ನವದೆಹಲಿ:ರಾಮಮಂದಿರ ನಿರ್ವಣಕ್ಕೆ ಯಾವುದೇ ಸರ್ಕಾರದಿಂದಲೂ ದೇಣಿಗೆ ಅಥವಾ ಚಂದಾ ಸ್ವೀಕರಿಸುವುದಿಲ್ಲ. ಸಂಪೂರ್ಣವಾಗಿ ಭಕ್ತರು ನೀಡಿದ ದೇಣಿಗೆಯಿಂದಲೇ ಮಂದಿರ ನಿರ್ವಿುಸುತ್ತೇವೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ನ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲದಾಸ್ ಸ್ಪಷ್ಟಪಡಿಸಿದ್ದಾರೆ. ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಳ್ಳಲು ಎಲ್ಲ ರಾಜ್ಯಗಳ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳನ್ನು ಆಮಂತ್ರಿಸಲಾಗುತ್ತದೆ. ಯಾರಿಗೆ ಧರ್ಮದಲ್ಲಿ ಆಸಕ್ತಿ ಇದೆಯೊ ಅವರೆಲ್ಲರಿಗೂ ಆಹ್ವಾನ ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಮಂದಿರಕ್ಕೆ ಅನುದಾನ, ದೇಣಿಗೆ ತೆಗೆದುಕೊಳ್ಳಲು ಬೇಕಾದ ಸ್ವರೂಪ ಮತ್ತು ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಅಯೋಧ್ಯೆ ಜಿಲ್ಲಾಧಿಕಾರಿ ಅನುಜ್ ಕುಮಾರ್ ಮಾಹಿತಿ ನೀಡಿದ್ದಾರೆ. ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಲು ಈಗಾಗಲೇ ಕೆಲ ದಾನಿಗಳು 12-ಎ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಟ್ರಸ್ಟ್ ವತಿಯಿಂದ ತೆರೆಯುತ್ತಿರುವ ಬ್ಯಾಂಕ್ ಖಾತೆಯ ರೂಪರೇಷೆಗಳು ಅಂತಿಮವಾದ ತಕ್ಷಣ ಅದನ್ನು ದಾನಿಗಳಿಗೆ ಮುಕ್ತಗೊಳಿಸಲಾಗುತ್ತದೆ. ದೇಣಿಗೆ ಪಡೆಯುವ ಸಂಪೂರ್ಣ ಪ್ರಕ್ರಿಯೆಯನ್ನು ಪಾರದರ್ಶಕ ಮತ್ತು ಹೈಟೆಕ್ ಮಾಡಲಾಗುತ್ತಿದೆ. ಇದಕ್ಕಾಗಿ ವೆಬ್​ಸೈಟ್ ರಚಿಸಲಾಗುತ್ತಿದ್ದು, ದೇಣಿಗೆ ಪ್ರಕ್ರಿಯೆ, ಪೂಜೆ, ದೇವಸ್ಥಾನದ ಕಾರ್ಯ ಕುರಿತಂತೆ ಎಲ್ಲ ಮಾಹಿತಿಗಳನ್ನು ಅದರಲ್ಲಿ ನೀಡಲಾಗುತ್ತದೆ. ಕೋಟ್ಯಂತರ ಜನರಿಂದ ಒಮ್ಮೆಲೆ ದಾನ, ದೇಣಿಗೆ ಹರಿದು ಬಂದರೆ ಏನೆಲ್ಲ ಸಮಸ್ಯೆಗಳು ಉಂಟಾಗಬಹುದು? ಈ ನಿಟ್ಟಿನಲ್ಲಿ ಬ್ಯಾಂಕ್ ಖಾತೆಯನ್ನು ಹೇಗೆ ರಚಿಸಬೇಕು ಎಂಬ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುತ್ತಿದೆ. ಮಂದಿರ ನಿರ್ವಣಕ್ಕಾಗಿ ದೇಶದ 7 ಸಾವಿರ ಹಳ್ಳಿಗಳಿಂದ ಚಿನ್ನ ಸಂಗ್ರಹಿಸುವ ಗುರಿಯನ್ನೂ ಹಾಕಿಕೊಳ್ಳಲಾಗಿದೆ. ವಾರಾಣಸಿಯಿಂದ ಈ ಕಾರ್ಯ ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಏಪ್ರಿಲ್ 3 ಮತ್ತು 4ರಂದು ನಡೆಯುವ ಟ್ರಸ್ಟ್​ನ ಸಭೆಯಲ್ಲಿ ಮಂದಿರ ನಿರ್ಮಾಣ ಪ್ರಾರಂಭಕ್ಕೆ ದಿನಾಂಕ ಬಹುತೇಕ ಅಂತಿಮಗೊಳಿಸಲಾಗುತ್ತದೆ. ಏಪ್ರಿಲ್ 25ರ ಅಕ್ಷಯ ತೃತೀಯ ದಿನ ಅಥವಾ ಅದರ ಸಮೀಪದ ಬೇರೆ ಯಾವುದೇ ಶುಭದಿನಗಳಲ್ಲಿ ಮಂದಿರ ನಿರ್ವಣಕ್ಕೆ ಭೂಮಿ ಪೂಜೆ ನೆರವೇರಿಸುವ ಸಾಧ್ಯತೆ ಇದೆ.
ಅನ್ಯರು ದೇಣಿಗೆ ಸಂಗ್ರಹಿಸುವಂತಿಲ್ಲ
ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರ್ಕಾರವೇ ಟ್ರಸ್ಟ್ ರಚನೆ ಮಾಡಿರುವುದರಿಂದ ರಾಮಮಂದಿರ ನಿರ್ವಣಕ್ಕೆ ಯಾವುದೇ ದಾನ, ದೇಣಿಗೆಯನ್ನು ಅನ್ಯರು ಸಂಗ್ರಹಿಸಲು ಬರುವುದಿಲ್ಲ. ಹೀಗಾಗಿ ರಾಮಮಂದಿರದ ಹೆಸರಿನಲ್ಲಿ ಯಾವುದೇ ಬೇರೆ ಸಂಘಟನೆ, ಟ್ರಸ್ಟ್ ಅಥವಾ ವ್ಯಕ್ತಿಗಳು ದೇಣಿಗೆ ಸಂಗ್ರಹಿಸುವುದಕ್ಕೆ ನಿರ್ಬಂಧ ವಿಧಿಸಬೇಕು ಎಂದು ಈ ಹಿಂದೆಯೇ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ.
ರಾಮಲಲ್ಲಾ ಟೆಂಟ್ ಸ್ಥಳಾಂತರಕ್ಕೆ ಚಿಂತನೆ
1992 ಡಿ.6ರ ಘಟನೆ ಬಳಿಕ ತಾತ್ಕಾಲಿಕ ಟೆಂಟ್​ನಲ್ಲಿರುವ ಭಗವಾನ್ ರಾಮಲಲ್ಲಾನನ್ನು ಮಂದಿರ ನಿರ್ಮಾಣ ಕಾರ್ಯ ಮುಕ್ತಾಯಗೊಳ್ಳುವವರೆಗೆ ಮತ್ತೊಂದು ಸ್ಥಳಕ್ಕೆ ರವಾನಿಸಲು ಚಿಂತನೆ ನಡೆಸಲಾಗುತ್ತಿದೆ. ಅಯೋಧ್ಯೆಗೆ ಶನಿವಾರ ಭೇಟಿ ನೀಡಿದ್ದ ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸೂಕ್ತ ಸ್ಥಳದಲ್ಲಿ ತಾತ್ಕಾಲಿಕ ದೇವಸ್ಥಾನವೊಂದನ್ನು ನಿರ್ವಿುಸಿ ಮಂದಿರ ಪೂರ್ಣಗೊಳ್ಳುವವರೆಗೂ ಅಲ್ಲೇ ಪೂಜೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
ರಾಮಲಲ್ಲಾ ವಿರಾಜಮಾನ್ ಗ್ರಾಮ!
ಮಂದಿರ ನಿರ್ವಣಕ್ಕೆ ಲಭಿಸಿರುವ 67 ಎಕರೆ ಭೂಮಿ ಸೇರಿ ಅದರ ಸುತ್ತಲಿರುವ ಇತರ ಭೂಮಿಯನ್ನು ಒಟ್ಟುಗೂಡಿಸಿ ಶ್ರೀರಾಮಲಲ್ಲಾ ವಿರಾಜಮಾನ್ ಎಂಬ ಹೊಸ ಕಂದಾಯ ಗ್ರಾಮ ರಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಸುಮಾರು 100 ಎಕರೆಗಳಷ್ಟು ವ್ಯಾಪ್ತಿ ಹೊಂದಬಹುದಾದ ಈ ಗ್ರಾಮವನ್ನು ಅಯೋಧ್ಯೆ ಮಹಾನಗರ ಪಾಲಿಕೆಯಲ್ಲಿ ನೋಂದಾಯಿಸಲಾಗುತ್ತದೆ ಎಂದು ವಿಶ್ವ ಹಿಂದು ಪರಿಷತ್ ಮೂಲಗಳು ತಿಳಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + eight =
Remember me
