನ್ನು ಇಡೀ ಸಂಘಟನೆ ಬಯಸುತ್ತಿದೆ. ಆದರೆ ಅದಕ್ಕೆ ಒಗ್ಗಟ್ಟು, ಸ್ವ ನಿಯಂತ್ರಣ, ಶಿಸ್ತು ಮತ್ತು ಪಕ್ಷದ ಹಿತ ಕಾಪಾಡುವ ಮನೋಬಲ ಮುಖ್ಯ. 2019ರಿಂದ ನಾನು ಪಕ್ಷದ ಮಧ್ಯಂತರ ಅಧ್ಯಕ್ಷೆಯಾಗಿದ್ದೇನೆ ಎಂಬ ಅರಿವು ನನಗಿದೆ. ಅಲ್ಲದೆ, 2021ರ ಜೂನ್ ಒಳಗಾಗಿ ಕಾಯಂ ಅಧ್ಯಕ್ಷರನ್ನು ಆಯ್ಕೆ ಮಾಡುವ ಬಗ್ಗೆ ನೀಲಿನಕ್ಷೆ ಸಿದ್ಧಪಡಿಸುವ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಕರೊನಾ ಎರಡನೇ ಅಲೆಯಿಂದಾಗಿ ಹಿಂದಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಪ್ರಕ್ರಿಯೆ ಮುಂದೂಡುವ ನಿರ್ಧಾರವನ್ನು ಸಾಮೂಹಿಕವಾಗಿ ಕೈಗೊಳ್ಳಲಾಗಿತ್ತು ಎಂದು ಸೋನಿಯಾ ಗಾಂಧಿ ನೆನಪಿಸಿದ್ದಾರೆ. ಈ ಮೂಲಕ ಪಕ್ಷ ಕಾಯಂ ಅಧ್ಯಕ್ಷರಿಲ್ಲದೆ ತತ್ತರಿಸಿದೆ ಎಂದು ಬಹಿರಂಗವಾಗಿ ಟೀಕಿಸುತ್ತಿದ್ದ ನಾಯಕರಿಗೆ ತಮ್ಮದೇ ಧಾಟಿಯಲ್ಲಿ ಚಾಟಿ ಬೀಸಿದ ಸೋನಿಯಾ, ನಾನು ಮುಕ್ತ ಅಭಿಪ್ರಾಯಗಳನ್ನು ಸ್ವೀಕರಿಸುವ ಮನಸ್ಥಿತಿ ಹೊಂದಿದ್ದೇನೆ. ಮಾಧ್ಯಮಗಳ ಮೂಲಕ ನಿಮ್ಮ ಅಭಿಪ್ರಾಯಗಳನ್ನು ರವಾನಿಸುವ ಅಗತ್ಯವೇನೂ ಇಲ್ಲ ಎಂದರು.
ಸದಸ್ಯತ್ವ ಅಭಿಯಾನ
ಪಕ್ಷ ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲೂ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಎಲ್ಲ ರಾಜ್ಯಗಳಲ್ಲಿ ನವೆಂಬರ್ 1 ರಿಂದ ಮುಂದಿನ ವರ್ಷದ ಮಾರ್ಚ್ 31ರವರೆಗೆ ದೊಡ್ಡ ಮಟ್ಟದ ಸದಸ್ಯತ್ವ ಅಭಿಯಾನ ನಡೆಸಲಾಗುವುದು ಎಂದು ಕೆಸಿ ವೇಣುಗೋಪಾಲ್ ತಿಳಿಸಿದ್ದಾರೆ. ಪಿಸಿಸಿ ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಚಿ, ಪಿಸಿಸಿ ಪದಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಿಗೆ 2022ರ ಜುಲೈ 21 ಮತ್ತು ಆಗಸ್ಟ್ 20ರ ಮಧ್ಯೆ ಚುನಾವಣೆಗಳನ್ನು ನಡೆಸಲಾಗುವುದು ಎಂದ ವೇಣುಗೋಪಾಲ್, ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯತ್ವ ಮತ್ತು ಎಐಸಿಸಿಯ ಇತರೆ ಸಂಸ್ಥೆಗಳ ಹುದ್ದೆಗಳಿಗೆ ಎಐಸಿಸಿ ಅಧಿವೇಶನದಲ್ಲಿ ಚುನಾವಣೆ ನಡೆಸಲಾಗುವುದು. ಅಧಿವೇಶನದ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಮೂರು ನಿರ್ಣಯ
ಪ್ರಸಕ್ತ ರಾಜಕೀಯ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸುವುದು, ಕೃಷಿ ಕಾನೂನು ಬಿಕ್ಕಟ್ಟಿನ ಮಧ್ಯೆ ರೈತರ ಪರ ದನಿಯಾಗುವುದು ಹಾಗೂ ಬೆಲೆ ಏರಿಕೆ ವಿರುದ್ಧ ದೇಶಾದ್ಯಂತ ಹೋರಾಟ ನಡೆಸುವ ಮೂರು ನಿರ್ಧಾರಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಪರಿವಾರ್ ಬಚಾವೋ!
ರಾಹುಲ್ ಗಾಂಧಿ ಅಧ್ಯಕ್ಷರಾಗಬೇಕು ಎಂದು ಒತ್ತಾಯಿಸಿ ಞರುವ ಕಾಂಗ್ರೆಸ್ ನಾಯಕರ ನಡೆಗೆ ಬಿಜೆಪಿ ವ್ಯಂಗ್ಯವಾಡಿದ್ದು, ಕಾರ್ಯಕಾರಿ ಸಮಿತಿ ಸಭೆ ‘ಗಾಂಧಿ ಪರಿವಾರ್ ಬಚಾವೋ ಆಂದೋಲನ’ಕ್ಕೆ ಸಮ. ಸಭೆಯಲ್ಲಿ ಪಕ್ಷದ ಆಂತರಿಕ ಸಮಸ್ಯೆ, ನಾಯಕತ್ವದ ವೈಫಲ್ಯತೆಗೆ ಯಾವುದೇ ಉತ್ತರ ಸಿಕ್ಕಿಲ್ಲ ಎಂದು ಹೇಳಿದೆ. ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಯಲ್ಲಿ ದಲಿತ ಸಮುದಾಯದ ರೈತನೊಬ್ಬನ ಹತ್ಯೆ ಬಗ್ಗೆ ಕಾಂಗ್ರೆಸ್ಸಿಗರು ಮಾತನಾಡುತ್ತಿಲ್ಲವೇಕೆ ಎಂದು ಪ್ರಶ್ನಿಸಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ಇಂತಹ ಪ್ರಮುಖ ವಿಷಯಗಳಲ್ಲಿ ಕಾಂಗ್ರೆಸ್ಸಿಗರು ಬಾಯಿ ಬಿಡಲಾರರು. ಸುಳ್ಳಿನ ಕಂತೆಯ ರಾಜಕೀಯ ನಿರೂಪಣೆ ಹರಿಬಿಡುವಲ್ಲಿ ಅವರು ನಿಸ್ಸೀಮರು ಎಂದು ಕಿಡಿಕಾರಿದ್ದಾರೆ.
ರಾಜ್ಯದ ನಾಯಕರು ಭಾಗಿ
ಕರ್ನಾಟಕದ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ದಿನೇಶ್ ಗುಂಡೂರಾವ್, ಎಚ್.ಕೆ. ಪಾಟೀಲ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಸಭೆಯಲ್ಲಿದ್ದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
