ಅಮೆರಿಕ, ಕೆನಡಾ, ಬ್ರಿಟನ್, ಜರ್ಮನಿ, ಆಸ್ಟ್ರೇಲಿಯಾ, ಹಂಗರಿ, ಫ್ರಾನ್ಸ್, ಜಪಾನ್, ಸ್ವಿಜರ್​ಲ್ಯಾಂಡ್ ಮುಂತಾದ ರಾಷ್ಟ್ರಗಳು ರಷ್ಯಾದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈ ದೇಶಗಳಲ್ಲಿ ಜನರು ಬೀದಿಗಳಿದು ರಷ್ಯಾ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದು, ಯೂಕ್ರೇನ್ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಅಮೆರಿಕದ ನ್ಯೂಯಾರ್ಕ್, ಜರ್ಮನಿಯ ಬರ್ಲಿನ್, ಪೊಲೆಂಡ್​ನ ಕ್ರಾಕೋ, ಜಪಾನಿನ ಟೋಕಿಯೋ, ಹಂಗರಿಯದ ಬುಡಾಪೆಸ್ಟ್, ಸ್ವಿಜರ್​ಲ್ಯಾಂಡ್​ನ ಬರ್ನ್, ಮತ್ತು ಪ್ಯಾರಿಸ್​ನಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದಾರೆ.
ನಾಜಿಗಳ ನಂತರದ ಭಯಾನಕ ದಾಳಿ:ರಷ್ಯಾದ ದಾಳಿಯು ನಾಜಿಗಳ ನಂತರದ ಭಯಾನಕ ದಾಳಿಯಾಗಿದೆ ಎಂದಿದೆ ಯೂಕ್ರೇನ್. ಯೂಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ, ‘1941ರಲ್ಲಿ ನಾಜಿ ಜರ್ಮನಿಯಿಂದ ದಾಳಿಗೊಳಗಾದಾಗ ನಮ್ಮ ರಾಜಧಾನಿ ಕಿಯೆವ್ ಈ ರೀತಿಯ ಭಯಾನಕತೆ ಅನುಭವಿಸಿತ್ತು. ನಾಜಿ ದುಷ್ಟರನ್ನು ಯೂಕ್ರೇನ್ ಸೋಲಿಸಿತ್ತು. ಈಗ ರಷ್ಯಾವನ್ನೂ ಪರಾಭವಗೊಳಿಸುತ್ತೇವೆ’ ಎಂದಿದ್ದಾರೆ.
ವಿಶ್ವಬ್ಯಾಂಕ್​ನಿಂದ ಆರ್ಥಿಕ ನೆರವು:ಯೂಕ್ರೇನ್​ಗೆ ತಕ್ಷಣವೇ ಆರ್ಥಿಕ ನೆರವು ನೀಡಲು ವಿಶ್ವಬ್ಯಾಂಕ್ ಸಿದ್ಧವಿದೆ ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್​ಪಾಸ್ ಹೇಳಿದ್ದಾರೆ. ವಿಶ್ವದ ಇತರ ರಾಷ್ಟ್ರಗಳು ಯೂಕ್ರೇನ್​ಗೆ ಬೆಂಬಲ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದಿರುವ ಮಾಲ್​ಪಾಸ್ ಯೂಕ್ರೇನ್ ಅಧ್ಯಕ್ಷ ವೊಲೊಡಿಮೆರ್ ಝೆಲೆನಸ್ಕಿ ಅವರೊಂದಿಗೆ ಮಾತುಕತೆ ನಡೆಸಿ ಆರ್ಥಿಕ ನೆರವಿನ ಭರವಸೆ ನೀಡಿದ್ದಾರೆ.
ಯೂಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ನಡೆಯನ್ನು ಜಗತ್ತಿನ ಹಲವು ರಾಷ್ಟ್ರಗಳು ಖಂಡಿಸಿವೆ. ಮತ್ತೆ ಕೆಲವು ರಾಷ್ಟ್ರಗಳು ರಷ್ಯಾ ಮೇಲೆ ಹಲವು ವಿಧದ ನಿರ್ಬಂಧ ವಿಧಿಸಿವೆ. ಆದರೆ, ಈ ಬಗ್ಗೆ ವ್ಲಾದಿಮಿರ್ ಪುತಿನ್ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಾಗಿದ್ದ ವಿವಾದವನ್ನು ರಷ್ಯಾ ಯುದ್ಧಕ್ಕೆ ಕೊಂಡೊಯ್ದಿದೆ ಎಂದು ಅಂತಾರಾಷ್ಟ್ರೀಯ ವಲಯ ಆರೋಪಿಸಿದೆ. ರಷ್ಯಾದ ಹಲವು ನಗರಗಳಲ್ಲಿ ಕೂಡ ಜನರು ಬೀದಿಗಿಳಿದು ಪ್ರತಿಭಟಿಸಿದ್ದು ಕೂಡಲೇ ಯುದ್ಧವನ್ನು ನಿಲ್ಲಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ರಷ್ಯಾ ಯುದ್ಧೋನ್ಮಾದಕ್ಕೆ ಹಲವು ರಾಷ್ಟ್ರಗಳ ಆಕ್ರೋಶ:2000ಕ್ಕೂ ಅಧಿಕ ಜನರ ಬಂಧನ ಯೂಕ್ರೇನ್ ವಿರುದ್ಧ ಯುದ್ಧ ಆರಂಭಿಸಿರುವ ವ್ಲಾದಿಮಿರ್ ಪುತಿನ್ ನಡೆಗೆ ರಷ್ಯಾದಲ್ಲೇ ಆಕ್ರೋಶ ವ್ಯಕ್ತವಾಗಿದೆ. ಮಾಸ್ಕೋ ಮತ್ತು ಪೀಟರ್ಸ್​ಬರ್ಗ್​ನಲ್ಲಿ ಸಾವಿರಾರು ಜನರು ಬೃಹತ್ ಪ್ರತಿಭಟನೆ ನಡೆಸಿ, ‘ಸ್ಟಾಪ್ ಪುತಿನ್, ಸ್ಟಾಪ್ ವಾರ್’ ‘ಸೇ ಟು ನೋ ವಾರ್’ ಎಂಬ ಬ್ಯಾನರ್, ಭಿತ್ತಿಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ‘ಈಗ ಬೇಕಿರುವುದು ಯುದ್ಧವಲ್ಲ, ಶಾಂತಿ. ಆದರೆ, ಯುದ್ಧ ಆರಂಭಿಸುವ ಮೂಲಕ ಪುತಿನ್ ಜಗತ್ತಿನಲ್ಲಿ ರಷ್ಯಾವನ್ನು ಏಕಾಂಗಿಯಾಗಿಸಿದ್ದಾರೆ’ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿರುವುದನ್ನು ಗಮನಿಸಿ ಮತ್ತು ಅದು ಇತರ ನಗರಗಳಿಗೆ ಹಬ್ಬಬಾರದೆಂದು ಪೊಲೀಸರು ಎರಡು ಸಾವಿರಕ್ಕೂ ಅಧಿಕ ಜನರನ್ನು ಶುಕ್ರವಾರ ಬಂಧಿಸಿದ್ದಾರೆ. ಅಲ್ಲದೆ, ಯುದ್ಧಾರಂಭದ ಮುನ್ನವೇ ಬುಧವಾರದಂದು ರಷ್ಯಾದ 51 ನಗರಗಳಿಂದ 1,391 ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ‘ರಷ್ಯಾದಲ್ಲಿ ಬಹಳಷ್ಟು ಜನರು ಯುದ್ಧವನ್ನು ವಿರೋಧಿಸಲೂ ಹೆದರುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಹೇಳಿದರು.
ರಷ್ಯಾದಿಂದ ಸೈಬರ್ ದಾಳಿ:ರಷ್ಯಾದ ಹ್ಯಾಕರ್​ಗಳು ಗುರುವಾರ ಯೂಕ್ರೇನಿನ ಸರ್ಕಾರಿ ವೆಬ್​ಸೈಟ್ ಮತ್ತು ಬ್ಯಾಂಕುಗಳ ಮೇಲೆ ಸೈಬರ್ ದಾಳಿ ನಡೆಸಿದ ಬೆನ್ನಲ್ಲೇ, ಸ್ಥಳೀಯರನ್ನು ಸುಮ್ಮನಾಗಿಸಲು ಶುಕ್ರವಾರ ಇಂಟರ್​ನೆಟ್ ಸಂಪರ್ಕಕ್ಕೆ ತಡೆಯೊಡ್ಡಿದ್ದಾರೆ. ಪರಿಣಾಮ, ಯೂಕ್ರೇನ್ ಸಂಪೂರ್ಣವಾಗಿ ಇಂಟರ್​ನೆಟ್ ಸಂಪರ್ಕ ಕಳೆದುಕೊಂಡಿದೆ. ಯೂಕ್ರೇನ್ ಸಚಿವ ಸಂಪುಟದ ವೆಬ್​ಸೈಟ್​ಗಳು, ವಿದೇಶಾಂಗ ವ್ಯವಹಾರ, ಮೂಲಸೌಕರ್ಯ, ಶಿಕ್ಷಣ ಮತ್ತು ಇತರ ಸಚಿವಾಲಯಗಳ ವೆಬ್​ಸೈಟುಗಳು ಸ್ಥಗಿತಗೊಂಡಿವೆ.
ವಿಶ್ವಸಂಸ್ಥೆ ಖಂಡನೆ:ಪ್ರತಿಭಟನಾಕಾರರನ್ನು ರಷ್ಯಾ ಬಂಧಿಸಿರುವ ಕ್ರಮವನ್ನು ವಿಶ್ವಸಂಸ್ಥೆ ಖಂಡಿಸಿದ್ದು, ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿದೆ. ‘ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಂತಿಯುತ ಸಭೆ ಮೂಲಕ ಹಕ್ಕು ಚಲಾಯಿಸುವ ಜನರನ್ನು ಬಂಧಿಸಿರುವುದು ಸ್ವಾತಂತ್ರ್ಯದ ಮೇಲಿನ ಅತಿಕ್ರಮಣವಾಗಿದೆ. ಕೂಡಲೇ ಎಲ್ಲರನ್ನೂ ಬಿಡುಗಡೆ ಮಾಡಬೇಕು, ಎಂದು ವಿಶ್ವಸಂಸ್ಥೆ ಹಿರಿಯ ಅಧಿಕಾರಿ ರವೀನಾ ಶಾಮದಾಸಾನಿ ಆಗ್ರಹಿಸಿದ್ದಾರೆ.
ಫೇಸ್​​ಬುಕ್​​ ಗೆಳತಿಗೆ ಸಿನಿಮಾ ನಟಿ ಮಾಡುವ ಆಮಿಷ: ಹಣ, ಚಿನ್ನಾಭರಣ ದೋಚಿದ್ದ ನಕಲಿ ಫೋಟೋಗ್ರಾಫರ್ ಬಂಧನ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + six =
Remember me
