ದಶಕಗಳಿಂದ ನಿಯಮಿತ ಮಾರುಕಟ್ಟೆಯಲ್ಲೇ ಬೆಳೆಯನ್ನು ಮಾರಾಟ ಮಾಡುತ್ತಿದ್ದ ರೈತರಿಗೆ ಇದೀಗ ಸರ್ಕಾರ ಸ್ವಾತಂತ್ರ್ಯ ನೀಡಿದೆ. ಅನೇಕ ಕೃಷಿ ಉತ್ಪನ್ನಗಳನ್ನು ಅಗತ್ಯ ವಸ್ತುಗಳ ಕಾಯ್ದೆ 1955ರಿಂದ ಕೈಬಿಡುವ ಮೂಲಕ ಸ್ವತಂತ್ರವಾಗಿ ಬೆಳೆ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ. ಏನಿದು ಕಾಯ್ದೆ, ತಿದ್ದುಪಡಿಯಿಂದಾದ ಉಪಯೋಗವೇನು ಎನ್ನುವ ಮಾಹಿತಿ ಇಲ್ಲಿದೆ.
ಕಾಯ್ದೆ ತಿದ್ದುಪಡಿ ಲಾಭ
ಎಪಿಎಂಸಿ ಹೊರತಾಗಿ ಖಾಸಗಿ ಮಾರುಕಟ್ಟೆಗಳಲ್ಲಿಯೂ ಬೆಳೆಗಳ ಮಾರಾಟಕ್ಕೆ ಅವಕಾಶ
ಮುಕ್ತ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವುದರಿಂದಾಗಿ ರೈತರ ಬೆಳೆಗೆ ಹೆಚ್ಚಿನ ಬೆಲೆ ಸಿಗುವ ಸಾಧ್ಯತೆ
ಹೆಚ್ಚಿನ ಬೆಲೆ ಎಲ್ಲಿ ಸಿಗುತ್ತದೆಯೋ ಅಲ್ಲೇ ಬೆಳೆಯನ್ನು ಮಾರಾಟ ಮಾಡಲು ಅವಕಾಶ
ರಾಜ್ಯ ಮಾತ್ರವಲ್ಲದೆ ಅಂತರ್ ರಾಜ್ಯ ಮಟ್ಟದಲ್ಲಿಯೂ ಬೆಳೆಯನ್ನು ಮಾರಾಟ ಮಾಡಬಹುದು
ಒಂದು ವೇಳೆ ರಾಜ್ಯದಲ್ಲಿ ಬೆಲೆಯಿಲ್ಲದೆ, ಹೊರ ರಾಜ್ಯದಲ್ಲಿ ಬೆಲೆಯಿದ್ದರೆ ಅಲ್ಲಿಗೇ ತೆರಳಿ ಮಾರಾಟ ಮಾಡಬಹುದು
ಹೆಚ್ಚಿನ ಪ್ರಮಾಣದಲ್ಲಿ ಖಾಸಗಿ ಮತ್ತು ವಿದೇಶಿ ಬಂಡವಾಳ ಹರಿವು ಸಾಧ್ಯತೆ
ಅಗತ್ಯ ವಸ್ತುಗಳ ಕಾಯ್ದೆ ಎಂದರೇನು?
ದೇಶದಲ್ಲಿ ಅಗತ್ಯ ಆಹಾರ ಪದಾರ್ಥಗಳನ್ನು ಜನರಿಗೆ ಸುಲಭವಾಗಿ ತಲುಪಿಸುವ ಉದ್ದೇಶಕ್ಕೆ 1955ರಲ್ಲಿ ಅಗತ್ಯ ವಸ್ತುಗಳ ಕಾಯ್ದೆಯನ್ನು ತರಲಾಯಿತು. ದೇಶದಲ್ಲಿ ಆಹಾರ ವಸ್ತುಗಳ ಕೊರತೆ ನೀಗಿಸಲು ಈ ಕಾಯ್ದೆ ಸಹಕಾರಿಯಾಗಿತ್ತು. ಕೆಲ ತರಕಾರಿಗಳು ಸೇರಿ ಅನೇಕ ಕೃಷಿ ಪದಾರ್ಥಗಳನ್ನು ಅಗತ್ಯ ಸಾಮಗ್ರಿಗಳ ಪಟ್ಟಿಯಲ್ಲಿ ಸೇರಿಸಲಾಯಿತು. ಕಾಯ್ದೆಯ ಅನುಸಾರ ಈ ಉತ್ಪನ್ನಗಳ ಉತ್ಪಾದನೆ, ಸರಬರಾಜು, ದರ ಮತ್ತಿತರ ಸಂಗತಿಗಳು ಸರ್ಕಾರದ ನಿಯಂತ್ರಣಕ್ಕೆ ಒಳಪಡುತ್ತವೆ. ರಾಜ್ಯ ಸರ್ಕಾರದ ಅಧೀನದಲ್ಲಿರುವ ಮಾರುಕಟ್ಟೆಯಲ್ಲಿ (ಎಪಿಎಂಸಿ) ಸರ್ಕಾರಿ ಪರವಾನಗಿ ಹೊಂದಿರುವ ವ್ಯಾಪಾರಿಗಳಿಗೆ ಇವುಗಳನ್ನು ಮಾರಬೇಕು ಎನ್ನುವ ನಿಯಮವಿದೆ. ಮುಕ್ತ ಮಾರಾಟದಲ್ಲಿ ಮಾರಾಟ ಮಾಡುವ ಅವಕಾಶವಿರಲಿಲ್ಲ.
ಯಾವ ಬೆಳೆ ಮುಕ್ತ
ದ್ವಿದಳ ಧಾನ್ಯಗಳು, ಕಾಳುಗಳು, ಖಾದ್ಯ ತೈಲಗಳು, ಈರುಳ್ಳಿ, ಆಲೂಗಡ್ಡೆ ಸೇರಿ ಅನೇಕ ಕೃಷಿ ಉತ್ಪನ್ನಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈರುಳ್ಳಿ ಮತ್ತು ಆಲೂಗಡ್ಡೆಯನ್ನು 2014ರ ಜುಲೈನಲ್ಲಿ ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಲಾಗಿತ್ತು.
ತುರ್ತುಸ್ಥಿತಿಯಲ್ಲಿ ಕ್ರಮ
ನಿರ್ಬಂಧ ಮುಕ್ತವಾಗಿರುವ ಕೃಷಿ ಉತ್ಪನ್ನಗಳ ಮೇಲೆ ಮತ್ತೆ ನಿರ್ಬಂಧ ಹೇರುವ ಹಕ್ಕು ಸರ್ಕಾರ ಕ್ಕಿದೆ. ಬರ, ಪ್ರವಾಹದಂತಹ ನೈಸರ್ಗಿಕ ವಿಪತ್ತು, ಕ್ಷಾಮ ಅಥವಾ ಯುದ್ಧ ಸಂದರ್ಭಗಳಲ್ಲಿ ಸರ್ಕಾರ ನಿರ್ಬಂಧವನ್ನು ಹೇರುವ ಅಧಿಕಾರ ಹೊಂದಿದೆ.
ರೈತರ ಬೇಡಿಕೆಯೇನು?
ಪ್ರಸ್ತುತ ದೇಶದಲ್ಲಿ ಎಪಿಎಂಸಿಯ 2477 ಮುಖ್ಯ ಮಾರುಕಟ್ಟೆಗಳು ಮತ್ತು 4843 ಉಪ ಮಾರುಕಟ್ಟೆಗಳಿವೆ. ಈ ಎಲ್ಲ ಮಾರುಕಟ್ಟೆಗಳಲ್ಲಿ ಪರವಾನಗಿ ಹೊಂದಿರುವ ಮಧ್ಯವರ್ತಿಗಳ ಸಂಖ್ಯೆ ಕಡಿಮೆಯಿದೆ. ಹರಾಜು ರೀತಿಯಲ್ಲಿ ರೈತರ ಬೆಳೆಯನ್ನು ಮಧ್ಯವರ್ತಿಗಳು ಕೊಳ್ಳುತ್ತಾರೆ. ಹಾಗಾಗಿ ಕೃಷಿಕರು ಮಾರುಕಟ್ಟೆಗೆ ಬೆಳೆ ತಂದು ಗಂಟೆಗಳ ಕಾಲ ಕಾದು ಮಧ್ಯವರ್ತಿಗಳು ನಿಗದಿಪಡಿಸುವ ಬೆಲೆಗೆ ಮಾರಬೇಕಾಗಿದೆ. ಮಧ್ಯವರ್ತಿಗಳು ತಮ್ಮದೇ ಸಂಘ-ಸಂಸ್ಥೆಗಳನ್ನು ಮಾಡಿಕೊಂಡು ಕೃಷಿಕರಿಂದ ಕಡಿಮೆ ಬೆಲೆಗೆ ಬೆಳೆ ಪಡೆಯುವ ತಂತ್ರ ಮಾಡುತ್ತಿರುತ್ತಾರೆ. ಇದರಿಂದ ಹೆಚ್ಚಿನ ಲಾಭ ದಲ್ಲಾಳಿಗಳ ಪಾಲಾಗುತ್ತಿತ್ತು. ಅಕ್ರಮ ದಾಸ್ತಾನು ಮತ್ತು ಕಾಳದಂಧೆಯೂ ಹೆಚ್ಚಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವಂತೆ ರೈತರು ಹಲವು ಬಾರಿ ಮನವಿ ಮಾಡಿಕೊಂಡಿದ್ದಾರೆ. ಪ್ರತಿಭಟನೆಯನ್ನೂ ನಡೆಸಿದ್ದಾರೆ.
ಆರ್ಥಿಕ ಪ್ಯಾಕೇಜ್​ನಲ್ಲಿ ಘೋಷಣೆ
ಲಾಕ್​ಡೌನ್​ನಿಂದ ಉಂಟಾದ ಆರ್ಥಿಕ ಬಿಕ್ಕಟ್ಟನ್ನು ಸರಿದೂಗಿಸುವ ಸಲುವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೇ 15ರಂದು ಕೃಷಿ ಕ್ಷೇತ್ರಕ್ಕೆ ಎರಡು ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದ್ದರು. ಈ ಸಮಯದಲ್ಲಿ ಅಗತ್ಯ ವಸ್ತುಗಳ ಕಾಯ್ದೆಯನ್ನು ತಿದ್ದುಪಡಿ ಮಾಡುವ ಬಗ್ಗೆ ಪ್ರಕಟಣೆ ಹೊರಡಿಸಿದ್ದರು. ಜೂನ್ 2ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಪುಟ ಸಭೆ ನಡೆದಿದ್ದು, ಅದರಲ್ಲಿ ಈ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − thirteen =
Remember me
