ಬೆಂಗಳೂರು:ಧರ್ಮಗಳ ನಡುವೆ ದ್ವೇಷ, ಕೋಮುಗಲಭೆ ಸೃಷ್ಟಿಸಲು ಸಂಚು ಆರೋಪದಲ್ಲಿ ಬಂಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ಕಾರ್ಯಕರ್ತರಿಗೆ ಕೇರಳದ ನಿವೃತ್ತ ಪೊಲೀಸರು ತರಬೇತಿ ನೀಡಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.
ಕೆ.ಜಿ. ಹಳ್ಳಿ ಪೊಲೀಸ್ ಠಾಣೆ ಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಬಂಧಿತ 15 ಆರೋಪಿಗಳ ವಿಚಾರಣೆ ವೇಳೆ ಹಲವು ಅಂಶಗಳು ಬೆಳಕಿಗೆ ಬಂದಿವೆ. ಈಗಾಗಲೇ ಒಂದು ಸುತ್ತಿನ ವಿಚಾರಣೆ ನಡೆಸಿರುವ ಪೊಲೀಸರು, ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತ ಪಿಎಫ್​ಐ ಮುಖಂಡರು ಮತ್ತು ಕಾರ್ಯಕರ್ತರ ಮೊಬೈಲ್, ಲ್ಯಾಪ್​ಟಾಪ್ ಇನ್ನಿತರ ತಾಂತ್ರಿಕ ಮಾಹಿತಿ ಕಲೆ ಹಾಕಿರುವ ಅಧಿಕಾರಿಗಳು, ಆರೋಪಿತರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ (ಯುಎಪಿಎ) ಅನ್ವಯ ಕೇಸ್ ದಾಖಲಿಸಲು ಕೋರ್ಟ್ ನಿಂದ ಅನುಮತಿ ಪಡೆದಿದ್ದಾರೆ. ಯುಎಪಿಎ ಕಾಯ್ದೆ ಸೇರಿಸಿ ಹೆಚ್ಚಿನ ತನಿಖೆಗೆ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲು ಬೆಂಗಳೂರು ನಗರ ಪೊಲೀಸರು ನಿರ್ಧರಿಸಿದ್ದಾರೆ.
ಕೇರಳದಲ್ಲಿ ಪಿಎಫ್​ಐ ಬಲಗೊಳಿಸಿದ ಮಾದರಿಯಲ್ಲಿಯೇ ಕರ್ನಾಟಕದಲ್ಲಿ ಸಂಘಟನೆ, ಜಿಲ್ಲಾಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಿ ಸಕ್ರಿಯ ಸದಸ್ಯರ ಸಂಖ್ಯೆ ಹೆಚ್ಚಿಸುವುದು ಇವರ ಗುರಿಯಾಗಿತ್ತು. ರಾಜ್ಯದಲ್ಲಿ ಅಂದಾಜು 50 ಸಾವಿರ ಜನರು ಪಿಎಫ್​ಐನಲ್ಲಿ ನೋಂದಣಿ ಆಗಿದ್ದಾರೆ. ಸದಸ್ಯರಲ್ಲಿ ಕೋಮುದ್ವೇಷದ ವಿಷ ಬೀಜ ಬಿತ್ತಿ ಅನ್ಯಧರ್ಮಗಳ ವಿರುದ್ಧ ಪ್ರಚೋದನೆ ನೀಡುತ್ತಿದ್ದರು. ಚಾಮರಾಜನಗರದ ಸತ್ಯಮಂಗಲ ಅರಣ್ಯ ಪ್ರದೇಶದಲ್ಲಿ ಕಾರ್ಯಕರ್ತರಿಗೆ ತರಬೇತಿ ಶಿಬಿರ ಏರ್ಪಡಿಸಿ ಅಲ್ಲಿಗೆ ಕೇರಳದಿಂದ ಮುಖಂಡರನ್ನು ಕರೆಸಿಕೊಳ್ಳುತ್ತಿದ್ದರು. ಕೇರಳದ ನಿವೃತ್ತ ಪೊಲೀಸ್ ಅಧಿಕಾರಿಗಳು ಬಂದು ತರಬೇತಿ ನೀಡಿದ್ದಾರೆ ಎನ್ನಲಾಗಿದೆ.
ನಾಲ್ವರು ನಾಪತ್ತೆ:ಕೆ.ಜಿ.ಹಳ್ಳಿ ಠಾಣೆಯಲ್ಲಿ 19 ಪಿಎಫ್​ಐ ಮುಖಂಡರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಇದರಲ್ಲಿ 15 ಮಂದಿ ಬಂಧನಕ್ಕೆ ಒಳಗಾಗಿದ್ದು, ಉಳಿದ ನಾಲ್ವರು ತಲೆಮರೆಸಿಕೊಂಡಿದ್ದಾರೆ. ಪ್ರವಾಸದ ನೆಪದಲ್ಲಿ ವಿದೇಶಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದೆ. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಪಿಎಫ್​ಐ ಸಕ್ರಿಯವಾಗಿರುವ ರಾಜ್ಯಗಳಲ್ಲಿ ಆರೋಪಿಗಳ ಪತ್ತೆಗೆ ಬೆಂಗಳೂರು ಪೊಲೀಸರು ಮತ್ತು ಎನ್​ಐಎ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಏರ್​ಗನ್ ಕೊಟ್ಟು ತರಬೇತಿ:ಸಂಘಟನೆಯ ಕಾರ್ಯಕರ್ತರಿಗೆ ಏರ್​ಗನ್ ಕೊಟ್ಟು ತರಬೇತಿ ನೀಡಲಾಗಿದೆ. ಇದಾದ ಬಳಿಕ ಫ್ರೀಡಂ ಮಾರ್ಚ್​ನಲ್ಲಿ ಏರ್​ಗನ್ ಹಿಡಿದು ಪಥಸಂಚಲನ ನಡೆಸಿದ್ದರು. ಕೇರಳದ ಕಾಸರಗೋಡಿನ ಕಾಡಿನಲ್ಲಿ ಈ ಹಿಂದೆ ಫ್ರೀಡಂ ಯೂನಿಟಿ ಸಭೆ ನಡೆದಿತ್ತು. ಇದಾದ ಮೇಲೆ ರಾಜ್ಯದಲ್ಲಿ ನಡೆಸಬೇಕೆಂದು ಯೋಜಿಸಲಾಗಿತ್ತು. ಇದೀಗ ಅಲ್ಲಿ ಭಾಗವಹಿಸಿದ್ದವರ ಮಾಹಿತಿ ಕಲೆ ಹಾಕುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಮತ್ತೊಂದೆಡೆ, ಎನ್​ಐಎ ಅಧಿಕಾರಿಗಳು ಸಹ ರಾಷ್ಟ್ರಮಟ್ಟದಲ್ಲಿ ಪಿಎಫ್​ಐ ವಿರುದ್ಧ ತನಿಖೆ ಮುಂದುವರಿಸಿದ್ದು, ತಲೆಮರೆಸಿಕೊಂಡಿರುವ ಪ್ರಮುಖರ ಬಂಧನಕ್ಕೆ ಬಲೆಬೀಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿ:ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ಜತೆ ಕೇರಳ ಪೊಲೀಸ್ ಇಲಾಖೆಯ 873 ಸಿಬ್ಬಂದಿ ಸಂಪರ್ಕ ಹೊಂದಿದ್ದಾರೆಂಬ ಆಘಾತಕಾರಿ ಅಂಶವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಬಹಿರಂಗ ಪಡಿಸಿದೆ. ಈ ಬಗ್ಗೆ ಅದು ಕೇರಳ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅನಿಲ್ ಕಾಂತ್​ಗೆ ವರದಿ ಸಲ್ಲಿಸಿದೆ ಎಂದು ತಿಳಿದು ಬಂದಿದೆ. ಪಿಎಫ್​ಐನೊಂದಿಗೆ ನಂಟು ಹೊಂದಿರುವ ಎಲ್ಲ 873 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಸರುಗಳನ್ನು ವರದಿಯಲ್ಲಿ ನಮೂದಿಸಲಾಗಿದೆ ಎನ್ನಲಾಗಿದೆ.
ಸ್ಪೆಷಲ್ ಬ್ರಾಂಚ್, ಇಂಟಲಿಜೆನ್ಸ್ ಮತ್ತು ಕಾನೂನು ಮತ್ತು ಸುವ್ಯವಸ್ಥೆ ವಿಭಾಗಗಳಲ್ಲದೆ ಕೇರಳದ ಹಿರಿಯ ಪೊಲೀಸ್ ಅಧಿಕಾರಿಗಳ ಕಚೇರಿ ಕರ್ತವ್ಯದಲ್ಲಿ ತೊಡಗಿದ್ದ ಸಿಬ್ಬಂದಿ ಕೂಡ ಪಿಎಫ್​ಐ ಜತೆ ಬಾಂಧವ್ಯ ಹೊಂದಿದ್ದಾರೆ ಎಂದು ಎನ್​ಐಎ ಹೇಳಿದೆ.
ಸಬ್ ಇನ್​ಸ್ಪೆಕ್ಟರ್, ಸ್ಟೇಷನ್ ಹೆಡ್ ಆಫೀಸರ್ (ಎಸ್​ಎಚ್​ಒ) ಮತ್ತು ಸಿವಿಲ್ ಪೊಲೀಸ್ ಮೊದಲಾದ ರ್ಯಾಂಕ್​ನ ಅಧಿಕಾರಿಗಳು ಸೇರಿದ್ದಾರೆ. ಅವರೆಲ್ಲರ ಮೇಲೆ ಕೇಂದ್ರೀಯ ಭದ್ರತಾ ಸಂಸ್ಥೆಗಳು ಕಣ್ಗಾವಲಿಟ್ಟಿವೆ. ಈ ಅಧಿಕಾರಿಗಳ ಹಣಕಾಸು ವ್ಯವಹಾರಗಳ ಬಗ್ಗೆಯೂ ಮಾಹಿತಿಗಳನ್ನು ಕಲೆ ಹಾಕುತ್ತಿವೆ.
ಮಾಹಿತಿ ಸೋರಿಕೆ:ರಾಜ್ಯ ಪೊಲೀಸರ ಕಾರ್ಯಾಚರಣೆಗಳು, ಅದರಲ್ಲೂ ಮುಖ್ಯವಾಗಿ ದಾಳಿಗಳ ಮಾಹಿತಿಗಳನ್ನು ಈ ಪೊಲೀಸರು ಸೋರಿಕೆ ಮಾಡುತ್ತಿದ್ದರು ಎನ್ನುವುದು ಮುಖ್ಯ ಆರೋಪವಾಗಿದೆ. ಪಿಎಫ್​ಐ ವಿರುದ್ಧದ ಈಚೆಗಿನ ರಾಷ್ಟ್ರವ್ಯಾಪಿ ಕಾರ್ಯಾಚರಣೆ ವಿರೋಧಿಸಿ ಹರತಾಳಕ್ಕೆ ಕರೆ ನೀಡಿದ್ದ ಪಿಎಫ್​ಐ ನಾಯಕರೊಂದಿಗೆ ಅನೇಕ ಪೊಲೀಸರು ಫೋನ್ ಕರೆ ಮಾಡಿದ್ದನ್ನು ಕೂಡ ಎನ್​ಐಎ ಪತ್ತೆ ಮಾಡಿದೆ. ಕೇರಳದಲ್ಲಿ ಎನ್​ಐಎ ದಾಳಿಗಳ ಮೊದಲೂ ನಂತರವೂ ಅವರು ಪಿಎಫ್​ಐ ಮುಖಂಡರೊಂದಿಗೆ ಸಂಪರ್ಕದಲ್ಲಿರುವುದು ಗೊತ್ತಾಗಿದೆ.
180 ಕೆ.ಜಿ. ತೂಕದ ವ್ಯಕ್ತಿ, ಧೋಖಾ ವ್ಯಕ್ತಿತ್ವ: ಖಾಕಿ ಧರಿಸಿ ಹಣ ವಸೂಲಿ ಮಾಡ್ತಿದ್ದ ನಕಲಿ ಇನ್​ಸ್ಪೆಕ್ಟರ್ ಅರೆಸ್ಟ್​

ಕಾಂತಾರ: ಒಂದಕ್ಕೂ ನಾಲ್ಕಕ್ಕೂ ನಡುವೆ ಎಷ್ಟು ಅಂತರ!?; ಬದಲಾಯ್ತು ರಿಷಬ್ ‘ಸ್ಟೇಟಸ್​’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
