ಜೈಪುರ:ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರಿ ಸ್ಪರ್ಧೆ ಏರ್ಪಟ್ಟಿರುವ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಶನಿವಾರ ಮತದಾನ ನಡೆಯಲಿದೆ.
ರಾಜ್ಯದಲ್ಲಿ ಅಧಿಕಾರ ಉಳಿಸಿಕೊಂಡು ಮತ್ತೆ ಸರ್ಕಾರ ರಚಿಸುವುದು ಕಾಂಗ್ರೆಸ್ ಕನಸಾದರೆ, ಗೆಹ್ಲೋಟ್ ಆಡಳಿತವನ್ನು ಕಿತ್ತೊಗೆದು ಅಧಿಕಾರದ ಗದ್ದುಗೆ ಏರುವುದು ಬಿಜೆಪಿ ಗುರಿಯಾಗಿದೆ. ರಾಜ್ಯದಲ್ಲಿ ಪ್ರತಿ ಚುನಾವಣೆಯಲ್ಲಿ ಸರ್ಕಾರ ಬದಲಾವಣೆಯಾಗುವ ಪ್ರವೃತ್ತಿಯನ್ನು ಬದಲಾಯಿಸಿ ಅಧಿಕಾರವನ್ನು ಉಳಿಸಿಕೊಳ್ಳುವ ಹಂಬಲದಲ್ಲಿದೆ ಕಾಂಗ್ರೆಸ್ ಪಕ್ಷ. ಶನಿವಾರ ಬೆಳಗ್ಗೆ ಏಳು ಗಂಟೆಯಿಂದ ಸಂಜೆ ಆರು ಗಂಟೆವರೆಗೆ ನಡೆಯುವ ಮತದಾನದಲ್ಲಿ 199 ಕ್ಷೇತ್ರಗಳ ಅಭ್ಯರ್ಥಿಗಳ ಚುನಾವಣಾ ಭವಿಷ್ಯ ನಿರ್ಧಾರವಾಗಲಿದೆ. ರಾಜ್ಯದಲ್ಲಿ ಒಟ್ಟು 200 ಕ್ಷೇತ್ರಗಳಿದ್ದು, ಕರಣ್​ಪುರದ ಕಾಂಗ್ರೆಸ್ ಅಭ್ಯರ್ಥಿಯ ನಿಧನದಿಂದ ಅಲ್ಲಿನ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಪ್ರವೀಣ್ ಗುಪ್ತಾ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಸಹಿತ ಘಟಾನುಘಟಿ ಬಿಜೆಪಿ ಮುಖಂಡರು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಹಿತ ದಿಗ್ಗಜ ನಾಯಕರು ಪ್ರಚಾರ ನಡೆಸಿದ್ದಾರೆ.
ಕಣದಲ್ಲಿರುವ ಘಟಾನುಘಟಿಗಳು:ಸಿಎಂ ಅಶೋಕ್ ಗೆಹ್ಲೋಟ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಸಿಂಗ್ ದೋತಾಸ್ರ, ಅಸೆಂಬ್ಲಿ ಸ್ಪೀಕರ್ ಸಿ.ಪಿ. ಜೋಷಿ ಕಾಂಗ್ರೆಸ್ ಟಿಕೆಟ್​ನಿಂದ ಕಣದಲ್ಲಿರುವ ಕೆಲವು ಪ್ರಮುಖರು. ಅನೇಕ ಸಚಿವರೂ ಸ್ಪರ್ಧಿಸಿದ್ದಾರೆ. ಪ್ರತಿಪಕ್ಷ ನಾಯಕ ರಾಜೇಂದ್ರ ರಾಥೋಡ್, ಉಪ ನಾಯಕ ಸತೀಶ್ ಪೂನಿಯಾ, ಮಾಜಿ ಸಿಎಂ ವಸುಂಧರಾ ರಾಜೇ ಇನ್ನಿತರರು ಕಣದಲ್ಲಿದ್ದಾರೆ.
7 ಗ್ಯಾರಂಟಿಗಳ ಭರವಸೆ:ಹಲವಾರು ದಿನಗಳಿಂದ ನಡೆದ ಪ್ರಚಾರ ಅಭಿಯಾನದಲ್ಲಿ ಪಕ್ಷಗಳು ಆರೋಪ- ಪ್ರತ್ಯಾರೋಪ, ಆಶ್ವಾಸನೆಗಳ ಮಹಾಪೂರ ಹರಿಸಿವೆ. ಕಾಂಗ್ರೆಸ್ ಪಕ್ಷ ಮುಖ್ಯವಾಗಿ ಗೆಹ್ಲೋಟ್ ಸರ್ಕಾರದ ಸಾಧನೆಗಳನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದ್ದು ಅಧಿಕಾರಕ್ಕೆ ಮರಳಿದರೆ ಏಳು ಗ್ಯಾರಂಟಿಗಳನ್ನು ಪೂರೈಸುವ ವಾಗ್ದಾನವನ್ನೂ ಮಾಡಿದೆ. ಹಾಲಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಹುಮ್ಮಸ್ಸಿನಲ್ಲಿರುವ ಬಿಜೆಪಿ, ಅಶೋಕ್ ಗೆಹ್ಲೋಟ್ ಆಡಳಿತದಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯಗಳು, ಭ್ರಷ್ಟಾಚಾರ, ಓಲೈಕೆ ರಾಜಕಾರಣ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಮುಂತಾದ ವಿಷಯಗಳನ್ನು ಎತ್ತಿಕೊಂಡು ವಾಗ್ದಾಳಿ ನಡೆಸಿತ್ತು. ಬಿಜೆಪಿ ಎಲ್ಲ ಕ್ಷೇತ್ರಗಳಲ್ಲಿ ಹುರಿಯಾಳುಗಳನ್ನು ಇಳಿಸಿದ್ದು ಕಾಂಗ್ರೆಸ್ ಒಂದು ಸ್ಥಾನವನ್ನು ಮಿತ್ರ ಪಕ್ಷ ರಾಷ್ಟ್ರೀಯ ಲೋಕ ದಳಕ್ಕೆ ಬಿಟ್ಟು ಕೊಟ್ಟಿದೆ.
ತೆಲಂಗಾಣದಲ್ಲಿ ಡಿಕೆಶಿ ಪ್ರಚಾರ:ತೆಲಂಗಾಣದಲ್ಲಿ ಹತ್ತು ವರ್ಷ ಗಳಿಂದ ಕೆಸಿಆರ್ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೊದಲ ಸಚಿವ ಸಂಪುಟದಲ್ಲಿ 6 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ತೆಲಂಗಾಣದ ಸ್ಟೇಷನ್ ಘಣಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿದರು. ನಾವು ಕರ್ನಾಟಕದಲ್ಲಿ ಈಗಾಗಲೇ ಗ್ಯಾರಂಟಿ ಯೋಜನೆಗಳನ್ನು ಮೊದಲ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದೇವೆ. ತೆಲಂಗಾಣದಲ್ಲಿ ನಾವು ನೀಡಿರುವ 6 ಗ್ಯಾರಂಟಿ ಯೋಜನೆಗಳು ಈ ರಾಜ್ಯದ ಪ್ರತಿ ಕುಟುಂಬಕ್ಕೆ ಆರ್ಥಿಕ ಶಕ್ತಿ ನೀಡುತ್ತದೆ. ಎಲ್ಲಾ ವರ್ಗದ ಜನರಿಗೆ ನಮ್ಮ ಯೋಜನೆಗಳು ನೆರವಾಗಲಿದೆ. ಜನಸಾಮಾನ್ಯರು ನೆಮ್ಮದಿಯ ಜೀವನ ನಡೆಸಲು ನಮ್ಮ ಯೋಜನೆಗಳು ನೆರವಾಗಲಿವೆ. ಇದು ಕಾಂಗ್ರೆಸ್ ಪಕ್ಷದ ಬದ್ಧತೆ ಎಂದರು.
ಎಕ್ಸ್​ಪೈರಿ ಸಮೀಪದಲ್ಲಿ ಕೆಸಿಆರ್ ಸರ್ಕಾರ:ತೆಲಂಗಾಣದಲ್ಲಿ ಬಿಆರ್​ಎಸ್ ಸರ್ಕಾರದ ಮುಕ್ತಾಯ ದಿನಾಂಕ ಸಮೀಪಿಸುತ್ತಿದೆ. ರಾಜ್ಯದ ಯುವಕರು, ಮಹಿಳೆಯರು ಮತ್ತು ರೈತರಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಆರೋಪಿಸಿದ್ದಾರೆ. ಪಾಲಕುರ್ತಿಯಲ್ಲಿ ಚುನಾವಣಾ ರ‍್ಯಾಲಿ ನಡೆಸಿದ ಅವರು, ತೆಲಂಗಾಣದಲ್ಲಿ ಮಹಿಳೆಯರು ಹಿಂಸೆಗೆ ಒಳಗಾಗುತ್ತಿದ್ದಾರೆ. ಅವರ ಸುರಕ್ಷತೆಗೆ ರಾಜ್ಯ ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ತೆಲುಗು ಆರ್​ಆರ್​ಆರ್ ಚಿತ್ರದ ‘ನಾಟು ನಾಟು’ ಹಾಡನ್ನು ಉಲ್ಲೇಖಿಸಿದ ಅವರು ಬಿಜೆಪಿ, ಕಾಂಗ್ರೆಸ್, ಬಿಆರ್​ಎಸ್ ಒಟ್ಟಿಗೆ ನೃತ್ಯ ಮಾಡುತ್ತಿವೆ ಎಂದು ವ್ಯಂಗ್ಯ ಮಾಡಿದರು. ಕಾಂಗ್ರೆಸ್ ಪಕ್ಷವು ತೆಲಂಗಾಣ ಯುವಕರನ್ನು ಸಬಲೀಕರಣಗೊಳಿಸುವ ದೂರದೃಷ್ಟಿಯನ್ನು ಹೊಂದಿದೆ. ರಾಜ್ಯ ಸರ್ಕಾರವು ಭ್ರಷ್ಟಾಚಾರದಲ್ಲಿ ತೊಡಗಿದೆ. ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು. ಜನರಿಗೆ ಉದ್ಯೋಗ ಸಿಗುವುದಿಲ್ಲ. ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉದ್ಯೋಗ ಕ್ಯಾಲೆಂಡರ್ ಹೊರತರಲಿದೆ. ಎರಡು ಲಕ್ಷ ಉದ್ಯೋಗಗಳನ್ನು ನೀಡಲಿದೆ ಎಂದು ಭರವಸೆ ನೀಡಿದರು.
ಶತಕ ಖಚಿತ ಎಂದ ಕವಿತಾ:ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್​ಎಸ್ ಈ ಚುನಾವಣೆಯಲ್ಲಿ ಹ್ಯಾಟ್ರಿಕ್ ಸಾಧಿಸಲಿದೆ ಎಂದು ಪಕ್ಷದ ಹಿರಿಯ ನಾಯಕಿ, ಸಿಎಂ ಚಂದ್ರಶೇಖರ್ ರಾವ್ ಪುತ್ರಿ ಕೆ. ಕವಿತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 119 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಆರ್​ಎಸ್ 100 ಸ್ಥಾನಗಳ ಗಡಿ ದಾಟಲಿದೆ. ಕೆಲವೆಡೆ ಆಡಳಿತ ವಿರೋಧಿ ಇರಬಹುದು. ಆದರೆ ಜನರು ನಮ್ಮ ಪಕ್ಷದ ಬಗ್ಗೆ ಕೋಪ ಹೊಂದಿಲ್ಲ. ಬಿಆರ್​ಎಸ್​ಗೆ ಕಾಂಗ್ರೆಸ್ ಮತ್ತು ಬಿಜೆಪಿ ಸ್ಪರ್ಧೆ ನೀಡುವ ಸ್ಥಿತಿಯಲ್ಲಿ ಇಲ್ಲ ಎಂದಿದ್ದಾರೆ.
ಸಾವಿರಾರು ಕೋಟಿ ರೂಪಾಯಿ ಹಗರಣ:ಕೆಸಿಆರ್ ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರದಲ್ಲಿ ತೊಡಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತನಿಖೆ ನಡೆಸಿ ಭ್ರಷ್ಟಾಚಾರಿಗಳನ್ನು ಜೈಲಿಗೆ ತಳ್ಳುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ. ಮಿಯಾಪುರ್ ಭೂ ಹಗರಣ, ಕವಿತಾ ಜೀ ಅವರ ಮದ್ಯ ಹಗರಣ, ಔಟರ್ ರಿಂಗ್ ರೋಡ್ ಹಗರಣ ಸಹಿತ ಕೆಲವು ಪ್ರಕರಣಗಳನ್ನು ಅವರು ಪ್ರಸ್ತಾಪಿಸಿದರು. ಆಮೂರ್​ನಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ನೀಡಲಾಗಿರುವ ಶೇ.4 ಮೀಸಲಾತಿಯನ್ನು ರದ್ದುಪಡಿಸುತ್ತದೆ. ಒಬಿಸಿ ಮತ್ತು ಎಸ್​ಟಿಗಳಿಗೆ ಇದನ್ನು ಹಂಚಿಕೆ ಮಾಡಲಾಗುತ್ತದೆ. ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಉಚಿತ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ಭರವಸೆ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − twelve =
Remember me
