ಭಾರತದಿಂದ ವಲಸೆ ಹೋದ ಕಾರ್ವಿುಕರು ಈ ವರ್ಷ ದಾಖಲೆ ಪ್ರಮಾಣದ ಹಣವನ್ನು ತಾಯ್ನಾಡಿಗೆ ರವಾನಿಸುವ ಹಾದಿಯಲ್ಲಿದ್ದಾರೆ. ರೆಮಿಟೆನ್ಸ್ (ಹಣ ರವಾನೆ) ಪಡೆಯುವಲ್ಲಿ ಭಾರತವು ಕಳೆದ ವರ್ಷದಂತೆ ಈ ವರ್ಷವೂ ಜಗತ್ತಿನಲ್ಲೇ ಅಗ್ರಗಣ್ಯ ರಾಷ್ಟ್ರವಾಗಿ ಮುಂದುವರಿಯಲಿದೆ. ಈಗಾಗಲೇ ಏಷ್ಯಾದ ಮೂರನೇ ಹಾಗೂ ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿರುವ ಭಾರತವು ಈ ಮೂಲಕ ಮತ್ತಷ್ಟು ಆರ್ಥಿಕ ವೃದ್ಧಿ ಸಾಧಿಸಲು ಇದು ಸಾಕಷ್ಟು ಕೊಡುಗೆ ನೀಡಲಿದೆ.
ಈಗಷ್ಟೇ ಪ್ರಕಟವಾದ ವಿಶ್ವ ಬ್ಯಾಂಕ್ ವರದಿಯ ಪ್ರಕಾರ ಭಾರತಕ್ಕೆ ಹರಿದುಬಂದ ರೆಮಿಟೆನ್ಸ್ ಪ್ರಮಾಣ ಶೇಕಡ 12ರಷ್ಟು ರಷ್ಟು ಏರಿಕೆಯಾಗಿದ್ದು, ಈ ವರ್ಷ 100 ಶತಕೋಟಿ ಡಾಲರ್​ಗೆ (8,12,349 ಕೋಟಿ ರೂಪಾಯಿ) ತಲುಪಲಿದೆ. ಇದು ಮೆಕ್ಸಿಕೊ, ಚೀನಾ ಮತ್ತು ಫಿಲಿಪೈನ್ಸ್ ಮೊದಲಾದ ದೇಶಗಳಿಗೆ ಲಭಿಸಿದ ರೆಮಿಟೆನ್ಸ್​ಗಿಂತಲೂ ಸಾಕಷ್ಟು ಹೆಚ್ಚಾಗಿದೆ. ವಿಶ್ವ ಬ್ಯಾಂಕ್ ವರದಿಯ ಪ್ರಕಾರ, ಅಮೆರಿಕ, ಬ್ರಿಟನ್ ಮತ್ತು ಸಿಂಗಾಪುರದಂತಹ ಶ್ರೀಮಂತ ರಾಷ್ಟ್ರಗಳಲ್ಲಿ ವಾಸಿಸುವ ಹೆಚ್ಚು ಕೌಶಲ ಹೊಂದಿರುವ ಭಾರತೀಯ ವಲಸಿಗರು ಹೆಚ್ಚಿನ ಹಣವನ್ನು ಸ್ವದೇಶಕ್ಕೆ ಕಳುಹಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಭಾರತೀಯರು ಕಡಿಮೆ ಸಂಬಳ ನೀಡುವ ಗಲ್ಪ್​ನಂತಹ ಸ್ಥಳಗಳಿಂದ ದೂರ ಸರಿಯುತ್ತಿದ್ದಾರೆ. ವೇತನ ಹೆಚ್ಚಳ, ದಾಖಲೆ ಪ್ರಮಾಣದ ಉದ್ಯೋಗ ಮತ್ತು ದುರ್ಬಲಗೊಂಡ ರೂಪಾಯಿ ಕೂಡ ರೆಮಿಟೆನ್ಸ್ ಹೆಚ್ಚಲು ಸಾಕಷ್ಟು ಅನುಕೂಲ ಒದಗಿಸಿದೆ.
ಹೊರದೇಶದಲ್ಲಿ ಕೆಲಸ ಮಾಡುವ ಬೃಹತ್ ಭಾರತೀಯ ಸಮುದಾಯದಿಂದ ಹಣದ ಒಳಹರಿವು ಭಾರತಕ್ಕೆ ಅಪಾರ ಪ್ರಮಾಣದ ನಗದಿನ ಮೂಲವಾಗಿದೆ. ಭಾರತದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ. 3 ರಷ್ಟಿರುವ ಈ ರವಾನೆಗಳು ಹಣಕಾಸಿನ ಕೊರತೆಯನ್ನು ತುಂಬಲು ಮಹತ್ವದ್ದಾಗಿವೆ. ಅಧಿಕ ಆದಾಯದ ದೇಶಗಳಿಂದ ಭಾರತಕ್ಕೆ ನಗದು ವರ್ಗಾವಣೆಯು 2016-17ರಲ್ಲಿ ಶೇ. 26ರಷ್ಟು ಇದ್ದುದು, 2020-21 ರಲ್ಲಿ ಶೇ. 36ಕ್ಕೆ ಏರಿಕೆಯಾಗಿದೆ. ಇದರಲ್ಲಿ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಐದು ಗಲ್ಪ್ ರಾಷ್ಟ್ರಗಳ ಪಾಲು ಇದೇ ಅವಧಿಯಲ್ಲಿ ಶೇ. 54ರಿಂದ ಶೇ. 28ಕ್ಕೆ ಇಳಿದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಂಕಿ-ಅಂಶಗಳನ್ನು ಉಲ್ಲೇಖಿಸಿ ವಿಶ್ವ ಬ್ಯಾಂಕ್ ಹೇಳಿದೆ.
ಆದರೆ, ದಕ್ಷಿಣ ಏಷ್ಯಾದಾದ್ಯಂತ ಈ ಪ್ರವೃತ್ತಿಯು ಏಕರೂಪವಾಗಿಲ್ಲ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಶ್ರೀಲಂಕಾದ ವಲಸಿಗರು ಗಳಿಸಿದ ಹಣದ ಪ್ರಮಾಣವು ಈ ವರ್ಷ ಕುಸಿಯುವ ನಿರೀಕ್ಷೆಯಿದೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ. ಏಕೆಂದರೆ, ಈ ದೇಶಗಳ ವಲಸಿಗರು ಅಧಿಕೃತ ಮಾರ್ಗಗಳ ಮೂಲಕ ಕಡಿಮೆ ಹಣವನ್ನು ಕಳುಹಿಸಿದ್ದಾರೆ. ಕಾಳ ಸಂತೆ ವಿನಿಮಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ದರಕ್ಕೆ ತಮ್ಮ ವಿದೇಶಿ ವಿನಿಮಯವನ್ನು ಬದಲಾಯಿಸಿಕೊಂಡಿದ್ದಾರೆ ಎಂದು ವರದಿ ಹೇಳಿದೆ.
ಭಾರತವು 2021ರಲ್ಲಿ 87 ಶತಕೋಟಿ ಡಾಲರ್ (7,07,775 ಕೋಟಿ ರೂಪಾಯಿ) ರೆಮಿಟೆನ್ಸ್ ಹಣವನ್ನು ಸ್ವೀಕರಿಸಿತ್ತು. ಈ ಮೂಲಕ ಚೀನಾ ಮತ್ತು ಮೆಕ್ಸಿಕೊದಂತಹ ದೇಶಗಳನ್ನು ಹಿಂದಿಕ್ಕಿ ರೆಮಿಟೆನ್ಸ್ ಸ್ವೀಕರಿಸುವ ಅಗ್ರಗಣ್ಯ ದೇಶವಾಗಿ ಹೊರಹೊಮ್ಮಿತು. 2021ರ ರೆಮಿಟೆನ್ಸ್ ನಗದಿನಲ್ಲಿ ಶೇ. 20ರಷ್ಟು ಅಮೆರಿಕವೊಂದರಿಂದಲೇ ಬಂದಿದೆ.
ಕೋವಿಡ್ ಸಾಂಕ್ರಾಮಿಕ ಬಿಕ್ಕಟ್ಟಿನ ನಡುವೆಯೂ ಭಾರತವು 2020ರಲ್ಲಿ 83 ಶತ ಕೋಟಿ ಡಾಲರ್ (6,75,234 ಕೋಟಿ ರೂಪಾಯಿ) ರೆಮಿಟೆನ್ಸ್ ಸ್ವೀಕರಿಸಿದ್ದು ಕೂಡ ದಾಖಲೆಯೇ ಎಂಬುದು ಗಮನಾರ್ಹವಾಗಿದೆ. 2021ರಲ್ಲಿ ಅಮೆರಿಕದ ಡಾಲರ್​ಗಳ ರೂಪದಲ್ಲಿ ರೆಮಿಟೆನ್ಸ್ ಸ್ವೀಕರಿಸುವ ಐದು ಅಗ್ರಗಣ್ಯ ರಾಷ್ಟ್ರಗಳೆಂದರೆ ಭಾರತ, ಚೀನಾ, ಮೆಕ್ಸಿಕೊ, ಫಿಲಿಪೈನ್ಸ್ ಮತ್ತು ಈಜಿಪ್ಟ್ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಹೇಳಿದೆ. 2021ರಲ್ಲಿ ಚೀನಾ ಮತ್ತು ಮೆಕ್ಸಿಕೊ 53 ಶತಕೋಟಿ ಡಾಲರ್, ಫಿಲಿಪೈನ್ಸ್ (36 ಶತಕೋಟಿ ಡಾಲರ್) ಮತ್ತು ಈಜಿಪ್ಟ್ (33 ಶತಕೋಟಿ ಡಾಲರ್) ನಗದು ರೆಮಿಟೆನ್ಸ್ ಪಡೆದುಕೊಂಡಿವೆ.
ರೆಮಿಟೆನ್ಸ್ ಎಂದರೇನು?:ವಲಸಿಗರು ತಮ್ಮ ಸಂಪಾದನೆಯ ಭಾಗವನ್ನು ತಮ್ಮ ಕುಟುಂಬಗಳನ್ನು ಬೆಂಬಲಿಸಲು ನಗದು ಅಥವಾ ಸರಕುಗಳ ರೂಪದಲ್ಲಿ ಮನೆಗೆ ಕಳುಹಿಸಿದಾಗ, ಈ ವರ್ಗಾವಣೆಗಳನ್ನು ಕಾರ್ವಿುಕರ ಅಥವಾ ವಲಸೆ ರವಾನೆ (ರೆಮಿಟೆನ್ಸ್) ಎಂದು ಕರೆಯಲಾಗುತ್ತದೆ. ಜಗತ್ತಿನಾದ್ಯಂತ ಕಳೆದ ಕೆಲವು ವರ್ಷಗಳಲ್ಲಿ ಇಂತಹರ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಅನೇಕ ಅಭಿವೃದ್ಧಿಶೀಲ ಆರ್ಥಿಕತೆಗಳಿಗೆ ವಿದೇಶಿ ಆದಾಯದ ಅತಿದೊಡ್ಡ ಮೂಲವಾಗಿ ರೆಮಿಟೆನ್ಸ್ ಹೊರಹೊಮ್ಮಿದೆ.
ವಲಸಿಗರು ನೂರು ಕೋಟಿ:ಇಂದು ವಿಶ್ವದ ಎಂಟು ಜನರ ಪೈಕಿ ಒಬ್ಬರು ನಿರಾಶ್ರಿತರು ಇಲ್ಲವೇ ವಲಸಿಗರಾಗಿದ್ದಾರೆ. ಇವರ ಸಂಖ್ಯೆ ಒಂದು ಶತ ಕೋಟಿ ಆಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಹೇಳುತ್ತದೆ. ಇವರ ಮೂಲಕ ಜಾಗತಿಕವಾಗಿ ಒಟ್ಟು ರೆಮಿಟೆನ್ಸ್ ನಗದು 2022ರಲ್ಲಿ ಶೇ. 4.2 ರಷ್ಟು ಏರಿಕೆಯಾಗಿ 630 ಶತಕೋಟಿ ಡಾಲರ್​ಗೆ (51,25,271 ಲಕ್ಷ ಕೋಟಿ ರೂಪಾಯಿ) ತಲುಪುವ ನಿರೀಕ್ಷೆಯಿದೆ. ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ 2020ರಲ್ಲಿ ಹಣದ ರವಾನೆ ಕುಸಿತ ಕಂಡಿದ್ದರೂ 2021ರಲ್ಲಿ ಶೇ. 8.6ರಷ್ಟು ದಾಖಲೆಯ ಚೇತರಿಕೆ ಕಂಡಿತ್ತು.
3.2 ಕೋಟಿ ಎನ್​ಆರ್​ಐ:ಭಾರತಕ್ಕೆ ರೆಮಿಟೆನ್ಸ್ ನಗದು ಅನಿವಾಸಿ ಭಾರತೀಯರು (ಎನ್​ಆರ್​ಐ- ನಾನ್ ರೆಸಿಡೆಂಟ್ ಇಂಡಿಯನ್) ಮತ್ತು ಭಾರತದ ಸಾಗರೋತ್ತರ ಪ್ರಜೆಗಳು (ಒಸಿಐ- ಓವರ್​ಸೀಸ್ ಸಿಟಿಜನ್ಸ್ ಆಫ್ ಇಂಡಿಯಾ) ಮೂಲಕ ಬರುತ್ತದೆ. ತಾತ್ಕಾಲಿಕವಾಗಿ ಕೆಲ ದಿನಗಳ ಮಟ್ಟಿಗೆ ಕೆಲಸ ಮಾಡಲು ವಿದೇಶಗಳಿಗೆ ಹೋಗಿರುವ ಭಾರತೀಯ ಪ್ರಜೆಗಳನ್ನು ಎನ್​ಆರ್​ಐ ಎನ್ನುತ್ತಾರೆ. ಆದರೆ, ಒಸಿಐಗಳು ಭಾರತೀಯ ಪ್ರಜೆಗಳಾಗಿರುವುದಿಲ್ಲ. ವಿದೇಶಗಳಲ್ಲಿರುವ ಭಾರತೀಯ ಮೂಲದವರಿಗೆ ಭಾರತದಲ್ಲಿ ವಾಸಿಸಲು, ಹೂಡಿಕೆ ಮಾಡಲು ಕಲ್ಪಿಸಿರುವ ವಿಶೇಷ ಸೌಲಭ್ಯ ಇದಾಗಿದ್ದು, 2006ರಿಂದ ಒಸಿಐ ಕಾರ್ಡ್ ನೀಡುವ ವ್ಯವಸ್ಥೆ ಆರಂಭಿಸಲಾಗಿದೆ. ಒಸಿಐಗಳು ಭಾರತದಲ್ಲಿ ಸ್ಥಿರಾಸ್ಥಿಗಳನ್ನು ಖರೀದಿಸಬಹುದಾಗಿದೆ. ಆದರೆ, ಕೃಷಿಯಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿಲ್ಲ. ಎನ್​ಆರ್​ಐಗಳ ಸಂಖ್ಯೆ 3.2 ಕೋಟಿ ಎಂದು ಅಂದಾಜಿಸಲಾಗಿದೆ. ಒಸಿಐಗಳ ಸಂಖ್ಯೆ 60 ಲಕ್ಷಕ್ಕಿಂತಲೂ ಅಧಿಕವಾಗಿದೆ.
ಮೂರೂವರೆ ನಿಮಿಷಗಳಲ್ಲಿ ಪಾಸ್ತಾ ಆಗ್ತಿಲ್ಲ ಅಂತ ಕಂಪನಿ ವಿರುದ್ಧ ಸುಮಾರು 40 ಕೋಟಿ ರೂ. ಕೇಸ್ ಹಾಕಿದ ಯುವತಿ!

ರಿಪಬ್ಲಿಕ್ ಸ್ಟುಡಿಯೋದಲ್ಲಿ ‘ವಿಜಯಾನಂದ’ ಚಿತ್ರತಂಡ; ಡಿ. 9ರಂದು ಅದ್ಧೂರಿ ಬಿಡುಗಡೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 6 =
Remember me
