ದೇಶದ ಆಹಾರ ಬಟ್ಟಲನ್ನು ಸದೃಢ ಹಾಗೂ ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ರೈತರಿಗೆ ತಂತ್ರಜ್ಞಾನ ಆಧಾರಿತ ಸೌಲಭ್ಯ ಒದಗಿಸುವ ಮೂಲಕ ಕೃಷಿ ಕ್ಷೇತ್ರವನ್ನು ಸಶಕ್ತಗೊಳಿಸಲು ಡಿಜಿಟಲ್ ಸ್ಪರ್ಶ ನೀಡುವ ಸಂಕಲ್ಪವನ್ನು ಪ್ರಸಕ್ತ ಆಯವ್ಯಯದಲ್ಲಿ ಕೈಗೊಳ್ಳಲಾಗಿದೆ. ವ್ಯವಸಾಯ ಕ್ಷೇತ್ರವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಯ ಹಳಿಯ ಮೇಲೆ ತರಲು ರೈತಸ್ನೇಹಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಒತ್ತು ನೀಡಲಾಗಿದೆ.
ಮುಂದಿನ ಎರಡು ವರ್ಷದಲ್ಲಿ ದೇಶಾದ್ಯಂತ 1 ಕೋಟಿ ರೈತರನ್ನು ನೈಸರ್ಗಿಕ ಕೃಷಿಯಲ್ಲಿ ತೊಡಗಿಸುವುದು, ದ್ವಿದಳ ಧಾನ್ಯ-ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಗಾಗಿ ಅಭಿಯಾನ, ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಒದಗಿಸುವುದು, ಹೆಚ್ಚು ಇಳುವರಿ ಮತ್ತು ಬರ ನಿರೋಧಕವುಳ್ಳ 100ಕ್ಕೂ ಹೆಚ್ಚು ಬೆಳೆ ತಳಿಗಳನ್ನು ರೈತರಿಗೆ ತಲುಪಿಸುವ ವಾಗ್ದಾನ ನೀಡಲಾಗಿದೆ. ಜತೆಗೆ ಕೃಷಿಕರಿಗೆ ಸುಲಭವಾಗಿ ಸಾಲಸೌಲಭ್ಯ ಹಾಗೂ ಸಹಕಾರ ತತ್ವದಡಿ ಗ್ರಾಮೀಣರ ಏಳಿಗೆಗೆ ಪೂರಕವಾಗುವಂತಹ ರಾಷ್ಟ್ರೀಯ ಸಹಕಾರ ನೀತಿ ಜಾರಿಗೆ ತರಲಾಗುತ್ತದೆ. ಈ ಎಲ್ಲ ಕೃಷಿ ಹಾಗೂ ಕೃಷಿ ಸಂಬಂಧಿತ ಕಾರ್ಯಕ್ರಮಗಳನ್ನು ಕಾಲಮಿತಿಯೊಳಗೆ ಜಾರಿಗೆ ತರಲು 1,51,851 ಕೋಟಿ ರೂ. ಮೊತ್ತದ ಅನುದಾನವನ್ನು ನಿಗದಿ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.
ಮುಖ್ಯವಾಗಿ ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಮೇಲಿನ ಅವಲಂಬನೆ ಕಡಿಮೆಗೊಳಿಸಿ ಮಣ್ಣಿನ ಆರೋಗ್ಯ ವೃದ್ಧಿ, ಜೀವವೈವಿಧ್ಯತೆ ಹೆಚ್ಚಳ ಹಾಗೂ ಕೃಷಿ ವೆಚ್ಚ ತಗ್ಗಿಸುವ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ. ಸರ್ಕಾರದ ಈ ಪ್ರಯತ್ನದಿಂದಾಗಿ ಗ್ರಾಮೀಣ ಭಾಗದ ಆರ್ಥಿಕತೆಯನ್ನು ವೃದ್ಧಿಸುವ ಮಹತ್ವಾಕಾಂಕ್ಷೆಯನ್ನು ಸರ್ಕಾರ ಹೊಂದಿರುವುದಾಗಿ ಹಣಕಾಸು ಸಚಿವೆ ಬಜೆಟ್ ವೇಳೆ ಪ್ರತಿಪಾದಿಸಿದ್ದಾರೆ.
ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ:ಪ್ರಾಯೋಗಿಕ ಯೋಜನೆಯ ಯಶಸ್ಸಿನಿಂದ ಉತ್ತೇಜಿತವಾಗಿರುವ ನಮ್ಮ ಸರ್ಕಾರವು, ರಾಜ್ಯಗಳ ಸಹಭಾಗಿತ್ವದಲ್ಲಿ ರೈತರು ಹಾಗೂ ಅವರ ಜಮೀನುಗಳ ವ್ಯಾಪ್ತಿಗಾಗಿ ಕೃಷಿಯಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಅನುಷ್ಠಾನವನ್ನು 3 ವರ್ಷಗಳಲ್ಲಿ ಅನುಷ್ಠಾನಗೊಳಿಸಲು ಮುಂದಾಗಿದೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಿದ್ದು, ಈ ವರ್ಷ ದೇಶದ 400 ಜಿಲ್ಲೆಗಳಲ್ಲಿ ಡಿಪಿಐ ಬಳಸಿ, ಖಾರಿಫ್ ಹಂಗಾಮಿನಲ್ಲಿ ಡಿಜಿಟಲ್ ಬೆಳೆ ಸಮೀಕ್ಷೆ ಕೈಗೊಳ್ಳಲಾಗುವುದು. ಇಂತಹ ವಿನೂತನ ಕಾರ್ಯಕ್ರಮದ ಮೂಲಕ 6 ಕೋಟಿ ರೈತರು ಹಾಗೂ ಅವರ ಜಮೀನುಗಳ ಮಾಹಿತಿಯನ್ನು ರೈತ ಮತ್ತು ಭೂ ದಾಖಲೆಗಳಲ್ಲಿ ಅಳವಡಿಸಲಾಗುತ್ತದೆ. ಇದರಿಂದ ರೈತರಿಗೆ ತಮ್ಮ ಜಮೀನಿನ ಪಹಣಿ ಸಹಿತ ಇನ್ನಿತರ ದಾಖಲಾತಿಗಳನ್ನು ಸಂರಕ್ಷಿಸಿಡಲು ಅನುಕೂಲವಾಗಲಿದೆ. ಜತೆಗೆ ಐದು ರಾಜ್ಯಗಳಲ್ಲಿ ‘ಜನ್ ಸಮರ್ಥ್’ ಆಧಾರಿತ ಕಿಸಾನ್ ಕ್ರೆಡಿಟ್ ಕಾರ್ಡ್​ಗಳ ವಿತರಣೆಯನ್ನು ಸಕ್ರಿಯಗೊಳಿಸಲಾಗುತ್ತದೆ ಎಂದು ನಿರ್ಮಲಾ ವಿವರಿಸಿದ್ದಾರೆ.
ಕೃಷಿ ಸಂಶೋಧನೆ ವರ್ಗಾವಣೆಗೆ ಆದ್ಯತೆ :ದೇಶದ ಕೃಷಿ ಕ್ಷೇತ್ರದಲ್ಲಿ ನಿರಂತರವಾಗಿ ಆವಿಷ್ಕಾರ, ಸಂಶೋಧನೆಗಳು ನಡೆಯುತ್ತಿವೆ. ಇದರ ಲಾಭವನ್ನು ರೈತರಿಗೆ ಇನ್ನಷ್ಟು ಸುಲಭವಾಗಿ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೃಷಿಯಲ್ಲಿ ಉತ್ಪಾದಕತೆ ಹೆಚ್ಚಿಸುವ ಹಾಗೂ ಹವಾಮಾನ ವೈಪರೀತ್ಯ, ಬರ ನಿರೋಧಕತೆಯನ್ನು ತಾಳಿಕೊಳ್ಳುವ ಸಾಮರ್ಥ್ಯವುಳ್ಳ ಬೆಳೆ ಪ್ರಭೇದಗಳನ್ನು ಅಭಿವೃದ್ಧಿಪಡಿಸಲು ಕೃಷಿ ಸಂಶೋಧನಾ ವ್ಯವಸ್ಥೆಯನ್ನು ಸಮಗ್ರ ರೂಪದಲ್ಲಿ ಪರಾಮರ್ಶೆಗೆ ಒಳಪಡಿಸಲು ಸರ್ಕಾರ ಇಚ್ಛಿಸಿದೆ. ಖಾಸಗಿ ವಲಯದ ಸಹಯೋಗ ಹಾಗೂ ಹಂತ ಹಂತವಾಗಿ ಹಣ ಒದಗಿಸಲಾಗುತ್ತದೆ. ಇಂತಹ ಸಂಶೋಧನೆಯ ಮೇಲ್ವಿಚಾರಣೆಗಾಗಿ ಸರ್ಕಾರದೊಳಗಿರುವ ಮತ್ತು ಹೊರಗಿರುವ ವಿಷಯ ಪರಿಣಿತರನ್ನು ಬಳಸಿಕೊಳ್ಳಲಾಗುತ್ತದೆ ಎಂದು ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಲಾಗಿದೆ.

ದ್ವಿದಳಧಾನ್ಯ, ಎಣ್ಣೆಕಾಳು ಸ್ವಾವಲಂಬನೆಗೆ ಅಭಿಯಾನ:ದೇಶದೆಲ್ಲೆಡೆ ದ್ವಿದಳ ಧಾನ್ಯ ಹಾಗೂ ಎಣ್ಣೆಕಾಳು ಬಳಕೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಇದಕ್ಕೆ ಪೂರಕವಾಗಿ ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಗಳು ಸಾಗಿವೆ. ಈ ಎರಡೂ ಧಾನ್ಯಗಳಲ್ಲಿ ದೇಶವು ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಅಭಿಯಾನ ಕೈಗೊಳ್ಳಲಾಗುತ್ತದೆ. ಮುಖ್ಯವಾಗಿ ಈ ಬೆಳೆಗಳ ಉತ್ಪಾದನೆ, ದಾಸ್ತಾನು ಮತ್ತು ಮಾರುಕಟ್ಟೆ ಜಾಲವನ್ನು ಸದೃಢಗೊಳಿಸಲಾಗುತ್ತದೆ. ಕಳೆದ ಮಧ್ಯಂತರ ಬಜೆಟ್​ನಲ್ಲಿ ಘೊಷಿಸಿದಂತೆ ಸಾಸಿವೆ, ಶೇಂಗಾ, ಎಳ್ಳು, ಸೋಯಾಬೀನ್ ಮತ್ತು ಸೂರ್ಯಕಾಂತಿ ಅಂತಹ ಎಣ್ಣೆ ಕಾಳು ವಿಭಾಗದಲ್ಲಿ ಆತ್ಮನಿರ್ಭರತೆ ಸಾಧಿಸುವ ಮಹತ್ವದ ಗುರಿಯನ್ನು ಹೊಂದಲು ಕಾರ್ಯತಂತ್ರ ರೂಪಿಸಲಾಗುತ್ತಿದೆ.
ಸೀಗಡಿ ಉತ್ಪಾದನೆ ಮತ್ತು ರಫ್ತು:ಸೀಗಡಿ ಸಂಸಾರಕ್ಕಾಗಿ ನ್ಯೂಕ್ಲಿಯಸ್ ಸಂತಾನೋತ್ಪತ್ತಿ ಕೇಂದ್ರಗಳ ಜಾಲವನ್ನು ಸ್ಥಾಪಿಸಲು ಹಣಕಾಸಿನ ಬೆಂಬಲವನ್ನು ಒದಗಿಸಲಾಗು ವುದು. ನಬಾರ್ಡ್ ಮೂಲಕ ಸೀಗಡಿ ಸಾಕಾಣಿಕೆ, ಸಂಸ್ಕರಣೆ ಮತ್ತು ರಫ್ತಿಗೆ ಹಣಕಾಸು ಒದಗಿಸಲಾಗುವುದು.

ನೈಸರ್ಗಿಕ ಬೇಸಾಯಕ್ಕೆ ಜೈ:ಪಾರಂಪರಿಕ ಕೃಷಿ ಪದ್ಧತಿಯಾದ ಸಾವಯವ ಕೃಷಿ ಜತೆಗೆ ನೈಸರ್ಗಿಕ ಕೃಷಿ ಉತ್ತೇಜಿಸಲು ಮುಂದಿನ ಎರಡು ವರ್ಷಗಳಲ್ಲಿ ದೇಶಾದ್ಯಂತ 1 ಕೋಟಿ ರೈತರನ್ನು ಸಜ್ಜುಗೊಳಿಸಲಾಗುತ್ತದೆ. ಪ್ರಮಾಣೀಕರಣ ಮತ್ತು ಬ್ರಾ್ಯಂಡಿಂಗ್ ಬೆಂಬಲದೊಂದಿಗೆ ಈ ಪದ್ಧತಿಯನ್ನು ವ್ಯಾಪಕಗೊಳಿಸಲಾಗುತ್ತದೆ. ಇದಕ್ಕಾಗಿ ವೈಜ್ಞಾನಿಕ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳ ಸಹಕಾರ ಪಡೆಯಲಾಗುತ್ತದೆ. ಇದಲ್ಲದೆ 10,000 ಬಯೋ ಇನ್​ಪುಟ್ ರಿಸೋರ್ಸ್ ಸೆಂಟರ್​ಗಳನ್ನು ಸ್ಥಾಪಿಸಲಾಗುತ್ತದೆ ಎಂದು ಕೇಂದ್ರ ಸಚಿವೆ ತಿಳಿಸಿದ್ದಾರೆ.

ತರಕಾರಿ ಉತ್ಪಾದನೆ, ಪೂರೈಕೆ ಸರಪಳಿ:ಕೃಷಿ ಉತ್ಪಾದನೆಯಲ್ಲಿ ತೋಟಗಾರಿಕೆ ಬೆಳೆಗಳು ಹೆಚ್ಚು ಮಹತ್ವ ಪಡೆದುಕೊಂಡಿವೆ. ತರಕಾರಿ ಉತ್ಪಾದನೆಗೆ ದೊಡ್ಡ ಪ್ರಮಾಣದ ಕ್ಲಸ್ಟರ್​ಗಳನ್ನು ಬಳಕೆ ಕೇಂದ್ರಗಳಿಗೆ ಸನಿಹದಲ್ಲಿ ಸ್ಥಾಪಿಸಿ ಅಭಿವೃದ್ಧಿಪಡಿಸಲಾಗುವುದು. ಸಂಗ್ರಹಣೆ, ದಾಸ್ತಾನು ಹಾಗೂ ಮಾರುಕಟ್ಟೆ ಜಾಲ ಸೇರಿ ತರಕಾರಿ ಪೂರೈಕೆ ಸರಪಳಿಯನ್ನು ಸದೃಢಗೊಳಿಸಲು ರೈತ ಉತ್ಪಾದಕರ ಸಂಸ್ಥೆ (ಎಫ್​ಪಿಒ), ಸಹಕಾರಿಗಳು ಮತ್ತು ನವೋದ್ಯಮಿಗಳನ್ನು ಉತ್ತೇಜಿಸಲು ಹೆಚ್ಚು ಒತ್ತು ನೀಡಲಾಗುತ್ತದೆ.
ಹೊಸ ತಳಿ ಬಿಡುಗಡೆ:ಕೃಷಿಯಲ್ಲಿ ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಹೊಸ ತಳಿಗಳನ್ನು ಬಿಡುಗಡೆಗೊಳಿಸುವ ಕೆಲಸ ಆಗುತ್ತಿದೆ. ಈ ನಿಟ್ಟಿನಲ್ಲಿ ಅಧಿಕ ಇಳುವರಿ ನೀಡುವ ಹಾಗೂ ಹವಾಮಾನ ವೈಪರೀತ್ಯವನ್ನು ತಾಳಿಕೊಳ್ಳುವ ಸಾಮರ್ಥ್ಯವುಳ್ಳ 109 ತೋಟಗಾರಿಕೆ ಬೆಳೆಗಳ ಪ್ರಭೇದಗಳನ್ನು ರೈತರಿಗೆ ಒದಗಿಸಲಾಗುತ್ತದೆ.
ಭೂ ಪಾರ್ಸೆಲ್ ಗುರುತಿನ ಸಂಖ್ಯೆ:ಗ್ರಾಮೀಣ ಭಾಗಗಳಲ್ಲಿ ಎಲ್ಲ ಜಮೀನುಗಳಿಗೆ ಯೋಜನೆಯಡಿ ವಿಶಿಷ್ಟವಾದ ‘ಭೂ ಪಾರ್ಸೆಲ್ ಗುರುತಿನ ಸಂಖ್ಯೆ’ ನೀಡಲಾಗುತ್ತದೆ. ಜಮೀನು ಸಮೀಕ್ಷೆ ಮಾಡುವ ಮೂಲಕ ಎಲ್ಲ ದಾಖಲೆಗಳನ್ನು ಡಿಜೀಟಲೀಕರಣ, ಭೂ ನೋಂದಾವಣೆ ಸ್ಥಾಪಿಸುವುದು ಸೇರಿ ರೈತರ ನೋಂದಣಿಗೆ ಲಿಂಕ್ ಮಾಡಲಾಗುತ್ತದೆ. ಈ ಕ್ರಮದಿಂದ ಸುಲಭವಾಗಿ ಸಾಲ ಸೌಲಭ್ಯ ಸೇರಿ ಇತರ ಕೃಷಿ ಸೇವೆಗಳು ಸುಗಮವಾಗಿ ನಡೆಸಲು ಅನುಕೂಲವಾಗುತ್ತದೆ. ನಗರ ಪ್ರದೇಶಗಳಲ್ಲಿನ ಭೂ ದಾಖಲೆಗಳನ್ನು ಜಿಐಎಸ್ ಮ್ಯಾಪಿಂಗ್​ನೊಂದಿಗೆ ಡಿಜಿಟಲೀಕರಣಗೊಳಿಸಲಾಗುತ್ತದೆ. ಇದರಲ್ಲಿ ಆಸ್ತಿ ದಾಖಲೆ ನಿರ್ವಹಣೆ, ನವೀಕರಣ, ತೆರಿಗೆ ಆಡಳಿತಕ್ಕಾಗಿ ಐಟಿ ಆಧಾರಿತ ವ್ಯವಸ್ಥೆ ಸ್ಥಾಪಿಸಲಾಗುತ್ತದೆ. ಇದರಿಂದಾಗಿ, ಇವುಗಳ ಆರ್ಥಿಕ ಸ್ಥಿತಿ ಸುಧಾರಣೆಗೆ ಅನುಕೂಲವಾಗಲಿದೆ.

5 ಜನ ಕೇಂದ್ರ ಮಂತ್ರಿಗಳಿದ್ದರೂ ಬಜೆಟ್​ನಲ್ಲಿ ಕರ್ನಾಟಕಕ್ಕೆ ಏನು ಕೊಟ್ಟಿಲ್ಲ: ಸಿಎಂ ಸಿದ್ದರಾಮಯ್ಯ ಕಿಡಿ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × four =
Remember me
