ಭಾರತದಲ್ಲಿ ಬಾಲ್ಯ ವಿವಾಹ ಕಾಯ್ದೆ ವಿಚಾರ ಬಹಳ ಸಂಕೀರ್ಣವಾಗಿದೆ. ಮೊಟ್ಟ ಮೊದಲು 1929ರ ಚೈಲ್ಡ್ ಮ್ಯಾರೀಜ್ ರಿಸ್ಟ್ರೇಂಟ್ ಆಕ್ಟ್​ನಲ್ಲಿ ಇದಕ್ಕೆ ವ್ಯಾಖ್ಯಾನ ನೀಡಲಾಗಿತ್ತು. ಇದರ ಪ್ರಕಾರ ವಿವಾಹಯೋಗ್ಯ ಕನಿಷ್ಠ ವಯಸ್ಸು ಹುಡುಗಿಯರಿಗೆ 14 ಮತ್ತು ಹುಡುಗರಿಗೆ 18 ಇತ್ತು. ಈ ಕಾನೂನಿಗೆ ಮುಸ್ಲಿಮರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಮುಸ್ಲಿಂ ಪರ್ಸನಲ್ ಲಾ (ಷರಿಯತ್) ಅಪ್ಲಿಕೇಶನ್ ಆಕ್ಟ್ 1937ರ ಮೂಲಕ ಇದನ್ನು ಅವರು ಅನೂರ್ಜಿತಗೊಳಿಸಿದ್ದರು. ಇದರ ಪ್ರಕಾರ, ಮುಸ್ಲಿಂ ಸಮುದಾಯದ ವಿವಾಹಗಳಿಗೆ ಕನಿಷ್ಠ ವಯಸ್ಸಿನ ನಿರ್ಬಂಧ ಇಲ್ಲ. ಪಾಲಕರ ಅಥವಾ ಪೋಷಕರ ಅನುಮತಿ ಇದ್ದರೆ ಸಾಕು. ಮುಸ್ಲಿಮೇತರರ ವಿವಾಹ ಕಾಯ್ದೆ 1947ರಲ್ಲಿ ಮತ್ತೊಮ್ಮೆ ತಿದ್ದುಪಡಿಗೆ ಒಳಗಾಯಿತು. 1949ರಲ್ಲಿ ಹುಡುಗಿಯರ ವಿವಾಹಯೋಗ್ಯ ಕನಿಷ್ಠ ವಯಸ್ಸು 15ಕ್ಕೆ ಏರಿಕೆಯಾಯಿತು. 1978ರಲ್ಲಿ ಮತ್ತೆ ಪರಿಷ್ಕರಣೆಗೊಂಡು ಪುರುಷರಿಗೆ 21, ಮಹಿಳೆಯರಿಗೆ 18 ಎಂದಾಯಿತು. ಇಷ್ಟಾಗ್ಯೂ, ವಯಸ್ಸಿನ ವಿಚಾರ ಪದೇಪದೆ ಕೋರ್ಟ್​ಗಳಲ್ಲಿ ವಾದ-ಪ್ರತಿವಾದಗಳಿಗೆ ಕಾರಣವಾಗುತ್ತಿದೆ.
ಯುನಿಸೆಫ್ ಪ್ರತಿಪಾದನೆ:ಯುನಿಸೆಫ್ ಪ್ರಕಾರ, 18 ವರ್ಷದೊಳಗಿನ ವಿವಾಹ ವನ್ನು ಬಾಲ್ಯ ವಿವಾಹ ಎಂದು ಪರಿಗಣಿಸಬೇಕು. ಇಂತಹ ವಿವಾಹಗಳು ಹುಡುಗಿಯ ಬಾಳಿನಲ್ಲಿ ಜೀವಿತಾವಧಿ ಸಂಕಷ್ಟಗಳ ಸರಮಾಲೆಯನ್ನು ತಂದೊಡ್ಡುತ್ತವೆ. ಕೌಟುಂಬಿಕ ಹಿಂಸಾಚಾರ ಅಥವಾ ಇನ್ನಿತರ ಸಮಸ್ಯೆಗಳ ಸುಳಿಗೆ ಸಿಲುಕಿ ಪ್ರಾಣಕ್ಕೇ ಎರವಾಗಬಹುದು.
ಕಾನೂನೊಂದೇ ಸಾಕಾಗಲ್ಲ:ಕಾನೂನು ಜಾರಿಗೆ ಬಂದರಷ್ಟೇ ಸಾಲದು. ಮೇಲ್ಮಧ್ಯಮ ವರ್ಗದಲ್ಲಿ ಯುವತಿಯರು ವಿವಾಹವಾಗುವಾಗ 21 ವರ್ಷ ದಾಟಿ ಇನ್ನೂ ಹೆಚ್ಚಾಗಿರುತ್ತದೆ. ಇದು ಶೈಕ್ಷಣಿಕ ಅರಿವಿನ ಮೂಲಕ ಆಗಿರುವಂತಹ ಬದಲಾವಣೆಯೇ ಹೊರತು ಕಾನೂನಿನ ಬಲವಂತದ ಹೇರಿಕೆ ಮೂಲಕ ಅಲ್ಲ. ಬಡತನದಲ್ಲಿರುವವರಿಗೆ ಶಿಕ್ಷಣ ಸರಿಯಾಗಿ ಸಿಕ್ಕಿರುವುದಿಲ್ಲ. ಅವರ ಬದುಕಿನ ಗುಣಮಟ್ಟವೂ ಸುಧಾರಿಸಿರುವುದಿಲ್ಲ. ಇಂತಹ ಅಂಶಗಳೂ ಪ್ರಾಮುಖ್ಯತೆ ಪಡೆಯುತ್ತದೆ ಎಂದು ಆಕ್ಸ್​ಫಾಮ್ ಇಂಡಿಯಾ ಜೆಂಡರ್ ಜಸ್ಟೀಸ್ ಲೀಡ್ ಸ್ಪೆಷಲಿಸ್ಟ್ ಅಮಿತ ಪಿತ್ರೆ ಹೇಳಿದ್ದಾರೆ.
ಸಬಲೀಕರಣಕ್ಕೆ ಒತ್ತು:ಶಾಲಾ ಪಠ್ಯಕ್ರಮದಲ್ಲಿ ಔಪಚಾರಿಕವಾಗಿಯೆ ಲೈಂಗಿಕ ಶಿಕ್ಷಣವನ್ನು ಪರಿಚಯಿಸಬೇಕು. ಪಾಲಿಟೆಕ್ನಿಕ್ ಇನ್​ಸ್ಟಿಟ್ಯೂಟ್​ಗಳಲ್ಲಿ, ಕೌಶಲ ಮತ್ತು ವ್ಯಾಪಾರ ತರಬೇತಿ, ಜೀವನಾಧಾರ ಸಬಲೀಕರಣ ಮುಂತಾದ ಅಗತ್ಯ ಕ್ರಮಗಳನ್ನು ಕೂಡ ತೆಗೆದುಕೊಳ್ಳಬೇಕು. ಇವೆಲ್ಲವೂ ಅನುಷ್ಠಾನಕ್ಕೆ ಬಂದರೆ ವಿವಾಹಯೋಗ್ಯ ವಯೋಮಿತಿ ಹೆಚ್ಚಳದ ಜಾಗೃತಿ ಮತ್ತು ಪರಿಣಾಮಕಾರಿ ಅನುಷ್ಠಾನ ಸಾಧ್ಯವಿದೆ. ಮದುವೆಗೆ ಮೊದಲೇ ಹುಡುಗಿ ಆರ್ಥಿಕವಾಗಿ ಸ್ವತಂತ್ರಳಾದರೆ ಪಾಲಕರು ಆಕೆಯನ್ನು ವಿವಾಹ ಮಾಡಿಕೊಡುವ ಮೊದಲು ಎರಡು ಬಾರಿ ಆಲೋಚಿಸುತ್ತಾರೆ ಎಂದು ಕಾರ್ಯಪಡೆ ಪ್ರತಿಪಾದಿಸಿದೆ.
ಹಾಲಿ ಕಾನೂನು ಹೇಳುವುದೇನು?:ಹಿಂದು ವಿವಾಹ ಕಾಯ್ದೆ 1955ರ ಸೆಕ್ಷನ್ 5(ಜಿಜಿಜಿ)ರ ಪ್ರಕಾರ, ಮಹಿಳೆಗೆ ವಿವಾಹಯೋಗ್ಯ ಕನಿಷ್ಠ ವಯಸ್ಸು 18, ಪುರುಷನಿಗೆ 21. ವಿಶೇಷ ವಿವಾಹ ಕಾಯ್ದೆ 1954 ಮತ್ತು ಬಾಲ್ಯ ವಿವಾಹ ತಡೆ ಕಾಯ್ದೆ 2006ರ ಪ್ರಕಾರ ಕೂಡ ಮಹಿಳೆಗೆ ವಿವಾಹ ಯೋಗ್ಯ ಕನಿಷ್ಠ ವಯಸ್ಸು 18, ಪುರುಷನಿಗೆ 21.
ಸಾಮಾಜಿಕ-ಆರ್ಥಿಕ ಅಂಶಗಳು:ಹುಡುಗಿಯರ ವಿವಾಹಯೋಗ್ಯ ಕನಿಷ್ಠ ವಯೋಮಿತಿ 21ಕ್ಕೆ ಏರಿಸುವ ಸಂದರ್ಭದಲ್ಲಿ ಸಾಮಾಜಿಕ-ಆರ್ಥಿಕ ಅಂಶಗಳನ್ನೂ ಗಮನಿಸಬೇಕು. ಇದು ಭೌಗೋಳಿಕವಾಗಿ, ಸಾಮುದಾಯಿಕವಾಗಿ ಬದಲಾಗುತ್ತದೆ. ಉದಾಹರಣೆಗೆ ಜಾರ್ಖಂಡ್, ಛತ್ತೀಸ್​ಗಢ ಮುಂತಾದ ರಾಜ್ಯಗಳಲ್ಲಿ ಬಾಲ್ಯ ವಿವಾಹಕ್ಕೆ ತಡೆ ಇಲ್ಲ. ಸಾಮಾಜಿಕ ವ್ಯವಸ್ಥೆಯೇ ಹಾಗಿದೆ. ಇಲ್ಲಿ ಹುಡುಗಿಯ ವಯಸ್ಸು ಪರಿಗಣನೆಗೆ ಬರುವುದಿಲ್ಲ. ಇದನ್ನು ತಪ್ಪಿಸಲು ಹೆಣ್ಮಗುವಿಗೆ ಉಚಿತ ಶಿಕ್ಷಣ, ಸೆಕೆಂಡರಿ ಶಿಕ್ಷಣ ಪೂರ್ಣಗೊಳಿಸಿದಾಗ ಇನ್​ಸೆಂಟಿವ್ಸ್ ಕೊಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ನವದೆಹಲಿಯ ಪಬ್ಲಿಕ್ ಹೆಲ್ತ್ ನ್ಯ್ಯೂಟ್ರಿಷನ್ ಆಂಡ್ ಡೆವಲಪ್​ವೆುಂಟ್ ಸೆಂಟರ್​ನ ನಿರ್ದೇಶಕಿ ಶೀಲಾ ಸಿ. ವೀರ್ ಗಮನಸೆಳೆದಿದ್ದಾರೆ.
ವಿತ್ತ ಸಚಿವೆ ಹೇಳಿದ್ದು:ಭಾರತದಲ್ಲಿ 1978ರಲ್ಲಿ ಮಹಿಳೆಯರ ವಿವಾಹಯೋಗ್ಯ ಕನಿಷ್ಠ ವಯೋಮಿತಿಯನ್ನು 15 ವರ್ಷದಿಂದ 18 ವರ್ಷಕ್ಕೆ ಹೆಚ್ಚಿಸಲು ಶಾರ್ದಾ ಆಕ್ಟ್ ಆಫ್ 1929ಗೆ ತಿದ್ದುಪಡಿ ತರ ಲಾಯಿತು. ಬದಲಾದ ಕಾಲಘಟ್ಟದಲ್ಲಿ ಯುವತಿ ತಾಯ್ತನ ಅನುಭವಿಸುವುದಕ್ಕೆ ಸರಿಯಾದ ವಯಸ್ಸು ಯಾವುದು ಎಂಬ ವಿಚಾರ ಚರ್ಚೆಯ ಮುನ್ನೆಲೆಗೆ ಬಂದಿದೆ ಎಂದು ಕಳೆದ ವರ್ಷ ಮುಂಗಡಪತ್ರ ಮಂಡಿಸುವ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.
ಚೀನಾದಲ್ಲಿ 20, ಟ್ರಿನಿಡಾಡ್​ನಲ್ಲಿ 12!:ವರದಿಗಳ ಪ್ರಕಾರ, ಸರಾಸರಿ ಜಾಗತಿಕ ಲೆಕ್ಕಾಚಾರದಂತೆ ಹುಡುಗರ ವಿವಾಹಯೋಗ್ಯ ಕನಿಷ್ಠ ವಯಸ್ಸು 17 ಮತ್ತು ಹುಡುಗಿಯರದು 16 ವರ್ಷ. ಅನೇಕ ರಾಷ್ಟ್ರಗಳಲ್ಲಿ ಯುವತಿಯರ ವಿವಾಹ ಇನ್ನೂ ಎಳವೆಯಲ್ಲೇ ಆಗಿಬಿಡುತ್ತದೆ.
ಬ್ರಿಟನ್​ನಲ್ಲಿ 16 ಅಥವಾ 17:ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ಕನಿಷ್ಠ 18 ವರ್ಷ ಅಥವಾ ಪಾಲಕರ ಅನುಮತಿಯೊಂದಿಗೆ 16 ಅಥವಾ 17ರ ವಯಸ್ಸಿನಲ್ಲಿ ಮದುವೆ ಆಗಲು ಅವಕಾಶವಿದೆ. ಸ್ಥಳೀಯಾಡಳಿತ ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಳ್ಳುವುದೂ ಬೇಕಾಗಿಲ್ಲ.
ಟೊಬಾಗೊದಲ್ಲಿ 12:ಅಮೆರಿಕದ ಸ್ಟೇಟ್ ಡಿಪಾರ್ಟ್ ಮೆಂಟ್​ನ 2014 ಹ್ಯೂಮನ್ ರೈಟ್ಸ್ ರಿಪೋರ್ಟ್ ಪ್ರಕಾರ, ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ವಿವಾಹಯೋಗ್ಯ ಕನಿಷ್ಠ ವಯಸ್ಸು ಪುರುಷ ಮತ್ತು ಮಹಿಳೆಯರಿಗೆ 18 ವರ್ಷ. ಹಿಂದು ಮತ್ತು ಮುಸಲ್ಮಾನರಿಗೆ ಪ್ರತ್ಯೇಕ ವಿವಾಹ ಕಾಯ್ದೆ ಇದೆ. ಮುಸ್ಲಿಮರಲ್ಲಿ ಹುಡುಗರು 16ರಲ್ಲೂ, ಹುಡುಗಿಯರು 12ರಲ್ಲೂ ವಿವಾಹವಾಗಲು ಅವಕಾಶವಿದೆ. ಹಿಂದುಗಳಲ್ಲಿ ಹುಡುಗರು 18, ಹುಡುಗಿಯರು 14 ವರ್ಷ ಆಗಿದ್ದರೆ ವಿವಾಹವಾಗುತ್ತಾರೆ.
ಅಮೆರಿಕದಲ್ಲಿ ಸರಾಸರಿ 18-21:ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ವಿವಾಹಯೋಗ್ಯ ಕನಿಷ್ಠ ವಯಸ್ಸು ಸರಾಸರಿ 18-21 ವರ್ಷ. ನೆಬ್ರಸ್ಕಾದಲ್ಲಿ ಇದು 19 ವರ್ಷ ಮತ್ತು ಮಿಸ್ಸಿಸಿಪಿಯಲ್ಲಿ 21 ವರ್ಷ. ಇನ್ನುಳಿದಂತೆ ಬಹುತೇಕ ರಾಜ್ಯಗಳಲ್ಲಿ 18 ಮತ್ತು 19 ವರ್ಷ ಇದೆ. ಮಸಾಚುಸೆಟ್ಸ್ ನಲ್ಲಿ ವಿಶೇಷ ಸಂದರ್ಭಗಳಲ್ಲಿ ನ್ಯಾಯಮೂರ್ತಿ ಅನುಮತಿ ಪಡೆದ 12 ವರ್ಷದವರಿಗೆ ವಿವಾಹಕ್ಕೆ ಅವಕಾಶ ಇದೆ.
ಚೀನಾದಲ್ಲಿ ವಯೋಮಿತಿ ಇಳಿಕೆ?:ಚೀನಾದಲ್ಲಿ ಪುರುಷರ ವಿವಾಹಯೋಗ್ಯ ಕನಿಷ್ಠ ವಯಸ್ಸು 22 ಮತ್ತು ಮಹಿಳೆಯರದ್ದು 20 ವರ್ಷ. ಚೀನಾದ ಪೀಪಲ್ಸ್ ಪೊಲಿಟಿಕಲ್ ಕನ್ಸಲ್ಟೇಟಿವ್ ಕಾನ್ಪರೆನ್ಸ್​ನ ರಾಷ್ಟ್ರೀಯ ಸಮಿತಿ ಸದಸ್ಯರೊಬ್ಬರು ಹೇಳಿದ ಪ್ರಕಾರ, ಚೀನಾದಲ್ಲಿ ವಿವಾಹಯೋಗ್ಯ ಕನಿಷ್ಠ ವಯಸ್ಸನ್ನು 18 ವರ್ಷಕ್ಕೆ ಇಳಿಸುವ ಪ್ರಸ್ತಾವನೆ ಚರ್ಚೆಯಲ್ಲಿದೆ.
ಎಸ್ಟೋನಿಯಾದಲ್ಲಿ ಹದಿನೈದು ವರ್ಷ:ಯುರೋಪ್​ನ ಎಸ್ಟೋನಿಯಾ ದಲ್ಲಿ ಪಾಲಕರ ಅನುಮತಿ ಮೇರೆಗೆ ಹದಿಹರೆಯದಲ್ಲೇ ವಿವಾಹವಾಗುವುದು ಸಾಧ್ಯವಿದೆ. ಸ್ಪಾನಿಷ್ ಸರ್ಕಾರ 2015ರಲ್ಲಿ ವಿವಾಹಯೋಗ್ಯ ಕನಿಷ್ಠ ವಯಸ್ಸನ್ನು 14ರಿಂದ 16 ವರ್ಷಕ್ಕೆ ಏರಿಸಿದ್ದು, ಯುರೋಪ್​ನ ಇತರೆ ರಾಷ್ಟ್ರಗಳ ಕಾನೂನಿಗೆ ಸರಿಸಮವಾಗಿ ನಿಲ್ಲಿಸಿದೆ.
ಪ್ರತಿಯೊಂದರಲ್ಲೂ ಲಿಂಗ ಸಮಾನತೆ ಬಗ್ಗೆ ಮಾತನಾಡುವ ನಾವು ಮದುವೆ ವಿಚಾರದಲ್ಲಿ ಮಾತ್ರ ಲಿಂಗ ತಾರತಮ್ಯ ಮಾಡುವುದೇಕೆ? 18 ವರ್ಷಕ್ಕೆ ಕನಿಷ್ಠ ಪದವಿ ಶಿಕ್ಷಣವೂ ಮುಗಿದಿರುವುದಿಲ್ಲ. ಮದುವೆ ವಿಚಾರದಲ್ಲಿ ಸ್ವಂತ ನಿರ್ಧಾರ ಕೈಗೊಳ್ಳುವಷ್ಟು ಪ್ರೌಢಿಮೆಯೂ ಅವರಲ್ಲಿರುವುದಿಲ್ಲ. ಪದವಿ ಶಿಕ್ಷಣ ಪಡೆದಿದ್ದರೆ, ಸ್ವಂತ ಉದ್ಯೋಗಗಳಿಸಿಕೊಂಡು ಆರ್ಥಿಕವಾಗಿ ಸಬಲರಾಗಬಹುದು. 18 ವರ್ಷಕ್ಕೇ ಮದುವೆ ಮಾಡುವುದರಿಂದ ಹೆಣ್ಣು ಮಕ್ಕಳ ಶೈಕ್ಷಣಿಕ ಹಕ್ಕುಗಳ ಉಲ್ಲಂಘನೆಯೂ ಆಗುತ್ತದೆ. ಮತದಾನದ ಹಕ್ಕಿನ ವಿಚಾರಕ್ಕೆ ಬಂದಾಗ ಪುರುಷ, ಮಹಿಳೆಯರಿಬ್ಬರಿಗೂ 18 ವರ್ಷ ವಯಸ್ಸು ನಿಗದಿಪಡಿಸಲಾಗಿದೆ. ಆದರೆ, ಮದುವೆಯ ವಯಸ್ಸಿನಲ್ಲಿ ವ್ಯತ್ಯಾಸವೇಕೆ? ಹೆಣ್ಣು ಮಕ್ಕಳೆಂದರೆ ಖರ್ಚಿಗೆ ದಾರಿ ಎಂಬ ಮನೋಭಾವ ಈ ಹಿಂದೆ ಇತ್ತು. ಆದರೆ, ಈಗ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಪುರುಷರಿಗೆ ಸಮಾನವಾಗಿ ನಿಲ್ಲುತ್ತಿದ್ದಾರೆ. ಕೇಂದ್ರ ಸರ್ಕಾರ ಉತ್ತಮ ನಿರ್ಧಾರ ಕೈಗೊಂಡಿದೆ. ಬಹಳ ವರ್ಷಗಳಿಂದ ಮಹಿಳೆಯರ ವಿಚಾರದಲ್ಲಿದ್ದ ಕಾನೂನು ತಾರತಮ್ಯ ಈಗ ದೂರವಾಗುತ್ತಿದೆ.
|ಶ್ರೀಧರ್ ಪ್ರಭುಹೈಕೋರ್ಟ್ ವಕೀಲರು, ಕಾನೂನು ಸೇವೆಗಳ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + six =
Remember me
