199 ವಿಧಾನಸಭಾ ಕ್ಷೇತ್ರಗಳನ್ನುಹೊಂದಿರುವ ರಾಜಸ್ಥಾನದಲ್ಲಿ 115 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ಸರಳ ಬಹುಮತ ಪಡೆದುಕೊಂಡಿದೆ. ಈ ಮೂಲಕ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಂಡಿದೆ. ಮತದಾನೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿ ಇದೆ ಎಂದು ಹೇಳಲಾಗಿತ್ತು. ಆದರೆ ಅಂತಿಮ ಫಲಿತಾಂಶ ಅಚ್ಚರಿ ಮೂಡಿಸಿದ್ದು, ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಆಂತರಿಕ ಕಚ್ಚಾಟದಿಂದ ಬಿಜೆಪಿಗೆ ಅನುಕೂಲವಾಗಿದೆ. ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ, ಕನಯ್ಯಲಾಲ್ ಹತ್ಯೆ ಪ್ರಕರಣ, ಕೇಂದ್ರದಲ್ಲಿ ಪ್ರಧಾನಿ ಮೋದಿ ಆಡಳಿತ ಬಿಜೆಪಿಗೆ ಪ್ಲಸ್​ಪಾಯಿಂಟ್ ಆಗಿವೆ.
ಜೋಶಿ ರಾಜಕೀಯ ಗ್ರಾಫ್ ಏರಿಕೆರಾಜಸ್ಥಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ನೆಲಕಚ್ಚಿಸುವಲ್ಲಿ ಬಿಜೆಪಿ ಯಶಸ್ವಿಯಾಗಿರುವ ಮಧ್ಯೆ ರಾಜಸ್ಥಾನ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ, ಧಾರವಾಡ-ಹುಬ್ಬಳ್ಳಿ ಸಂಸದ ಪ್ರಲ್ಹಾದ್ ಜೋಶಿ ಪಾತ್ರವನ್ನು ಇಲ್ಲಿ ಕಡೆಗಣಿಸುವಂತಿಲ್ಲ. ಆಗಸ್ಟ್​ನಲ್ಲಿ ಉಸ್ತುವಾರಿಯಾಗಿ ನೇಮಕಗೊಂಡಿದ್ದ ಅವರು, ನಂತರ ನಿರಂತರವಾಗಿ ರಾಜಸ್ಥಾನಕ್ಕೆ ಪ್ರವಾಸಗೈಯುತ್ತಾ ಪಕ್ಷದ ಆಂತರಿಕ ಬಿಕ್ಕಟ್ಟು, ಗುಂಪುಗಾರಿಕೆಗಳನ್ನು ಸರಿಪಡಿಸಿ, ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸಿದ್ದರು. ಟಿಕೆಟ್ ಹಂಚಿಕೆಯಂತೂ ಪಕ್ಷಕ್ಕೆ ಬಹುದೊಡ್ಡ ಸವಾಲಾಗಿ ಕಾಡಿದ್ದ ಮಧ್ಯೆ, ಟಿಕೆಟ್ ತಪ್ಪಿದ ವರನ್ನು ಸಮಾಧಾನಪಡಿಸಿ ಪ್ರಚಾರಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಂಡರು. ತಮ್ಮನ್ನು ಸಿಎಂ ಅಭ್ಯರ್ಥಿಯಾಗಿ ಘೊಷಣೆ ಮಾಡದ್ದರ ಬಗ್ಗೆ ವಸುಂಧರಾ ರಾಜೆಗೆ ಇದ್ದ ಬೇಸರ ಅಳಿಸುವಲ್ಲಿ ಜೋಶಿ ಯಶಸ್ವಿಯಾದರು. ಮತದಾನದ ದಿನದವರೆಗೂ ರಾಜಸ್ಥಾನದಲ್ಲಿ ಉಳಿದುಕೊಂಡು ಚುನಾವಣೆ ಮೇಲುಸ್ತುವಾರಿ ವಹಿಸಿದ ಜೋಶಿ ಅವರಿಗೆ, ಈ ಚುನಾವಣೆ ಗೆಲುವು ಅವರ ರಾಜಕೀಯ ಗ್ರಾಫ್​ನ್ನು ಮತ್ತಷ್ಟು ಮೇಲಕ್ಕೆ ಕೊಂಡೊಯ್ಯುವುದರಲ್ಲಿ ಅನುಮಾನವಿಲ್ಲ. ಜೋಶಿ, ಉತ್ತರಾಖಂಡದಲ್ಲೂ ಬಿಜೆಪಿ ಪಕ್ಷವನ್ನು ಗೆಲುವಿನ ಗಡಿ ದಾಟಿಸುವಲ್ಲಿ ಯಶಸ್ವಿಯಾಗಿದ್ದರು.
ರಾಜಸ್ಥಾನದಲ್ಲಿ ಯೋಗಿ?ರಾಜಸ್ಥಾನದಲ್ಲಿ ಬಿಜೆಪಿಯ ಗೆಲುವು ಮತ್ತೊಬ್ಬ ‘ಯೋಗಿ’ ಉದಯಕ್ಕೆ ಕಾರಣವಾಗುವ ಸಾಧ್ಯತೆ ಇದೆ. ರಾಜಸ್ಥಾನದ ಯೋಗಿ ಎಂದೇ ಜನಪ್ರಿಯವಾಗಿರುವ ಅಲ್ವಾರ್ ಸಂಸದ ಬಾಬಾ ಬಾಲಕನಾಥ ಸಿಎಂ ಹುದ್ದೆಗೆ ಪ್ರಬಲ ಸ್ಪರ್ಧಿಯಾಗಿದ್ದಾರೆ. ಬಾಲಕನಾಥ ಅವರು ತಿಜಾರಾ ಕ್ಷೇತ್ರದಿಂದ ಕಾಂಗ್ರೆಸ್​ನ ಇಮ್ರಾನ್ ಖಾನ್ ವಿರುದ್ಧ ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ. ನಾವು ಪ್ರಧಾನಿ ಮೋದಿ ನಾಯಕತ್ವದಲ್ಲಿ ಕೆಲಸ ಮಾಡುತ್ತೇವೆ. ಮುಖ್ಯಮಂತ್ರಿ ಯಾರಾಗಬೇಕೆಂಬುದರ ಬಗ್ಗೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ. ಜನಪ್ರತಿನಿಧಿಯಾಗಿ ನಾನು ಸಮಾಜ ಸೇವೆ ಮಾಡಲು ಬಯಸುತ್ತೇನೆ. ಇದರಿಂದ ನನಗೆ ತೃಪ್ತಿ ಇದೆ ಎಂದು ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಕನಾಥ ಮುಖ್ಯಮಂತ್ರಿಯಾದರೆ ಯೋಗಿ ಆದಿತ್ಯನಾಥ ನಂತರ ಉನ್ನತ ಹುದ್ದೆಯನ್ನು ಅಲಂಕರಿಸಿದ ಮತ್ತೊಬ್ಬ ಸಂತ ಎನ್ನಿಸಿಕೊಳ್ಳಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಜಸ್ಥಾನದಲ್ಲಿ ಬಾಲಕನಾಥ್ ಪರವಾಗಿ ಪ್ರಚಾರ ಮಾಡಿದ್ದರು.
ಸೋಲುಂಡ ಸಚಿವರುಅಶೋಕ್ ಗೆಹ್ಲೋಟ್ ಸರ್ಕಾರದಲ್ಲಿ ವಿಪತ್ತು ನಿರ್ವಹಣಾ ಸಚಿವರಾಗಿದ್ದ ಗೋವಿಂದ ರಾಮ್ ಮೇಘವಾಲ್ ಸೇರಿ ಅನೇಕ ಸಚಿವರು ಚುನಾವಣೆಯಲ್ಲಿ ಸೋತಿದ್ದಾರೆ. ಕಾಂಗ್ರೆಸ್ ಪ್ರಚಾರ ಸಮಿತಿ ಮುಖ್ಯಸ್ಥರೂ ಆಗಿದ್ದ ಮೇಘವಾಲ್ ಅವರು ಬಿಜೆಪಿಯ ವಿಶ್ವನಾಥ್ ಮೇಘವಾಲ್ ವಿರುದ್ಧ ಖಜುವಾಲಾ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಚುನಾವಣೆಯಲ್ಲಿ ಸೋತ ಇತರ ಕಾಂಗ್ರೆಸ್ ಸಚಿವರಲ್ಲಿ ಭನ್ವರ್ ಸಿಂಗ್ ಭಾಟಿ, ಶಕುಂತಲಾ ರಾವತ್, ವಿಶ್ವೇಂದ್ರ ಸಿಂಗ್, ರಮೇಶ್ ಚಂದ್ ಮೀನಾ, ಸಾಲೆ ಮೊಹಮ್ಮದ್, ಉದಯಲಾಲ್ ಅಂಜನಾ ಸೇರಿದ್ದಾರೆ.
ಕೈ ಸೋಲಿಗೆ ಕಾರಣಗಳೇನು?ಆಂತರಿಕ ಕಲಹ:ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ರಾಜ್ಯ ಘಟಕದಲ್ಲಿ ಆಂತರಿಕ ಕಚ್ಚಾಟದಿಂದ ಬಳಲುತ್ತಿದ್ದವು. ಆದರೆ, ಬಿಜೆಪಿ ಆಂತರಿಕ ಭಿನ್ನಾಭಿಪ್ರಾಯವನ್ನು ಚೆನ್ನಾಗಿ ನಿಭಾಯಿಸಿತು. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸದೆ, ಪ್ರಧಾನಿ ಮೋದಿ ಜನಪ್ರಿಯತೆ ಆಧರಿಸಿ ಚುನಾವಣೆ ಎದುರಿಸಿತು. ಆದರೆ, ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್ ನಡುವಿನ ದೀರ್ಘಕಾಲದ ವೈಷಮ್ಯವನ್ನು ತಗ್ಗಿಸುವಲ್ಲಿ ಕಾಂಗ್ರೆಸ್ ಮೇಲ್ನೋಟಕ್ಕೆ ಯಶಸ್ವಿಯಾಗಿದ್ದರೂ, ಅದು ಮತಗಳಾಗಿ ಪರಿವರ್ತನೆ ಆಗಲಿಲ್ಲ. ಕಾಂಗ್ರೆಸ್​ನ ಹಲವಾರು ಪದಾಧಿಕಾರಿಗಳು ಮತ್ತು ಜಿಲ್ಲಾ ಅಧ್ಯಕ್ಷರನ್ನು ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ನೇಮಿಸಲಾಯಿತು. ಅಲ್ಲೂ ಸಾಕಷ್ಟು ವೈಮನಸ್ಯ ಇತ್ತು.
ಕೆಂಪು ಡೈರಿ ಆರೋಪ:ಭ್ರಷ್ಟಾಚಾರ, ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಪ್ರಶ್ನೆ ಪೇಪರ್ ಸೋರಿಕೆ ಮತ್ತು ‘ಕೆಂಪು ಡೈರಿ’ ಪ್ರಕರಣ ಕಾಂಗ್ರೆಸ್​ಗೆ ಭಾರಿ ಹಿನ್ನಡೆ ಉಂಟು ಮಾಡಿತು. ಬಿಜೆಪಿ ಈ ಸಮಸ್ಯೆಗಳನ್ನು ಸರಿಯಾಗಿ ಬಳಸಿಕೊಂಡಿತು. ಚುನಾವಣೆಗೆ ಕೆಲವೇ ದಿನ ಮೊದಲು ಸಿಎಂ ಅಶೋಕ್ ಗೆಹ್ಲೋಟ್ ಪುತ್ರನ ಮೇಲೆ ಜಾರಿ ನಿರ್ದೇಶನಾಲಯದ ದಾಳಿ ನಡೆಸಿತ್ತು. ಕಾಂಗ್ರೆಸ್ ಆಡಳಿತಾವಧಿಯಲ್ಲಿ ವಿವಿಧ 14 ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು ಎಂದು ಬಿಜೆಪಿ ಆರೋಪಿಸಿದೆ. ಗೆಹ್ಲೋಟ್ ಸರ್ಕಾರದ ವಿರುದ್ಧ ಹಲವಾರು ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು.
ನೆಲಕಚ್ಚಿದ ಕಲ್ಯಾಣ ಯೋಜನೆಗಳು:ಕಾಂಗ್ರೆಸ್ ಹತ್ತಾರು ಕಲ್ಯಾಣ ಯೋಜನೆಗಳನ್ನು ಘೋಷಿಸಿದ್ದರೂ, ಪರಿಣಾಮಕಾರಿಯಾಗಿ ತಳಮಟ್ಟದವರೆಗೆ ಇದನ್ನು ತಲುಪಿಸಲು ವಿಫಲವಾಯಿತು.
ಕಾನೂನು ಸುವ್ಯವಸ್ಥೆ ವೈಫಲ್ಯ:ರಾಜಸ್ಥಾನದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು, ದಲಿತರ ಮೇಲಿನ ದಾಳಿಗಳು, ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳ ಕಂಡಿರುವುದು ಜನರ ಸಿಟ್ಟಿಗೆ ಕಾರಣವಾಯಿತು. ‘ನಹೀಂ ಸಹೇಗಾ ರಾಜಸ್ಥಾನ’ ಎಂಬ ಘೊಷಣೆಯೊಂದಿಗೆ ಬಿಜೆಪಿ ಆಂದೋಲನ ಮಾಡಿತು.
ಉತ್ತರ ಪ್ರದೇಶದಂತೆ ರಾಜಸ್ಥಾನದಲ್ಲೂ ಮತ್ತೊಬ್ಬ ಯೋಗಿ ಉದಯವಾಗ್ತಾರಾ? ಯಾರು ಈ ಬಾಬಾ ಬಾಲಕನಾಥ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 7 =
Remember me
