ನವದೆಹಲಿ:ಕೇಂದ್ರ ಸರ್ಕಾರ ಜಿಎಸ್​ಟಿ ಪರಿಹಾರವನ್ನು ಇನ್ನೂ ಮೂರು ವರ್ಷಗಳಿಗೆ ಮುಂದುವರಿಸುವಂತೆ ಹಾಗೂ 15ನೇ ಹಣಕಾಸು ಆಯೋಗದ ಅನುದಾನ ಹಂಚಿಕೆ ಹೆಚ್ಚಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ಗೆ ಮನವಿ ಮಾಡಿದ್ದಾರೆ. ಕೋವಿಡ್ ಸಾಂಕ್ರಾಮಿಕದಿಂದ ರಾಜ್ಯಗಳ ತೆರಿಗೆ ಸಂಗ್ರಹ ಕಡಿಮೆಯಾಗಿದ್ದು, ಸಾಮಾನ್ಯ ಸ್ಥಿತಿಗೆ ಬರಲು ಕೆಲವು ವರ್ಷಗಳೇ ಬೇಕಾಗಬಹುದು. ಕಳೆದ ವರ್ಷ ಜಿಎಸ್​ಟಿ ಪರಿಹಾರ ಸಾಲ ಒದಗಿಸಲಾಗಿತ್ತು. ಈ ವರ್ಷವೂ ಈ ಸೌಲಭ್ಯ ವಿಸ್ತರಿಸಲಾಗಿದೆ. ಆದರೆ ರಾಜ್ಯಗಳ ಹಣಕಾಸು ಸ್ಥಿತಿ ಸುಧಾರಿಸುವವರೆಗೆ ಕೇಂದ್ರದ ನೆರವು ಅಗತ್ಯವಾಗಿದ್ದು, 3 ವರ್ಷಗಳ ಅವಧಿಗೆ ಪರಿಹಾರ ವಿಸ್ತರಿಸುವಂತೆ ಸಿಎಂ ಕೋರಿದ್ದಾರೆ.
15ನೇ ಹಣಕಾಸು ಆಯೋಗ 2021ರಿಂದ 2026ರ ಅವಧಿಗೆ ರಾಜ್ಯಗಳಿಗೆ ತೆರಿಗೆ ಹಂಚಿಕೆಗೆ ಮಾಡಿದ ಶಿಫಾರಸಿನ ಅನ್ವಯ ರಾಜ್ಯದ ಹಂಚಿಕೆ 14ನೇ ಹಣಕಾಸು ಆಯೋಗ ಶಿಫಾರಸು ಮಾಡಿದ ಶೇ.4.71ರಿಂದ ಶೇ.3.647ಕ್ಕೆ ಇಳಿಕೆಯಾಗಿದೆ. ಇದರಿಂದ ಅನುದಾನ ಹಂಚಿಕೆಯಲ್ಲಿ ತೀವ್ರ ಇಳಿಕೆಯಾಗಿದೆ. ಹಾಗಾಗಿ ಅನುದಾನ ಹಂಚಿಕೆ ಕುರಿತ ಮಾನದಂಡಗಳನ್ನು ಬದಲಿಸುವಂತೆ ರಾಜ್ಯ ಸರ್ಕಾರವು 15ನೇ ಹಣಕಾಸು ಆಯೋಗಕ್ಕೆ ಈಗಾಗಲೆ ಮನವಿ ಸಲ್ಲಿಸಿದ್ದು, ರಾಜ್ಯದ ಮನವಿಯನ್ನು ಆಯೋಗ ಪರಿಗಣಿಸಿಲ್ಲ. ಇದರಿಂದಾಗಿ ದಕ್ಷಿಣದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂಬುದನ್ನೂ ಸಿಎಂ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾರೆ.
15ನೇ ಹಣಕಾಸು ಆಯೋಗವು ತನ್ನ ಶಿಫಾರಸಿನಲ್ಲಿ ರಾಜ್ಯ ನಿರ್ದಿಷ್ಟ ಅನುದಾನದಡಿ ರಾಜ್ಯಕ್ಕೆ ಬೆಂಗಳೂರಿನ ಜಲಮೂಲಗಳು ಹಾಗೂ ಪೇರಿಫೆರಲ್ ರಿಂಗ್ ರಸ್ತೆಗೆ 6,000 ಕೋಟಿ ರೂ. ನಿಗದಿಪಡಿಸಿದೆ. ಆದರೆ ಕೇಂದ್ರ ಸರ್ಕಾರದ ಎಕ್ಸ್​ಪ್ಲನೇಟರಿ ಮೆಮೊರಂಡಂನಲ್ಲಿ ಹಣಕಾಸು ಆಯೋಗ ಈ ಶಿಫಾರಸನ್ನು ಪ್ರಸ್ತಾಪಿಸಿಲ್ಲ. ಇದರಿಂದ ಮೊದಲೇ ತೆರಿಗೆ ಹಂಚಿಕೆಯಲ್ಲಿ ಇಳಿಕೆಯಾಗಿರುವ ರಾಜ್ಯಕ್ಕೆ ಇನ್ನಷ್ಟು ಹಿನ್ನಡೆಯಾಗಲಿದೆ ಎಂದು ಹೇಳಿದ್ದಾರೆ. ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಯಿಂದ ಹೆಚ್ಚಿನ ಹೂಡಿಕೆ ಆಕರ್ಷಿಸಲು 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬೆಂಗಳೂರು ಅಭಿವೃದ್ಧಿಗೆ ಅನುದಾನ ಒದಗಿಸಬೇಕೆಂದೂ ಮನವಿ ಮಾಡಿದ್ದಾರೆ.
ರಾಜ್ಯದ ಜಲ ವ್ಯಾಜ್ಯಗಳು ಹಾಗೂ ನೀರಾವರಿ ಯೋಜನೆಗಳ ಜಾರಿಗೆ ಎದುರಾಗಿರುವ ಅಡೆತಡೆಗಳನ್ನು ಶೀಘ್ರ ತೊಡೆದುಹಾಕುವಲ್ಲಿ ಕಾನೂನು ತಂಡ ಮತ್ತು ಅಧಿಕಾರಿಗಳು ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ದೆಹಲಿ ಕರ್ನಾಟಕ ಭವನದಲ್ಲಿ ರಾಜ್ಯದ ಅಧಿಕಾರಿಗಳು ಮತ್ತು ಕಾನೂನು ತಂಡದೊಂದಿಗೆ ಸಭೆ ನಡೆಸಿದ ಸಿಎಂ, ಜಲವ್ಯಾಜ್ಯಗಳ ಬಗ್ಗೆ ನನಗೂ ಅರಿವಿದ್ದು, ವಿನಾಕಾರಣ ವಿಳಂಬಗೊಳ್ಳುವುದಕ್ಕೆ ಅವಕಾಶ ಕೊಡಬಾರದು. ಕಾನೂನಾತ್ಮಕವಾಗಿ ಎದುರಾಳಿಗಳನ್ನು ಹೇಗೆ ಕಟ್ಟಿಹಾಕಬಹುದು ಎಂಬ ಬಗ್ಗೆ ಯೋಚಿಸಿ ತಂತ್ರಗಳನ್ನು ರೂಪಿಸಿಕೊಳ್ಳಿ. ಸರ್ಕಾರದ ಮಟ್ಟದಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಸಭೆಯಲ್ಲಿ ಸಿಎಂ ಹೇಳಿದ್ದಾರೆ. ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಸವೋಚ್ಛ ನ್ಯಾಯಾಲಯದಲ್ಲಿ ಸುದೀರ್ಘ ಕಾಲದಿಂದ ಬಾಕಿ ಉಳಿದಿರುವ ಜಲವಿವಾದಗಳಿಗೆ ಸಂಬಂಧಿಸಿದ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಬದ್ಧರಾಗಿದ್ದೇವೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಾಗೂ ತಮಿಳುನಾಡು ಸರ್ಕಾರ ಕೈಗೆತ್ತಿಕೊಂಡಿರುವ ಯೋಜನೆಗಳ ವಿರುದ್ಧ
ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲು ತೀರ್ವನಿಸಲಾಗಿದೆ ಎಂದರು. ತಮಿಳುನಾಡು ನದಿ ಜೋಡಣೆ ಯೋಜನೆಗಳು ಕಾನೂನು ಬಾಹಿರವಾಗಿದ್ದು, ಆ ಬಗ್ಗೆ ರ್ಚಚಿಸಲಾಗಿದೆ. ಮೇಕೆದಾಟಿಗೆ ಸಂಬಂಧಿಸಿ ತಮಿಳುನಾಡು ಮಧುರೈ ನ್ಯಾಯಾಲಯದಲ್ಲಿ ಪ್ರಕರಣವೊಂದು ದಾಖಲಾಗಿದೆ. ಈ ಪ್ರಕರಣ ಮಧುರೈ ವ್ಯಾಪ್ತಿಗೆ ಒಳಪಡದಿರುವುದರಿಂದ ಅದನ್ನು ಕೈಬಿಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
150 ಮಿಡಿ ಮಾವಿನ ತಳಿ ರೂಪಿಸಿದ ಅಪರೂಪದ ರೈತ ಇವರು…

ಫ್ರೀ ಕೊಟ್ರೂ ಊಟ-ತಿಂಡಿ-ನೀರು ಏನೂ ಬೇಡ ಎಂದು ಹೇಳಿ ಸಿಕ್ಕಿಬಿದ್ದ ಸ್ಮಗ್ಲರ್; ಹೊಟ್ಟೆಯಲ್ಲಿತ್ತು 11 ಕೋಟಿ ರೂ. ಮೌಲ್ಯದ ಡ್ರಗ್ಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 8 =
Remember me
