ಯೂಕ್ರೇನ್ ಮೇಲೆ ನಿರ್ದಿಷ್ಟ ಉದ್ದೇಶ ಇಟ್ಟುಕೊಂಡು ದಾಳಿ ನಡೆಸಿದ್ದು, ಅದು ಈಡೇರದ ಹೊರತು ಯುದ್ಧ ನಿಲ್ಲಿಸುವುದಿಲ್ಲ ಎಂದು ರಷ್ಯಾ ಸ್ಪಷ್ಟಪಡಿಸಿದೆ. ಈ ನಡುವೆ, ಪಾಶ್ಚಾತ್ಯ ರಾಷ್ಟ್ರಗಳು ಹೇರಿದ ನಿರ್ಬಂಧಗಳು ರಷ್ಯನ್ನರನ್ನು ಬಾಧಿಸಿದಂತೆಯೇ, ಇತರೆ ದೇಶಗಳ ಜನರನ್ನೂ ಬಾಧಿಸಿರುವುದು ವಾಸ್ತವ. ನಿರ್ಬಂಧಗಳ ಮೂಲಕ ರಷ್ಯಾವನ್ನು ಹಿಮ್ಮೆಟ್ಟಿಸಬಹುದು ಎಂಬ ಪಾಶ್ಚಾತ್ಯ ರಾಷ್ಟ್ರಗಳ ಚಿಂತನೆ ಫಲ ನೀಡುವಲ್ಲಿ ವಿಫಲವಾಗುತ್ತಿರುವುದು ಗೋಚರವಾಗಿದೆ. ಇದಕ್ಕೆ ಕಾರಣವಾಗಿರುವ ಅಂಶಗಳ ಅವಲೋಕನ ಇಲ್ಲಿದೆ.
ಅತಿ ಹೆಚ್ಚು ನಿರ್ಬಂಧಿತ ರಾಷ್ಟ್ರ:ಸದ್ಯ ಜಗತ್ತಿನ ಅತಿಹೆಚ್ಚು ನಿರ್ಬಂಧಿತ ರಾಷ್ಟ್ರ ರಷ್ಯಾ ಆಗಿದ್ದು, 6,900ಕ್ಕೂ ಹೆಚ್ಚು ನಿರ್ಬಂಧಗಳನ್ನು ಎದುರಿಸುತ್ತಿದೆ. 40ಕ್ಕೂ ಹೆಚ್ಚು ದೇಶಗಳು ರಷ್ಯಾ ಮೇಲೆ ಮತ್ತು ಪ್ರಮುಖ ರಷ್ಯನ್ನರ ಮೇಲೆ ನಿರ್ಬಂಧ ಹೇರಿವೆ. ಇದು ರಷ್ಯಾದ ಆರ್ಥಿಕತೆ ಕುಸಿಯಲು ಕಾರಣವಾಗದಿದ್ದರೂ, ಒಂದಷ್ಟು ಹೊಡೆತ ನೀಡುವುದು ಖಚಿತ. ಜಗತ್ತಿನಾದ್ಯಂತ ಸಹ ಇದರ ವ್ಯತಿರಿಕ್ತ ಪರಿಣಾಮ ಆಗತೊಡಗಿದೆ.
ಇಂಧನ ಸಂಪದ್ಭರಿತ ದೇಶ:ರಷ್ಯಾ ಇಂಧನ ಸಂಪದ್ಭರಿತ ರಾಷ್ಟ್ರವಾಗಿದ್ದು, ವಿವಿಧ ದೇಶಗಳೊಂದಿಗೆ ರಷ್ಯಾದ ದ್ವಿಪಕ್ಷೀಯ ಸಂಬಂಧಗಳಿಗೆ ಇಂಧನವೇ ಮೂಲಾಧಾರವಾಗಿದೆ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ರಷ್ಯಾಕ್ಕೆ ದೊಡ್ಡ ಪಾಲಿದೆ. ಅಲ್ಲಿ ಉತ್ಪಾದನೆ ಯಾಗುವ ಅರ್ಧಕ್ಕಿಂತ ಹೆಚ್ಚು ಇಂಧನ ಯುರೋಪ್​ಗೆ ರಫ್ತಾಗುತ್ತದೆ. 2030ಕ್ಕಿಂತ ಮುಂಚಿತವಾಗಿ ರಷ್ಯಾದಿಂದ ಇಂಧನ ಆಮದು ಮಾಡುವುದನ್ನು ನಿಲ್ಲಿಸಲಾಗದು. ಇದಕ್ಕೆ ಹೋಲಿಸಿದರೆ ಭಾರತ ಆಮದು ಮಾಡಿಕೊಳ್ಳುವ ಇಂಧನ ಪ್ರಮಾಣ ತುಂಬಾ ಕಡಿಮೆ. ಯುರೋಪ್ ಒಕ್ಕೂಟದಲ್ಲಿ ಈಗ ರಷ್ಯಾದಿಂದ ಇಂಧನ ಆಮದು ಕಡಿಮೆ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ರೂಬಲ್ ಬೆಲೆ ಕುಸಿತ:ಯುದ್ಧ ಆರಂಭವಾಗುತ್ತಿದ್ದಂತೆ ಕಚ್ಚಾ ತೈಲ ದರ ಏರಿಕೆ ಕಂಡರೆ, ರಷ್ಯಾ ಕರೆನ್ಸಿ ರೂಬಲ್ ಮೌಲ್ಯ ಕುಸಿಯುತ್ತ ಸಾಗಿದೆ. ಫೆ.23 ಮತ್ತು ಮಾರ್ಚ್ 15ರ ನಡುವೆ ರೂಬಲ್ ಭಾರಿ ಕುಸಿತ ಕಂಡಿದೆ. ಆದಾಗ್ಯೂ, ರಷ್ಯಾದ ಕೇಂದ್ರೀಯ ಬ್ಯಾಂಕ್ ಮಧ್ಯಪ್ರವೇಶ ಮಾಡಿ ಪಾಲಿಸಿ ದರವನ್ನು ಶೇಕಡ 20ಕ್ಕೆ ಏರಿಸಿದಾಗ ನಾಟಕೀಯವಾಗಿ ಕರೆನ್ಸಿ ಬೆಲೆಯೂ ಏರಿತ್ತು. ಏಪ್ರಿಲ್ 7ಕ್ಕೆ ಮತ್ತೆ ಯುದ್ಧಪೂರ್ವದ ಸ್ಥಿತಿಗೆ ತಲುಪಿದೆ.
ಹಣದುಬ್ಬರ ಅಬ್ಬರ:ಜಗತ್ತಿನಾದ್ಯಂತ ಜೀವನ ವೆಚ್ಚ ನಿರ್ವಹಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಣದುಬ್ಬರ ಏರಿಕೆ ಇದಕ್ಕೆ ಕಾರಣ. ಕೆಪಿಎಂಜಿಯ ಏಪ್ರಿಲ್ 1ರ ವರದಿ ಪ್ರಕಾರ, ಜಾಗತಿಕ ಹಣದುಬ್ಬರ ಪ್ರಮಾಣ ಈ ವರ್ಷ 4.5%ನಿಂದ 7.7% ತನಕ ಏರಿದೆ. 2023ರಲ್ಲಿ ಶೇಕಡ 2.9ರಿಂದ ಶೇಕಡ 4.3ರ ತನಕ ಏರಲಿದೆ. ಹಣದುಬ್ಬರ ಕೆಲವು ರಾಷ್ಟ್ರಗಳಲ್ಲಿ ಕಡಿಮೆ ಎಂದೆನಿಸಿದರೂ, ಅಲ್ಲಿ ದಶಕಗಳಲ್ಲೇ ಹೆಚ್ಚಿನ ಹಣದುಬ್ಬರ ದಾಖಲಾಗಿದೆ.
ಭಾರತಕ್ಕೂ ತಟ್ಟಿದ ಬಿಸಿ:ಯುದ್ಧದ ಪರಿಣಾಮ, ಭಾರತದಲ್ಲಿ ಮಾರ್ಚ್ ತಿಂಗಳ ಹಣದುಬ್ಬರ ಪ್ರಮಾಣ 17 ತಿಂಗಳ ಗರಿಷ್ಠ ಮಟ್ಟದಲ್ಲಿದೆ. ಚಿಲ್ಲರೆ ಹಣದುಬ್ಬರ ಶೇಕಡ 6.95 ಮತ್ತು ಸಗಟು ಹಣದುಬ್ಬರ ಶೇಕಡ 14.55 ಆಗಿದೆ. ಭಾರತದ ವಿದೇಶಿ ಮೀಸಲು ನಿಧಿ ಕೂಡ ಏ.8ರ ದತ್ತಾಂಶ ಪ್ರಕಾರ, 11.173 ಶತಕೋಟಿ ಡಾಲರ್ ಕುಸಿದು 606.475 ಶತಕೋಟಿ ಡಾಲರ್​ಗೆ ತಲುಪಿದೆ. ವಾರದ ಅವಧಿಯಲ್ಲಿ ಅತ್ಯಧಿಕ ಕುಸಿತ ಮಾರ್ಚ್ 11ಕ್ಕೆ ಕೊನೆಗೊಂಡ ವಾರದಲ್ಲಿ 9.6 ಶತಕೋಟಿ ಡಾಲರ್ ಕುಸಿತ ದಾಖಲಾಗಿತ್ತು.

ರಷ್ಯಾದಿಂದ ತೈಲ ಆಮದು ದುಪ್ಪಟ್ಟು:ಅಮೆರಿಕದ ಕಠಿಣ ಎಚ್ಚರಿಕೆ ಹೊರತಾಗಿಯೂ ನಿರ್ಬಂಧಕ್ಕೆ ಒಳಗಾಗಿರುವ ರಷ್ಯಾದಿಂದ ಕಚ್ಚಾ ತೈಲ ಆಮದು ಪ್ರಮಾಣವನ್ನು ದುಪ್ಪಟ್ಟು ಮಾಡಲು ಭಾರತ ತೀರ್ವನಿಸಿದೆ. ಒಪೆಕ್+ ತೈಲೋತ್ಪಾದಕ ರಾಷ್ಟ್ರಗಳ ಪೈಕಿ ಪ್ರಮುಖವಾದ ರಷ್ಯಾ, ಯೂಕ್ರೇನ್ ಮೇಲೆ ಸಾರಿದ ಸಮರ ಮೂರನೇ ತಿಂಗಳ ಸಮೀಪದಲ್ಲಿದೆ. ಯುದ್ಧದ ಕಾರಣ ಕಚ್ಚಾ ತೈಲದರ ಪ್ರತಿ ಬ್ಯಾರೆಲ್​ಗೆ 130ರ ಗಡಿ ದಾಟಿತ್ತು. ಸದ್ಯ 100 ಡಾಲರ್ ಆಸುಪಾಸಿನಲ್ಲೇ ಇದೆ. ಕಚ್ಚಾ ತೈಲವನ್ನು ಯುದ್ಧ ಪೂರ್ವದ ದರದಲ್ಲಿ ಶೇಕಡ 25ರಷ್ಟು ರಿಯಾಯಿತಿಯಲ್ಲಿ ಕೊಡುವುದಾಗಿ ಭರವಸೆ ನೀಡಿತ್ತು. ಈ ಮಧ್ಯೆ, ಗುರುವಾರ ಭಾರತಕ್ಕೆ ಭೇಟಿ ನೀಡುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಇಂಧನ ಮತ್ತು ರಕ್ಷಣಾ ಸಾಮಗ್ರಿಗಾಗಿ ರಷ್ಯಾದ ಮೇಲಿನ ಅವಲಂಬನೆಯನ್ನು ಬಿಡುವಂತೆ ಪ್ರಧಾನಿ ಮೋದಿಗೆ ಸಲಹೆ ನೀಡುವ ಸಾಧ್ಯತೆ ಇದೆ. ಇದಕ್ಕೆ ಪರ್ಯಾಯ ಮಾರ್ಗವನ್ನು ಕಂಡು ಕೊಳ್ಳಲು ಭಾರತಕ್ಕೆ ಸಹಾಯ ಮಾಡುವುದಾಗಿ ಹೇಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಮೆಂಟ್ ದರ ಶೇಕಡ 6-13 ಹೆಚ್ಚಳ:ಕಟ್ಟಡ ನಿರ್ಮಾಣ ಕ್ಷೇತ್ರದ ಮೂಲಗಳ ಪ್ರಕಾರ, ರಷ್ಯಾ-ಯೂಕ್ರೇನ್ ಬಿಕ್ಕಟ್ಟಿನ ಪರಿಣಾಮ ಕಟ್ಟಡ ನಿರ್ಮಾಣ ಕ್ಷೇತ್ರದ ಮೇಲೂ ಆಗಿದೆ. ಸಿಮೆಂಟ್ ದರ ಶೇಕಡ 6ರಿಂದ ಶೇಕಡ 13ರ ತನಕ ಏರಿಕೆಯಾಗಲಿದೆ. ಈ ನಡುವೆ, ಕಲ್ಲಿದ್ದಲು, ಪೆಟ್​ಕೋಕ್ ದರ ಕಳೆದ ಆರು ತಿಂಗಳ ಅವಧಿಯಲ್ಲಿ ಶೇಕಡ 30-50 ಏರಿದೆ. ಕ್ರಿಸಿಲ್ ವರದಿ ಪ್ರಕಾರ, ಸಿಮೆಂಟ್ ದರ ಪ್ರತಿ ಬ್ಯಾಗ್​ಗೆ 390 ರೂಪಾಯಿ ಆಗಿದೆ. ಈಗ ಇದು ಇನ್ನೂ 25ರಿಂದ 50 ರೂಪಾಯಿಯಷ್ಟು ಏರಿದೆ.
ಕೆಜಿಎಫ್-​2 ಹವಾ: ಮದುವೆ ಆಮಂತ್ರಣದಲ್ಲೂ ‘ವಯಲೆನ್ಸ್​’!

ಮೊನ್ನೆ ಎಚ್​ಡಿಕೆ, ನಿನ್ನೆ ಡಿಕೆಶಿ, ಇಂದು ಮೊಯ್ಲಿ!; ಏನದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 1 =
Remember me
