—ದೇಶದ ಸಂಸ್ಕೃತಿಯ ಪ್ರತೀಕವಾದ ಶ್ರೀರಾಮಚಂದ್ರನ ಜನ್ಮಸ್ಥಳದಲ್ಲೆ ಮಂದಿರವಾಗಬೇಕೆಂದು ನಡೆದ ಹೋರಾಟದಲ್ಲಿ ಕರ್ನಾಟಕ ಮುಂಚೂಣಿಯಲ್ಲಿತ್ತು. ರಾಷ್ಟ್ರೀಯ ಚಿಂತನೆಯ ಅಲೆ ಅದಾಗಲೇ ದಶಕಗಳಿಂದ ಬೇರೂರಿದ್ದ ಕರುನಾಡಿನಿಂದ ಎರಡೂ ಕರಸೇವೆಗೆ ಸಾವಿರಾರು ರಾಮಭಕ್ತರು ಹೋಗಿದ್ದರ ಜತೆಗೆ ಕರ್ನಾಟಕದಲ್ಲಿದ್ದುಕೊಂಡೇ ಭೂಗತವಾಗಿ ಬೆಂಬಲಕ್ಕೆ ನಿಂತವರ ಸಂಖ್ಯೆ ಸಹಸ್ರಾರು.
ನೂರಾರು ವರ್ಷದಿಂದ ನಡೆದುಕೊಂಡು ಬಂದಿದ್ದ ಅಯೋಧ್ಯೆ ಹೋರಾಟ ನಿರ್ಣಾಯಕ ಘಟ್ಟಕ್ಕೆ ಮುಟ್ಟಲಾರಂಭಿಸಿದ್ದು 1988-89ರ ಸಂದರ್ಭದಲ್ಲಿ ದೇಶಾದ್ಯಂತ ನಡೆದ ರಾಮಶಿಲಾಪೂಜೆಯ ಮೂಲಕ. ಕರ್ನಾಟಕದಲ್ಲಿ 10,500 ಗ್ರಾಮಗಳಲ್ಲಿ ರಾಮಮಂದಿರಕ್ಕಾಗಿ ಇಟ್ಟಿಗೆಗಳನ್ನು ಪೂಜೆ ಮಾಡಲಾಯಿತು. ಅವನ್ನು 8 ರಥಗಳಲ್ಲಿ ಇರಿಸಿಕೊಂಡು ಕರ್ನಾಟಕದ ಅಷ್ಟದಿಕ್ಕುಗಳಲ್ಲೂ ಹಳ್ಳಿಹಳ್ಳಿಗೆ ತೆರಳಿ ಜನರಿಂದ ಪೂಜೆಗೊಳಪಟ್ಟಿತು. ಬೇಲಿಮಠ, ಪೇಜಾವರ ಮಠ ಸೇರಿ ಕರ್ನಾಟಕದ ನೂರಾರು ಮಠ ಮಾನ್ಯಗಳು ಮುನ್ನೆಲೆಯಲ್ಲಿ ನಿಂತು ರಥಯಾತ್ರೆಗಳನ್ನು ಸಫಲಗೊಳಿಸಿದವು. 1989ರಲ್ಲಿ ಎಲ್ಲ ಎಂಟು ರಥಗಳೂ ಒಂದಾಗಿದ್ದು ರಾಜ್ಯದ ಭೂಪಟದ ಕಿರೀಟಪ್ರಾಯವಾಗಿರುವ ಬೀದರ್​ನಲ್ಲಿ. ವಿಶ್ವ ಹಿಂದು ಪರಿಷತ್ ನಾಯಕರಾದ ಅಶೋಕ್ ಸಿಂಘಾಲ್ ಉಪಸ್ಥಿತಿಯಲ್ಲಿ ಬೃಹತ್ ರ್ಯಾಲಿಯೊಂದು ಆಯೋಜನೆಯಾಯಿತು. ವಿಹಿಂಪದ ಅಖಿಲ ಭಾರತ ಸಹ ಪ್ರಧಾನ ಕಾರ್ಯದರ್ಶಿಯಾಗಿದ್ದ ಸದಾನಂದ ಕಾಕಡೆ, ದಕ್ಷಿಣ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದ ಬಾಬೂರಾವ್ ದೇಸಾಯಿ, ಕರ್ನಾಟಕದ ಪ್ರಮುಖರಾಗಿದ್ದ ಏರ್ಯ ಲಕ್ಷೀನಾರಾಯಣ ಆಳ್ವರ ಸಂಘಟನಾ ಕೌಶಲಗಳು ಈ ಸಮಯದಲ್ಲಿ ವ್ಯಕ್ತವಾದವು. ಅಯೋಧ್ಯೆಯೆಡೆಗೆ ತೆರಳಿದ ರಥಗಳನ್ನು ಬೀದರ್​ನಲ್ಲಿ ಬೀಳ್ಕೊಡಲಾಯಿತು.
ಕರ್ನಾಟಕದ ಕೊಡುಗೆ
ಕರಸೇವೆಯಲ್ಲಿ ಸಕ್ರಿಯ ಸಹಭಾಗಿತ್ವ :ದೇಶಾದ್ಯಂತ ಭಾವಜಾಗೃತಿ ಮಾಡಿದ ನಂತರ ಆಗಬೇಕಿದ್ದು ಕರಸೇವೆ. ಕರಸೇವೆಗೆ ಜನರನ್ನು ಒಗ್ಗೂಡಿಸುವ ಸಲುವಾಗಿ 1990ರಲ್ಲಿ ರಾಮಜ್ಯೋತಿ ಯಾತ್ರೆಗಳನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಯಿತು. ಆ ಸಮಯದಲ್ಲಿ ಕರ್ನಾಟಕದಲ್ಲಿ ಬಂಗಾರಪ್ಪ ನೇತೃತ್ವದ ಸರ್ಕಾರವಿತ್ತು. 15 ರಥಗಳನ್ನು ಜಿಲ್ಲಾಮಟ್ಟಕ್ಕೆ ಕೊಂಡೊಯ್ಯುವ ಯೋಜನೆಯಾಗಿತ್ತಾದರೂ ಸರ್ಕಾರ ಅನುಮತಿ ನಿರಾಕರಿಸಿತು. ರಥಯಾತ್ರೆಗೆ ನಿಷೇಧ ಹೇರಿತು. ತಮ್ಮ ಧಾರ್ವಿುಕ ಹಕ್ಕನ್ನು ಸರ್ಕಾರ ಕಸಿದುಕೊಂಡಿದೆ ಎನ್ನುತ್ತ ಜನರು ಬೀದಿಗಿಳಿದು ಪ್ರತಿಭಟನೆ, ಗಲಾಟೆಗಳು ನಡೆದವು. ದಾವಣಗೆರೆಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ 15 ದಿನ ಕರ್ಫ್ಯೂ ವಿಧಿಸಲಾಗಿತ್ತು ಎಂದು ಸ್ಮರಿಸುತ್ತಾರೆ ವಿಶ್ವ ಹಿಂದು ಪರಿಷತ್ ಮುಖಂಡ ಕೇಶವ ಹೆಗಡೆ. ರಾಮನಗರ ಸೇರಿ ಅನೇಕ ಕಡೆಗಳಲ್ಲೂ ಗಲಾಟೆಗಳಾದವು, ನೂರಾರು ಜನರ ವಿರುದ್ಧ ಸರ್ಕಾರ ಪ್ರಕರಣ ದಾಖಲಿಸಿತು. ಸಂಘಟನೆಯ ವಲಯದಲ್ಲಿ ಅವು ‘ರಾಮಜ್ಯೋತಿ ಕೇಸ್​ಗಳು’ ಎಂದೇ ಪರಿಚಿತ.
1990ರ ಅ.30ರಂದು ನಡೆದ ಮೊದಲ ಕರಸೇವೆಗೆ ಕರ್ನಾಟಕದಿಂದ 3 ಸಾವಿರ ಜನರು ತಂಡಗಳಲ್ಲಿ ಹೊರಟರು. ಕಲ್ಲಡ್ಕ ಪ್ರಭಾಕರ ಭಟ್, ಬಿ.ಎನ್. ಮೂರ್ತಿ, ಅಯೋಧ್ಯಾ ಸೂರಿ, ಬಿ.ಎಸ್. ಯಡಿಯೂರಪ್ಪ ಸೇರಿ ಅನೇಕರ ನೇತೃತ್ವದಲ್ಲಿ ತಂಡಗಳು ಹೊರಟವು. ಆದರೆ ಬಹುತೇಕರ ತಂಡಗಳನ್ನು ಉತ್ತರ ಪ್ರದೇಶ ಗಡಿಯಲ್ಲಿ, ಚಿತ್ರಕೂಟದಲ್ಲಿ ಮತ್ತಿತರ ಕಡೆ ಬಂಧಿಸಿ ಕೆಲಕಾಲ ಜೈಲಿನಲ್ಲಿರಿಸಿ ಬಿಡುಗಡೆ ಮಾಡಲಾಯಿತು. ಬಿ.ಎನ್. ಮೂರ್ತಿಯವರ ತಂಡ ಕರಸೇವೆ ಸ್ಥಳದವರೆಗೆ ತಲುಪುವಲ್ಲಿ ಸಫಲವಾಯಿತು. ಮಡಿಕೇರಿಯ ಸೋಮೇಶ್ ಸ್ಥಳದಲ್ಲೇ, ಅಶೋಕ್ ಸಿಂಘಾಲ್ ಅವರಿಗೆ ಕಲ್ಲೇಟು ಬಿದ್ದಾಗ ಅವರ ಪಕ್ಕದಲ್ಲೆ ಇದ್ದರು. ಪೊಲೀಸರ ಗುಂಡೇಟಿಗೆ ಕೊಠಾರಿ ಬಂಧುಗಳು ಹುತಾತ್ಮರಾದರು.
ಜನಜಾಗೃತಿಯ ಪರ್ವ:1991ರಲ್ಲಿ ರಾಜ್ಯದಲ್ಲಿ ಸಂಪೂರ್ಣ ಜನಜಾಗೃತಿ ಕಾರ್ಯಕ್ರಮಗಳು ನಡೆದವು. 1992ರಲ್ಲಿ ಎರಡನೇ ಬಾರಿಗೆ ಕರಸೇವೆಗೆ ಕರೆ ನೀಡುವ ವೇಳೆಗೆ ಉತ್ತರ ಪ್ರದೇಶದಲ್ಲಿ ಸರ್ಕಾರ ಬದಲಾಗಿತ್ತು. ರಾಮಭಕ್ತರ ಮೇಲೆ ಗುಂಡು ಹಾರಿಸುವುದಿಲ್ಲ ಎಂದು ಕಲ್ಯಾಣ ಸಿಂಗ್ ಸರ್ಕಾರ ಘೋಷಿಸಿದ್ದರಿಂದ ಯಾವುದೇ ಅಡೆತಡೆ ಇಲ್ಲದಂತೆ ಕರ್ನಾಟಕದಿಂದ 5 ಸಾವಿರ ಜನರು ಕರಸೇವೆಯಲ್ಲಿ ಭಾಗವಹಿಸಿದರು. ವಿಹಿಂಪ ನಾಯಕರ ಕರೆಯನ್ನೂ ಲೆಕ್ಕಿಸದೆ ಜನರೇ ಇಡೀ ಕಟ್ಟಡವನ್ನು ಧ್ವಂಸಗೊಳಿಸಿದರು.
ಅನುಭವಗಳು
ಎರಡು ವರ್ಷ ಸಂಘಟನೆ ನಿಷೇಧ: ಅಯೋಧ್ಯೆಗೆ ತೆರಳುವವರು, ವಾಪಸಾಗುವವರ ಕುರಿತು ಗಮನ ಹರಿಸುವುದು ನಮ್ಮ ಕೆಲಸವಾಗಿತ್ತು. ರಾಜ್ಯದಿಂದ ತಂಡಗಳಲ್ಲಿ ಹೋದ ನಾಲ್ಕೈದು ಕಾರ್ಯಕರ್ತರು, ಹೊಳೆ ದಾಟುವಾಗ ಮುಳುಗುವುದು ಸೇರಿ ವಿವಿಧ ಕಾರಣಕ್ಕೆ ಮಾರ್ಗದಲ್ಲೆ ನಿಧನರಾದರು. ದೊಡ್ಡಬಳ್ಳಾಪುರ, ಕೊಡಗಿನವರೂ ಅದರಲ್ಲಿ ಸೇರಿದ್ದರು. ಅಂಥವರ ಪಾರ್ಥಿವ ಶರೀರವನ್ನು ಮನೆಯವರಿಗೆ ಒಪ್ಪಿಸುವುದು, ಸಾಂತ್ವನ ಹೇಳುವುದು, ಪರಿಹಾರ ಹಣ ನೀಡುವುದು ನಮ್ಮ ಕೆಲಸವಾಗಿತ್ತು. ಎರಡನೇ ಕರಸೇವೆಯಾದ ಕೂಡಲೆ ವಿಹಿಂಪದ ಮೇಲೆ ಕೇಂದ್ರದಲ್ಲಿದ್ದ ಪಿ.ವಿ. ನರಸಿಂಹರಾವ್ ಸರ್ಕಾರ ನಿಷೇಧ ಹೇರಿತು. ಕರ್ನಾಟಕದ ಎಲ್ಲ ಕಾರ್ಯಾಲಯಗಳನ್ನೂ ಸೀಲ್ ಮಾಡಲಾಯಿತು. ವಿಹಿಂಪ ನಿಷೇಧವಾಗಿದ್ದರಿಂದ ಧರ್ಮ ಪ್ರಸಾರ ಸಮಿತಿ ಎಂಬ ಸಂಘಟನೆ ಹೆಸರಿನಲ್ಲಿ ಕಾರ್ಯ ಸಾಗಿತು. ಬೆಂಗಳೂರಿನ ಪೂರ್ಣಪ್ರಜ್ಞಾ ವಿದ್ಯಾಪೀಠದ ಆವರಣದಲ್ಲೇ ಪೇಜಾವರ ಶ್ರೀಗಳು ನೀಡಿದ್ದ ಕೊಠಡಿಯನ್ನೇ ಸಮಿತಿಯ ಕಚೇರಿಯಾಗಿ ಮಾಡಿಕೊಳ್ಳಲಾಗಿತ್ತು. ಎರಡು ವರ್ಷ ಇದೇ ರೀತಿ ಚಟುವಟಿಕೆಗಳು ನಡೆದವು, ನಂತರ ನಿಷೇಧ ತೆರವಾಯಿತು.| ಕೇಶವ ಹೆಗಡೆ, ವಿಹಿಂಪ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ
ಅಯೋಧ್ಯೆ ಮೃತ್ತಿಕೆ ಈಗಲೂ ಇದೆ
1990ರ ಅ.30ರಂದು ಅಯೋಧ್ಯೆ ಕರಸೇವೆ ಸಮಯದಲ್ಲಿ ಉಂಟಾದ ಗದ್ದಲದ ನಡುವೆ ವಿಶ್ವ ಹಿಂದು ಪರಿಷತ್​ನ ಆಗಿನ ಪ್ರಧಾನ ಕಾರ್ಯದರ್ಶಿ ಅಶೋಕ್ ಸಿಂಘಾಲ್ ಅವರ ತಲೆಗೆ ಕಲ್ಲೇಟು ಬಿದ್ದು ರಕ್ತ ಹರಿಯುತ್ತಿರುವ ಭಾವಚಿತ್ರಗಳು ಎಲ್ಲೆಡೆ ಹರಿದಾಡಿದವು. ಹೋರಾಟದ ಕೆಲವೇ ಪ್ರಮುಖ ಭಾವಚಿತ್ರಗಳಲ್ಲೊಂದಾದ ಇದರಲ್ಲಿ ಸಿಂಘಾಲ್ ಅವರ ತಲೆಗೆ ಬಟ್ಟೆಯನ್ನು ಒತ್ತಿ ಹಿಡಿದು ರಕ್ತವನ್ನು ತಡೆ ಹಿಡಿದಿದ್ದ ಯುವಕ ಕರ್ನಾಟಕದ ಮಡಿಕೇರಿಯ ಚ. ನಾ. ಸೋಮೇಶ್. ಕರಸೇವೆಗೆ ತೆರಳಿದ್ದ ಆಗ 26ರ ಯುವಕರಾಗಿದ್ದ ಸೋಮೇಶ್ ಅನುಭವದ ಮಾತುಗಳು.
‘ಅ.24ಕ್ಕೆ 20 ಜನರ ತಂಡ ಕಾಶಿ ರೈಲ್ವೆ ನಿಲ್ದಾಣದಲ್ಲಿ ಇಳಿದ ಕೂಡಲೇ ಪೊಲೀಸರು ಬಂಧಿಸಿ ಲಾಡ್ಜ್​ನಲ್ಲಿಟ್ಟರು. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಸಮೀಪದ ಶಾಲೆಯೊಂದರಲ್ಲಿ ವಾಸ್ತವ್ಯ ಮಾಡಿದೆವು. ಬೆಂಗಳೂರಿನ ಬಿ.ಎನ್. ಮೂರ್ತಿ, ಆಂಧ್ರದ ಟೈಗರ್ ನರೇಂದ್ರ ಮುಂತಾದವರೆಲ್ಲ ಕಾಶಿ ವಿಶ್ವನಾಥನ ದರ್ಶನ ಮುಗಿಸಿ ಅಯೋಧ್ಯೆಯ ಕಡೆಗೆ ಕಾಲ್ನಡಿಗೆಯಲ್ಲಿ ಹೊರಟೆವು. ಅಯೋಧ್ಯೆ ಎಷ್ಟು ದೂರ ಇದೆ ಎಂದು ಅಲ್ಲಿನ ಜನರನ್ನು ಕೇಳಿದರೆ, ತೀನ್ ಕೋಸ್, ಚಾರ್ ಕೋಸ್ ಎನ್ನುತ್ತಿದ್ದರು. ಬಹುಶಃ ಕೆಲವೇ ಕಿಲೋಮೀಟರ್ ಇರಬೇಕು ಎಂದುಕೊಂಡು ನಡೆಯುತ್ತಲೇ ಹೋದೆವು, 4 ಹಗಲು, ಮೂರು ರಾತ್ರಿಯವರೆಗೆ. ಹಳ್ಳಿಹಳ್ಳಿಯಲ್ಲೂ ಜನರು ಆರತಿ ಬೆಳಗಿ, ತಿಲಕ ಇಟ್ಟು ಕಳಿಸಿದರು.
ಹನುಮಾನ್ ಗಡಿಯಲ್ಲಿ ಗಲಾಟೆ ನಡೆದು ಸಿಂಘಾಲ್ ಅವರಿಗೆ ಕಲ್ಲೇಟು ಬಿದ್ದು ರಕ್ತಸ್ರಾವವಾಗುತ್ತಿತ್ತು. ಕೈನಲ್ಲಿದ್ದ ಟವೆಲ್ ತೆಗೆದು ಅವರ ತಲೆಗೆ ಹಿಡಿದು, ಶ್ರೀರಾಮ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಒಂದು ದಿನ ಅಲ್ಲೇ ಇದ್ದು, ಸ್ಥಳೀಯ ಕಾರ್ಯಕರ್ತರ ಮನೆಗೆ ತೆರಳಿದೆವು. ಅಲ್ಲಿಯೇ ಒಂದು ದಿನ ಸಿಂಘಾಲ್ ಅವರಿಗೆ ಸಹಾಯಕನಾಗಿದ್ದೆ. ನ.5ರವೆಗೆ ಅಯೋಧ್ಯೆಯಲ್ಲೇ ಇದ್ದೆವು, ನಂತರ ಶ್ರೀರಾಮನ ದರ್ಶನ ಪಡೆದು ಅಲ್ಲಿನ ಮೃತಿಕೆ(ಮಣ್ಣು) ಕರವಸ್ತ್ರದಲ್ಲಿ ಕಟ್ಟಿಕೊಂಡು ತಂದೆ. ಈಗಲೂ ಹಾಗೆಯೇ ಇದೆ.
ಕನ್ನಡಿಗ ವಕೀಲರ ಕೊಡುಗೆ:ಭಗವಾನ್ ಶ್ರೀರಾಮನಿಗೆ ಸೀತಾನ್ವೇಷಣೆಯಲ್ಲಿ ಸಫಲತೆ ದೊರಕಿದ್ದು ಕರ್ನಾಟಕದಲ್ಲಿ ಹುಟ್ಟಿದ ಹನುಮಂತನ ಭೇಟಿ ನಂತರ. ಹಾಗೇಯೇ ಅಯೋಧ್ಯೆ ಭೂ ವಿವಾದ ಪ್ರಕರಣದಲ್ಲಿ ಕರ್ನಾಟಕ ಮೂಲದ ಕಾನೂನು ತಜ್ಞರು ಶ್ರೀರಾಮನ ಪರ ಹೋರಾಟಕ್ಕೆ ನಿಂತ ಬಳಿಕ ಕೇಸಿನಲ್ಲಿ ಉಂಟಾಗಿದ್ದ ಗೋಜಲುಗಳಿಂದ ಹೊರಬರಲು ಸಾಧ್ಯವಾಯಿತು. ಇದನ್ನು ಪ್ರಕರಣದಲ್ಲಿ ಶ್ರೀರಾಮನ ಪ್ರತಿನಿಧಿಯಾಗಿದ್ದ ತ್ರಿಲೋಕಿನಾಥ್ ಪಾಂಡೆಯವರೇ ನೆನಪಿಸಿಕೊಂಡಿದ್ದಾರೆ. ನಿವೃತ್ತ ನ್ಯಾಯಮೂರ್ತಿ ರಾಮಾ ಜೋಯಿಸ್, ನ್ಯಾ. ರಂಗ ವಿಠಲಾಚಾರ್, ಹಿರಿಯ ನ್ಯಾಯವಾದಿಗಳಾದ ಕೆ.ಎನ್.ಭಟ್, ಅಶೋಕ್ ಹಾರನಹಳ್ಳಿ ಅವರ ಕಾನೂನು ಸಲಹೆಗಳು ಇಲ್ಲದಿರುತ್ತಿದ್ದರೆ ನಾವು ಈ ಹಂತಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೋರಾಟದ ಮುಂಚೂಣಿಯಲ್ಲಿದ್ದ ಅನೇಕರು ಒಪ್ಪಿಕೊಳ್ಳುತ್ತಾರೆ. ನ್ಯಾ. ರಾಮಾ ಜೋಯಿಸ್, ಅಶೋಕ್ ಹಾರನಹಳ್ಳಿ ವಿನಂತಿ ಮೇರೆಗೆ ಅಲಹಾಬಾದ್ ಹೈಕೋರ್ಟ್​ನಲ್ಲಿ ಶ್ರೀರಾಮನ ಪರ ಕಾನೂನು ಹೋರಾಟ ಮಾಡಲು ಕೆ.ಎನ್. ಭಟ್ ಮುಂದಾದರು. ಈ ಹೋರಾಟದ ಹಿನ್ನೆಲೆಯಲ್ಲಿ ಆಗಾಗ್ಗೆ ಎಲ್.ಕೆ. ಆಡ್ವಾಣಿ ಸೇರಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಮುಖಂಡರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸುತ್ತಿದ್ದರು.
ಉಡುಪಿಯಿಂದ ಹೊರಟ ಕರೆ:1985 ನವೆಂಬರ್ 30ರಂದು ಕರ್ನಾಟಕದ ಉಡುಪಿಯಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥರ ನೇತೃತ್ವದಲ್ಲಿ ನಡೆದ ಎರಡನೇ ಧರ್ಮಸಂಸತ್ತು ಶ್ರೀರಾಮಜನ್ಮಭೂಮಿ ಹೋರಾಟಕ್ಕೆ ಮತ್ತಷ್ಟು ಜೀವ ತುಂಬಿತು. ‘ರಾಮಜನ್ಮಭೂಮಿಯ ದೇವಸನ್ನಿಧಿಯ ಬೀಗಮುದ್ರೆಯನ್ನು ಶಿವರಾತ್ರಿಯೊಳಗೆ (08-03-1986) ತೆರೆಯಬೇಕು’ ಎಂದು ಒಕ್ಕೊರಲಿನಿಂದ ಆಗ್ರಹಿಸಲಾಯಿತು. ತಾಲಾ ಖೋಲೋ ಚಳವಳಿ ತಾರಕಕ್ಕೇರಿದ ಸಂದರ್ಭದಲ್ಲೇ ಫೈಜಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ಹಿಂದೂಗಳ ಪರ ತೀರ್ಪು ಬಂತು. 1986 ಫೆಬ್ರವರಿ 1ರಂದು ರಾಮಲಲಾನ ಮುಕ್ತದರ್ಶನಕ್ಕೆ ಅವಕಾಶ ಪ್ರಾಪ್ತವಾಯಿತು.
ಸಾಧು-ಸಂತರ ಕೊಡುಗೆ:1960ರಿಂದಲೂ ಈ ಹೋರಾಟಕ್ಕೆ ಉಡುಪಿಯ ಪೇಜಾವರ ಮಠಾಧೀಶರಾದ ಶ್ರೀವಿಶ್ವೇಶ ತೀರ್ಥರು, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಸಲಹೆಗಾರರೇ ಆಗಿದ್ದರು. ಆದಿಚುಂಚನಗಿರಿ, ಸಿದ್ದಗಂಗಾ ಸೇರಿ ರಾಜ್ಯದ ಬಹುತೇಕ ಮಠಾಧೀಶರು ರಾಮಮಂದಿರದ ಪರ ಅಲ್ಲಲ್ಲಿ ದನಿ ಎತ್ತುತ್ತ ಸಂತ ಶಕ್ತಿಯನ್ನು ನೀಡಿದ್ದರು. ಕಾನೂನು ಬಿಗಿಯಾಗುವ ತನಕ ಸ್ವತಃ ಪೇಜಾವರ ಶ್ರೀಗಳೇ ನೇತೃತ್ವ ವಹಿಸಿದ್ದರು. ಬೆಂಗಳೂರಿನ ಶ್ರೀ ಶ್ರೀ ರವಿಶಂಕರ ಗುರೂಜಿ ಶಾಂತಿ ಮಾತುಕತೆಯ ಪ್ರಯತ್ನ ಮಾಡಿದರು.
ರಾಮಮಂದಿರ ಇದು ರಾಷ್ಟ್ರಮಂದಿರಪ್ರತಾಪಸಿಂಹ ನಾಯಕ್,ವಿಧಾನಪರಿಷತ್ ಸದಸ್ಯರುರಾಮಭಕ್ತಿ ಎಂದರೆ ಅದು ರಾಷ್ಟ್ರಭಕ್ತಿ. ರಾಮಮಂದಿರ ಎಂದರೆ ಅದು ರಾಷ್ಟ್ರಮಂದಿರ. ವಿಶ್ವ ಭೂಪಟದಲ್ಲಿ ದೃಷ್ಟಿಗೋಚರವಾಗುವಂತೆ ತಲೆ ಎತ್ತಿ ನಿಲ್ಲುವ ಅದ್ಭುತ ನಿರ್ವಣ. 1992 ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಕರಸೇವೆಗಾಗಿ ಪುಟ್ಟ ಭಾರತವೇ ಸೇರಿತ್ತು, ವಿವಾದಿತ ಕಟ್ಟಡ ಧ್ವಂಸವಾಯಿತು. ನಮಗೆ ಅಲ್ಲಿ ದೇವಾಲಯದ ಅನೇಕ ಕುರುಹಗಳು ದೊರೆತಿದ್ದವು. ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ನಮ್ಮ ಜತೆಗೆ ಕರಸೇವಕರಾಗಿದ್ದರು. ದಕ್ಷಿಣ ಭಾರತದವರಿಗೆ ಉತ್ತರ ಭಾರತದ ಖಾದ್ಯ ಅಷ್ಟಾಗಿ ಒಗ್ಗುತ್ತಿರಲಿಲ್ಲ. ಹಾಗಾಗಿ ಯಡಿಯೂರಪ್ಪನವರು ಬೆಳ್ತಂಗಡಿಯ ಕಡಿರುದ್ಯಾವರದ ಅನಂತ ನಾಯಕ್ ಮಾಡಿದ ಅಡುಗೆಯ ಊಟಕ್ಕೆ ಸರದಿ ಸಾಲಿನಲ್ಲಿ ನಿಂತು 2 ರೂ. ಪಾವತಿಸಿ ಬಡಿಸಿಕೊಂಡಿದ್ದರು. ವಿವಾದಿತ ಕಟ್ಟಡ ಉರುಳಿದ ಬಳಿಕ ಅಯೋಧ್ಯೆಯಲ್ಲಿ ತಾತ್ಕಾಲಿಕ ಮಂದಿರ ಕಟ್ಟಲಾಗಿತ್ತು. ಅಯೋಧ್ಯೆಯ ಮುಸ್ಲಿಂರು ಕೂಡ ಅಲ್ಲೊಂದು ಮಂದಿರ ಇರಬೇಕೆಂದು ಬಯಸಿದ್ದರು. ಆದರೆ ಬೇರೆ ಬೇರೆ ಕಾರಣಗಳಿಗೆ ಹೊರಗಿನವರಿಗೆ ಅಲ್ಲಿ ಮಂದಿರವಾಗುವುದು ಬೇಕಿರಲಿಲ್ಲ!.
ನನ್ನ ಪ್ರಕಾರ ಸುಪ್ರೀಂ ಕೋರ್ಟ್ ತೀರ್ಪಿನ ಆಶಯ ಅಯೋಧ್ಯೆಯಲ್ಲಿ ಕೇವಲ ರಾಮಮಂದಿರ ಅಲ್ಲ; ದೇಶದ ಜನರ ಭಾವನೆಯ ಪ್ರತೀಕದ ನಿರ್ಮಾಣ ಸಾಕಾರವಾಗಬೇಕು. ನಮ್ಮದು ಅನೇಕತೆಯಲ್ಲಿ ಏಕತೆ ಪ್ರತಿಪಾದಿಸುವ ಸಂಸ್ಕೃತಿ. ಇತರರ ಆರಾಧನಾ ಪದ್ಧತಿಯನ್ನು ಗೌರವಿಸಿಕೊಂಡೇ ಬಂದಿದ್ದೇವೆ. ಆ ಹಿನ್ನೆಲೆಯಲ್ಲಿ ರಾಮಮಂದಿರ ಆಗಬೇಕು ಎನ್ನುವುದು ನಮ್ಮೆಲ್ಲರ ಆಶಯ.
ಸತತ ಸಂಘರ್ಷದ ನಂತರ ನನಸಾಗುತ್ತಿದೆ ಕನಸು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + nine =
Remember me
