ಐದು ಏಜೆನ್ಸಿಗಳು, ಹಲವು ಬಗೆಯ ಕಾರ್ಯಾಚರಣೆಗಳು, ನಿರಂತರ ಪ್ರಯತ್ನದ ನಂತರವೂ ಉತ್ತರಾಖಂಡ ಸುರಂಗ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಗೆ ವರವಾಗಿ ಪರಿಣಮಿಸಿದ್ದು ರ್ಯಾಟ್ ಹೋಲ್ ಮೈನಿಂಗ್ ಅಂದರೆ ಇಲಿ ಬಿಲ ಗಣಿಗಾರಿಕೆ. ಈ ತಂಡದ 12 ಜನರು ನವೆಂಬರ್ 27ರಂದು ಆತ್ಮವಿಶ್ವಾಸದಿಂದ ಕಾರ್ಯಾಚರಣೆಗೆ ಇಳಿದರು ಮತ್ತು ಮರುದಿನ ಶುಭ ಸುದ್ದಿ ಬಂದೇಬಿಟ್ಟಿತು. ಏನಿದು ರ್ಯಾಟ್ ಹೋಲ್ ಮೈನಿಂಗ್, ಎಲ್ಲಿ ಇದನ್ನು ಬಳಸಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.
ರ‍್ಯಾಟ್ ಹೋಲ್ ಮೈನಿಂಗ್(ಇಲಿ ಬಿಲ ಗಣಿಗಾರಿಕೆ). ಹೆಸರೇ ಹೇಳುವಂತೆ, ರ್ಯಾಟ್ ಎಂದರೆ ಇಲಿ, ಹೋಲ್ ಎಂದರೆ ಬಿಲ ಮತ್ತು ಮೈನಿಂಗ್ ಎಂದರೆ ಗಣಿಗಾರಿಕೆ. ಅಂದರೆ, ಹೊಂಡದಲ್ಲಿ ಇಳಿದು ಇಲಿಯ ಹಾಗೆ ಅಗೆಯುವುದು. ಬೆಟ್ಟಗಳ ಹೊರಮೇಲ್ಮೈಯಲ್ಲಿ ಸಣ್ಣ ಪದರದ ಮೂಲಕ ಅಗೆಯುವಿಕೆ ಆರಂಭಿಸಲಾಗುತ್ತದೆ. ಮತ್ತು ಸಣ್ಣ ಬಿಲ ಮಾಡಿ, ನಿಧಾನವಾಗಿ ಸಣ್ಣ ಡ್ರಿಲ್ ಯಂತ್ರಗಳಿಂದ ಡ್ರಿಲ್ಲಿಂಗ್ ಮಾಡಲಾಗುತ್ತದೆ.
ಕಲ್ಲಿದ್ದಲು ಗಣಿಕಾರಿಕೆಯಲ್ಲಿ ಅತ್ಯಂತ ಅಪಾಯಕಾರಿ ಪದ್ಧತಿಯೇ ಇಲಿ ಬಿಲ ಗಣಿಗಾರಿಕೆ (ರ್ಯಾಟ್ ಹೋಲ್ ಮೈನಿಂಗ್) ತಂತ್ರಜ್ಞಾನ. ಇದರಲ್ಲಿ ಕಿರಿದಾದ ಹಾಗೂ ಲಂಬವಾದ ಸುರಂಗವನ್ನು ಕೊರೆಯಲಾಗುತ್ತದೆ. ಒಬ್ಬ ಸಣ್ಣಗಾತ್ರದ ಮನುಷ್ಯ ಅಥವಾ ಮಕ್ಕಳು ಒಳಗೆ ಇಳಿಯುವಷ್ಟು ಜಾಗ ಮಾತ್ರ ಇದರಲ್ಲಿ ಇರುತ್ತದೆ. ಮಂಡಿ ಮೇಲೆ ಸುರಂಗದೊಳಗೆ ಸಾಗುವ ಇವರು, ಪಿಕಾಸಿಗಳನ್ನು ಬಳಸಿ ಸುರಂಗವನ್ನು ಕೊರೆಯುತ್ತಾರೆ. 100ರಿಂದ 400 ಅಡಿ ಆಳ ತಲುಪಿದ ನಂತರ ಲಂಬವಾದ ಗುಂಡಿಯನ್ನು ಅಗೆಯಲಾಗುತ್ತದೆ. ಕಲ್ಲಿದ್ದಲು ನಿಕ್ಷೇಪ ಪತ್ತೆಯಾಗುತ್ತಿದ್ದಂತೆ ಇಲಿ ಬಿಲ ಗಾತ್ರದ ಸುರಂಗದ ಕೊರೆಯನ್ನು ಅಡ್ಡವಾಗಿ ಕೊರೆಯಲಾಗುತ್ತದೆ. ಅದರ ಮೂಲಕ ಕಾರ್ವಿುಕರು ಇಳಿದು ಕಲ್ಲಿದ್ದಲು ಹೊರಕ್ಕೆ ತೆಗೆಯುತ್ತಾರೆ. ಸಾಮಾನ್ಯವಾಗಿ, ಕಳ್ಳತನದಲ್ಲಿ ಗಣಿಗಾರಿಕೆ ನಡೆಸುವವರು ಇದನ್ನು ಬಳಸುವ ನಿದರ್ಶನಗಳು ಹೆಚ್ಚು. ಮೇಘಾಲಯ ಸೇರಿ ಈಶಾನ್ಯದ ಹಲವು ರಾಜ್ಯಗಳಲ್ಲಿ, ಅಲ್ಲದೆ, ಜಾರ್ಖಂಡ್, ಛತ್ತೀಸ್​ಗಢದಲ್ಲಿ ಇಲಿ ಬಿಲ ಗಣಿಗಾರಿಕೆ ಪದ್ಧತಿ ಚಾಲ್ತಿಯಲ್ಲಿತ್ತು.
ಎರಡು ವಿಧ:ಇಲಿ ಬಿಲ ಗಣಿಗಾರಿಕೆಯಲ್ಲಿ ಎರಡು ವಿಧ. ಒಂದು ಗುಡ್ಡದ ಇಳಿಜಾರಿಗೆ ಲಂಬವಾಗಿ ಸುರಂಗ ಕೊರೆಯುವುದು. ಕಲ್ಲಿದ್ದಲು ನಿಕ್ಷೇಪದ ಸಣ್ಣ ಪದರ ಸಿಗುವವರೆಗೂ ಸುರಂಗ ಕೊರೆಯುತ್ತಲೇ ಸಾಗುತ್ತಾರೆ. ಮತ್ತು ಇದು 2 ಮೀಟರ್​ಗಿಂತಲೂ ಕಿರಿದಾಗಿರುತ್ತದೆ. ಎರಡನೇ ವಿಧದಲ್ಲಿ, ಸುರಂಗವನ್ನು ಆಯತಾಕಾರದಲ್ಲಿ ಕೊರೆಯಲಾಗುತ್ತದೆ. ಇದನ್ನು 10ರಿಂದ 100 ಚದರ ಮೀಟರ್​ವರೆಗೂ ಕೊರೆಯಲಾಗುತ್ತದೆ. 100ರಿಂದ 400 ಅಡಿ ಆಳ ತಲುಪಿದ ನಂತರ, ಲಂಬವಾದ ಗುಂಡಿಯನ್ನು ಅಗೆಯಲಾಗುತ್ತದೆ. ಕಲ್ಲಿದ್ದಲು ನಿಕ್ಷೇಪ ಪತ್ತೆಯಾಗುತ್ತಿದ್ದಂತೆ ಸಣ್ಣ ಇಲಿ ಬಿಲ ಗಾತ್ರದ ಸುರಂಗ ಕೊರೆವನ್ನು ಅಡ್ಡವಾಗಿ ಕೊರೆಯಲಾಗುತ್ತದೆ. ಅದರ ಮೂಲಕ ಕಾರ್ವಿುಕರು ಇಳಿದು ಕಲ್ಲಿದ್ದಲು ಹೊರಕ್ಕೆ ತೆಗೆಯುತ್ತಾರೆ.
ಫಲಿಸಿದ ಪ್ರಾರ್ಥನೆ: ಕಾರ್ವಿುಕರು ಸುರಕ್ಷಿತವಾಗಿ ವಾಪಸಾಗುವಂತೆ ದೇಶಾದ್ಯಂತ ಪ್ರಾರ್ಥನೆಗಳು ನಡೆದಿದ್ದವು. ವಿಶೇಷ ಪೂಜೆ, ಹೋಮಗಳನ್ನು ಮಾಡಲಾಗಿತ್ತು. ಕಾರ್ವಿುಕರ ಕುಟುಂಬಗಳ ಸದಸ್ಯರಂತೂ, ಘಟನಾಸ್ಥಳದಲ್ಲಿ ಚಾತಕಪಕ್ಷಿಯಂತೆ ಕಾಯುತ್ತಿದ್ದರು. ಕಡೆಗೂ, ಪ್ರಾರ್ಥನೆ ಫಲಿಸಿದ್ದು, ಕಾರ್ವಿುಕರು ಸುರಕ್ಷಿತವಾಗಿ ವಾಪಸ್ ಬಂದಿರುವುದರಲ್ಲಿ ಶ್ರದ್ಧೆಯೂ ಮುಖ್ಯ ಪಾತ್ರ ವಹಿಸಿದೆ ಎಂದಿದ್ದಾರೆ ಸ್ಥಳೀಯರು.
ಪ್ರಮುಖ ಪಾತ್ರ ವಹಿಸಿದ ಡಿಕ್ಸ್: ಇಡೀ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಅಂತಾರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್. ಇಂಟರ್​ನ್ಯಾಶನಲ್ ಟನೆಲಿಂಗ್ ಮತ್ತು ಅಂಡರ್​ಗ್ರೌಂಡ್ ಸ್ಪೇಸ್ ಅಸೋಸಿಯೇಷನ್​ನ ಅಧ್ಯಕ್ಷರಾಗಿರುವ ಅರ್ನಾಲ್ಡ್ ಡಿಕ್ಸ್ ನವೆಂಬರ್ 20ರಂದು ಸುರಂಗದ ಸ್ಥಳಕ್ಕೆ ತಲುಪಿ, ಆವರೆಗೆ ನಡೆದಿದ್ದ ಕಾರ್ಯಾಚರಣೆಯ ಮಾಹಿತಿ ಪಡೆದರು. ಅಲ್ಲದೆ, ಹಗಲು-ರಾತ್ರಿ ಸುರಂಗದ ಸ್ಥಳದಲ್ಲಿ ಕೆಲಸಗಾರರೊಂದಿಗೆ ಸಂಪರ್ಕದಲ್ಲಿದ್ದರು. ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು. ಆಸ್ಟ್ರೇಲಿಯಾದಿಂದ ಆಗಮಿಸಿದ ಪೊ›.ಅರ್ನಾಲ್ಡ್ ಡಿಕ್ಸ್ ಅಂಡರ್​ಗ್ರೌಂಡ್ (ಭೂಗತ) ನಿರ್ವಣಕಾರ್ಯ ಮತ್ತು ಸಾರಿಗೆ ಮೂಲ ಸೌಕರ್ಯದಲ್ಲಿ ಪರಿಣತರಾಗಿದ್ದಾರೆ. ಅಂಡರ್​ಗ್ರೌಂಡ್ ನಿರ್ವಣಕ್ಕೆ ಸಂಬಂಧಿಸಿದ ಅಪಾಯಗಳ ಬಗ್ಗೆ ಸಲಹೆ ನೀಡುವುದು ಮಾತ್ರವಲ್ಲದೆ, ಅಂಡರ್​ಗ್ರೌಂಡ್ ಸುರಂಗ ಮಾರ್ಗದ ಅಂತಾರಾಷ್ಟ್ರೀಯ ತಜ್ಞರಲ್ಲಿ ಒಬ್ಬರು. ಮೂರು ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ ಇಂಜಿನಿಯರಿಂಗ್, ಭೂವಿಜ್ಞಾನ, ಕಾನೂನು ಮತ್ತು ಅಪಾಯ ನಿರ್ವಹಣೆ ವಿಷಯಗಳಂಥ ವಿಶಿಷ್ಟ ಅನುಭವವನ್ನು ಹೊಂದಿದ್ದಾರೆ. ಡಿಕ್ಸ್ ಅಂಡರ್​ಗ್ರೌಂಡ್ ವರ್ಕ್ಸ್ ಚೇಂಬರ್ಸ್, ವಿಕ್ಟೋರಿಯನ್ ಬಾರ್, ಬ್ರಿಟಿಷ್ ಇನ್​ಸ್ಟಿಟ್ಯೂಟ್ ಆಫ್ ಇನ್ವೆಸ್ಟಿಗೇಟರ್ಸ್​ನ ಸದಸ್ಯರಾಗಿದ್ದಾರೆ ಮತ್ತು ಟೋಕಿಯೊ ಸಿಟಿ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ (ಸುರಂಗಗಳು) ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ.
ಮಾನಸಿಕ ಸ್ಥೈರ್ಯಕ್ಕೆ ಸಲಾಂ!: ಯಾವುದೋ ಅಪರಿಚಿತ ಸ್ಥಳದಲ್ಲಿ ಸಿಲುಕಿಕೊಂಡರೆ ಭಯ ಆವರಿಸಿಕೊಳ್ಳುವುದು ಸ್ವಾಭಾವಿಕ. ಅದರಲ್ಲೂ, ಸುರಂಗದೊಳಗೆ ಇದ್ದಕಿದ್ದಂತೆ ಸಿಲುಕಿಕೊಂಡರೆ ಏನು ಗತಿ? ಈ ಹದಿನೇಳು ದಿನಗಳಲ್ಲಿ 41 ಕಾರ್ವಿುಕರ ಮನಸಿನಲ್ಲಿ ಯಾವೆಲ್ಲ ಪ್ರಶ್ನೆಗಳು ಬಂದು ಹೋಗಿರಬಹುದು. ನಿಜಕ್ಕೂ ನಾವು ಹೊರಗೆ ಬರಲಿಕ್ಕೆ ಸಾಧ್ಯವಾ? ನಮ್ಮ ಕುಟುಂಬದವರನ್ನು ಮತ್ತೆ ನೋಡುತ್ತೇವೆಯಾ? ಹೀಗೆ ಅದೆಷ್ಟೋ ಸಂದೇಹ, ಆತಂಕ ಸುಳಿದಾಡಿರಬಹುದು.
ರಕ್ಷಣಾ ಕಾರ್ಯಾಚರಣೆ ಗೆದ್ದಿರುವುದು ನಿಜಕ್ಕೂ ಅಭಿನಂದನೀಯ. ಅಷ್ಟೇ ಮುಖ್ಯ ಗೆಲುವು ದೊರೆತಿರುವುದು ಈ ಎಲ್ಲ ಕಾರ್ವಿುಕರ ಮಾನಸಿಕ ಸ್ಥೈರ್ಯಕ್ಕೆ. 41 ಜನರು ಅಂದರೆ, 41 ಬಗೆಯ ಮಾನಸಿಕತೆ. ಯಾರೋ ಒಬ್ಬರು ವಿಶ್ವಾಸ ಕಳೆದುಕೊಂಡು, ಸೋಲು ಒಪ್ಪಿಕೊಂಡಿದ್ದರೆ ಅದು ಉಳಿದವರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇತ್ತು. ಬದುಕುವ ಭರವಸೆಯನ್ನು ಕಿತ್ತುಕೊಳ್ಳುತ್ತಿತ್ತು. ನಮಗೆಲ್ಲ ಕರೊನಾದ ಸಂದರ್ಭ ನೆನಪಿದೆ. ಆ ಹೊತ್ತಲ್ಲಿ ಕರೊನಾ ಕಾಯಿಲೆಗಿಂತಲೂ ಹೆಚ್ಚಾಗಿ, ಕರೊನಾದ ಭಯಕ್ಕೆ ಅಧಿಕ ಜನರು ಪ್ರಾಣಬಿಟ್ಟರು. ಸಾವಿರಾರು ಜನರು ಮಾನಸಿಕ ಖಿನ್ನತೆಗೆ ಜಾರಿದರು. ಅಂತೆಯೇ, ಈ ಕಾರ್ವಿುಕರು ತಾವು ಸಾವಿನ ಹೊಸ್ತಿಲಿಗೆ ತಲುಪಿದ್ದೇವೆ ಎಂದು ಭಾವಿಸಿದ್ದರೆ ಪ್ರಾಣಕ್ಕೆ ಸಂಚಕಾರ ಬರಬಹುದಿತ್ತು. ಆದರೆ, ಅಂಥ ಭಯ ಆವರಿಸಿಕೊಳ್ಳಲು ಬಿಡದೆ, ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗುತ್ತದೆ ಎಂದು ಬಲವಾಗಿ ನಂಬಿದರು. ಮೊದಲಿಗೆ, ನಾಲ್ಕೈದು ದಿನಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಗಿಯುವ ವಿಶ್ವಾಸವಿತ್ತು. ಆದರೆ, ಪದೇಪದೆ ತಾಂತ್ರಿಕ ಅಡಚಣೆಗಳಿಂದ ಯಂತ್ರಗಳು ಕೈಕೊಟ್ಟು, ಕಾರ್ಯಾಚರಣೆ ಸ್ಥಗಿತಗೊಂಡಿತು. ಕಡೆಗೂ, 17 ದಿನಗಳ ಕಾಯುವಿಕೆ ಸುಖಾಂತ್ಯ ಕಂಡಿದೆ. ಮೃತ್ಯುವಿನ ಭಯವನ್ನು ಗೆದ್ದು, ಮೃತ್ಯುಂಜಯರಾಗಿ ಹೊರಬಂದ ಈ ಕರ್ಮವೀರರು ನಿಜಕ್ಕೂ ರಿಯಲ್ ಹೀರೋಗಳು. ಮತ್ತು ಭವಿಷ್ಯದಲ್ಲೂ ಇವರ ಸಾಹಸವನ್ನು ನೆನಪಿಸಿಕೊಳ್ಳಲಾಗುತ್ತದೆ.
ಬಾಬಾನ ಶಾಪ ಮತ್ತು ಆಶೀರ್ವಾದ!: ಉತ್ತರಕಾಶಿಯ ಸಿಲ್ಕಾ್ಯರಾ ಬಳಿ ಕಾಮಗಾರಿ ಆರಂಭಿಸುವಾಗ ಅಲ್ಲಿದ್ದ ಬಾಬಾ ಬೌಖನಾಗ್ ಮಂದಿರವನ್ನು ಕೆಡವಲಾಗಿತ್ತು. ಇದು ಸ್ಥಳೀಯರ ಭಾರಿ ಅಸಮಾಧಾನಕ್ಕೆ ಕಾರಣವಾಯಿತು. ಅದರಲ್ಲೂ, ನವೆಂಬರ್ 12ರಂದು ಸುರಂಗ ಕುಸಿತ ಉಂಟಾಗಿ, 41 ಕಾರ್ವಿುಕರು ಸಿಲುಕಿಕೊಂಡಾಗ, ಈ ಘಟನೆಗೆ ಬಾಬಾನ ಶಾಪವೇ ಕಾರಣ ಎಂದು ಸ್ಥಳೀಯರು ಆರೋಪಿಸಿದರು. ಹಾಗಾಗಿ ಎಚ್ಚೆತ್ತ ಸ್ಥಳೀಯಾಡಳಿತ ಮತ್ತೆ ಬಾಬಾ ಬೌಖನಾಗ್​ನ ಪುಟ್ಟ ಮಂದಿರವನ್ನು ಸ್ಥಾಪಿಸಿತು. ಕಾರ್ವಿುಕರ ಕುಟುಂಬದ ಸದಸ್ಯರು ಈ ದೇಗುಲದ ಮುಂದೆ ನಿಂತು ತಮ್ಮವರ ರಕ್ಷಣೆಗಾಗಿ ಪ್ರಾರ್ಥನೆ ಮಾಡಿದರು. ಅಷ್ಟೇ ಅಲ್ಲ, ರಕ್ಷಣಾ ಕಾರ್ಯಾಚರಣೆಗೆ ಬಂದ ಅಂತಾರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಬೆಳಗ್ಗೆ ಬಾಬಾಗೆ ನಮಸ್ಕರಿಸಿಯೇ, ಕೆಲಸ ಆರಂಭ ಮಾಡುತ್ತಿದ್ದರು. ಮಂಗಳವಾರ ಕಾರ್ಯಾಚರಣೆ ಅಂತಿಮ ಘಟ್ಟ ತಲುಪಿದ್ದಂತೆ ಘಟನಾಸ್ಥಳಕ್ಕೆ ಭೇಟಿ ನೀಡಿದ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕೂಡ ಬಾಬಾ ಬೌಖನಾಗ್​ನಿಗೆ ನಮಿಸಿದರು.
ಹಸಿರು ನ್ಯಾಯಮಂಡಳಿಯಿಂದ ನಿಷೇಧ: ಇಲಿ ಬಿಲ ಗಣಿಗಾರಿಕೆಯಿಂದ ಕಾರ್ವಿುಕರಿಗೆ ಅಪಾಯ. ಮಾತ್ರವಲ್ಲದೆ, ಪರಿಸರಕ್ಕೂ ಮಾರಕ. ಇದರಿಂದ ಅರಣ್ಯನಾಶ, ಮಣ್ಣು ಸವಕಳಿ ಹಾಗೂ ಸ್ಥಳೀಯ ಪರಿಸರ ನಾಶದಂಥ ಸಮಸ್ಯೆಗಳು ತಲೆದೋರುತ್ತವೆ ಎನ್ನುತ್ತಾರೆ ತಜ್ಞರು. ಇಲಿ ಬಿಲ ಗಣಿಗಾರಿಕೆಯ ಪರಿಣಾಮ ಗಣಿಗಳಿಂದ ಆಮ್ಲೀಯ ಅಂಶ ಹೊರಹೋಗುತ್ತದೆ. ಇದನ್ನು ಆಸಿಡ್ ಮೈನ್ ಡ್ರೖೆನೇಜ್ (ಎಎಂಡಿ) ಎಂದು ಕರೆಯಲಾಗುತ್ತದೆ. ಇದು ನೀರಿನ ಗುಣಮಟ್ಟವನ್ನು ಹಾಳು ಮಾಡುತ್ತದೆ. ಜೀವವೈವಿಧ್ಯಕ್ಕೂ ಮಾರಕ. ಇದರಿಂದಾಗಿ, 2014ರಲ್ಲಿ ಹಸಿರು ನ್ಯಾಯಮಂಡಳಿಯು ಇಲಿ ಬಿಲ ಗಣಿಗಾರಿಕೆ ತಂತ್ರಜ್ಞಾನವನ್ನು ನಿಷೇಧ ಮಾಡಿದೆ. ಆದರೆ, ವಿಷೇಷ ಸಂದರ್ಭಗಳಲ್ಲಿ, ರಕ್ಷಣಾ ಕಾರ್ಯಾಚರಣೆಗಳಲ್ಲಿ ರ್ಯಾಟ್ ಹೋಲ್ ಮೈನಿಂಗ್ ಮಾಡಲು ನಿಷೇಧವಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 3 =
Remember me
