ನವದೆಹಲಿ:ರಾಜಧಾನಿ ದೆಹಲಿಯಲ್ಲಿ ಯಮುನಾ ನದಿ ಪ್ರವಾಹ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿದ್ದು, ಅಪಾಯ ಸ್ಥಳದಲ್ಲಿರುವ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗಿದೆ. ಯಮುನಾ ನದಿ ಮಟ್ಟ ಬುಧವಾರ 207.55 ಮೀಟರ್​ಗೆ ಏರಿದ್ದು, 45 ವರ್ಷ ಹಿಂದಿನ ದಾಖಲೆ 207.49 ಮೀಟರ್ ಅನ್ನು ಅಳಿಸಿಹಾಕಿದೆ. ಭೋರ್ಗರೆಯುತ್ತಿರುವ ನದಿ ಪ್ರವಾಹ ಹೆಚ್ಚಾಗದಂತೆ ಕಾಯ್ದುಕೊಳ್ಳಲು ಹರಿಯಾಣದ ಹಥ್ನಿಕುಂಡ್ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಬಾರದು. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ಪತ್ರ ಬರೆದಿದೆ.
ದೆಹಲಿ ತಗ್ಗುಪ್ರದೇಶದ ಮನೆಗಳು, ಮಾರುಕಟ್ಟೆಗಳು ಈಗಾಗಲೇ ಜಲಾವೃತವಾಗಿದ್ದು, ಜನರು ಬೇರೆಡೆಗೆ ಸ್ಥಳಾಂತರ ಆಗುತ್ತಿದೆ. ಹರಿಯಾಣದ ಹಥ್ನಿಕುಂಡ್ ಜಲಾಶಯದಿಂದ ಮತ್ತಷ್ಟು ನೀರು ಹೊರಬಿಟ್ಟರೆ ಈ ಪ್ರದೇಶಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ದೆಹಲಿಯಲ್ಲಿ ಜಿ-20 ಶೃಂಗಸಭೆ ಆಯೋಜನೆ ಆಗಿರುವ ಸಂದರ್ಭದಲ್ಲಿ ಪ್ರವಾಹದಿಂದ ಅನಾಹುತ ಸಂಭವಿಸಿದರೆ ಅದು ಜಾಗತಿಕವಾಗಿ ದೆಹಲಿಗೆ ಶೋಭೆ ತರುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಬರೆದ ಪತ್ರದಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ವಿವರಿಸಿದ್ದಾರೆ.
ಶಾಲಾ-ಕಾಲೇಜು ಕಟ್ಟಡಗಳನ್ನು ತಾತ್ಕಾಲಿಕ ಶಿಬಿರಗಳನ್ನಾಗಿ ಪರಿವರ್ತಿಸಿ ಅಲ್ಲಿಗೆ ಜನರನ್ನು ಸ್ಥಳಾಂತರ ಮಾಡುವಂತೆ ಸಿಎಂ ಕೇಜ್ರಿವಾಲ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಅಪಾಯವೆಂದು ಗುರುತಿಸಲಾದ ಹಳೇ ದೆಹಲಿಯ ಪ್ರದೇಶಗಳಲ್ಲಿ ಪೊಲೀಸರು ಜನ ಸಂಚಾರವನ್ನು ನಿರ್ಬಂಧಿಸಿದ್ದಾರೆ.
ಜಲವಿದ್ಯುತ್ ಘಟಕಗಳಿಗೆ ಕಂಟಕ:ಭಾರಿ ಮಳೆ ಮತ್ತು ಪ್ರವಾಹದ ಕಾರಣ ಉತ್ತರ ಭಾರತದ ಹಲವು ಜಲವಿದ್ಯುತ್ ಘಟಕಗಳಿಕೆ ಕಂಟಕ ಎದುರಾಗಿದೆ. ಪ್ರವಾಹದಲ್ಲಿ ಕೊಚ್ಚಿಕೊಂಡು ಬರುವ ಕೆಸರಿನ ರಾಡಿಯಿಂದ ಯಂತ್ರೋಪಕರಣಗಳಿಗೆ ಹಾನಿಯಾಗುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ಎನ್​ಎಚ್​ಪಿಸಿ ನಿರ್ವಹಿಸುತ್ತಿರುವ ದುಲ್ ಹಸ್ತಿ ಯೋಜನೆಯ 3 ಘಟಕಗಳು, ಸಲಾಲ್ ಯೋಜನೆಯ ಆರು ಘಟಕಗಳು, ಹಿಮಾಚಲ ಪ್ರದೇಶದಲ್ಲಿ ಚಮೇರಾ 2ಮತ್ತು 3ನೇ ಯೋಜನೆಯ ತಲಾ ಮೂರು ಘಟಕ, ಎಸ್​ಜೆವಿಎನ್, ನಥಾಪ್ ಝಾಕ್ರಿ, ಲುಹರಿ-1 ಎಚ್​ಇಪಿ, ಸುನಿ ಡ್ಯಾಂ, ದೌಲಾಸಿದ್ ಎಚ್​ಇಪಿ ಘಟಕಗಳು ಸ್ಥಗಿತಗೊಂಡಿವೆ. ನಿರ್ಮಾಣ ಹಂತದಲ್ಲಿರುವ ಯೋಜನೆಗಳನ್ನು ನಿಲ್ಲಿಸಲಾಗಿದೆ.
ಹಿಮಾಚಲದಲ್ಲಿ ಅನಾಹುತಗಳ ಸರಮಾಲೆ:ಹಿಮಾಚಲ ಪ್ರದೇಶದಲ್ಲಿ ಬಹುತೇಕ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಅನಾಹುತಗಳ ಸರಣಿ ಮುಂದುವರಿದಿದೆ. ಮಳೆ, ಪ್ರವಾಹ, ಭೂಕುಸಿತದ ಕಾರಣ ರಾಜ್ಯದಲ್ಲಿ 80 ಮಂದಿ ಮೃತಪಟ್ಟಿದ್ದು, 4 ಸಾವಿರ ಕೋಟಿ ರೂ.ಗೆ ಹೆಚ್ಚಿನ ಮೌಲ್ಯದ ಆಸ್ತಿ ಹಾನಿ ಆಗಿದೆ. ನದಿ ದಡದಲ್ಲಿ ಸುರಕ್ಷತೆಗಾಗಿ ನಿರ್ವಿುಸಲಾಗಿದ್ದ ತಡೆಗೋಡೆಗಳು ಕುಸಿದಿವೆ. 1,300 ಕಿ.ಮೀ. ವ್ಯಾಪ್ತಿಯ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ. 1,956 ವಿದ್ಯುತ್ ಟ್ರಾನ್ಸ್​ಫಾರ್ಮರ್​ಗಳು, 1,369 ನೀರು ಪೂರೈಕೆ ಘಟಕಗಳು ಸ್ಥಗಿತಗೊಂಡಿವೆ. 1,193 ಮಾರ್ಗಗಳಲ್ಲಿ ಬಸ್ ಸಂಚಾರ ಬಂದ್ ಆಗಿದೆ. 40 ಸೇತುವೆಗಳಿಗೆ ಹಾನಿ ಆಗಿದೆ. ಇದುವರೆಗೂ 20 ಸಾವಿರಕ್ಕೂ ಅಧಿಕ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ಮಧ್ಯೆ ಒಳಹರಿವು ಹೆಚ್ಚಳವಾಗಿರುವ ಕಾರಣ ಅಣೆಕಟ್ಟೆಗಳಿಂದ ನೀರು ಬಿಡುವುದು ಅನಿವಾರ್ಯವಾಗಿದ್ದು, ನದಿಯಲ್ಲಿ ಪ್ರವಾಹ ಅಧಿಕವಾಗಲು ಕಾರಣವಾಗಿದೆ.
ಕಸೋಲ್​ನಲ್ಲಿ ಸಿಲುಕಿದ್ದ 2000 ಮಂದಿ ರಕ್ಷಣೆ:ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಪ್ರವಾಸಿ ಕೇಂದ್ರ ಕಸೋಲ್​ನಲ್ಲಿ ಸಂಚಾರ ಸಾಧ್ಯವಾಗದೆ ಸಿಲುಕಿಕೊಂಡಿದ್ದ 2000ಕ್ಕೂ ಹೆಚ್ಚು ಪ್ರವಾಸಿಗರನ್ನು ಸುರಕ್ಷತಾ ಸ್ಥಳಕ್ಕೆ ರವಾನಿಸಲಾಗಿದೆ. ಕಸೋಲ್-ಭುನ್ತೂರು ರಸ್ತೆ ಭೂಕುಸಿತದಿಂದ ಹಾಳಾದ ಕಾರಣ ಸಂಚಾರ ಸಾಧ್ಯವಾಗಿರಲಿಲ್ಲ ಎಂದು ಸಿಎಂ ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದಾರೆ. ಚಂದರ್ತಾಲ್ ರಸ್ತೆಯಲ್ಲಿ ನಿರಾಶ್ರಿತರಾಗಿದ್ದ 300 ಪ್ರವಾಸಿಗ ರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಇವರಲ್ಲಿ ಇಬ್ಬರು ವೃದ್ಧರು, ಓರ್ವ ಬಾಲಕಿ ಸೇರಿ 7 ಮಂದಿ ಅಸ್ವಸ್ಥರಾಗಿದ್ದರು. ಅವರನ್ನು ಭುನ್ತೂರ್​ಗೆ ಹೆಲಿಕಾಪ್ಟರ್​ನಲ್ಲಿ ಏರ್ ಲಿಫ್ಟ್ ಮಾಡಲಾಗಿದೆ. ಕುಲು-ಮನಾಲಿ ರಸ್ತೆಯು ಸಂಚಾರಕ್ಕೆ ಮುಕ್ತವಾಗಿದ್ದು, ಬುಧವಾರ 2,200 ವಾಹನಗಳು ಕುಲು ತಲುಪಿದವು. 2 ದಿನಗಳಿಂದ ಮನಾಲಿಯಲ್ಲಿ ಮೊಬೈಲ್ ಸಿಗ್ನಲ್ ದೊರೆಯದ ಕಾರಣ ಕುಟುಂಬದವರೊಂದಿಗೆ ಸಂಪರ್ಕ ಸಾಧ್ಯವಾಗದೆ ಈ ಜನರು ಆತಂಕಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರಿ ಮಳೆಯ ಕಾರಣ ಮನಾಲಿಯ ಎಡದಂಡೆಯ ರಸ್ತೆ ಕೊಚ್ಚಿ ಹೋಗಿತ್ತು.

ಪತಿಯ ಕಣ್ಣಿಗೆ ಕಾರದ ಪುಡಿ ಎರಚಿ, ಪತ್ನಿಯನ್ನು ಹೊತ್ತೊಯ್ದರು: ಪ್ರೇಮವಿವಾಹವಾದ ಒಂದೇ ತಿಂಗಳಲ್ಲಿ ದಂಪತಿಗೆ ಆಪತ್ತು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 19 =
Remember me
