ಮುಂಬೈ:ಹಣದುಬ್ಬರದ ಪ್ರಮಾಣ ತಗ್ಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಸಾಲದ ಮೇಲಿನ ಬಡ್ಡಿ ದರವನ್ನು 50 ಮೂಲಾಂಶ ಹೆಚ್ಚಳ ಮಾಡಿದೆ. ಇದರಿಂದ ರೆಪೊ ದರ ಶೇ. 5.90ಕ್ಕೆ ತಲುಪಿದೆ. ಕಳೆದ ಮೇ ತಿಂಗಳಿಂದೀಚೆಗೆ ನಾಲ್ಕನೇ ಸಾರಿ ರೆಪೊ ದರ ಹೆಚ್ಚಳ ಆಗಿದ್ದು, ಒಟ್ಟು 190 ಮೂಲಾಂಶ ಏರಿಕೆಯಾಗಿದೆ. ಇದರಿಂದ 2019ರ ಏಪ್ರಿಲ್ ನಂತರ ಇದು ಗರಿಷ್ಠ ಮಟ್ಟಕ್ಕೆ ಮುಟ್ಟಿದೆ.
ದ್ವೈಮಾಸಿಕವಾಗಿ ನಡೆಯುವ ಆರ್​ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ರೆಪೊ ದರವನ್ನು 50 ಮೂಲಾಂಶ ಏರಿಕೆ ಮಾಡುವ ಪ್ರಸ್ತಾವಕ್ಕೆ ಆರು ಸದಸ್ಯರಲ್ಲಿ ಐವರು ಶುಕ್ರವಾರ ಸಮ್ಮತಿ ಸೂಚಿಸಿದರು. ಎಂಪಿಸಿಯ ಈ ನಿರ್ಧಾರದಿಂದ ಗೃಹ, ವಾಹನ, ವೈಯಕ್ತಿಕ ಸೇರಿ ವಿವಿಧ ಸಾಲದ ಮೇಲಿನ ಬಡ್ಡಿ ದುಬಾರಿಯಾಗಲಿದೆ. ಕಳೆದ ಎರಡೂವರೆ ವರ್ಷದಿಂದ 2 ದೊಡ್ಡ ಆಘಾತಕ್ಕೆ ವಿಶ್ವಸಮುದಾಯ ಸಾಕ್ಷಿಯಾಗಿದೆ. ಇದರಿಂದ ಜಾಗತಿಕ ಆರ್ಥಿಕತೆ ಅನಿಶ್ಚಿತತೆ ಕೂಡಿದ್ದರೂ ಭಾರತದ ಆರ್ಥಿಕತೆಯು ಬೇರೆ ದೇಶದಷ್ಟು ಹದಗೆಡಲಿಲ್ಲ. ಸರ್ಕಾರ ಮತ್ತು ಆರ್​ಬಿಐ ಸಕಾಲದಲ್ಲಿ ಕೈಗೊಂಡ ಆರ್ಥಿಕ ಬಿಗಿಕ್ರಮಗಳಿಂದ ಪ್ರಗತಿ ಪಥದಲ್ಲೇ ಸ್ಥಿರತೆ ಕಾಯ್ದುಕೊಂಡಿತು. ಹಣಕಾಸು ವ್ಯವಸ್ಥೆಯು ಸುಧಾರಿತ ಮಾರ್ಗದಲ್ಲಿ ಮುನ್ನಡೆಯಿತು ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.
35 ಕೋಟಿ ಕಾರ್ಡ್ ಟೋಕನೈಸೇಷನ್ ಪೂರ್ಣ:ಅಕ್ಟೋಬರ್ 1ರಿಂದ ಡಿಬಿಟ್ ಮತ್ತು ಕ್ರೆಡಿಟ್ ಕಾರ್ಡ್​ಗಳ ಟೋಕನೈಸೇಷನ್ ಕಡ್ಡಾಯವಾಗಿದ್ದು, ಶುಕ್ರವಾರದವರೆಗೆ ಸುಮಾರು 35 ಕೋಟಿ ಕಾರ್ಡ್ ಗಳಿಗೆ ಟೋಕನ್ ಸಂಖ್ಯೆ ನೀಡಲಾಗಿದೆ ಎಂದು ಆರ್​ಬಿಐ ಹೇಳಿದೆ. ಟೋಕನೈಸೇಷನ್ ಪ್ರಕ್ರಿಯೆಯಲ್ಲಿ ಗ್ರಾಹಕರು ಇನ್ನೂ ಪೂರ್ಣಪ್ರಮಾಣದಲ್ಲಿ ತೊಡಗಿಕೊಂಡಿಲ್ಲ್ಲ ಆದರೆ, ಮುಂಬರುವ ದಿನಗಳಲ್ಲಿ ಖಂಡಿತ ಚುರುಕಿನಿಂದ ನಡೆಯುತ್ತದೆ ಎಂದು ಆರ್​ಬಿಐನ ಡೆಪ್ಯುಟಿ ಗವರ್ನರ್ ಟಿ.ರವಿಶಂಕರ್ ಹೇಳಿದ್ದಾರೆ. ಸೆಪ್ಟೆಂಬರ್​ನಲ್ಲಿ ನಡೆದ ಆನ್​ಲೈನ್ ವರ್ಗಾವಣೆಯಲ್ಲಿ ಶೇ. 40ರಷ್ಟು (63 ಕೋಟಿ ರೂ. ವಹಿವಾಟು) ಟೋಕನೈಸೇಷನ್​ಗೆ ಒಳಪಟ್ಟಿದೆ ಎಂದು ಅವರು ತಿಳಿಸಿದ್ದಾರೆ. ಗ್ರಾಹಕರ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಸುರಕ್ಷತೆಯನ್ನು ಹೆಚ್ಚಿಸಲು ಆರ್​ಬಿಐ ಟೋಕನೈಸೇಷನ್ ಕಡ್ಡಾಯ ಮಾಡಿದೆ.
ಹಣದುಬ್ಬರದ ಹೊಡೆತ:ಕಳೆದ ಜೂನ್​ನಲ್ಲಿ ಶೇ. 7.1 ಇದ್ದ ಗ್ರಾಹಕ ದರ ಸೂಚ್ಯಂಕದ (ಸಿಪಿಐ) ಹಣದುಬ್ಬರ ಪ್ರಮಾಣ, ಜುಲೈ ತಿಂಗಳಲ್ಲಿ ಶೇ. 6.71ಕ್ಕೆ ತಗ್ಗಿತ್ತು. ಇದಕ್ಕೆ ಆರ್​ಬಿಐನ ರೆಪೊ ದರ ಹೆಚ್ಚಳ ಹಾಗೂ ಕೇಂದ್ರ ಸರ್ಕಾರ ಖಾದ್ಯ ತೈಲದ ಮೇಲಿನ ಬೆಲೆ ಇಳಿಕೆ ಮಾಡಲು ಸೂಚಿಸಿದ್ದು ಕಾರಣವಾಗಿತ್ತು. ಆದರೆ, ಆಗಸ್ಟ್​ನಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ ಮತ್ತೆ ಶೇ. 0.29 ಏರಿಕೆಯಾಗಿ ಶೇ. 7ಕ್ಕೆ ತಲುಪಿತು. ಹಣದುಬ್ಬರ ಪ್ರಮಾಣವು ಶೇ. 6ರೊಳಗೆ ಇರಬೇಕು ಎನ್ನುವುದು ಆರ್​ಬಿಐ ಗುರಿ. ಆದರೆ, ರಷ್ಯಾ-ಯೂಕ್ರೇನ್ ಸಂಘರ್ಷದಿಂದ ಹಣದುಬ್ಬರದ ಗುರಿಯನ್ನು ಆರ್​ಬಿಐ ತುಸು ಹಿಗ್ಗಿಸಿದೆ. ಅಕ್ಟೋಬರ್​ನಿಂದ ಆರಂಭವಾಗುವ ಮೂರನೇ ತ್ರೖೆಮಾಸಿಕದ ಹಣದುಬ್ಬರದ ಅಂದಾಜನ್ನು ಶೇ. 6.5 ಮತ್ತು ಕಡೆಯ ಚರಣದ ತ್ರೖೆಮಾಸಿಕದಲ್ಲಿ ಇದನ್ನು ಶೇ. 5.8ಕ್ಕೆ . 2022-23ರ ಒಟ್ಟಾರೆ ಹಣದುಬ್ಬರದ ಪ್ರಮಾಣವನ್ನು ಶೇ. 6.7ಕ್ಕೆ ಇರಿಸಿ ಕೊಂಡಿದೆ. 2023-24ರ ಮೊದಲ ತ್ರೖೆಮಾಸಿಕದಲ್ಲಿ ಹಣದುಬ್ಬರವನ್ನು ಶೇ. 5 ಇರಲಿದೆ ಎಂದು ಅಂದಾಜು ಮಾಡಿದೆ.
ಹಣದುಬ್ಬರ ಪ್ರಮಾಣ ನಿಗದಿತ ಗುರಿಯೊಳಗೆ ತರಲು ಮತ್ತು ಆರ್ಥಿಕ ಪ್ರಗತಿಯ ಸ್ಥಿರತೆಗೆ ಬೆಂಬಲ ನೀಡಲು ರೆಪೊ ದರ ಏರಿಕೆ ಅನಿವಾರ್ಯ ಕ್ರಮ ಆಗಿದೆ. ಇದನ್ನು ಎಂಪಿಸಿ ಬಹುಮತದಿಂದ ಅನುಮೋದಿಸಿದೆ.
|ಶಕ್ತಿಕಾಂತ ದಾಸ್ಆರ್​ಬಿಐ ಗವರ್ನರ್
ಜಿಡಿಪಿ ನಿರೀಕ್ಷೆ ಇಳಿಕೆ:ಪ್ರಸಕ್ತ ವರ್ಷದ ಮೊದಲ ತ್ರೖೆಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನದ ದರ (ಜಿಡಿಪಿ) ಶೇ. 13.5 ಮುಟ್ಟಿದೆ. ಆದರೆ ಇದು ಆರ್​ಬಿಐ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಇದೆ. ಹೀಗಾಗಿ ಈ ಆರ್ಥಿಕ ಸಾಲಿನ ಒಟ್ಟಾರೆ ಜಿಡಿಪಿ ಯನ್ನು ಮೊದಲು ಅಂದಾಜಿಸಿದ್ದಕ್ಕಿಂತ (ಶೇ. 7.2) ತುಸು ಕಡಿಮೆ ಮಾಡಿರುವ ಆರ್​ಬಿಐ, ಶೇ. 7ಕ್ಕೆ ಮರುನಿಗದಿ ಮಾಡಿದೆ. ಈ ಸಾರಿಯ ಮುಂಗಾರು ಹಂಗಾಮು ಚೇತರಿಸಿಕೊಂಡಿರುವ ಕಾರಣ ಮತ್ತು ದೇಶದ ಬಹುತೇಕ ಜಲಾಶಯಗಳು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸ್ಥಿತಿ ಆಶಾದಾಯಕವಾಗಿದೆ. ಬ್ಯಾಂಕ್​ಗಳ ಸಾಲ ವಿತರಣೆ ವಿಸ್ತರಿಸುವ ನಿರೀಕ್ಷೆ ಇದೆ.
ಪುಟಿದೆದ್ದ ಷೇರುಪೇಟೆ:ಸೆನ್ಸೆಕ್ಸ್ ಸಂವೇದಿಯಲ್ಲಿ 1,016.96 ಅಂಶ (ಶೇ. 1.80) ಏರಿಕೆ ಆಗಿದ್ದು, ಶುಕ್ರವಾರದ ವಹಿವಾಟು 57,426.92ಕ್ಕೆ ಕೊನೆಗೊಂಡಿದೆ. ಮಧ್ಯಂತರ ವಹಿವಾಟಿನಲ್ಲಿ 1,312 ಪಾಯಿಂಟ್ ಏರಿಕೆ ಕಂಡಿತ್ತು. ರಾಷ್ಟ್ರೀಯ ಷೇರುಪೇಟೆ ನಿಫ್ಟಿಯಲ್ಲಿ 276.25 ಅಂಶ (ಶೇ. 1.64) ಹಿಗ್ಗಿದ್ದು, 17,094.35ರಲ್ಲಿ ವಹಿವಾಟು ಮುಕ್ತಾಯ ಆಗಿದೆ. ಚಿನಿವಾರ ಪೇಟೆಯಲ್ಲಿ ಬಂಗಾರದ ದರ 406 ರೂ. ಹೆಚ್ಚಳ ಆಗಿದ್ದು, 10 ಗ್ರಾಂ ಅಪರಂಜಿ ಚಿನ್ನದ ಬೆಲೆ 50,722 ರೂ.ಗೆ ಏರಿಕೆ ಆಗಿದೆ. ರೂಪಾಯಿ 33 ಪೈಸೆ ವೃದ್ಧಿಸಿದೆ.
ಸೌಂದರ್ಯ ಜಗದೀಶ್ ಮತ್ತು ನೆರೆಮನೆ ಜಗಳ ಬೀದಿಗೆ; ಠಾಣೆಯಲ್ಲಿ ದೂರು-ಪ್ರತಿದೂರು ದಾಖಲು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
