ನವದೆಹಲಿ:ಪೂರ್ವ ಲಡಾಖ್​ನ ಗಾಲ್ವಾನ್ ಕಣಿವೆಯಲ್ಲಿ ದುರುಳತನ ಮೆರೆದ ಚೀನಾಕ್ಕೆ ಸೇನಾಶಕ್ತಿಯಿಂದ ಹಾಗೂ ರಾಜತಾಂತ್ರಿಕ ನಡೆಗಳ ಮೂಲಕ ಪೆಟ್ಟು ನೀಡುತ್ತಿರುವ ಭಾರತ, ಇದೀಗ ಚೀನಾ ಗಡಿಪ್ರದೇಶದಲ್ಲಿ ಈಗಾಗಲೇ ಜಾರಿಯಲ್ಲಿರುವ ರಸ್ತೆ ಕಾಮಗಾರಿಗಳಿಗೆ ಆದ್ಯತೆ ನೀಡಿ ಶರವೇಗದಲ್ಲಿ ಮುಗಿಸಲು ಮುಂದಾಗಿದೆ. ಗಡಿಭಾಗದಲ್ಲಿ ಸೇನೆ ಹಾಗೂ ಶಸ್ತ್ರಾಸ್ತ್ರಗಳ ಜಮಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ 32 ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸುವ ನಿರ್ಣಯವನ್ನು ಸೋಮವಾರ ನಡೆದ ಗೃಹ ಸಚಿವಾಲಯದ ಉನ್ನತ ಮಟ್ಟದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ), ಗಡಿ ರಸ್ತೆ ನಿರ್ಮಾಣ ಸಂಸ್ಥೆ (ಬಿಆರ್​ಒ) ಹಾಗೂ ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್​ನ (ಐಟಿಬಿಪಿ) ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಚೀನಾ ಗಡಿ ಭಾಗದಲ್ಲಿ ಭಾರತ ಒಟ್ಟು 73 ರಸ್ತೆಗಳ ಕಾಮಗಾರಿ ಕೈಗೆತ್ತಿಕೊಂಡಿದ್ದು, ಆ ಪೈಕಿ 32 ರಸ್ತೆಗಳನ್ನು ತ್ವರಿತಗತಿಯಲ್ಲಿ ಮುಗಿಸಲಿದೆ. ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ ರಸ್ತೆ, ಸೇತುವೆ ಮೊದಲಾದ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇ ಚೀನಾ ಅಪ್ರಚೋದಿತ ದಾಳಿ ನಡೆಸುವುದಕ್ಕೆ ಕುಂಟುನೆಪವೆಂದು ಹೇಳಲಾಗಿತ್ತು. ಈ ವಿಚಾರ ಗಂಭೀರವಾಗಿ ಪರಿಗಣಿಸಿರುವ ಭಾರತ ಅಭಿವೃದ್ಧಿ ಕಾಮಗಾರಿಗಳಿಗೆ ಇನ್ನಷ್ಟು ಚುರುಕು ನೀಡಲು ನಿರ್ಧರಿಸಿದೆ.
ಗಾಲ್ವಾನ್ ಕಣಿವೆಯ ಮಹತ್ವದ ಸೇತುವೆ ಕಾಮಗಾರಿಯನ್ನೂ ಚೀನಾದ ಅಪ್ರಚೋದಿತ ದಾಳಿಯ ಬಳಿಕವೇ ಭಾರತ ಪೂರ್ಣಗೊಳಿಸಿತ್ತು. 2020-21ರ ಬಜೆಟ್​ನಲ್ಲಿ ಭಾರತ ಗಡಿಪ್ರದೇಶಗಳ ರಸ್ತೆ ಅಭಿವೃದ್ಧಿಗೆಂದೇ 11,800 ಕೋಟಿ ರೂ. ಮೀಸಲಿಟ್ಟಿರುವುದು ಉಲ್ಲೇಖಾರ್ಹ.
ಸೇನಾ ಮುಖ್ಯಸ್ಥ ಭೇಟಿ:ಉದ್ವಿಗ್ನಗೊಂಡಿರುವ ವಾಸ್ತವ ನಿಯಂತ್ರಣ ರೇಖೆಯಲ್ಲಿನ (ಎಲ್​ಎಸಿ) ಪರಿಸ್ಥಿತಿಯ ಖುದ್ದು ಪರಿಶೀಲನೆಗಾಗಿ ಭಾರತದ ಸೇನಾ ಮುಖ್ಯಸ್ಥ ಜ.ಮನೋಜ್ ಮುಕುಂದ ನರವಾಣೆ ಕಾಶ್ಮೀರಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ಚೀನಾ ಜತೆಗಿನ ಭಾರತದ ಸಂಘರ್ಷವನ್ನೇ ಲಾಭ ಮಾಡಿಕೊಂಡು ಪಾಕಿಸ್ತಾನಿ ಯೋಧರು ಗಡಿಯಲ್ಲಿ ಕಳ್ಳ ಹೆಜ್ಜೆ ಇಡಬಹುದಾದ ಸಾಧ್ಯತೆ ಹೆಚ್ಚಿರುವ ಬೆನ್ನಲ್ಲೇ ಸೇನಾ ಮುಖ್ಯಸ್ಥರ ಗಡಿ ಭೇಟಿ ಕುತೂಹಲದ ಜತೆಗೆ ಭಾರಿ ನಿರೀಕ್ಷೆ ಮೂಡಿಸಿದೆ. ಚೀನಾ ಯೋಧರು ಭಾರತದ 20 ಸೈನಿಕರ ಹತ್ಯೆ ನಡೆಸಿದ ಬಳಿಕ 3488 ಕಿ.ಮೀ ಉದ್ದದ ಎಲ್​ಎಸಿಯಲ್ಲಿ ಉಭಯ ರಾಷ್ಟ್ರಗಳ ಸೇನಾಪಡೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆಗೊಂಡಿವೆ. ಭಾರತೀಯ ಸೇನೆಯ ಪರಿಣತ ಪರ್ವತ ಪಡೆಗೆ ಸೇನಾಧಿಕಾರಿಗಳು ಆದ್ಯತೆ ನೀಡಿದ್ದಾರೆ.
ಗಾಲ್ವಾನ್ ಪ್ರಕರಣದ ಬಳಿಕ ಸಂಘರ್ಷ ನಡೆದಿಲ್ಲವಾದರೂ ಚೀನಾ ಪೀಪಲ್ಸ್ ಲಿಬರೇಷನ್ ಆರ್ವಿುಯ ಆಕ್ರಮಣಕಾರಿ ನಡೆ ಮುಂದುವರಿದಿದೆ. ಈ ಬೆಳವಣಿಗೆ ಬೆನ್ನಲ್ಲೇ ಚೀನಾ ವಿರುದ್ಧ ಪ್ರತೀಕಾರಕ್ಕೆ ಭಾರತೀಯ ಸೇನೆಗೆ ಕೇಂದ್ರ ಸರ್ಕಾರ ಮುಕ್ತ ಅವಕಾಶ ನೀಡಿದೆ. ಈ ಎಲ್ಲ ಬೆಳವಣಿಗೆಗಳ ಮೂಲಕ ಸೇನಾ ಮುಖ್ಯಸ್ಥ ನರವಾಣೆ ಪರಿಸ್ಥಿತಿ ಅವಲೋಕನಕ್ಕಾಗಿ ಲೇಹ್ ಹಾಗೂ ಕಾಶ್ಮೀರ ಭೇಟಿಗೆ ಸಜ್ಜಾಗುತ್ತಿದ್ದಾರೆ. ಮೂಲಗಳ ಪ್ರಕಾರ ಮಂಗಳವಾರವೇ ಅವರು ಭೇಟಿ ನೀಡಬಹುದೆಂದು ಹೇಳಲಾಗುತ್ತಿದೆ.
ಪಾಕ್ ಮೇಲೆ ಕಣ್ಣು:ಭಾರತೀಯ ಸೇನೆ ಗಡಿಯ ಒಂದು ಭಾಗದಲ್ಲಿ ಚೀನಾದತ್ತ ಮುಖಮಾಡಿರುವ ಸಂದರ್ಭದಲ್ಲೇ ಸೋಮವಾರ ಪಾಕ್ ಸೈನಿಕರು ಕದನ ವಿರಾಮ ಉಲ್ಲಂಘಿಸಿ ನಡೆಸಿದ ಗುಂಡಿನ ದಾಳಿಗೆ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಹೀಗಾಗಿ ಪಾಕಿಸ್ತಾನದ ಸಂಭಾವ್ಯ ಕುತಂತ್ರವನ್ನು ಮನಗಂಡು ಪಾಕ್ ಗಡಿ ಭಾಗದಲ್ಲೂ ಸೇನಾ ನಿಯೋಜನೆ ಹೆಚ್ಚಿಸಬೇಕೆಂಬ ಅಭಿಪ್ರಾಯ ಸೇನಾ ಅಧಿಕಾರಿಗಳಲ್ಲಿದೆ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ನರವಾಣೆ ಭೇಟಿ ಕುತೂಹಲ ಪಡೆದುಕೊಂಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 8 =
Remember me
