ಬೆಂಗಳೂರು :ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮನೆಮನೆಯಲ್ಲೂ ರಾಮಾಯಣದ ನಿತ್ಯ ಪಾರಾಯಣ ನಡೆಯಬೇಕು ಎಂಬ ಸದುದ್ದೇಶದಿಂದ ಸಂಸ್ಕೃತ ಭಾರತಿ ಸಂಸ್ಥೆಯು, “ಗೇಹೇ ಗೇಹೇ ರಾಮಾಯಣಮ್” ಎನ್ನುವ ಯೋಜನೆಯನ್ನು ರೂಪಿಸಿದೆ. ಒಂದು ವರ್ಷದ ಈ ಯೋಜನೆಯಡಿ ಇಡೀ ದೇಶದಲ್ಲಿ ಶ್ರೀರಾಮನವಮೀ ದಿನವಾದ ಏಪ್ರಿಲ್ 21 ರಂದೇ ಸಾವಿರಾರು ಜನರು ರಾಮಾಯಣದ ಪಾರಾಯಣವನ್ನು ಪ್ರಾರಂಭಿಸಲಿದ್ದಾರೆ.
ಶ್ರೀಮದ್ವಾಲ್ಮೀಕಿರಾಮಾಯಾಣದಲ್ಲಿ ಒಟ್ಟು 648 ಸರ್ಗಗಳು ಇರುವುದರಿಂದ ಪ್ರತಿದಿನ ಎರಡು ಸರ್ಗಗಳಂತೆ ಓದಿದರೆ 324 ದಿನಗಳಲ್ಲಿ ಪೂರ್ಣ ಪಾರಾಯಣವಾಗುತ್ತದೆ. ಅದಕ್ಕಾಗಿಯೇ ಒಂದು ವರ್ಷದ ಅವಧಿಯನ್ನು ನಿಗದಿಪಡಿಸಿದ್ದು, ಪ್ರತಿದಿನ ಎರಡು ಸರ್ಗಗಳನ್ನು ಓದಬೇಕು. ಗ್ರಂಥದಲ್ಲೇ ಇರುವ ಹಾಗೆ ಅಂದಿನ ಸರ್ಗಗಳನ್ನು ಓದುವ ಮೊದಲು ಆದಿಮಂಗಳಶ್ಲೋಕಗಳನ್ನು ಕೊನೆಯಲ್ಲಿ ಅಂತ್ಯಮಂಗಳಶ್ಲೋಕಗಳನ್ನು ಓದುವ ಕ್ರಮ ರೂಢಿಸಿಕೊಳ್ಳಬೇಕು. ಈ ಪಾರಾಯಣಕ್ಕೆ ಈಗಾಗಲೇ ಭಾರತದ ವಿವಿಧ ಪ್ರದೇಶಗಳಿಂದ ಮತ್ತು ವಿದೇಶಗಳಿಂದ 1,207 ಜನರು ಆನ್​ಲೈನ್ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಂಸ್ಕೃತ ಭಾರತಿಯ ರಾಷ್ಟ್ರೀಯ ಕಾರ್ಯದರ್ಶಿ ಸತ್ಯನಾರಾಯಣ ಭಟ್​ ತಿಳಿಸಿದ್ದಾರೆ.
ಇದನ್ನೂ ಓದಿ:ಪುಟಾಣಿ ಪುನರ್ವಗೆ ದಾಖಲೆಯ ಗೌರವ ; ಸಾಮಾನ್ಯಜ್ಞಾನ ವಿಭಾಗದಲ್ಲಿ ಕರ್ನಾಟಕ ಅಚೀವರ್ ಬುಕ್‌ನಲ್ಲಿ ಸ್ಥಾನ
ಉದ್ದೇಶ :“ಶ್ರೀ ರಾಮ ಮಂದಿರ ಎನ್ನುವುದು, ಅಯೋಧ್ಯೆಯಲ್ಲಿ ಭೌತಿಕ ರೂಪದಲ್ಲಿ ನಿರ್ಮಾಣ ಮಾಡುವುದು ಮಾತ್ರವೇ ನಮ್ಮ ಉದ್ದೇಶವಲ್ಲ. ಅದು ನಮ್ಮೆಲ್ಲರ ಭಾವನೆಗಳ ಭವ್ಯಮಂದಿರವಾಗಿ, ಶ್ರದ್ಧಾಭಕ್ತಿಸಮನ್ವಿತವಾದ ದಿವ್ಯಮಂದಿರವಾಗಬೇಕು. ಆ ನಿಟ್ಟಿನಲ್ಲಿ ನಿತ್ಯ ರಾಮಾಯಣ ಪಾರಾಯಣವೂ ಒಂದು ಉತ್ತಮ ಉಪಕ್ರಮ. ಇದರಿಂದ ಮನೆಯಲ್ಲಿ ಸೌಖ್ಯ-ಶಾಂತಿಗಳು ನೆಲೆಸಲಿ, ಸಮಾಜ ಶಕ್ತಿಶಾಲಿಯಾಗಲಿ, ರಾಷ್ಟ್ರ ಸರ್ವಸಮರ್ಥವಾಗಲಿ, ಜಗತ್ತಿಗೆ ಮಂಗಳವಾಗಲಿ ಎಂಬುದು ನಮ್ಮ ಉದ್ದೇಶವಾಗಿದೆ” ಎಂದು ಭಟ್​ ಹೇಳಿದ್ದಾರೆ.
ನೀವೂ ಭಾಗವಹಿಸಿ :ಮನೆಯಲ್ಲೇ ನಿಮಗೆ ಅನುಕೂಲವಾದ ಸಮಯದಲ್ಲಿ ಪ್ರತಿದಿನ ಶ್ರೀಮದ್ವಾಲ್ಮೀಕಿರಾಮಾಯಣದ ಎರಡು ಸರ್ಗಗಳನ್ನು ಪಠಿಸುವ ಮೂಲಕ ನೀವೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಈ ಪಾರಾಯಣಕ್ಕಾಗಿ ಗೋರಖ್​ಪುರದ ಗೀತಾಪ್ರೆಸ್ ಪುಸ್ತಕ, ಶ್ರೀರಂಗನಾಥಶರ್ಮರ ವ್ಯಾಖ್ಯಾನವಿರುವ ರಾಮಾಯಣ ಅಥವಾ ಭಾರತದರ್ಶನದ ರಾಮಾಯಣ – ಇವುಗಳಲ್ಲಿ ಯಾವುದಾದರೂ ಒಂದು ಗ್ರಂಥವನ್ನು ಆಶ್ರಯಿಸಬಹುದು. ಕಾನ್ಪುರ ಐಐಟಿ ಅವರ ಆನ್​ಲೈನ್ ಪುಸ್ತಕವೂ https://www.valmiki.iitk.ac.in/ ಲಿಂಕ್​ನಲ್ಲಿ ಲಭ್ಯವಿದೆ ಎನ್ನಲಾಗಿದೆ.
ಇದನ್ನೂ ಓದಿ:ಕನ್ನಡ ಭಾಷೆಗೆ ಪ್ರಾತಿನಿಧ್ಯ ಅವಶ್ಯ ; ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಮತ
ಹತ್ತು ಹದಿನೈದು ಜನರು ಸೇರಿ ವಾಟ್ಸ್​​ಆ್ಯಪ್ ಗುಂಪುಗಳನ್ನು ಮಾಡಿಕೊಂಡು, ಇಡೀ ವರ್ಷ ಉತ್ಸಾಹದಿಂದ ಪಾರಾಯಣಯಜ್ಞವನ್ನು ನಡೆಸಬಹುದು. ಆಸಕ್ತರು, https://forms.gle/hEDe7Qqe2SUyRyLM9 ಲಿಂಕ್ ಮೂಲಕ 18-4-2021 ರೊಳಗೆ ನೊಂದಾಯಿಸಿದರೆ, ಕಾಲ ಕಾಲಕ್ಕೆ ವಿಶೇಷಸೂಚನೆಗಳೊಂದಿಗೆ ಮಾರ್ಗದರ್ಶನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಎನ್.ಉಮಾಮಹೇಶ್ವರ ಅವರನ್ನು ದೂರವಾಣಿ ಸಂಖ್ಯೆ 91 77601 83607 ರ ಮೂಲಕ ಅಥವಾ[email protected]ಗೆ ಈಮೇಲ್ ಮಾಡಿ ಸಂಪರ್ಕಿಸಬಹುದು.
ಸಂಸ್ಕೃತ ಜ್ಞಾನ :“ಇನ್ನು ಈ ಪಾರಾಯಣವು ಸಂಸ್ಕೃತ ಗೊತ್ತಿಲ್ಲದವರಿಗೆ ಸಂಸ್ಕೃತವನ್ನು ಕಲಿಸುತ್ತದೆ. ಸಂಸ್ಕೃತ ಬಲ್ಲವರ ಭಾಷೆಯಲ್ಲಿ ಶುದ್ಧಿ-ಸೌಂದರ್ಯ-ಸ್ವಾರಸ್ಯಗಳನ್ನು ಇಮ್ಮಡಿಗೊಳಿಸುತ್ತದೆ. ದೀಪ ಹಚ್ಚುವುದು, ರಂಗೋಲಿ ಹಾಕುವುದು, ಪೂಜೆ, ವ್ರತ-ಉಪವಾಸ, ಭಜನೆಗಳು ಹೇಗೆ ನಮ್ಮ ಪರಂಪರೆಯ ಭಾಗವೋ ಹಾಗೇ ರಾಮಾಯಣದ ಪಾರಾಯಣವೂ ನಮ್ಮ ನಿತ್ಯಪರಂಪರೆಯಾಗಬೇಕು. ಅದಕ್ಕಾಗಿ ಮನೆಮನೆಗೆ ಸಂಸ್ಕೃತ ಸಂಭಾಷಣೆಯನ್ನು ತಲುಪಿಸುವ ಗುರಿ ಹೊಂದಿರುವ ಸಂಸ್ಕೃತ ಭಾರತಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ” ಎಂದು ಭಟ್​ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + nineteen =
Remember me
