ನವದೆಹಲಿ:ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಅಪರಾಧ ಹಿನ್ನೆಲೆ ಬಹಿರಂಗಗೊಳಿಸದ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಬಿಜೆಪಿ ಮತ್ತು ಕಾಂಗ್ರೆಸ್ ಸಹಿತ ಎಂಟು ಪ್ರಮುಖ ರಾಜಕೀಯ ಪಕ್ಷಗಳಿಗೆ ದಂಡ ವಿಧಿಸಿದೆ. ಮತ್ತೊಂದು ಮಹತ್ವದ ತೀರ್ಪಿನಲ್ಲಿ, ಸಂಸದರು ಹಾಗೂ ಶಾಸಕರ ವಿರುದ್ಧ ಬಾಕಿಯಿರುವ ಕ್ರಿಮಿನಲ್ ಪ್ರಕರಣಗಳನ್ನು ಆಯಾ ರಾಜ್ಯಗಳ ಹೈಕೋರ್ಟ್ ಅನುಮತಿಯಿಲ್ಲದೆ ರಾಜ್ಯ ಸರ್ಕಾರಗಳು ವಾಪಸ್ ಪಡೆಯುವಂತಿಲ್ಲ ಎಂದು ಸೂಚಿಸಿದೆ.
ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಅಪರಾಧ ಹಿನ್ನೆಲೆ, ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳು, ವಿಚಾರಣೆ ನಡೆಯುತ್ತಿರುವ ಕೇಸ್​ಗಳ ವಿವರವನ್ನು ಬಹಿರಂಗಪಡಿಸಬೇಕು ಎಂದು ಕಳೆದ ವರ್ಷ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ರಾಜಕೀಯ ಕ್ಷೇತ್ರವನ್ನು ಅಪರಾಧಮುಕ್ತ ಮಾಡುವ ಹಿನ್ನೆಲೆಯಲ್ಲಿ ಇದು ಮಹತ್ವದ ಕ್ರಮ ಎಂದೇ ಹೇಳಲಾಗಿತ್ತು. ಆದರೆ ಆದೇಶ ಜಾರಿಗೆ ಬಂದು ವರ್ಷ ಪೂರ್ಣಗೊಂಡಿದ್ದರೂ, ಬಹುತೇಕ ರಾಜಕೀಯ ಪಕ್ಷಗಳು ಈ ನಿಯಮ ಪಾಲಿಸಿಲ್ಲ. ಇದು ಸುಪ್ರೀಂಕೋರ್ಟ್ ಅಸಮಾಧಾನಕ್ಕೆ ಕಾರಣವಾಗಿದೆ. ಆದೇಶವನ್ನು ಪಾಲಿಸದ ರಾಜಕೀಯ ಪಕ್ಷಗಳು ನ್ಯಾಯಾಂಗ ನಿಂದನೆ ಎಸಗಿವೆ ಎಂದು ಸುಪ್ರೀಂಕೋರ್ಟ್ ತೀಕ್ಷ್ಣ ಪ್ರತಿಕ್ರಿಯಿಸಿದೆ. 2020ರ ಕೋರ್ಟ್ ಆದೇಶ ಪಾಲಿಸದ ಪಕ್ಷಗಳ ವಿರುದ್ಧ ನ್ಯಾಯಾಲಯ ನಿಂದನೆ ಪ್ರಕರಣ ಆರಂಭಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ಪೀಠ ವಿಚಾರಣೆ ನಡೆಸಿದೆ.
2020ರ ಆದೇಶ ಏನಿತ್ತು?:ಕಳೆದ ವರ್ಷ ನವೆಂಬರ್​ನಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆ ಸಂಬಂಧ ಸಲ್ಲಿಕೆಯಾಗಿದ್ದ ದೂರಿನ ಕುರಿತು ತೀರ್ಪು ಪ್ರಕಟಿಸಿದ್ದ ಸುಪ್ರೀಂಕೋರ್ಟ್, ಅಭ್ಯರ್ಥಿಯಾಗಿ ಆಯ್ಕೆಯಾದ 48 ಗಂಟೆಯೊಳಗೆ ಅಥವಾ ನಾಮಪತ್ರ ಸಲ್ಲಿಕೆಗಿಂತ ಎರಡು ವಾರದ ಮುಂಚೆ ಹುರಿಯಾಳುಗಳು ತಮ್ಮ ಅಪರಾಧ ಹಿನ್ನೆಲೆಯನ್ನು ಪಕ್ಷದ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಬೇಕೆಂದು ತಾಕೀತು ಮಾಡಿತ್ತು. ತಮ್ಮವಿರುದ್ಧ ಇರುವ ಪ್ರಕರಣಗಳ ಕುರಿತು ಎರಡು ಪತ್ರಿಕೆಗಳಲ್ಲಿ ವಿವರವಾಗಿ ಪ್ರಕಟಿಸಬೇಕು; ಇದರ ಪ್ರತಿಯನ್ನು 72 ಗಂಟೆಗಳ ಒಳಗಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಬೇಕು ಎಂದು ಆದೇಶ ನೀಡಿತ್ತು.
2 ವರ್ಷದಲ್ಲಿ 17% ಏರಿಕೆ:ಹಾಲಿ ಮತ್ತು ಮಾಜಿ ಸಂಸತ್ ಸದಸ್ಯರು ಹಾಗೂ ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್​ಗಳ ಸಂಖ್ಯೆ ಕಳೆದ ಎರಡು ವರ್ಷದಲ್ಲಿ ಶೇಕಡ 17ರಷ್ಟು ಏರಿಕೆಯಾಗಿದೆ. ಈ ಪ್ರವೃತ್ತಿ ತಡೆಯಲು ಸುಪ್ರೀಂಕೋರ್ಟ್ ಹಲವು ಕ್ರಮ ಕೈಗೊಂಡಿದ್ದರೂ ಅದು ಹೆಚ್ಚಿನ ಪರಿಣಾಮ ಬೀರಿಲ್ಲ.
ಯಾರಿಗೆ ಎಷ್ಟು ದಂಡ?:ಎನ್​ಸಿಪಿ ಮತ್ತು ಸಿಪಿಐ (ಎಂ)ಗೆ ತಲಾ 5 ಲಕ್ಷ ರೂಪಾಯಿ, ಬಿಜೆಪಿ, ಕಾಂಗ್ರೆಸ್, ಆರ್​ಜೆಡಿ, ಸಿಪಿಐ ಮತ್ತು ಎಲ್​ಜೆಪಿಗೆ ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಹಣ ಹಾಗೂ ತೋಳ್ಬಲಕ್ಕೆ ಕಡಿವಾಣ ಹಾಕಿ, ಉತ್ತಮ ಆಡಳಿತ ತರಲು ಈ ನಿಯಮ ಮಹತ್ವದ ಹೆಜ್ಜೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಜತೆಗೆ ಮುಂದಿನ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಅಪರಾಧ ಹಿನ್ನೆಲೆ ಬಹಿರಂಗ ಮಾಡದಿದ್ದರೆ ಪಕ್ಷಗಳು ಇನ್ನಷ್ಟು ಕ್ರಮ ಎದುರಿಸುವ ಅನಿವಾರ್ಯತೆಗೆ ಸಿಲುಕಿವೆ. ಹೀಗಾಗಿ ಈ ತೀರ್ಪು ಎಲ್ಲ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ಸಂದೇಶವಾಗಿದೆ.
48 ಗಂಟೆ ಗಡುವು:ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಆಯ್ಕೆಯಾದ 48 ಗಂಟೆಯೊಳಗೆ, ಅವರಿಗೆ ಅಪರಾಧ ಹಿನ್ನೆಲೆ ಇದ್ದರೆ ಅದನ್ನು ರಾಜಕೀಯ ಪಕ್ಷಗಳು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
‘ಮೇಲಿಂದ ಮೇಲೆ ಸೂಚನೆ ನೀಡುತ್ತಿದ್ದರೂ, ರಾಜಕೀಯ ಪಕ್ಷಗಳು ಎಚ್ಚೆತ್ತುಕೊಂಡಿಲ್ಲ. ಇನ್ನಾದರೂ ರಾಜಕೀಯವನ್ನು ಅಪರಾಧ ಮುಕ್ತಗೊಳಿಸಲು ಮುಂದಾಗಿ ಮೇಜರ್ ಸರ್ಜರಿ ನಡೆಸಬೇಕು. ಈ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮ ಜರುಗಿಸಬೇಕು ಎಂದು ನಮಗೆ ಅನಿಸಿದರೂ, ನಮ್ಮ ಕೈಗಳು ಕಟ್ಟಿವೆ. ಶಾಸಕಾಂಗದ ಅಧಿಕಾರವನ್ನು ನಾವು ಅತಿಕ್ರಮಿಸಲು ಸಾಧ್ಯವಿಲ್ಲ’ ಎಂದು ಕೋರ್ಟ್ ಹೇಳಿತು. ‘ಭವಿಷ್ಯದಲ್ಲಿ ಎಲ್ಲ ಪಕ್ಷಗಳು ತಮ್ಮ ಅಭ್ಯರ್ಥಿಗಳ ಅಪರಾಧ ಹಿನ್ನೆಲೆಯನ್ನು ವೆಬ್​ಸೈಟ್​ನಲ್ಲಿ ಹಾಕಬೇಕು. ಮತದಾರರಿಗೆ ಈ ಮಾಹಿತಿ ಸುಲಭವಾಗಿ ಸಿಗುವಂತಾಗಲು ಚುನಾವಣಾ ಆಯೋಗ ಹೊಸ ಆಪ್ ಅಭಿವೃದ್ಧಿಪಡಿಸಬೇಕು’ಎಂದು ಕೋರ್ಟ್ ಸೂಚನೆ ನೀಡಿತು.
ನವದೆಹಲಿ: ಸಂಸದರು ಹಾಗೂ ಶಾಸಕರ ವಿರುದ್ಧ ಬಾಕಿಯಿರುವ ಕ್ರಿಮಿನಲ್ ಪ್ರಕರಣಗಳನ್ನು ಆಯಾ ರಾಜ್ಯಗಳ ಹೈಕೋರ್ಟ್ ಅನುಮತಿಯಿಲ್ಲದೆ ರಾಜ್ಯ ಸರ್ಕಾರಗಳು ವಾಪಸ್ ಪಡೆಯುವಂತಿಲ್ಲ; ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ವಿಶೇಷ ಕೋರ್ಟ್​ಗಳ ನ್ಯಾಯಾಧೀಶರನ್ನು ಮುಂದಿನ ಆದೇಶದವರೆಗೆ ವರ್ಗಾಯಿಸಬಾರದು ಎಂದು ಸಿಜೆಐ ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ. ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ಉಸ್ತುವಾರಿಗೆ ಶೀಘ್ರವೇ ವಿಶೇಷ ಪೀಠ ರಚಿಸುವುದಾಗಿ ಕೋರ್ಟ್ ಪ್ರಕಟಿಸಿತು. ಎಂಪಿ ಹಾಗೂ ಎಂಎಲ್​ಎಗಳ ವಿರುದ್ಧ ಇರುವ ಇತ್ಯರ್ಥಪಡಿಸಲಾದ ಕ್ರಿಮಿನಲ್ ಪ್ರಕರಣಗಳ ವಿವರಗಳನ್ನು ಒಂದು ನಮೂನೆಯಲ್ಲಿ ಸಲ್ಲಿಸುವಂತೆಯೂ ಪೀಠ ಎಲ್ಲ ಹೈ ಕೋರ್ಟ್​ಗಳ ರಿಜಿಸ್ಟ್ರಾರ್ ಜನರಲ್​ಗಳಿಗೆ ಸೂಚಿಸಿದೆ. ಬಾಕಿ ಪ್ರಕರಣಗಳ ವಿವರ ನೀಡುವಂತೆಯೂ ನಿರ್ದೇಶಿಸಿದೆ.
ಚುನಾವಣೆ ಸಂದರ್ಭಗಳಲ್ಲಿ ನಡೆಯುವ ಗಲಭೆ, ಹಿಂಸಾಚಾರ, ಪ್ರಚೋದನಕಾರಿ ಭಾಷಣ ಹಿನ್ನೆಲೆಯಲ್ಲಿ ಪ್ರತಿವರ್ಷ ಜನಪ್ರತಿನಿಧಿಗಳ ವಿರುದ್ಧ ಪ್ರಕರಣಗಳು ದಾಖಲಾಗುತ್ತವೆ. ಆದರೆ ಅಧಿಕಾರಕ್ಕೆ ಬಂದ ಪಕ್ಷ ತನ್ನ ನಾಯಕರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆದಿರುವ ಉದಾಹರಣೆಗಳಿವೆ. ಆದರೆ ಇನ್ನು ಹೈಕೋರ್ಟ್ ಪರಿಶೀಲನೆ ಬಳಿಕವೇ ಸರ್ಕಾರಗಳು ಕೇಸ್ ವಾಪಸ್ ಪಡೆಯಬೇಕಾಗುತ್ತದೆ. ಗಂಭೀರ ಪ್ರಕರಣಗಳಲ್ಲಿ ಕೇಸ್ ಮುಂದುವರಿಸಲು ಅಥವಾ ಮರುವಿಚಾರಣೆಗೂ ಆದೇಶ ನೀಡುವ ಅಧಿಕಾರ ಹೈಕೋರ್ಟ್​ಗೆ ಇರುತ್ತದೆ. ಇದರಿಂದ ಅಪರಾಧ ಪ್ರಕರಣಗಳಿಂದ ಜನಪ್ರತಿನಿಧಿಗಳು ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ರೋಗಿ ಎಚ್ಚರವಿರುವಾಗಲೇ ನಡೆಯಿತು ಮಿದುಳಿನ ಶಸ್ತ್ರಚಿಕಿತ್ಸೆ; ಸರ್ಜರಿ ನಡೆಯುವಾಗ ಗಾಯತ್ರಿ ಮಂತ್ರ ಪಠನೆ

‘ಪದವಿಪೂರ್ವ’ದಲ್ಲಿ ನಟಿ ಸೋನಲ್ ಮೊಂತೆರೋ​; ಇಬ್ಬರು ನಾಯಕಿಯರ ಜೊತೆಗೆ ಮತ್ತೊಬ್ಬ ಬೆಡಗಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
