| ರಾಘವ ಶರ್ಮ ನಿಡ್ಲೆ, ನವದೆಹಲಿ
ಉತ್ತರ ಪ್ರದೇಶದ ಅಮೇಠಿಯಿಂದ ಸೋನಿಯಾ ಗಾಂಧಿ ಪುತ್ರ ರಾಹುಲ್ ಗಾಂಧಿ ಮತ್ತು ರಾಯ್ಬರೇಲಿಯಿಂದ ಪುತ್ರಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಾರೆ ಎಂಬ ನಿರೀಕ್ಷೆಗಳು ಸುಳ್ಳಾಗಿವೆ. 2019ರಲ್ಲಿ ತಮ್ಮನ್ನು ಸೋಲಿಸಿದ್ದ ಅಮೇಠಿ ಕ್ಷೇತ್ರದ ಬದಲು ತಾಯಿ ಸೋನಿಯಾ ಪ್ರತಿನಿಧಿಸಿದ್ದ ರಾಯ್ಬರೇಲಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ರಾಹುಲ್ ಗಾಂಧಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಒಡ್ಡಿದ್ದ ಸವಾಲನ್ನು ತಳ್ಳಿ ಹಾಕಿ, ಮತ್ತೊಂದು ಸುರಕ್ಷಿತ ಕ್ಷೇತ್ರದತ್ತ ಧಾವಿಸಿದಾರೆ. ಗಾಂಧಿ ಪರಿವಾರಕ್ಕೆ ಆತ್ಮೀಯರಾಗಿರುವ ಕಿಶೋರಿ ಲಾಲ್ ಶರ್ಮ ಅವರನ್ನು ಅಮೇಠಿಯಿಂದ ಕಣಕ್ಕಿಳಿಸಲು ಕಾಂಗ್ರೆಸ್ ವರಿಷ್ಠರು ತೀರ್ವನಿಸಿದ್ದಾರೆ.
ಕೇರಳದ ವಯನಾಡ್ ಕ್ಷೇತ್ರದ ಸಂಸದರಾಗಿರುವ ರಾಹುಲ್ ಗಾಂಧಿ, ಈ ಬಾರಿ ಅಮೇಠಿಯಿಂದ ಸ್ಪರ್ಧಿಸಬೇಕು. ನಿಮ್ಮನ್ನು ಗೆಲ್ಲಿಸುವುದು ನಮ್ಮ ಜವಾಬ್ದಾರಿ ಎಂದು ಸ್ಥಳೀಯ ಮುಖಂಡರು, ಕಾರ್ಯಕರ್ತರು ದೆಹಲಿಗೆ ಬಂದು ಮನವಿ ಮಾಡಿದ್ದರು. ಆದರೆ, ಬಿಜೆಪಿ ವಿರುದ್ಧ ಸೋಲುವ ಅಪಾಯ ಮನಗಂಡ ಕಾಂಗ್ರೆಸ್ ವರಿಷ್ಠರು ಮತ್ತು ಗಾಂಧಿ ಪರಿವಾರದ ಬೆಂಬಲಿಗರು, ಇಂಥದ್ದೊಂದು ಸಾಹಸಕ್ಕೆ ಮೈಯೊಡ್ಡುವ ಬದಲು ಸೋನಿಯಾ ಗಾಂಧಿ ವರ್ಚಸ್ಸು ಇನ್ನೂ ಬಿಗಿಯಾಗಿರುವ ರಾಯ್ಬರೇಲಿಗೆ ರಾಹುಲ್​ರನ್ನು ಕಳುಹಿಸಿಕೊಟ್ಟಿದ್ದಾರೆ. ಅಮೇಠಿ ಕ್ಷೇತ್ರವನ್ನು ತಿರಸ್ಕರಿಸುವ ಮೂಲಕ ರಾಹುಲ್ ಯುದ್ಧಕ್ಕೆ ಮೊದಲೇ ಶಸ್ತ್ರತ್ಯಾಗ ಮಾಡಿದ್ದಾರೆ ಮತ್ತು ಸೋಲಿಗೆ ಹೆದರಿ ರಾಯ್ಬರೇಲಿಗೆ ಓಡಿದ್ದಾರೆ ಎಂದು ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ.
ರಾಹುಲ್ ರಾಯ್ಬರೇಲಿ ಆಯ್ಕೆ ಸಹಜವಾಗಿಯೇ ಅಮೇಠಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬೇಸರ ತರಿಸಿದೆ. ಕಿಶೋರಿ ಲಾಲ್ ಶರ್ಮ ಕಾಂಗ್ರೆಸ್ ಅಭ್ಯರ್ಥಿಯಾಗಬೇಕು ಎಂದು ಕಾರ್ಯಕರ್ತರು ಬಯಸಿರಲಿಲ್ಲ ಕೂಡ. ವಾಸ್ತವದಲ್ಲಿ, ಚುನಾವಣೆ ಸ್ಪರ್ಧೆ ಬದಲು, ಚುನಾವಣೆ ನಿರ್ವಹಿಸುವ ಜವಾಬ್ದಾರಿಯನ್ನು ಶರ್ಮ ನಿರೀಕ್ಷಿಸಿದ್ದರು. ಅಚ್ಚರಿಯ ಬೆಳವಣಿಗೆಯಲ್ಲಿ ಸ್ಮೃತಿ ಇರಾನಿ ವಿರುದ್ಧ ಗೆಲ್ಲುವ ಸವಾಲನ್ನು ಅವರ ಮುಂದಿಡಲಾಗಿದೆ. ಕಳೆದ ಹಲವು ದಿನಗಳಿಂದ ಅಮೇಠಿಯಲ್ಲಿದ್ದು, ಪ್ರಚಾರ ನಡೆಸುತ್ತಿರುವ ಸಚಿವೆ ಸ್ಮೃತಿ ಇರಾನಿ, ಈಗಾಗಲೇ ತಮ್ಮ ಇರುವಿಕೆಯನ್ನು ಖಚಿತಪಡಿಸಿದ್ದಾರೆ. ಆದರೆ, ನಾಮಪತ್ರ ಸಲ್ಲಿಕೆ ಕೊನೆಯ ದಿನದಂದು ಅಭ್ಯರ್ಥಿ ಪ್ರಕಟಿಸಿದ ಕಾಂಗ್ರೆಸ್, ಶುಕ್ರವಾರದಿಂದ ಪ್ರಚಾರ ಅಭಿಯಾನ ಆರಂಭಿಸಿದೆ. ಗಾಂಧಿ ಪರಿವಾರದ ಭದ್ರಕೋಟೆ ಎಂದು ಭಾವಿಸಲಾಗಿದ್ದ ಅಮೇಠಿ ಸೀಟನ್ನು 2019ರಲ್ಲಿ ಕಳೆದುಕೊಂಡಿದ್ದರಿಂದ, ಈ ಬಾರಿ ಬಹಳ ಹಿಂದಿನಿಂದಲೇ ಕಾಂಗ್ರೆಸ್ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಬೇಕಿತ್ತು. ಆದರೆ, ಈ ಬಾರಿಯೂ ತೀರ್ಮಾನ ಮಾಡುವುದರಲ್ಲಿ ವಿಳಂಬ ಮಾಡಿದ ಕಾಂಗ್ರೆಸ್, ಅಮೇಠಿಯನ್ನು ಶಾಶ್ವತವಾಗಿ ಬಿಜೆಪಿಗೆ ಬಿಟ್ಟುಕೊಡುವ ಮನಸ್ಸು ಮಾಡಿದೆ ಎಂಬ ಮಾತುಗಳು ಕ್ಷೇತ್ರದ ಮತದಾರರ ಮಧ್ಯೆ ಕೇಳಿಬರುತ್ತಿದೆ.
25 ವರ್ಷಗಳ ನಂತರ:ಅಮೇಠಿಯಲ್ಲಿ 25 ವರ್ಷಗಳ ಬಳಿಕ ಮೊದಲ ಬಾರಿಗೆ ಗಾಂಧಿ ಪರಿವಾರಕ್ಕೆ ಹೊರತಾಗಿರುವ ವ್ಯಕ್ತಿಯೊಬ್ಬರು ಕಾಂಗ್ರೆಸ್​ನಿಂದ ಸ್ಪರ್ಧೆಗಿಳಿದಿದ್ದಾರೆ. ಈ ಹಿಂದೆ ನೆಹರು- ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದ ಕ್ಯಾಪ್ಟನ್ ಸತೀಶ್ ಶರ್ಮ 1991 ಮತ್ತು 1996ರಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಆದರೆ, 1998ರಲ್ಲಿ ಬಿಜೆಪಿಯ ಸಂಜಯ್ ಸಿಂಗ್ ವಿರುದ್ಧ ಸತೀಶ್ ಶರ್ಮ ಸೋತರು. ನಂತರ, 1999ರಲ್ಲಿ ಸೋನಿಯಾ ಗಾಂಧಿ ಅಮೇಠಿಯಲ್ಲಿ ಗೆದ್ದು, ಸಂಸತ್ ಪ್ರವೇಶಿಸಿದ್ದರು. 2004, 2009 ಮತ್ತಿ 2014ರಲ್ಲಿ ಅಮೇಠಿ ಪ್ರತಿನಿಧಿಸಿದ ರಾಹುಲ್ ಗಾಂಧಿ, 2019ರಲ್ಲಿ ಅಮೇಠಿ ಸೋಲುವ ಸಾಧ್ಯತೆ ಮನಗಂಡೇ ಕೇರಳದ ವಯನಾಡ್​ನ್ನು ಎರಡನೇ ಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡಿದ್ದರು.
ಮತ್ತೆ ನಿರಾಶೆಗೊಳಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ:ಕಾಂಗ್ರೆಸ್ ಪಕ್ಷದ ಪರ ಪ್ರಚಾರ, ರಣನೀತಿ ರೂಪಿಸುವುದು ಸೇರಿದಂತೆ ಪಕ್ಷದ ಎಲ್ಲ ಚಟುವಟಿಕೆಗಳಲ್ಲಿ ಭಾಗಿಯಾಗುವ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತೊಮ್ಮೆ ಚುನಾವಣಾ ರಾಜಕೀಯದಿಂದ ದೂರ ಸರಿದಿರುವುದು ಕಾಂಗ್ರೆಸ್ಸಿಗರಲ್ಲಿ ತೀವ್ರ ನಿರಾಶೆ ಉಂಟು ಮಾಡಿದೆ. 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲೂ ಪ್ರಿಯಾಂಕಾ ಗಾಂಧಿ ವಾರಾಣಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ವಾರಾಣಸಿ ಕಾಂಗ್ರೆಸ್ ಕಾರ್ಯಕರ್ತರು ಕೂಡ ಪ್ರಿಯಾಂಕಾ ಬರುತ್ತಾರೆ ಎಂದು ಉತ್ಸಾಹಿತರಾಗಿದ್ದರು. ಆದರೆ, ಕೊನೆಕ್ಷಣದಲ್ಲಿ ಪ್ರಿಯಾಂಕಾ ಚುನಾವಣೆ ಕಣದಿಂದ ಹಿಂದೆ ಸರಿದು, ಬಿಜೆಪಿ ಹಾದಿ ಸುಗಮಗೊಳಿಸಿದ್ದರು. ಪ್ರಿಯಾಂಕಾ ನಿರುತ್ಸಾಹ ರಾಜ್ಯಾದ್ಯಂತ ಪಕ್ಷದ ಕಾರ್ಯಕರ್ತರ ಹುಮ್ಮಸ್ಸಿಗೆ ಹಾನಿ ಮಾಡಿತ್ತು. ಈ ಬಾರಿಯೂ, ರಾಯ್ಬರೇಲಿಗೆ ಪ್ರಿಯಾಂಕಾ ಬರಬೇಕು ಎನ್ನುವುದು ಬಹುತೇಕರ ಬೇಡಿಕೆಯಾಗಿತ್ತು. ‘ಸೋನಿಯಾ ಗಾಂಧಿ ರಾಜ್ಯಸಭೆ ಸದಸ್ಯರಾಗಿರುವುದರಿಂದ ನೀವು ಈ ಕ್ಷೇತ್ರ ಪ್ರತಿನಿಧಿಸಬೇಕು’ ಎಂದಿದ್ದ ಕಾಯಕರ್ತರು, ರಾಹುಲ್ ಗಾಂಧಿ ಬರಬೇಕು ಎಂದು ಮನವಿ ಮಾಡಿರಲಿಲ್ಲ. ಆದರೆ, ಪ್ರಿಯಾಂಕಾ ನಿರ್ಧಾರ ಕಾಂಗ್ರೆಸ್ ಕಾರ್ಯಕರ್ತರಿಗೆ ಅಚ್ಚರಿಗೆ ತಳ್ಳಿದೆ. ‘ಕಾರ್ಯಕರ್ತರಿಗೆ, ಮುಖಂಡರಿಗೆ ನೀವು ಚುನಾವಣೆ ಗೆಲ್ಲಬೇಕು/ಗೆಲ್ಲಿಸಬೇಕು ಎಂದು ಹೇಳುವುದಷ್ಟೇ ಅಲ್ಲ. ನೀವೂ ಸ್ಪರ್ಧಿಸಿ, ಇತರರಿಗೆ ಮಾದರಿಯಾಗಬೇಕು. ಸೋಲು/ಗೆಲುವು ಇದ್ದದ್ದೇ. ಆದರೆ, ಚುನಾವಣೆಯಲ್ಲೇ ಸ್ಪರ್ಧಿಸದಿದ್ದರೆ, ಪಕ್ಷಕ್ಕೆ, ಸಂಘಟನೆಗೆ ನೀವು ಯಾವ ಸಂದೇಶ ನೀಡುತ್ತೀರಿ? ವಿಪಕ್ಷಗಳಿಗೆ ಹೇಗೆ ಉತ್ತರ ನೀಡುತ್ತೀರಿ’ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಕಾಂಗ್ರೆಸ್ ಮುಖಂಡರೊಬ್ಬರು ಅಭಿಪ್ರಾಯಪಡುತ್ತಾರೆ.
ಗಾಂಧಿ ಪರಿವಾರದ ಭದ್ರಕೋಟೆ: 1952ರಿಂದ ಇಲ್ಲಿಯವರೆಗೆ ಕಾಂಗ್ರೆಸ್ ಕೇವಲ ಮೂರು ಬಾರಿ ಮಾತ್ರ ರಾಯ್ಬರೇಲಿಯಲ್ಲಿ ಸೋಲುಂಡಿದೆ. ತುರ್ತು ಪರಿಸ್ಥಿತಿ ನಂತರದ 1977ರ ಚುನಾವಣೆಯಲ್ಲಿ ಜನತಾ ಪಾರ್ಟಿಯ ರಾಜ್ ನಾರಾಯಣ್, ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಸಾಧಿಸಿದ್ದ ಗೆಲುವು ಐತಿಹಾಸಿಕ. ನಂತರ 1996 ಮತ್ತು 1998ರಲ್ಲಿ ಬಿಜೆಪಿಯ ಅಶೋಕ್ ಸಿಂಗ್ ಗೆಲುವು ಸಾಧಿಸಿದ್ದರು. ಈ ಎರಡೂ ಚುನಾವಣೆಗಳಲ್ಲಿ ಗಾಂಧಿ ಪರಿವಾರದವರು ಸ್ಪರ್ಧಾಕಣದಲ್ಲಿ ಇರಲಿಲ್ಲ ಎನ್ನುವುದು ಗಮನಾರ್ಹ. 1999ರ ಅಮೇಠಿ ಗೆಲುವಿನ ನಂತರ 2004ರಲ್ಲಿ ರಾಯ್ಬರೇಲಿಗೆ ತೆರಳಿದ ಸೋನಿಯಾ ಗಾಂಧಿ, 2006ರ ಉಪ ಚುನಾವಣೆ ಸೇರಿದಂತೆ ಸತತ 5 ಬಾರಿ ಕ್ಷೇತ್ರದಲ್ಲಿ ವಿಜಯಿಯಾಗಿದ್ದಾರೆ. ಸೋನಿಯಾ ಗಾಂಧಿ ಕ್ಷೇತ್ರಕ್ಕೆ ಭೇಟಿ ನೀಡದಿದ್ದರೂ, ಜನರು ಮಾತ್ರ ಸೋನಿಯಾ ಮತ್ತು ಗಾಂಧಿ ಪರಿವಾರದ ಜತೆ ಭಾವನಾತ್ಮಕ ನಂಟನ್ನು ಹೊಂದಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪತಿ ಫಿರೋಜ್ ಗಾಂಧಿ 1952ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ರಾಯ್ಬರೇಲಿಯಿಂದಲೇ ಸ್ಪರ್ಧಿಸಿ, ಗೆದ್ದಿದ್ದರು.
ಯಾರು ಈ ಕೆಎಲ್ ಶರ್ಮ?:ಮೂಲತಃ ಪಂಜಾಬ್​ನ ಲೂಧಿಯಾನದ ಕಿಶೋರಿ ಲಾಲ್ ಶರ್ಮ, ರಾಯ್ಬರೇಲಿ ಕ್ಷೇತ್ರದಲ್ಲಿ ಸೋನಿಯಾ ಗಾಂಧಿ ಪ್ರತಿನಿಧಿಯಂತೆ ಕಾರ್ಯನಿರ್ವಹಿಸುತ್ತ ಬಂದಿದ್ದಾರೆ. ಅಮೇಠಿಯಲ್ಲೂ ಪಕ್ಷದ ಕಚೇರಿ ವ್ಯವಹಾರ, ಚಟುವಟಿಕೆಗಳ ಉಸ್ತುವಾರಿ ವಹಿಸಿದ್ದಾರೆ. 1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮೃತಪಟ್ಟ ಬಳಿಕ ಗಾಂಧಿ ಕುಟುಂಬಸ್ಥರು ರಾಯ್ಬರೇಲಿ ಯಿಂದ ಸ್ಪರ್ಧಿಸಲು ಹಿಂದೇಟು ಹಾಕಿದ್ದರು.

ಆದಾಗ್ಯೂ, ಕ್ಷೇತ್ರದಲ್ಲಿ ಕಾಂಗ್ರೆಸ್ ಅಸ್ತಿತ್ವ ಉಳಿಸುವಲ್ಲಿ ಶರ್ಮ ಪ್ರಮುಖ ಪಾತ್ರವಹಿಸಿದ್ದರು ಎನ್ನಲಾಗಿದೆ. 1983ರಲ್ಲೇ ರಾಜೀವ್ ಗಾಂಧಿಗೆ ಕೆಎಲ್ ಶರ್ಮ ಪರಿಚಯವಾಗಿತ್ತು. 1999ರಲ್ಲಿ ಸೋನಿಯಾ ಗಾಂಧಿ ಮೊದಲ ಬಾರಿಗೆ ರಾಯ್ಬರೇಲಿ ಗೆದ್ದಾಗ ಕೆಎಲ್ ಶರ್ಮ, ಪ್ರಚಾರ ಕಾರ್ಯ ಸೇರಿದಂತೆ ಇಡೀ ಚುನಾವಣೆ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದರು. ಗಾಂಧಿ ಪರಿವಾರದ ಚುನಾವಣೆ ನೋಡಿಕೊಳ್ಳುತ್ತಿದ್ದ ಕೆಎಲ್ ಶರ್ಮ ಮೊದಲ ಬಾರಿಗೆ ಚುನಾವಣಾ ಕಣದಲ್ಲಿದ್ದು, ಬಿಜೆಪಿಯಿಂದ ದೈತ್ಯ ಸವಾಲನ್ನೇ ಎದುರಿಸುತ್ತಿದ್ದಾರೆ. ಶರ್ಮ ಸ್ಪರ್ಧೆಯಿಂದ ಸ್ಮೃತಿ ಇರಾನಿ ಗೆಲುವಿನ ಹಾದಿ ಮತ್ತಷ್ಟು ಸುಲಭಗೊಂಡಿದೆ ಎಂಬ ಮಾತುಗಳೂ ಅಮೇಠಿ ಅಂಗಳದಿಂದ ಕೇಳಿಬರುತ್ತಿವೆ.
ಹುಬ್ಬಳ್ಳಿ: ಹಿಂದು ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿ ಕೊಲೆ ಬೆದರಿಕೆ, ಆರೋಪಿ ವಶಕ್ಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
