ನವದೆಹಲಿ:ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳು 3 ದಶಕದಿಂದ ಜೈಲಿನಲ್ಲಿ ಇದ್ದಾರೆ. ಸೆರೆವಾಸದ ವೇಳೆ ಎಲ್ಲ ಅಪರಾಧಿಗಳ ನಡವಳಿಕೆ ತೃಪ್ತಿಕರವಾಗಿದೆ. ಈ ಕಾರಣದಿಂದ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಬಿ.ವಿ.ನಾಗರತ್ನ ಅವರ ಪೀಠ ಅಭಿಪ್ರಾಯ ದಾಖಲಿಸಿದೆ.
ನಳಿನಿ, ರವಿಚಂದ್ರನ್ ಜೈಲಿನಲ್ಲಿದ್ದುಕೊಂಡೇ ಉನ್ನತ ವ್ಯಾಸಂಗ ಪೂರ್ಣಗೊಳಿಸಿರುವುದನ್ನು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಸಂಪೂರ್ಣ ನ್ಯಾಯ ಒದಗಿಸುವ ಸಲುವಾಗಿ ಸಂವಿಧಾನದ ಆರ್ಟಿಕಲ್ 142ರ ಅಡಿಯಲ್ಲಿ, ಸುಪ್ರೀಂಕೋರ್ಟ್ ಅಗತ್ಯ ಎನಿಸಿದ ಯಾವುದೇ ತೀರ್ಪು ಅಥವಾ ಆದೇಶ ನೀಡಬಹುದು. ಸೆಕ್ಷನ್ 302ರ ಅಡಿಯಲ್ಲಿ ಶಿಕ್ಷೆಗೊಳಪಟ್ಟಿರುವ ಅರ್ಜಿದಾರರ ಕ್ಷಮಾದಾನ ವಿಷಯದಲ್ಲಿ ರಾಜ್ಯಪಾಲರು ರಾಜ್ಯ ಸಚಿವ ಸಂಪುಟದ ಸಲಹೆಗೆ ಬದ್ಧರಾಗಿರುತ್ತಾರೆ. ಪ್ರಸ್ತುತ ಪ್ರಕರಣದಲ್ಲಿ ಎಲ್ಲಾ ಅರ್ಜಿದಾರರಿಗೂ ಕ್ಷಮಾದಾನ ನೀಡಬೇಕೆಂದು ಸಂಪುಟ ತೀರ್ವನಿಸಿತ್ತು. ಆದ್ದರಿಂದ, ಪೆರಾರಿವಾಲನ್ ಬಿಡುಗಡೆಗೆ ಆದೇಶ ನೀಡಿದಾಗ ನ್ಯಾಯಾಲಯ ಪರಿಗಣಿಸಿದ ಅಂಶಗಳು ಪ್ರಸ್ತುತ ಅರ್ಜಿದಾರರಿಗೆ ಸಮಾನವಾಗಿ ಅನ್ವಯಿಸುತ್ತವೆ. ಅಪರಾಧಿಗಳು ತಮ್ಮ ಅಪರಾಧಕ್ಕೆ ಸಂಬಂಧಿಸಿ ಶಿಕ್ಷೆಗಳನ್ನು ಅನುಭವಿಸಿದ್ದಾರೆ. ಹೀಗಾಗಿ, ಅವರನ್ನು ಬಿಡುಗಡೆ ಮಾಡಲು ಸೂಚಿಸಲಾಗಿದೆ ಎಂದು ತೀರ್ಪಿನಲ್ಲಿ ದಾಖಲಿಸಿದೆ. ಅಪರಾಧಿಗಳ ಪರ ಸಂಜಯ್ ಹೆಗಡೆ ಮತ್ತು ಶಂಕರನಾರಾಯಣ ವಾದಿಸಿದ್ದರೆ, ರಾಜ್ಯ ಸರ್ಕಾರವನ್ನು ಹಿರಿಯ ವಕೀಲ ರಾಕೇಶ್ ದ್ವಿವೇದಿ ಪ್ರತಿನಿಧಿಸಿದ್ದರು. ನಳಿನಿ ಮತ್ತು ರವಿಚಂದ್ರನ್ 2021ರ ಡಿ. 27ರಿಂದ ತಮಿಳುನಾಡು ಸಸ್ಪೆನ್ಷನ್ ಆಫ್ ಸೆಂಟೆನ್ಸ್ ರೂಲ್ಸ್, 1982ರ ಅಡಿಯಲ್ಲಿ ರಜೆ ಪೆರೋಲ್​ನಲ್ಲಿದ್ದಾರೆ. ನಳಿನಿ ವೆಲ್ಲೂರಿನ ಮಹಿಳಾ ವಿಶೇಷ ಕಾರಾಗೃಹದಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲ ಸೆರೆವಾಸದಲ್ಲಿದ್ದರೆ, ರವಿಚಂದ್ರನ್ 29 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.
ಅಪರಾಧಿಗಳ ವಿರುದ್ಧ ಆರೋಪ ಏನಿತ್ತು?
ನಳಿನಿ:ಚೆನ್ನೈನ ನರ್ಸ್ ಮತ್ತು ಪೊಲೀಸ್ ಅಧಿಕಾರಿಯ ಪುತ್ರಿಯಾಗಿದ್ದ ನಳಿನಿ, ರಾಜೀವ್ ಗಾಂಧಿ ಹತ್ಯೆಯಾದ ಶ್ರೀಪೆರಂಬದೂರಿನ ಹತ್ಯಾ ಸ್ಥಳದಲ್ಲಿದ್ದ ಏಕಮಾತ್ರ ಅಪರಾಧಿ. ರಾಜೀವ್ ಹತ್ಯೆ ಮಾಡಲೆಂದು ಸ್ಥಳಕ್ಕೆ ಬಂದಿದ್ದವರೊಂದಿಗೆ ನಳಿನಿಯಿದ್ದ ಫೋಟೋ ಬೆಳಕಿಗೆ ಬಂದಿದ್ದವು. ಬಂಧಿತ ನಳಿನಿಗೆ ಜನಿಸಿದ ಹೆಣ್ಣುಮಗವನ್ನು 5 ವರ್ಷ ಕಾಲ ಜೈಲಿನಲ್ಲಿ ಬೆಳೆಸಲಾಗಿತ್ತು.
ರವಿಚಂದ್ರನ್:1980ರ ದಶಕದಲ್ಲಿ ತಮಿಳು ಈಳಂ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ರವಿಚಂದ್ರನ್. ಈ ಸಶಸ್ತ್ರ ಬಂಡುಕೋರ ಪಡೆ ರಚನೆಯಾಗುವ ಮುನ್ನ ಲಿಬರೇಷನ್ ಆಫ್ ತಮಿಳು ಟೈಗರ್ಸ್ ಈಳಂ (ಎಲ್​ಟಿಟಿಇ) ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. 1980ರ ದಶಕದ ಮಧ್ಯಭಾಗದಲ್ಲಿ ಸಮುದ್ರ ಮಾರ್ಗವಾಗಿ ಶ್ರೀಲಂಕಾಕ್ಕೆ ಹಲವು ಬಾರಿ ಭೇಟಿ ನೀಡಿದ್ದ ಎಂದು ತನಿಖೆಯಲ್ಲಿ ಆರೋಪಿಸಲಾಗಿದೆ. ಆದರೆ, ರವಿಚಂದ್ರನ್ ವಿರುದ್ಧದ ಪಿತೂರಿ ಆರೋಪಗಳನ್ನು 1999ರಲ್ಲಿ ಸುಪ್ರೀಂಕೋರ್ಟ್ ಅಳಿಸಿಹಾಕಿತು. ಅವರ ಮೇಲಿದ್ದ ಟಾಡಾ ನಿಬಂಧನೆಗಳನ್ನು ಸಹ ರದ್ದುಮಾಡಿತು
ಶಾಂತನ್:ಶ್ರೀಲಂಕಾದ ಪ್ರಜೆಯಾದ ಶಾಂತನ್, 1991ರಲ್ಲಿ ಅಲ್ಲಿಂದ ಪಲಾಯನ ಮಾಡಿ ಭಾರತಕ್ಕೆ ಬಂದಿದ್ದ. ಹತ್ಯೆ ಮಾಸ್ಟರ್ ಮೈಂಡ್ ಶಿವರಸನ್ ಮತ್ತು ಕೆಲವರೊಂದಿಗೆ ದೋಣಿ ಮೂಲಕ ಭಾರತ ತಲುಪಿದ್ದ ಎಂದು ಹೇಳಲಾಗಿದೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಹತ್ಯೆಯಲ್ಲಿ ಶಾಂತನ್ ನೇರ ಭಾಗಿಯಾಗಿದ್ದಾನೆ.
ಮುರುಗನ್:ವಿದೇಶಕ್ಕೆ ಹೋಗಲು ಬಯಸಿ ಲಂಕಾದಿಂದ ಪಲಾಯನ ಮಾಡಿ ಮುರುಗನ್ ಬಂದಿದ್ದ. ನಳಿನಿ ಸೋದರನ ಗೆಳೆಯನಾದ ಮುರುಗನ್, ಸ್ವಲ್ಪ ಸಮಯ ಅವರ ಮನೆಯಲ್ಲಿಯೇ ನೆಲೆಸಿದ್ದ. ನಳಿನಿ-ಶಿವರಸನ್ ಮೊದಲ ಭೇಟಿಯಾಗಿದ್ದು ಮುರುಗನ್ ಮೂಲಕ.
ರಾಬರ್ಟ್ ಪಯಾಸ್:ಶ್ರೀಲಂಕಾದ ಪ್ರಜೆ ರಾಬರ್ಟ್ ಪಯಾಸ್ 1990ರ ಸೆಪ್ಟೆಂಬರ್​ನಲ್ಲಿ ಹೆಂಡತಿ ಮತ್ತು ಸಹೋದರಿಯರೊಂದಿಗೆ ಭಾರತಕ್ಕೆ ಬಂದಿದ್ದ. ಉಗ್ರಗಾಮಿ ಗುಂಪು ಎಲ್​ಟಿಟಿಇ ಜತೆ ಸಂಪರ್ಕದಲ್ಲಿದ್ದ. ಶಿವರಸನ್ ಜತೆಗಿನ ನಿಕಟ ಸಂಬಂಧದ ಆರೋಪವೂ ಪಯಾಸ್ ಮೇಲಿತ್ತು. ಹತ್ಯೆ ಪಿತೂರಿಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದ. ]ೕಲಂಕಾದಲ್ಲಿ ಭಾರತೀಯ ಶಾಂತಿ ಪಾಲನಾ ಪಡೆ (ಐಪಿಕೆಎಫ್)ಯಿಂದ ದೌರ್ಜನ್ಯಕ್ಕೆ ಒಳಗಾಗಿದ್ದ.
ಜಯಕುಮಾರ್:ಈತ ರಾಬರ್ಟ್ ಪಯಾಸ್​ನ ಸೋದರ ಸಂಬಂಧಿ. ಪಯಾಸ್ ಜತೆ ಭಾರತಕ್ಕೆ ಬಂದಿದ್ದ. ಶಿವರಸನನ್ ಜತೆಗಿನ ನಿಕಟ ಸಂಬಂಧ ಉಲ್ಲೇಖಿಸಿ ಪ್ರಾಸಿಕ್ಯೂಷನ್ ಈತ ರಾಜೀವ್ ಹತ್ಯೆಯಲ್ಲಿ ಪ್ರಮುಖವಾಗಿ ಭಾಗಿಯಾಗಿದ್ದಾನೆ ಎಂದು ಆರೋಪಿಸಿತ್ತು. ಐಪಿಕೆಎಫ್​ನಿಂದ ಜಯಕುಮಾರ್ ಕೂಡ ದೌರ್ಜನ್ಯಕ್ಕೊಳಗಾಗಿದ್ದ ಎನ್ನಲಾಗಿದೆ.
ಪೆರಾರಿವಾಲನ್:1991ರ ಜೂನ್​ನಲ್ಲಿ ಬಂಧನಕ್ಕೊಳಗಾದಾಗ ಪೆರಾರಿವಾಲನ್​ಗೆ 19 ವರ್ಷ. ಶಿವರಸನ್​ಗೆ ಎರಡು ಬ್ಯಾಟರಿ ಸೆಲ್​ಗಳನ್ನು ಖರೀದಿಸಿದ ಆರೋಪ ಈತನ ಮೇಲಿತ್ತು. ಮೇ 7, 1991ರಲ್ಲಿ ]ೕಲಂಕಾದಲ್ಲಿರುವ ಎಲ್​ಟಿಟಿಇ ನಾಯಕ ಪೊಟ್ಟು ಅಮ್ಮನ್​ಗೆ ಶಿವರಸನ್ ಕಳುಹಿಸಿದ್ದ ರೇಡಿಯೊ ಸಂದೇಶ ಡಿಕೋಡ್ ಮಾಡಲಾಗಿತ್ತು. ಅದರಲ್ಲಿ ನಮ್ಮ ಉದ್ದೇಶದ ಬಗ್ಗೆ ನಾವು ಮೂವರನ್ನು ಹೊರತುಪಡಿಸಿ ಯಾರಿಗೂ ತಿಳಿದಿಲ್ಲ ಎಂದಿದ್ದ.
ಕೇಂದ್ರ ಏನು ಹೇಳಿತ್ತು?
ರಾಜೀವ್ ಹಂತಕರ ಬಿಡುಗಡೆ ಕುರಿತು ತಮಿಳುನಾಡು ರಾಜ್ಯಪಾಲರು ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರು ಎಂದು ಜನವರಿ 22ರಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ತಿಳಿಸಿತ್ತು. ನಂತರ, ಜನವರಿ 25ರಂದು, ರಾಜ್ಯಪಾಲರ ಕಚೇರಿಯು ಎಲ್ಲಾ ಅಪರಾಧಿಗಳ ಕ್ಷಮಾದಾನದ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವನ್ನು ರಾಷ್ಟ್ರಪತಿ ರಾಮನಾಥ ಕೋವಿಂದಗೆ ಬಿಟ್ಟಿತ್ತು. ನಂತರ, ರಾಷ್ಟ್ರಪತಿ ಭವನ ಸ್ವೀಕರಿಸಿರುವ ಪ್ರಸ್ತಾವನೆಯನ್ನು ಕಾನೂನಿನ ಪ್ರಕಾರ ಪ್ರಕ್ರಿಯೆಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು.
ಹಿಂದೆ ಆರ್ಟಿಕಲ್ 142 ಪ್ರಯೋಗ
ವಿಶೇಷ ಸಂದರ್ಭಗಳಲ್ಲಿ ಸುಪ್ರೀಂಕೋರ್ಟ್ ಸಂವಿಧಾನದ ಪರಿಚ್ಛೇದ 142 ಅನ್ನು ಪ್ರಯೋಗಿಸಿದ್ದುಂಟು. ಹಿಂದೊಮ್ಮೆ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಸರ್ಕಾರ ಲೋಕಾಯುಕ್ತ ನೇಮಕಕ್ಕೆ ಹಿಂದೇಟು ಹಾಕಿದ್ದಕ್ಕೆ ಕೆಂಡಕಾರಿದ್ದ ಸುಪ್ರೀಂಕೋರ್ಟ್ ಈ ವಿಶೇಷಾಧಿಕಾರ ಬಳಸಿ ಲೋಕಾಯುಕ್ತರನ್ನು ನೇಮಕ ಮಾಡಿತ್ತು. ಅದೇ ರೀತಿ, ರಾಮಜನ್ಮಭೂಮಿ-ಬಾಬರಿ ಮಸೀದಿ ಭೂವಿವಾದ ಪ್ರಕರಣದಲ್ಲೂ ಈ ಅಧಿಕಾರ ಬಳಸಲಾಗಿದೆ.
ಪೀಠ ಹೇಳಿದ್ದು…
ನಳಿನಿ 30 ವರ್ಷಗಳಿಂದಲೂ ಹೆಚ್ಚು ಅವಧಿಗೆ ಜೈಲಿನಲ್ಲಿದ್ದಾರೆ. ಆಕೆಯ ನಡವಳಿಕೆ ತೃಪ್ತಿಕರವಾಗಿದ್ದು, ಸೆರೆವಾಸದಲ್ಲಿದ್ದಾಗ ಕಂಪ್ಯೂಟರ್ ಅಪ್ಲಿಕೇಷನ್​ನಲ್ಲಿ ಪಿಜಿ ಡಿಪ್ಲೊಮಾ ಪದವಿ ಪೂರ್ಣಗೊಳಿಸಿದ್ದಾರೆ. ಶ್ರೀಹರನ್ ವಿವಿಧ ಅಧ್ಯಯನದಲ್ಲಿ ತೊಡಗಿಸಿದ್ದರು. ರವಿಚಂದ್ರನ್ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಜೈಲಿನಲ್ಲಿದ್ದುಕೊಂಡೇ ಉನ್ನತ ವ್ಯಾಸಂಗ ಕೂಡ ಮಾಡಿದ್ದಾರೆ. ಸುತೆಂತಿಲ್ ರಾಜಾ ವಿವಿಧ ಆರೋಗ್ಯ ಬಾಧೆಗಳಿಂದ ನರಳುತ್ತಿದ್ದಾರೆ. ಅವರು ಬರೆದ ವಿವಿಧ ಲೇಖನಗಳು ಪ್ರಕಟಗೊಂಡಿರುವುದಲ್ಲದೆ, ಪ್ರಶಸ್ತಿಗಳಿಗೂ ಭಾಜನವಾಗಿವೆ. ಜಯಕುಮಾರ್ ಅಧ್ಯಯನದಲ್ಲಿ ಅಪಾರ ಆಸಕ್ತಿ ಹೊಂದಿರುವ ಕೈದಿ. ರಾಬರ್ಟ್ ಪಯಾಸ್ ವಿವಿಧ ಪದವಿ ಪಡೆದಿರುವುದು ಗಮನಾರ್ಹ. ಹಲವು ರೀತಿಯ ಅನಾರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ.
ಸೋನಿಯಾ ನಿಲುವಿಗೆ ಕಾಂಗ್ರೆಸ್ ವಿರೋಧ!
ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆಗೊಳಿಸುವ ಸುಪ್ರೀಂಕೋರ್ಟ್ ತೀರ್ಪಿಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಷಯದಲ್ಲಿ ಸೋನಿಯಾ ಗಾಂಧಿ ನಿಲುವನ್ನೂ ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಹಿರಿಯ ನಾಯಕ ಅಭಿಷೇಕ್ ಮನುಸಿಂಘಿ ಹೇಳಿದ್ದಾರೆ. ಹಂತಕರಲ್ಲಿ ಒಬ್ಬಳಾಗಿದ್ದ ನಳಿನಿಗೆ ಕ್ಷಮಾದಾನ ನೀಡಿದರೆ ನಮ್ಮ ಕುಟುಂಬದ ಅಭ್ಯಂತರ ಇಲ್ಲ ಎಂದು ಹಿಂದೆ ಸೋನಿಯಾ ಗಾಂಧಿ 2009ರಲ್ಲಿ ಹೇಳಿದ್ದರು. ಆದರೆ, ಇದನ್ನು ಪಕ್ಷವಾಗಿ ನಾವು ಒಪ್ಪುವುದಿಲ್ಲ ಎಂದಿರುವ ಸಿಂಘಿ, ಸೋನಿಯಾರು ತಮ್ಮ ವೈಯಕ್ತಿಕ ಅನಿಸಿಕೆ ನೀಡಬಹುದು. ಆದರೆ, ನಾವದನ್ನು ಗೌರವಾದರಗಳಿಂದಲೇ ವಿರೋಧಿಸುತ್ತೇವೆ. ನಮ್ಮ ಪ್ರಕಾರ, ಸಾರ್ವಭೌಮತ್ವ, ಸಮಗ್ರತೆ ಹಾಗೂ ರಾಷ್ಟ್ರದ ಗುರುತಾಗಿದ್ದ ಪ್ರಧಾನ ಮಂತ್ರಿಯವರ ಹತ್ಯೆ ಪ್ರಕರಣವಿದು. ಬಹುಶಃ ಕೇಂದ್ರ ಸರ್ಕಾರ ಕೂಡ ಇದೇ ಕಾರಣಕ್ಕಾಗಿ ರಾಜ್ಯ ಸರ್ಕಾರದ ಅಭಿಪ್ರಾಯಗಳನ್ನು ಒಪ್ಪಿಕೊಳ್ಳಲಿಲ್ಲ ಎಂದಿದ್ದಾರೆ. ಮತ್ತೋರ್ವ ನಾಯಕ ಜೈರಾಮ್ ರಮೇಶ್ ಕೂಡ ನ್ಯಾಯಾಲಯದ ತೀರ್ವನಕ್ಕೆ ಅಸಮಾಧಾನ ಹೊರಹಾಕಿದ್ದು, ಈ ನಿರ್ಧಾರ ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ. ಭಾರತದ ಆತ್ಮಸಾಕ್ಷಿಗೆ ವಿರುದ್ಧವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿರುವುದು ದುರದೃಷ್ಟಕರ ಎಂದು ಟೀಕಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
