ಅಭಿವೃದ್ಧಿ ಮತ್ತು ಪರಿಸರ ರಕ್ಷಣೆ ಎರಡೂ ಪೂರಕವಾಗಿ ಸಾಗಬೇಕು ಎಂಬ ಆಶಯಕ್ಕೆ ಜಗತ್ತು ಕಿವಿಯಾದರೂ, ಅದನ್ನು ಸೂಕ್ತವಾಗಿ ಅನುಷ್ಠಾನಕ್ಕೆ ತರುವಲ್ಲಿ ಸೋತಿದೆ. ಇದರ ಪರಿಣಾಮ ಭೀಕರ ಎಂಬಂತೆ ಗೋಚರಿಸುತ್ತಿದೆ. ಇಂಗಾಲ ಹೊರಸೂಸುವಿಕೆ ಪ್ರಮಾಣ ಕಡಿಮೆಗೊಳಿಸಬೇಕು ಎಂದು ಸಮ್ಮತಿ ಏರ್ಪಟ್ಟಿದ್ದರೂ, ಹಲವು ದೇಶಗಳು ಈ ನಿಟ್ಟಿನಲ್ಲಿ ಯಾವುದೇ ಗಟ್ಟಿ ಹೆಜ್ಜೆ ಇರಿಸಿಲ್ಲ. ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಹವಾಮಾನ ಬದಲಾವಣೆ ವಿರುದ್ಧದ ಹೋರಾಟದಲ್ಲಿ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಈ ವಿಷಯದಲ್ಲಿ, ಜಗತ್ತಿನ ಬಹುತೇಕ ರಾಷ್ಟ್ರಗಳು ಭಾರತದತ್ತ ಭರವಸೆಯ ಕಂಗಳಿಂದ ನೋಡುತ್ತಿವೆ.
ಕೈಗಾರಿಕೀಕರಣ, ಅರಣ್ಯನಾಶ, ನಗರ ಪ್ರದೇಶಗಳ ನಿರ್ಮಾಣ ಇತ್ಯಾದಿ ಮಾನವ ಚಟುವಟಿಕೆಗಳು ಅಗಾಧವಾಗಿ ಹೆಚ್ಚುತ್ತಿರುವ ಪರಿಣಾಮವಾಗಿ, ಪರಿಸರದಲ್ಲಿ ಕಾರ್ಬನ್ ಡೈ ಆಕ್ಸೆ ೖಡ್ ಮತ್ತು ಇತರ ಹಸಿರುಮನೆ ಅನಿಲಗಳ ಪ್ರಮಾಣ ಹೆಚ್ಚಿ ಭೂಮಿಯ ಪರಿಸರ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮವಾಗಿದೆ. ಪ್ರಾಣಿಗಳು ಮತ್ತು ಸಸ್ಯ ಸಂಕುಲಗಳ ಹಲವಾರು ಪ್ರಭೇದಗಳು ಅಳಿಯುತ್ತಿವೆ. ಲಕ್ಷಾಂತರ ಜನ ಪ್ರತಿವರ್ಷ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ, ಇಂಗಾಲ ಹೊರಸೂಸುವಿಕೆ ನಿಯಂತ್ರಿಸಬೇಕು ಎಂಬ ಜಾಗತಿಕ ಹವಾಮಾನ ಶೃಂಗದ ನಿರ್ಣಯಗಳಿಗೂ, ಆಗ್ರಹಗಳಿಗೂ ಸಿರಿವಂತ ರಾಷ್ಟ್ರಗಳು ಸ್ಪಂದಿಸುತ್ತಿಲ್ಲ. 1975ರಿಂದ 2021ರವರೆಗೆ ಕಾರ್ಬನ್ ಹೊರಸೂಸುವಿಕೆಯಲ್ಲಿ ಶೇಕಡ 25ರಷ್ಟು ‘ಕೊಡುಗೆ’ ಅಮೆರಿಕದ್ದೇ ಆಗಿದೆ. ಮತ್ತೊಂದೆಡೆ, ಮೊದಲಿನಿಂದಲೂ, ಪ್ರಕೃತಿ ಮತ್ತು ಅಭಿವೃದ್ಧಿಯಲ್ಲಿ ಸಮತೋಲನ ಸಾಧಿಸಲು ಗಂಭೀರವಾಗಿ ಪ್ರಯತ್ನಿಸುತ್ತಿರುವ ಭಾರತದ ಕಾರ್ಬನ್ ಹೊರಸೂಸುವಿಕೆ ಪ್ರಮಾಣ ಶೇಕಡ 4ಕ್ಕಿಂತ ಕಡಿಮೆ ಇದೆ ಮತ್ತು 2030ರ ಹೊತ್ತಿಗೆ ಇದನ್ನು ಮತ್ತಷ್ಟು ತಗ್ಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ದುಬೈನಲ್ಲಿ ನಡೆಯುತ್ತಿರುವ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಹೇಳಿದ್ದಾರೆ. ಆದರೆ, ಜಾಗತಿಕವಾಗಿ ಹವಾಮಾನ ಬದಲಾವಣೆಯ ಸವಾಲು ಎದುರಿಸಲು ದೇಶಗಳು ಈಗ ಮಾಡುತ್ತಿರುವ ವೆಚ್ಚ ಸಾಲದು. ಈ ದಶಕದಲ್ಲಿ ಪ್ರತಿ ವರ್ಷ 215ರಿಂದ 387 ಶತಕೋಟಿ ಡಾಲರ್ ವೆಚ್ಚ ಮಾಡುವ ಅಗತ್ಯವಿದೆ. 2050ರ ಹೊತ್ತಿಗೆ ಇದು ಮತ್ತಷ್ಟು ಏರಿಕೆ ಆಗಿ, 500 ಶತಕೋಟಿ ಡಾಲರ್​ಗೆ ತಲುಪುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯು ಹವಾಮಾನ ಕ್ರಿಯಾ ಶೃಂಗಸಭೆಯ ಮುನ್ನ ಬಿಡುಗಡೆ ಮಾಡಿರುವ ವರದಿಯಲ್ಲಿ ಬೊಟ್ಟು ಮಾಡಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಬಡರಾಷ್ಟ್ರಗಳಿಗೆ ನೀಡಬೇಕಾದ ನೆರವಿನಲ್ಲಿ 2021ರಲ್ಲಿ ಶೇಕಡ 15ರಷ್ಟು ಇಳಿಕೆ ಕಂಡುಬಂದಿದೆ.
‘ಅಂತಾರಾಷ್ಟ್ರೀಯ ಸಮುದಾಯವು ಇಂಗಾಲ ಮತ್ತು ಹಸಿರುಮನೆ ಅನಿಲಗಳ ಸೂಸುವಿಕೆಯನ್ನು ಇಂದೇ ಸಂಪೂರ್ಣವಾಗಿ ನಿಲ್ಲಿಸಿದರೂ, ಹವಾಮಾನ ಬದಲಾವಣೆಯಿಂದ ಆಗಿರುವ ಹಾನಿಯನ್ನು ಸರಿಪಡಿಸಲು ಕೆಲ ದಶಕಗಳೇ ಬೇಕಾಗುತ್ತವೆ’ ಎಂದು ವರದಿ ಸ್ಪಷ್ಟವಾಗಿ ಹೇಳಿರುವುದು, ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ.
ನಿಧಿಗೆ ನೆರವಾಗಲು ಹಿಂದೇಟು:ಹವಾಮಾನ ಬದಲಾವಣೆಯಿಂದ ಹೆಚ್ಚು ಪ್ರಭಾವಿತವಾಗಿರುವ ಬಡ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ನೆರವಾಗುವ ನಿಟ್ಟಿನಲ್ಲಿ ಭಾರತವು ‘ನಷ್ಟ ಮತ್ತು ಹಾನಿ’ (ಲಾಸ್ ಆಂಡ್ ಡ್ಯಾಮೇಜ್ ಫಂಡ್) ನಿಧಿ ರಚಿಸಬೇಕೆಂಬ ಪ್ರಸ್ತಾಪವನ್ನು 2022ರ ನವೆಂಬರ್​ನಲ್ಲಿ ಬ್ರೆಜಿಲ್​ನ ಶಮ್ರ್ ಎಲ್ ಶೇಖ್​ನಲ್ಲಿ ಜರುಗಿದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶದಲ್ಲಿ (ಕಾಪ್ 27) ಇರಿಸಿತ್ತು. ಈ ಕುರಿತ ಐತಿಹಾಸಿಕ ನಿರ್ಣಯವನ್ನು ಸಮಾವೇಶದ ಸಮಾರೋಪದಂದು ಅಂಗೀಕರಿಸುವುದರೊಂದಿಗೆ ಭಾರತದ ಪ್ರಸ್ತಾಪಕ್ಕೆ ಮನ್ನಣೆ ದೊರಕಿತು. ಈ ಮೂಲಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹವಾಮಾನ ಬದಲಾವಣೆಯ ಅನಪೇಕ್ಷಿತ ಪರಿಣಾಮಗಳನ್ನು ಎದುರಿಸಲು ಬಡ ದೇಶಗಳಿಗೆ ಸಹಾಯ ಮಾಡಲು ನಿಧಿ ರಚಿಸಲು ಒಪ್ಪಿಕೊಂಡಿವೆಯಾದರೂ, ಹಣಕಾಸಿನ ನೆರವು ನೀಡಲು ಹಿಂದೇಟು ಹಾಕುತ್ತಿವೆ.
ಗಂಭೀರ ಸಮಸ್ಯೆ:ಹವಾಮಾನ ಬದಲಾವಣೆಯು ತಾಪಮಾನ ಮತ್ತು ಹವಾಮಾನ ಮಾದರಿಗಳಲ್ಲಿನ ದೀರ್ಘಾವಧಿಯ ಬದಲಾವಣೆಗಳನ್ನು ಸೂಚಿಸುತ್ತದೆ. 19ನೇ ಶತಮಾನದಿಂದಲೂ ಬಹುಮುಖ್ಯವಾಗಿ ಕಲ್ಲಿದ್ದಲು, ತೈಲ ಮತ್ತು ಅನಿಲದಂತಹ ಪಳೆಯುಳಿಕೆ ಇಂಧನಗಳನ್ನು ಸುಡುವಂತಹ ಮಾನವ ಚಟುವಟಿಕೆಗಳು ಹವಾಮಾನ ಬದಲಾವಣೆಯ ಪ್ರಮುಖ ಕಾರಣಗಳಾಗಿವೆ. ಆದರೆ, ಈ ಚಟುವಟಿಕೆಗಳು ಕಳೆದ 30-35 ವರ್ಷಗಳಲ್ಲಿ ದೊಡ್ಡಪ್ರಮಾಣದಲ್ಲಿ ಹೆಚ್ಚಳವಾಗಿವೆ. ಇದರಿಂದಾಗಿ ತೀವ್ರವಾದ ಬರ, ಅಕಾಲಿಕ ಮಳೆ, ಚಂಡಮಾರುತ, ಶಾಖದ ಅಲೆಗಳು, ಸಮುದ್ರ ಮಟ್ಟ ಏರಿಕೆ, ಹಿಮನದಿಗಳ ಕರಗುವಿಕೆ, ಕಾಡ್ಗಿಚ್ಚು ಮುಂತಾದ ಹವಾಮಾನ ವೈಪರೀತ್ಯಗಳು ತಲೆದೋರುತ್ತಿವೆ. ಪರಿಸರಕ್ಕೆ ಹಾನಿಯಾಗದಂತೆ ಕ್ರಮ ಕೈಗೊಳ್ಳುವ ಸಾಮೂಹಿಕ ಜವಾಬ್ದಾರಿಯನ್ನು ಸ್ವೀಕರಿಸಿ ಜಗತ್ತಿನ ಎಲ್ಲ ರಾಷ್ಟ್ರಗಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಿದಲ್ಲಿ ಮಾತ್ರ ಈ ಸಮಸ್ಯೆಯನ್ನು ಎದುರಿಸಬಹುದು. ಹವಾಮಾನದಲ್ಲಿ 1 ಡಿಗ್ರಿ ಸೆಲ್ಸಿಯಸ್​ನಷ್ಟು ತಾಪಮಾನ ಏರಿಕೆಯಾದರೆ ಗಾಳಿಯು ನೀರನ್ನು ಹೀರಿಕೊಳ್ಳುವ ಪ್ರಮಾಣ ಶೇಕಡ 7ರಷ್ಟು ಹೆಚ್ಚುತ್ತದೆ, ಇದರಿಂದ ಮಳೆಯ ಪ್ರಮಾಣ ಅಧಿಕವಾಗುತ್ತದೆ. ಸಮುದ್ರ ಮಟ್ಟವೂ ವೇಗವಾಗಿ ಹೆಚ್ಚುತ್ತಿದೆ. ಭೂಮಿಯ ತಾಪಮಾನದ ತೀವ್ರ ಏರಿಕೆಯಿಂದಾಗಿ ಮುಂದಿನ ಕೆಲವು ದಶಕಗಳಲ್ಲಿ ಭಾರತದಲ್ಲಿ ಉಷ್ಣ ಮಾರುತಗಳು ಹೆಚ್ಚಲಿದ್ದು ಚಂಡಮಾರುತದ ಪ್ರಕೋಪವೂ ಅಧಿಕವಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಪ್ರಯೋಜನವೇನು?:ಅಭಿವೃದ್ಧಿಶೀಲ ರಾಷ್ಟ್ರಗಳು ಪ್ರವಾಹ, ಬರ ಮತ್ತು ಶಾಖದ ಅಲೆಗಳಂತಹ ವಿಪತ್ತುಗಳನ್ನು ಎದುರಿಸಿದಾಗ ಈ ನಿಧಿಯಿಂದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಅಮೆರಿಕ ಮೊದಲು ಇಂಥ ನಿಧಿಗಳ ರಚನೆಗೆ ವಿರೋಧ ವ್ಯಕ್ತಪಡಿಸಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + fifteen =
Remember me
