ರೈಲ್ವೇ ಸಿಗ್ನಲಿಂಗ್ ವ್ಯವಸ್ಥೆಯು ಎರಡು ಪ್ರಮುಖ ಭಾಗಗಳನ್ನು ಹೊಂದಿದೆ. ಒಂದು ನಿಲ್ದಾಣಗಳ ನಡುವೆ ರೈಲುಗಳ ಚಲನೆಯನ್ನು ನಿರ್ವಹಿಸುವುದು. ಇನ್ನೊಂದು ನಿಲ್ದಾಣದೊಳಗೆ ನಿರ್ವಹಣೆ ಕೈಗೊಳ್ಳುವುದು. ಎರಡು ನಿಲ್ದಾಣಗಳ ನಡುವೆ ರೈಲುಗಳ ಚಲನೆಯನ್ನು ‘ಬ್ಲಾಕ್ ನಿಯಮಗಳು’ ನಿಯಂತ್ರಿಸುತ್ತವೆ. ಟ್ರ್ಯಾಕ್​ (ಹಳಿ) ಅನ್ನು ವಿದ್ಯುನ್ಮಾನ ಬ್ಲಾಕ್​ಗಳಾಗಿ ವಿಂಗಡಿಸಲಾಗಿರುತ್ತದೆ, ಬ್ಲಾಕ್​ನ ಎರಡೂ ತುದಿಗಳಲ್ಲಿ ಸಿಗ್ನಲಿಂಗ್ (ಸಂಕೇತ ವ್ಯವಸ್ಥೆ) ಇರುತ್ತದೆ. ಈ ಸಿಗ್ನಲ್​ಗಳನ್ನು ಆಧರಿಸಿ ಚಾಲಕರು ರೈಲನ್ನು ಓಡಿಸುತ್ತಾರೆ. ಸಿಗ್ನಲಿಂಗ್ ವ್ಯವಸ್ಥೆಯ ಇನ್ನೊಂದು ಪ್ರಮುಖ ಭಾಗವೆಂದರೆ ರೈಲು ನಿಲ್ದಾಣಗಳ ಒಳಗೆ ಚಲನೆಯನ್ನು ‘ಇಂಟರ್​ಲಾಕಿಂಗ್’ ಮೂಲಕ ನಿಯಂತ್ರಿಸುವುದು. ರೈಲು ಹಳಿಗಳನ್ನು ಬದಲಾಯಿಸುವ ಸ್ಥಳದಲ್ಲಿ ಸರಿಯಾದ ಸಿಗ್ನಲ್ ನೀಡುವುದು ಮತ್ತು ಒಂದೇ ಹಳಿಗೆ ಬಂದು ರೈಲುಗಳು ಘರ್ಷಣೆ ಆಗದಿರುವುದನ್ನು ಇದು ಖಚಿತಪಡಿಸುತ್ತದೆ. ಒಂದು ಹಳಿಯ ಮೇಲೆ ಯಾವುದಾದರೊಂದು ರೈಲು ನಿಲುಗಡೆಯಾಗಿದ್ದರೆ, ಈ ಇಂಟರ್​ಲಾಕಿಂಗ್ ವ್ಯವಸ್ಥೆಯು ಸಮೀಪಿಸುತ್ತಿರುವ ಇನ್ನೊಂದು ರೈಲಿಗೆ ಆ ಹಳಿಯ ಮೇಲೆ ಪ್ರವೇಶಕ್ಕೆ ಅವಕಾಶ ಬೇಡ ಎಂಬ ಸಂಕೇತ ರವಾನೆಯನ್ನು ಖಚಿತಪಡಿಸುತ್ತದೆ.
ಈ ವ್ಯವಸ್ಥೆಯಲ್ಲಿ ಏನು ತಪ್ಪಾಗಬಹುದು?:ಭಾರತದಲ್ಲಿ ಸಿಗ್ನಲಿಂಗ್ ವ್ಯವಸ್ಥೆಯು ಸ್ವಯಂಚಾಲಿತವಾಗಿದೆ. ಈಗ ಹಸ್ತಚಾಲಿತ ನಿಯಂತ್ರಣಕ್ಕೆ ಅವಕಾಶ ತೀರ ಕಡಿಮೆ. ರೈಲ್ವೇ ಜಾಲದಾದ್ಯಂತ ಸ್ವಯಂಚಾಲಿತ ಸಿಗ್ನಲಿಂಗ್ ಅನ್ನು ಬಳಸಲಾಗುತ್ತಿದೆಯಾದರೂ, ವಿವಿಧ ಸ್ಥಳಗಳಲ್ಲಿ ವ್ಯವಸ್ಥೆಗಳು ಬದಲಾಗುತ್ತವೆ. ಭಾರತೀಯ ರೈಲ್ವೆಯು ‘ಎಲೆಕ್ಟ್ರಾನಿಕ್ ಇಂಟರ್​ಲಾಕಿಂಗ್ (ಇಐ)’ ಎಂಬ ಏಕರೂಪದ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಸುವತ್ತ ಈಗ ಹೆಜ್ಜೆ ಹಾಕಿದೆ. ಇದು ರೈಲುಗಳ ಚಲನೆಯನ್ನು ನಿಯಂತ್ರಿಸುವ ಸಿಗ್ನಲ್​ಗಳು ಮತ್ತು ಸ್ವಿಚ್​ಗಳ ಜಾಲವಾಗಿದೆ. ಆದರೆ, ವಿಧ್ವಂಸಕತೆಯಂತಹ ಬಾಹ್ಯ ಹಸ್ತಕ್ಷೇಪದಿಂದ, ವ್ಯವಸ್ಥೆಯ ದೋಷದಿಂದ, ಸಾಫ್ಟ್ ವೇರ್ ತೊಂದರೆಗಳಿಂದ ಸಮಸ್ಯೆಗಳು ಉಂಟಾಗಬಹುದು. ಅಲ್ಲದೆ, ಎಲೆಕ್ಟ್ರಿಕಲ್ ಸಿಗ್ನಲಿಂಗ್ ತನ್ನ ಶಕ್ತಿಯನ್ನು ಭೂಗತ ಕೇಬಲ್​ಗಳನ್ನು ಬಳಸಿಕೊಂಡು ಪಡೆಯುತ್ತದೆ. ಕೇಬಲ್​ಗಳಲ್ಲಿನ ದೋಷಗಳಿಂದಾಗಿಯೂ ಸಿಗ್ನಲಿಂಗ್ ಕಾರ್ಯನಿರ್ವಹಣೆಗೆ ತೊಂದರೆಯಾಗಬಹುದು.
ಅಪಘಾತಗಳಿಗೆ ಸಿಗ್ನಲಿಂಗ್ ದೋಷ ಕಾರಣ?:ಕಳೆದ ವರ್ಷ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರ ವರದಿಯ ಪ್ರಕಾರ, 2017-18 ಮತ್ತು 2020-21 ರ ನಡುವೆ ಸಂಭವಿಸಿದ 2,017 ರೈಲು ಅಪಘಾತಗಳ ಪೈಕಿ 1,392 ಅಂದರೆ ಶೇಕಡಾ 69ರಷ್ಟು ಹಳಿತಪ್ಪಿದ ಕಾರಣದಿಂದ ಉಂಟಾಗಿವೆ. ಅಲ್ಲದೆ, ರೈಲು ಹಳಿತಪ್ಪಿ ಸಂಭವಿಸಿದ 1,129 ಅಪಘಾತಗಳ ‘ವಿಚಾರಣಾ ವರದಿಗಳ’ ಅನುಸಾರ ಅಪಘಾತಕ್ಕೆ 24 ಅಂಶಗಳನ್ನು ಕಂಡುಕೊಳ್ಳಲಾಗಿದೆ. ನಿಲ್ದಾಣಗಳಲ್ಲಿ ಪಾಯಿಂಟ್​ಗಳ ತಪ್ಪಾದ ಸೆಟ್ಟಿಂಗ್ ಮತ್ತು ಸಿಗ್ನಲಿಂಗ್ ವ್ಯವಸ್ಥೆಗಳಲ್ಲಿನ ತಾಂತ್ರಿಕ ಕೊರತೆಗಳು ಕೂಡ ಇದರಲ್ಲಿ ಸೇರಿವೆ.
ಒಡಿಶಾದಲ್ಲಿ ಏನು ತಪ್ಪಾಗಿದೆ?:ಒಡಿಶಾದ ಬಹನಾಗಾ ಬಜಾರ್ ನಿಲ್ದಾಣದ ಬಳಿ ಈಚೆಗೆ ಸಂಭವಿಸಿದ ಭೀಕರ ರೈಲು ಅಪಘಾತದ ಕುರಿತು ಇನ್ನೂ ತನಿಖೆ ನಡೆಯುತ್ತಿದ್ದು, ರೈಲ್ವೇ ಮಂಡಳಿಯು ಸಿಬಿಐ ತನಿಖೆ ನಡೆಸಬೇಕೆಂದು ಕೋರಿದೆ. ಆದರೆ, ಪ್ರಾಥಮಿಕ ತನಿಖೆಯು ಸಿಗ್ನಲ್ ವೈಫಲ್ಯದ ಸಾಧ್ಯತೆಯನ್ನು ಸೂಚಿಸಿದೆ. ನಿಲ್ದಾಣವನ್ನು ಪ್ರವೇಶಿಸಲು ಮುಂದಾದ ಕೋರಮಂಡಲ್ ಎಕ್ಸ್​ಪ್ರೆಸ್ ರೈಲಿಗೆ ಮುಖ್ಯ ಮಾರ್ಗವನ್ನು ಪ್ರವೇಶಿಸಲು ಮೊದಲು ಹಸಿರು ನಿಶಾನೆ ತೋರಿಸಲಾಯಿತು. ಆದರೆ, ನಂತರ ಇದನ್ನು ಹಿಂತೆಗೆದುಕೊಳ್ಳಲಾಯಿತು, ಆದ್ದರಿಂದ ರೈಲು ಕಬ್ಬಿಣದ ಅದಿರು ತುಂಬಿದ ಗೂಡ್ಸ್ ರೈಲು ನಿಲುಗಡೆಯಾಗಿದ್ದ ಲೂಪ್ ಲೈನ್​ಗೆ ಪ್ರವೇಶಿಸಿತು. ಹೀಗಾಗಿ, ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಎಲೆಕ್ಟ್ರಾನಿಕ್ ಇಂಟರ್​ಲಾಕಿಂಗ್​ನಲ್ಲಿನ ಬದಲಾವಣೆ ಇದಕ್ಕೆ ಕಾರಣ ಎಂದು ದೂಷಿಸಿದ್ದಾರೆ. ಇದು ಮಾನವ ಹಸ್ತಕ್ಷೇಪ ಮತ್ತು ವಿಧ್ವಂಸಕತೆಯನ್ನು ಸೂಚಿಸುತ್ತದೆ.
ಪಾಯಿಂಟ್ ಯಂತ್ರದಲ್ಲಿ, ಟ್ರ್ಯಾಕ್​ನ ಕಾನ್ಪಿಗರೇಶನ್​ನಲ್ಲಿ ಯಾರೋ ಬದಲಾವಣೆಯನ್ನು ಮಾಡಿದ್ದಾರೆ. ರೈಲುಗಳ ಚಲನೆಗೆ ಆಧಾರವಾಗಿರುವ ಕಾನ್ಪಿಗರೇಶನ್​ನಲ್ಲಿ ಬದಲಾವಣೆ ಯಾಗಿದೆ. ಇದರಿಂದಾಗಿಯೇ ಈ ದುರಂತ ಸಂಭವಿಸಿದೆ. ಆದರೆ. ಸ್ವತಂತ್ರ ಸಂಸ್ಥೆಯ ವರದಿ ಸಲ್ಲಿಕೆಯಾದ ನಂತರವಷ್ಟೇ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ.
| ಅಶ್ವಿನಿ ವೈಷ್ಣವ್, ರೈಲ್ವೆ ಸಚಿವ
ಸಿಗ್ನಲ್:ಮುಂದಿನ ಹಳಿಯ ಸ್ಥಿತಿಯನ್ನು ಸೂಚಿಸಲು ಸಿಗ್ನಲ್​ಗಳನ್ನು (ಹಸಿರು, ಕೆಂಪು ಮತ್ತು ಹಳದಿ ಬಣ್ಣದ ದೀಪಗಳು) ಟ್ರಾ್ಯಕ್​ಗಳ ಉದ್ದಕ್ಕೂ ಅಳವಡಿಸಲಾಗಿರುತ್ತದೆ. ಈ ಸಂಕೇತವನ್ನು ಆಧರಿಸಿ ಚಾಲಕನು ರೈಲನ್ನು ಓಡಿಸುತ್ತಾನೆ. ನಿಲ್ದಾಣ ಸಮೀಪಿಸಿದ ಸಂದರ್ಭದಲ್ಲಿ ಹಸಿರು ಸಂಕೇತವಿದ್ದರೆ ರೈಲನ್ನು ಮುಂದಕ್ಕೆ ಸಾಗಿಸುತ್ತಾನೆ. ಕೆಂಪು ಸಂಕೇತವಿದ್ದರೆ ನಿಲುಗಡೆ ಮಾಡುತ್ತಾನೆ.
ಟ್ರ್ಯಾಕ್​ ಸರ್ಕ್ಯೂಟ್:ಟ್ರ್ಯಾಕ್​ ಸರ್ಕ್ಯೂಟ್​ಗಳು ಎಲೆಕ್ಟ್ರಿಕಲ್ ಸರ್ಕ್ಯೂಟ್​ಗಳಾಗಿವೆ (ಇದನ್ನು ಟ್ರ್ಯಾಕ್​-ಆಕ್ಯುಪೆನ್ಸಿ ಸೆನ್ಸಿಂಗ್ ಸಾಧನಗಳು ಎಂದೂ ಕರೆಯುತ್ತಾರೆ.) ಅಂದರೆ, ನಿಲ್ದಾಣದಲ್ಲಿ ಯಾವ ಟ್ರಾ್ಯಕ್ ಅಂದರೆ ಹಳಿ ಖಾಲಿ ಇದೆ ಹಾಗೂ ಯಾವ ಹಳಿಗಳಲ್ಲಿ ರೈಲು ನಿಲುಗಡೆಯಾಗಿವೆ ಎಂಬುದನ್ನು ಸೂಚಿಸುತ್ತದೆ. ಸಾಮಾನ್ಯವಾಗಿ, ಹಳಿಗಳ ಮೇಲೆ ರೈಲು ಚಕ್ರಗಳು ಇರುವುದನ್ನು ಪತ್ತೆ ಹಚ್ಚಲು ಸೆನ್ಸರ್​ಗಳನ್ನು ಅಳವಡಿಸಲಾಗಿರುತ್ತದೆ.
ಪಾಯಿಂಟ್:ರೈಲುಗಳು ಟ್ರಾ್ಯಕ್​ಗಳನ್ನು ಬದಲಾಯಿಸುವ ಕೆಲಸವನ್ನು ಇವು ಮಾಡುತ್ತವೆ. ಅಪಘಾತಕ್ಕೆ ಈಡಾದ ಕೋರಮಂಡಲ್ ಎಕ್ಸ್​ಪ್ರೆಸ್ ರೈಲು ಮುಖ್ಯ ಮಾರ್ಗದಲ್ಲಿ ಬಹನಾಗಾ ಬಜಾರ್ ನಿಲ್ದಾಣದ ಮೂಲಕ ಹೋಗಬೇಕಿತ್ತು, ಆದರೆ, ನಿಲ್ದಾಣದ ಸ್ವಲ್ಪ ಮೊದಲು ಈ ರೈಲು ಪಾಯಿಂಟ್​ನಲ್ಲಿ ಗೂಡ್ಸ್ ರೈಲು ನಿಲುಗಡೆಯಾಗಿದ್ದ ಲೂಪ್ ಲೈನ್​ಗೆ ಬದಲಾಯಿತು. ಈ ಕಾರಣಕ್ಕಾಗಿ ದುರಂತ ಸಂಭವಿಸಿತು. ರೈಲು ಯಾವ ಹಳಿಗೆ ಸಾಗಬೇಕೆಂಬುದು ನಿರ್ಧಾರವಾದ ನಂತರ, ಈ ಪಾಯಿಂಟ್ ನಿರ್ದಿಷ್ಟ ಸ್ಥಾನದಲ್ಲಿ ರೈಲು ಹಾದುಹೋಗುವವರೆಗೆ ಲಾಕ್ ಆಗುತ್ತದೆ. ರೈಲ್ವೆ ನಿಲ್ದಾಣಗಳ ಬಳಿ ಯಾವ ಟ್ರಾ್ಯಕ್ ಮೇಲೆ ಸಾಗಬೇಕು ಎಂಬುದನ್ನು ರೈಲಿನ ಚಾಲಕ ನಿರ್ಧರಿಸುವುದಿಲ್ಲ ಹಾಗೂ ಈ ಸಂಗತಿಯ ಮೇಲೆ ಅವನಿಗೆ ನಿಯಂತ್ರಣವೂ ಇರುವುದಿಲ್ಲ.
ಕವಚದಿಂದ ಸುರಕ್ಷತೆ ಸಾಧ್ಯತೆ:2022-23ರಲ್ಲಿ 530 ಕಿಮೀ ಟ್ರಾ್ಯಕ್​ಗಳನ್ನು ಸ್ವಯಂಚಾಲಿತ ಸಿಗ್ನಲಿಂಗ್​ನೊಂದಿಗೆ ನವೀಕರಿಸಲಾಗಿದೆ, 2021-22ರಲ್ಲಿ ಇದು 218 ಕಿಮೀ ಇತ್ತು. ನಂತರದ ವರ್ಷದಲ್ಲಿ ಶೇಕಡಾ 143.12ರಷ್ಟು ಹೆಚ್ಚಳವಾಗಿದೆ. ಡಿಜಿಟಲ್ ಇಂಟರ್​ಲಾಕ್ ವ್ಯವಸ್ಥೆ ಇರುವ ಹೆಚ್ಚಿನ ಸಂಖ್ಯೆಯ ಸ್ಟೇಷನ್​ಗಳನ್ನು ಈಗ ನಿರ್ವಿುಸಲಾಗಿದೆ. ರಿಸರ್ಚ್ ಡಿಸೈನ್ಸ್ ಸ್ಟಾ್ಯಂಡರ್ಡ್ಸ್ ಸಂಸ್ಥೆಯು ತಯಾರಕರ ಜತೆಗೂಡಿ ಕವಚ ಎಂಬ ಹೆಸರಿನ ಸ್ವಯಂಚಾಲಿತ ರಕ್ಷಣೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಸಿಗ್ನಲ್ ಅಥವಾ ವೇಗದ ನಿರ್ಬಂಧಗಳ ಪ್ರಕಾರ ರೈಲನ್ನು ನಿಯಂತ್ರಿಸಲು ಪೈಲಟ್ ವಿಫಲವಾದಲ್ಲಿ ಇದು ಸ್ವಯಂಚಾಲಿತವಾಗಿ ಬ್ರೇಕ್​ಗಳನ್ನು ಸಕ್ರಿಯಗೊಳಿಸುತ್ತದೆ.
ತೆರಿಗೆ ಕಟ್ಟೋರ್ಗೇ ‘ಟ್ಯಾಕ್ಸು’: ಕೈಕೊಟ್ಟ ಗ್ಯಾರಂಟಿ; ಐಟಿ-ಜಿಎಸ್​ಟಿ ಪಾವತಿಸುವವರಿಗಿಲ್ಲ ಗೃಹಲಕ್ಷ್ಮಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 3 =
Remember me
