ನವದೆಹಲಿ:ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ ರಾಜ್ಯಸಭೆ ಚುನಾವಣೆಯಲ್ಲಿ ನಿರೀಕ್ಷೆಯಂತೆ 41 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದರೆ, ಉಳಿದ 16 ಸೀಟುಗಳಿಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಫಲಿತಾಂಶ ಪ್ರಕಟಗೊಂಡಿದ್ದರೂ, ಮಹಾರಾಷ್ಟ್ರದ 6 ಮತ್ತು ಹರಿಯಾಣದ 2 ಸೀಟುಗಳ ಫಲಿತಾಂಶ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಹೊರಬಿದ್ದಿಲ್ಲ. ರಾಜಸ್ಥಾನದಲ್ಲಿ ಕಾಂಗ್ರೆಸ್ 3 ಸೀಟು ಗೆದ್ದು ಬೀಗಿದ್ದರೆ, ಕರ್ನಾಟಕದಲ್ಲಿ 3 ಸೀಟುಗಳನ್ನು ಗೆಲ್ಲುವ ಮೂಲಕ ಬಿಜೆಪಿ ನಗೆಬೀರಿದೆ. ಸದ್ಯ ರಾಜ್ಯಸಭೆಯಲ್ಲಿ ಎನ್​ಡಿಎ 106 ಸದಸ್ಯರನ್ನು ಹೊಂದಿದ್ದರೆ ಯುಪಿಎಯ 55 ಮತ್ತು ಪ್ರಾದೇಶಿಕ ಪಕ್ಷಗಳ 63 ಮತ್ತು ನಾಮನಿರ್ದೇಶಿತ 13 ಸದಸ್ಯರಿದ್ದಾರೆ. ಮಹಾರಾಷ್ಟ್ರ ಮತ್ತು ಹರಿಯಾಣ ಫಲಿತಾಂಶ ಪ್ರಕಟಗೊಂಡ ಬಳಿಕ ಈ ಸಂಖ್ಯೆಯಲ್ಲಿ ಸಣ್ಣಪುಟ್ಟ ಬದಲಾವಣೆಗಳಾಗಬಹುದು. ಮಹಾರಾಷ್ಟ್ರದಲ್ಲಿ ಮೈತ್ರಿಕೂಟ ಸರ್ಕಾರ 3, ಬಿಜೆಪಿಗೆ 2 ಸೀಟುಗಳು ಬಹುತೇಕ ಖಚಿತವಾಗಿದ್ದು, 6ನೇ ಅಭ್ಯರ್ಥಿ ಆಯ್ಕೆಯೇ ಭಾರಿ ಕುತೂಹಲಕ್ಕೆಡೆ ಮಾಡಿದೆ. ಪಕ್ಷೇತರರು ಹಾಗೂ ಸಣ್ಣಪುಟ್ಟ ಪಕ್ಷಗಳ ಶಾಸಕರು ಯಾರಿಗೆ ಮತಹಾಕಿದ್ದಾರೆ ಎನ್ನುವುದೂ ಇನ್ನೂ ನಿಗೂಢ.
ನಾಲ್ಕು ಸೀಟುಗಳಿಗೆ ನಡೆದ ಚುನಾವಣೆಯಲ್ಲಿ ಮೂರನ್ನು ಗೆದ್ದುಕೊಂಡ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ನಾವು ಮೂರು ಸೀಟು ಗೆಲ್ಲುವುದು ಮೊದಲೇ ಸ್ಪಷ್ಟವಾಗಿತ್ತು. ಆದರೆ ಬಿಜೆಪಿ ಸ್ವತಂತ್ರ ಅಭ್ಯರ್ಥಿಯನ್ನು (ಸುಭಾಷ್ ಚಂದ್ರ) ಕಣಕ್ಕಿಳಿಸುವ ಮೂಲಕ ಕುದುರೆ ವ್ಯಾಪಾರಕ್ಕೆ ಯತ್ನಿಸಿತು. ಈ ಪ್ರಯತ್ನಕ್ಕೆ ನಮ್ಮ ಶಾಸಕರ ಒಗ್ಗಟ್ಟಿನ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಬಿಜೆಪಿಗೆ 2023ರ ಚುನಾವಣೆಯಲ್ಲೂ ಇದೇ ರೀತಿಯ ಸೋಲಾಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ರಾಜಸ್ಥಾನದಿಂದ ರಾಜ್ಯಸಭೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ನಾಯಕರಾದ ಮುಕುಲ್ ವಾಸ್ನಿಕ್, ರಣದೀಪ್ ಸಿಂಗ್ ಸುರ್ಜೆವಾಲಾ ಮತ್ತು ಪ್ರಮೋದ್ ತಿವಾರಿ ಚುನಾವಣೆ ಗೆದ್ದಿದ್ದಾರೆ. ಸುರ್ಜೆವಾಲ ಮತ್ತು ವಾಸ್ನಿಕ್​ಗೆ ನಿರೀಕ್ಷೆಗಿಂತ ಹೆಚ್ಚಿನ ಮತಗಳು ಬಿದ್ದಿವೆ. ಬಿಜೆಪಿ ಅಭ್ಯರ್ಥಿ ಘನಶ್ಯಾಮ ತಿವಾರಿಗೂ ಹೆಚ್ಚಿನ ಮತಗಳು ಸಿಕ್ಕಿವೆ. ಆದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ, ಮಾಧ್ಯಮ ಉದ್ಯಮಿ ಸುಭಾಷ್ ಚಂದ್ರರಿಗೆ ನಿರೀಕ್ಷಿಸಿದಷ್ಟು ಮತಗಳು ಬೀಳದ ಕಾರಣ ಸೋಲೊಪ್ಪಿಕೊಳ್ಳುವುದು ಅನಿವಾರ್ಯವಾಯಿತು. ರಾಜ್ಯದ ಎಲ್ಲಾ 200 ಶಾಸಕರು ಮತದಾನ ಮಾಡಿದ್ದರು. ಬಿಜೆಪಿ ಶಾಸಕರೊಬ್ಬರು ಅಡ್ಡಮತದಾನ ಮಾಡಿದ್ದಾರೆಂದು ತಿಳಿದುಬಂದಿದೆ.
ಮಹಾರಾಷ್ಟ್ರದಲ್ಲಿ ಆರು ಸ್ಥಾನಗಳಿಗೆ ಚುನಾವಣೆ ನಡೆದಿದ್ದು 285 ಶಾಸಕರು ಮತದಾನ ಮಾಡಿದ್ದಾರೆ. ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಮಾಜಿ ಸಚಿವ ಅನಿಲ್ ಬೋಂಡೆ ಮತ್ತು ಮಾಜಿ ಸಂಸದ ಧನಂಜಯ್ ಮಹಾದಿಕ್ ಬಿಜೆಪಿ ಅಭ್ಯರ್ಥಿಗಳಾಗಿದ್ದಾರೆ. ಶಿವಸೇನೆಯಿಂದ ಸಂಜಯ್ ರಾವತ್, ಸಂಜಯ್ ಪವಾರ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಎನ್​ಸಿಪಿ ಪ್ರಫುಲ್ ಪಟೇಲ್ ರನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ ಇಮ್ರಾನ್ ಪ್ರತಾಪ್​ಗಢಿಯವರನ್ನು ಅಭ್ಯರ್ಥಿಯನ್ನಾಗಿ ಮಾಡಿತ್ತು. ಮೈತ್ರಿಕೂಟ ಸರ್ಕಾರ ಮತ್ತು ಬಿಜೆಪಿ ಪಕ್ಷಗಳು ತೆಗೆದ ಆಕ್ಷೇಪಣೆಗಳನ್ನು ಮತಗಳಿಗೆ ಆಕ್ಷೇಪಣೆಗಳಿದ್ದವು. ಪ್ರತಿ ಅಭ್ಯರ್ಥಿ ಗೆಲ್ಲಲು 41 ಮತಗಳನ್ನು ಗಳಿಸಬೇಕು. ಪ್ರಸ್ತುತ ಜೈಲಿನಲ್ಲಿರುವ ಎನ್​ಸಿಪಿ ನಾಯಕ ನವಾಬ್ ಮಲಿಕ್ ಮತ್ತು ಮಾಜಿ ಸಚಿವ ಅನಿಲ್ ದೇಶಮುಖ್​ಗೆ ಮತ ಚಲಾಯಿಸಲು ಜಾಮೀನು ನೀಡಬೇಕೆಂಬ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿರಲಿಲ್ಲ. ಏತನ್ಮಧ್ಯೆ, ರಾಜಕೀಯವಾಗಿ ಕಾಂಗ್ರೆಸ್ ವಿರೋಧಿ ರಾಜಕಾರಣ ಮಾಡುತ್ತಾ ಬಂದಿದ್ದರೂ, ಸಂಸದ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷದ ಶಾಸಕರು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಹಾಕಿದ್ದಾರೆ. ಮೈತ್ರಿಕೂಟ ಸರ್ಕಾರದ ಮೂವರು ಶಾಸಕರ ಮತಗಳನ್ನು ಅನೂರ್ಜಿತಗೊಳಿಸಬೇಕು ಎಂದು ಬಿಜೆಪಿ ನಾಯಕರು ಸಲ್ಲಿಸಿದ್ದ ಮನವಿಯನ್ನು ಚುನಾವಣಾ ಆಯೋಗ ವಜಾಗೊಳಿಸಿತು.
ಮತದಾನ ಮಾಡದ ಪಕ್ಷೇತರ:ಹರಿಯಾಣದಲ್ಲಿ 90 ಶಾಸಕರ ಪೈಕಿ 89 ಮಂದಿ ಮತ ಚಲಾಯಿಸಿದ್ದಾರೆ. ಪಕ್ಷೇತರ ಶಾಸಕ ಬಾಲರಾಜ್ ಕುಂದು ಮತದಾನ ಮಾಡಲಿಲ್ಲ. ಅವರ ಮನವೊಲಿಸಲು ಬಿಜೆಪಿ ನಾಯಕರ ಯತ್ನ ವಿಫಲವಾಯಿತು. ಬಿಜೆಪಿ ಮಾಜಿ ಸಚಿವ ಕೃಷ್ಣಲಾಲ್ ಪನ್ವಾರ್ ಅವರನ್ನು ಕಣಕ್ಕಿಳಿಸಿತ್ತು. ಕಾಂಗ್ರೆಸ್​ನಿಂದ ಮಾಜಿ ಸಚಿವ ಅಜಯ್ ಮಾಕನ್ ಅಭ್ಯರ್ಥಿಯಾಗಿದ್ದಾರೆ. ಮಾಧ್ಯಮ ಉದ್ಯಮಿ ಕಾರ್ತಿಕೇಯ ಶರ್ಮಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ದ್ದರು. ಹಲವು ವಿಷಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ದನಿಯೆತ್ತಿದ್ದ ಕುಂದು, ನಾನು ಆತ್ಮಸಾಕ್ಷಿಗೆ ಪೂರಕವಾಗಿ ಮತದಾನ ಮಾಡದಿರಲು ನಿರ್ಧರಿಸಿದ್ದೇನೆ. ಬಿಜೆಪಿ-ಜೆಜೆಪಿ ಸರ್ಕಾರದಲ್ಲಿ ಹಲವು ಹಗರಣಗಳು ನಡೆದಿದೆ. ಕಾಂಗ್ರೆಸ್ ಹೊರಗಿನವರನ್ನು ಕಣಕ್ಕಿಳಿಸುವ ಮೂಲಕ ಹರಿಯಾಣದ ಜನರನ್ನು ಅವಮಾನಿಸಿದೆ. ಆದ್ದರಿಂದ, ಮತ ಚಲಾಯಿಸದಿರಲು ತೀರ್ವನಿಸಿದ್ದೇನೆ ಎಂದು ಹೇಳಿದ್ದಾರೆ.
41 ಮಂದಿ ಅವಿರೋಧ ಆಯ್ಕೆ:57ರಲ್ಲಿ 41 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, 17 ಮಂದಿ ಎನ್​ಡಿಎ ಮೈತ್ರಿಕೂಟದ ಸದಸ್ಯರಾಗಿ ರಾಜ್ಯಸಭೆ ಸೇರಲಿದ್ದಾರೆ. ಯುಪಿಎ ಮೈತ್ರಿಕೂಟದಿಂದ 10 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರೆ, ಪ್ರಾದೇಶಿಕ ಪಕ್ಷಗಳಿಂದ 14 ಮಂದಿ ರಾಜ್ಯಸಭೆ ಪ್ರವೇಶಿಸಲಿದ್ದಾರೆ. 41 ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡುವ ಬಗ್ಗೆ ಪಕ್ಷಗಳಲ್ಲಿ ಸಮ್ಮತಿ ಇದ್ದುದರಿಂದ ಉಳಿದ ಸೀಟುಗಳಿಗೆ ನಡೆದ ಚುನಾವಣೆ ಭಾರೀ ಕುತೂಹಲ ಕೆರಳಿಸಿತ್ತು. ಉತ್ತರ ಪ್ರದೇಶದಿಂದ ಅತಿ ಹೆಚ್ಚು (11) ಮಂದಿ ರಾಜ್ಯಸಭೆ ಪ್ರವೇಶಿಸಲಿದ್ದಾರೆ.
ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸಂತಸದ ಸಂಗತಿ; ಟೆಲಿಗ್ರಾಂ ಆ್ಯಪ್​ಗೆ ಪೈಪೋಟಿಯಂತೆ ಮತ್ತೊಂದು ಅಪ್​ಡೇಟ್​..

ರಾಜ್ಯಾದ್ಯಂತ ಮಾಸ್ಕ್ ಕಡ್ಡಾಯ; ಕೋವಿಡ್​ ಹೆಚ್ಚಳ ಹಿನ್ನೆಲೆಯಲ್ಲಿ ಸರ್ಕಾರದಿಂದ ಮತ್ತೆ ಆದೇಶ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
