ಮುಂಬೈ: ಹತ್ತು ತಿಂಗಳಿಂದ ಕಾಡುತ್ತಿರುವ ಹಣದುಬ್ಬರ ಏರಿಕೆಗೆ ಕಡಿವಾಣ ಹಾಕಲೇಬೇಕೆಂಬ ದೃಢ ಸಂಕಲ್ಪ ಹೊಂದಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಈ ನಿಟ್ಟಿನಲ್ಲಿ ರೆಪೊ ದರವನ್ನು ನಿರೀಕ್ಷೆಯಂತೆ 35 ಮೂಲಾಂಶ ಹೆಚ್ಚಳ ಮಾಡಿದೆ. ಕಳೆದ ಮೇ ತಿಂಗಳಿಂದೀಚೆಗೆ ಇದು ಐದನೇ ಹೆಚ್ಚಳವಾಗಿದ್ದು, ಒಟ್ಟಾರೆ 225 ಮೂಲಾಂಶ ಏರಿಕೆ ಆದಂತಾಗಿದೆ. ಶೇ.5.9 ಇದ್ದ ರೆಪೊ ದರ ಈಗ ಶೇ.6.25ಕ್ಕೆ ತಲುಪಿದೆ. ಇದರಿಂದ ಗೃಹ, ವಾಹನ, ವೈಯಕ್ತಿಕ ಸಾಲಗಳ ಬಡ್ಡಿ ದರ ಹೆಚ್ಚಳವಾಗಿ ಸಮಾನ ಮಾಸಿಕ ಕಂತು (ಇಎಂಐ) ದುಬಾರಿ ಆಗಲಿದೆ. ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯ ಕಡೆಯ ದಿನ ರೆಪೊ ದರ ಪರಿಷ್ಕರಣೆಯ ನಿರ್ಧಾರವನ್ನು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರಕಟಿಸಿದ್ದು, 5:1 ಅನುಪಾತದಲ್ಲಿ ರೆಪೊ ದರ ಹೆಚ್ಚಳದ ಪ್ರಸ್ತಾವಕ್ಕೆ ಸಭೆಯಲ್ಲಿ ಅನುಮೋದನೆ ದೊರೆಯಿತು ಎಂದು ಹೇಳಿದರು. ಹಣದುಬ್ಬರ ಏರಿಕೆ ತಡೆ ಮತ್ತು 2ನೇ ಸುತ್ತಿನ ಪರಿಣಾಮಗಳನ್ನು ತಗ್ಗಿಸಲು ಈ ನಿರ್ಧಾರ ಅಗತ್ಯವಾಗಿತ್ತು ಎಂದು ಅವರು ಸಮರ್ಥಿಸಿಕೊಂಡರು.
ಪ್ರಸ್ತುತ ಸುಗ್ಗಿಯ ಕಾಲವಾದ್ದರಿಂದ ಆಹಾರ ಪದಾರ್ಥಗಳ ಬೆಲೆ ಒತ್ತಡದಲ್ಲಿ ಇರುವುದಿಲ್ಲ. ಆದರೆ, ಸಿರಿಧಾನ್ಯ, ಹಾಲು, ಮಸಾಲೆ ಪದಾರ್ಥಗಳು ಅಧಿಕವಾಗಿರುವುದು ಆರ್​ಬಿಐ ಚಿಂತೆಗೆ ಕಾರಣವಾಗಿದೆ. ಬೆಲೆಯಲ್ಲಿ ಸ್ಥಿರತೆ ತರುವುದು ಆರ್​ಬಿಐನ ಪ್ರಮುಖ ಹೊಣೆಗಾರಿಕೆ. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಸರ್ಕಾರಕ್ಕೆ ಪತ್ರ ಬರೆದಿದ್ದ ಆರ್​ಬಿಐ, ಹಣದುಬ್ಬರ ಅಂಕೆಮೀರಿ ಬೆಳೆಯಲು ಜಾಗತಿಕ ವಿದ್ಯಮಾನಗಳು ಕಾರಣ ಎಂದಿತ್ತು. ಕಳೆದ 3 ತ್ರೈಮಾಸಿಕದಿಂದ ಹಣದುಬ್ಬರ ನಿಯಂತ್ರಿ ಸಲು ತಾನು ಮಾಡುತ್ತಿರುವ ಕಸರತ್ತುಗಳನ್ನೂ ವಿವರಿಸಿತ್ತು.
ಮಾರ್ಚ್​ಗೆ ಹಣದುಬ್ಬರ ಇಳಿಕೆ
ಕಳೆದ ಏಪ್ರಿಲ್​ನಲ್ಲಿ ಚಿಲ್ಲರೆ ಹಣದುಬ್ಬರ ದರ ಶೇ.7.79 ಇದ್ದ ಕಾರಣ ಮೇ ತಿಂಗಳಿಂದ ರೆಪೊ ದರ ಏರಿಕೆ ಮಾಡಲಾಗುತ್ತಿದ್ದು, ಕಳೆದ ಅಕ್ಟೋಬರ್​ನಲ್ಲಿ ಹಣದುಬ್ಬರ ಶೇ.6.77ಕ್ಕೆ ಬಂದಿದೆ. ಮುಂದಿನ ಮಾರ್ಚ್ ಹೊತ್ತಿಗೆ ಇದು ಶೇ.6ರೊಳಗೆ ಬರಲಿದೆ; ಮುಂದಿನ 12 ತಿಂಗಳಲ್ಲಿ ಶೇ.4ರೊಳಗೆ ಬರಲಿದೆ ಎಂಬ ವಿಶ್ವಾಸವನ್ನೂ ಆರ್​ಬಿಐ ವ್ಯಕ್ತಪಡಿಸಿದೆ. ಆರ್​ಬಿಐ ಸಲಹಾಸೂತ್ರದ ಪ್ರಕಾರ, ಹಣದುಬ್ಬರ ಶೇ.2ರಿಂದ 6ರೊಳಗೆ ಇರಬೇಕು.
ಮತ್ತೆ ಏರಿಕೆಯಾದರೂ ಅಚ್ಚರಿಯಿಲ್ಲ
ಮುಂದಿನ ಫೆಬ್ರವರಿಯಲ್ಲಿ ನಡೆಯುವ ಪ್ರಸಕ್ತ ಆರ್ಥಿಕ ವರ್ಷದ ಕೊನೆಯ ಎಂಪಿಸಿ ಸಭೆಯಲ್ಲಿ ಬಡ್ಡಿ ಪ್ರಮಾಣ ಇನ್ನಷ್ಟು ಹೆಚ್ಚಳವಾಗಿ ರೆಪೊ ದರ ಶೇ.6.5 ತಲುಪಿದರೂ ಅಚ್ಚರಿ ಇಲ್ಲ ಎಂದು ಆರ್ಥಿಕತೆಯ ರೇಟಿಂಗ್ ಮತ್ತು ಸಂಶೋಧನಾ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ. ಹಣದುಬ್ಬರ ಏರಿಕೆಗೆ ಕಡಿವಾಣ ಹಾಕಲು ರೆಪೊ ದರ ಅಧಿಕಗೊಳಿಸುವುದು ಮಾರ್ಗವಾದರೂ ರೆಪೊ ದರ ಹೆಚ್ಚಿದಷ್ಟು ಆರ್ಥಿಕ ಪ್ರಗತಿಯ ವೇಗ ಕುಂಠಿತವಾಗುತ್ತದೆ ಎಂಬ ಎಚ್ಚರಿಕೆಯ ಮಾತನ್ನೂ ಆಡಿವೆ. ಬಡ್ಡಿ ದರ ಏರಿಕೆಯಿಂದ ರಿಯಲ್ ಎಸ್ಟೇಟ್, ವಾಹನ ಮಾರಾಟ ಮಂದಗೊಳ್ಳುತ್ತದೆ ಎಂದು ಹೇಳಿವೆ.

ಶೇ.6.8ಕ್ಕೆ ಇಳಿದ ಜಿಡಿಪಿ 2022-23ನೇ ಸಾಲಿನ ಎರಡನೇ ತ್ರೖೆಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಒಟ್ಟು ದೇಶೀಯ ಉತ್ಪನ್ನ ದರ (ಜಿಡಿಪಿ) ಶೇ.6.3 ಇದೆ. ಇತರ ರಾಷ್ಟ್ರಗಳ ಜಿಡಿಪಿಗೆ ಹೋಲಿಸಿದರೆ ಭಾರತದ ಬೆಳವಣಿಗೆ ಆಶಾದಾಯಕವಾಗಿದೆ. ಆದರೆ, ಮೊದಲ ತ್ರೖೆಮಾಸಿಕಕ್ಕೆ (ಶೇ.13.5) ಹೋಲಿಸಿದರೆ ಎರಡನೆಯದ್ದರಲ್ಲಿ ಸಾಧನೆ ಕಳಪೆ ಆಗಿದೆ. ಆರ್​ಬಿಐ ಕೂಡ ಜಿಡಿಪಿಯನ್ನು ಶೇ.6.8ರಲ್ಲಿ ಅಂದಾಜಿಸಿದೆ. ಹಿಂದಿನ ಅಂದಾಜಿಗಿಂತ ಇದು ಶೇ.0.2 ತಗ್ಗಿದೆ. ವಿಶ್ವಬ್ಯಾಂಕ್ ಅಂದಾಜಿನಂತೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.9 ಇರಲಿದೆ.
ಯುಪಿಐನಲ್ಲಿ ಹೊಸ ಫೀಚರ್ ಡಿಜಿಟಲ್ ಪಾವತಿ ವೇದಿಕೆ ಯುಪಿಐನಲ್ಲಿ ಹೊಸ ಅಂಶವನ್ನು ಅಡಕ ಮಾಡಲು ಆರ್​ಬಿಐ ನಿರ್ಧರಿಸಿದ್ದು, ಆನಂತರದಲ್ಲಿ ವಿಶ್ವಾಸಾರ್ಹವಾಗಿ ಲಭ್ಯವಾಗುವಂತಹ ಸರಕು ಮತ್ತು ಸೇವೆಗಳ ಪಾವತಿಗೆ ಸಹಾಯವಾಗುವಂತಹ ವಿಶಿಷ್ಟ ಅಂಶವನ್ನು ಕಲ್ಪಿಸಿದೆ. ಇದರಿಂದ ಇ-ಕಾಮರ್ಸ್, ಹೋಟೆಲ್ ಬುಕಿಂಗ್, ಷೇರುಪೇಟೆಯಲ್ಲಿ ಹೂಡಿಕೆ ಮಾಡುವಾಗ ಗ್ರಾಹಕರು ‘ಸಿಂಗಲ್ ಬ್ಲಾಕ್ ಮತ್ತು ಮಲ್ಟಿಪಲ್ ಡೆಬಿಟ್’ ಅನ್ನು ವಿಶ್ವಾಸಯುತವಾಗಿ ಮಾಡಬಹುದಾಗಿದೆ. ಕಡ್ಡಾಯವಾಗಿ ಮಾಡಬೇಕಾದ ಪಾವತಿಗೆ ಗ್ರಾಹಕರು ತಮ್ಮ ಖಾತೆಯಲ್ಲಿನ ಹಣವನ್ನು ಪೂರ್ವನಿರ್ಧರಿತವಾಗಿ ತೆಗೆದಿರಿಸಲು ಇದರಿಂದ ಸಾಧ್ಯ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + one =
Remember me
