ಜಾಗತಿಕ ಕರೆನ್ಸಿ ಮಾರುಕಟ್ಟೆಯಲ್ಲಿ ಭಾರತದ ರೂಪಾಯಿಯ ಮೌಲ್ಯ ಕುಸಿದಿದ್ದು, ಅಮೆರಿಕನ್ ಡಾಲರ್ ಎದುರು 77 ರೂಪಾಯಿ ಸನಿಹದಲ್ಲಿದೆ. 2022ರಲ್ಲಿ ಇದುವರೆಗೆ ಶೇಕಡ 3.5 ಕುಸಿದಿರುವ ರೂಪಾಯಿ ಬಹಳ ಒತ್ತಡದಲ್ಲಿದೆ. ಇದು ಸಾರ್ವಕಾಲಿಕ ಕನಿಷ್ಠ ಮಟ್ಟವಾಗಿರುವ ಕಾರಣ ಆರ್ಥಿಕತೆಯ ಮೇಲೆ ಇದರ ಪರಿಣಾಮ, ಸಾಧಕ-ಬಾಧಕಗಳ ಅವಲೋಕನ ಇಲ್ಲಿದೆ.
ಇಂಟರ್ ಬ್ಯಾಂಕ್ ಫಾರಿನ್ ಎಕ್ಸ್​ಚೇಂಜ್​ನಲ್ಲಿ ಸೋಮವಾರದ ಆರಂಭಿಕ ವಹಿವಾಟಿನ ವೇಳೆ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 18 ಪೈಸೆ ಕುಸಿದು 76.62 ರೂಪಾಯಿಯಲ್ಲಿ ವಹಿವಾಟು ನಡೆಸಿತು. ರಷ್ಯಾ-ಯೂಕ್ರೇನ್ ಸಂಘರ್ಷದ ಕಾರಣ ಹೂಡಿಕೆದಾರರು ಸುರಕ್ಷಿತ ದೇಶಗಳಲ್ಲಿ ಹೂಡಿಕೆ ಮಾಡುವುದಕ್ಕೆ ಮುಂದಾಗಿರುವುದು ಈ ವಿದ್ಯಮಾನಕ್ಕೆ ಕಾರಣ. ಶುಕ್ರವಾರದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 76.44 ರೂಪಾಯಿ ಆಗಿತ್ತು. ಈ ನಡುವೆ, ಭಾರತದ ಚಿಲ್ಲರೆ ಹಣದುಬ್ಬರ ಪ್ರಮಾಣ ಆರ್​ಬಿಐ ನಿಗದಿಪಡಿಸಿದ ಮಿತಿ ಶೇಕಡ 6ನ್ನು ಮೀರಿ ಫೆಬ್ರವರಿ ತಿಂಗಳ ಡೇಟಾ ಪ್ರಕಾರ ಶೇಕಡ 6.07 ಆಗಿದೆ. ಜನವರಿ ತಿಂಗಳಲ್ಲಿ ಇದು ಶೇಕಡ 6.01 ಆಗಿತ್ತು.
ಮೌಲ್ಯ ಕುಸಿತ ಎಂದರೆ… ಮಾರುಕಟ್ಟೆ ಶಕ್ತಿಗಳ ಮೂಲಕ ಯಾವುದೇ ಕರೆನ್ಸಿ ಮೌಲ್ಯ ಇತರೆ ಕರೆನ್ಸಿಗಳ ಎದುರು ದುರ್ಬಲವಾದಾಗ ಅಂದರೆ ವಿದೇಶಿ ಕರೆನ್ಸಿಯ ಬೇಡಿಕೆ ಮತ್ತು ಪೂರೈಕೆಯಲ್ಲಿ ಕರೆನ್ಸಿ ಮೌಲ್ಯ ಕುಸಿದರೆ ಅದನ್ನು ಮೌಲ್ಯ ಕುಸಿತ ಎನ್ನುತ್ತಾರೆ. ಇದುವೇ ಆಡಳಿತ ಕ್ರಿಯೆಯ ಕಾರಣದಿಂದ ರೂಪಾಯಿ ಮೌಲ್ಯ ಕುಸಿದರೆ ಆಗ ಅದನ್ನು ಅಪಮೌಲ್ಯ ಎನ್ನುತ್ತಾರೆ. ಅಪಮೌಲ್ಯ ಮತ್ತು ಮೌಲ್ಯ ಕುಸಿತಗಳ ಪ್ರಕ್ರಿಯೆ ವಿಭಿನ್ನವಾಗಿದ್ದರೂ ಅದರ ಪರಿಣಾಮ ಬೇರೆಯಲ್ಲ. ಭಾರತ 1993ರ ತನಕ ನಿರ್ದೇಶಿತ ಅಥವಾ ನಿಶ್ಚಿತ ದರದ ವಿನಿಮಯವನ್ನು ಅನುಸರಿಸುತ್ತಿತ್ತು. ಬಳಿಕ ಮಾರುಕಟ್ಟೆ ಆಧಾರಿತ ಪ್ರಕ್ರಿಯೆ ಅಥವಾ ಫ್ಲೋಟಿಂಗ್ ಎಕ್ಸ್​ಚೇಂಜ್ ರೇಟ್ ವ್ಯವಸ್ಥೆಗೆ ಭಾರತದ ವಹಿವಾಟು ಬದಲಾಯಿತು. ಆದರೆ ಚೀನಾ ಇಂದಿಗೂ ಹಳೆಯ ವ್ಯವಸ್ಥೆಯನ್ನೇ ಅನುಸರಿಸುತ್ತಿದೆ.
ದುರ್ಬಲ ರೂಪಾಯಿ ಮತ್ತು ಟ್ರೇಡ್:ಸಾಮಾನ್ಯ ಸಂದರ್ಭದಲ್ಲಿ ರೂಪಾಯಿ ಮೌಲ್ಯ ಕುಸಿದರೆ ರಫ್ತು ಪ್ರಮಾಣ ಹೆಚ್ಚಿಸಲು ಉತ್ತೇಜನ ಸಿಕ್ಕಂತಾಗುತ್ತದೆ. ರಫ್ತು ಉತ್ತೇಜನಕ್ಕಾಗಿಯೇ ಆರ್​ಬಿಐ ಕೂಡ ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ಮಾಡಲು ಹೋಗಿಲ್ಲ. ಕಚ್ಚಾ ತೈಲ ಅಥವಾ ಇನ್ಯಾವುದೇ ವಸ್ತುಗಳ ಆಮದು ಪ್ರಮಾಣದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಕರೆನ್ಸಿ ಮೌಲ್ಯ ಏರಿಳಿತಕ್ಕೆ ಕಾರಣ:ಕರೆನ್ಸಿಯ ಮೌಲ್ಯದ ಏರಿಳಿತಗಳ ಮೇಲೆ ಅನೇಕ ಅಂಶಗಳು ಪ್ರಭಾವ ಬೀರುತ್ತವೆ. ವಿದೇಶಿ ಕರೆನ್ಸಿಗಳ ನಿವ್ವಳ ಒಳಹರಿವು ಮತ್ತು ಹೊರಹರಿವುಗಳ ಮೇಲೆ ಇದು ಅವಲಂಬಿತವಾಗಿದೆ. ಯಾಕೆಂದರೆ ವಿದೇಶಿ ವ್ಯಾಪಾರ, ವಿದೇಶಿ ಹೂಡಿಕೆ, ದ್ವಿಮುಖ ಸಂಚಾರ, ವಿದೇಶಿ ಸಾಲ ಮತ್ತು ಅನುದಾನ ಸೇರಿದಂತೆ ದ್ವಿಮುಖ ಪಾವತಿ ವ್ಯವಸ್ಥೆ ಇದರಲ್ಲಿ ಒಳಗೊಂಡಿವೆ. 1996ರ ಮಧ್ಯಭಾಗದಿಂದೀಚೆಗೆ ಗಮನಿಸಿದರೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್​ಐಐ) ಹೂಡಿಕೆ ಮತ್ತು ಹೂಡಿಕೆ ಹಿಂತೆಗೆತಕ್ಕೆ ಅನುಗುಣವಾಗಿ ಕರೆನ್ಸಿ ಮೌಲ್ಯ ಏರಿಳಿತ ದಾಖಲಾಗತೊಡಗಿತು. ಅಮೆರಿಕದ ಫೆಡರಲ್ ರೇಟ್ಸ್ ಶೀಘ್ರದಲ್ಲೇ ಏರಿಕೆಯಾಗುವ ನಿರೀಕ್ಷೆ ಮತ್ತು ರಷ್ಯಾ-ಯೂಕ್ರೇನ್ ಸಮರದ ಕಾರಣ ಭಾರತದ ಮಾರುಕಟ್ಟೆಯಿಂದ ಎಫ್​ಐಐ ಹೂಡಿಕೆ ಹಿಂಪಡೆತ ಶುರುವಾಗಿದೆ. ತೈಲ ಮತ್ತು ಇತರೆ ಸರಕುಗಳ ಬೆಲೆ ಏರಿಕೆಯೂ ಕರೆನ್ಸಿ ಮೌಲ್ಯದ ಮೇಲೆ ಪರಿಣಾಮ ಬೀರುತ್ತದೆ.
ರೂಪಾಯಿ ಬಾಹ್ಯ ಮೌಲ್ಯದ ಟ್ರೆಂಡ್:ಕರೆನ್ಸಿ ಮಾರುಕಟ್ಟೆಯಲ್ಲಿ ಮಾರ್ಚ್ 8ರಂದು ರೂಪಾಯಿ ಮೌಲ್ಯ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 76.984 ರೂಪಾಯಿ ಆಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ತತ್ಷಣವೇ 500 ಕೋಟಿ ಡಾಲರ್ ಸ್ವಾ್ಯಪ್ ಆಕ್ಷನ್ ಮಾಡಿದ ಕಾರಣ ರೂಪಾಯಿ ಮೌಲ್ಯ ಸ್ಥಿರವಾಗಿ ಇರಿಸುವುದು ಸಾಧ್ಯವಾಗಿತ್ತು. 2022ರಲ್ಲಿ ಇದುವರೆಗೆ ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು 3.5 % ಕುಸಿತ ಕಂಡಿದೆ. 2008ರ ಬಿಕ್ಕಟ್ಟಿನ ವೇಳೆ, 2011-12ರಲ್ಲಿ ಯೂರೋ ವಲಯದ ಸಾಲ ಸಂಕಷ್ಟ, 2013ರಲ್ಲಿ ರೂಪಾಯಿ ಒತ್ತಡಕ್ಕೆ ಒಳಗಾಗಿ ಮೌಲ್ಯ ಕಳೆದುಕೊಂಡಿರುವ ಕೆಲವು ಸನ್ನಿವೇಶಗಳು.
ಅರ್ಥ ವ್ಯವಸ್ಥೆ ಮೇಲೆ ಒಟ್ಟು ಪರಿಣಾಮ:ದುರ್ಬಲ ರೂಪಾಯಿ ಕಾರಣ ಚಾಲ್ತಿ ಖಾತೆ ಕೊರತೆ ಹೆಚ್ಚಾಗುತ್ತದೆ. ವಿದೇಶಿ ವಿನಿಮಯ ಮೀಸಲು ನಿಧಿ ಕೂಡ ಖಾಲಿಯಾಗುತ್ತದೆ. ಕಚ್ಚಾ ತೈಲ ಮತ್ತು ಇತರೆ ಪ್ರಮುಖ ನಿರ್ಣಾಯಕ ಉತ್ಪನ್ನಗಳ ಬೆಲೆ ಏರಿಕೆಯ ಕಾರಣ ಆಮದು ವೆಚ್ಚ ಹೆಚ್ಚಾಗುತ್ತದೆ. ಇದರಿಂದಾಗಿ ವೆಚ್ಚ ಆಧಾರಿತ ಹಣದುಬ್ಬರ ಪ್ರಮಾಣ ಕೂಡ ಗಗನಮುಖಿಯಾಗಿ ಅರ್ಥವ್ಯವಸ್ಥೆ ಮೇಲೆ ನೇರ ಪರಿಣಾಮ ಬೀರುತ್ತದೆ. ತೈಲ ಮಾರಾಟ ಕಂಪನಿಗಳು ವೆಚ್ಚದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸದೇ ಹೋದರೆ, ಅದರ ಹೊರೆ ಸರ್ಕಾರದ ಮೇಲೆ ಬೀಳುತ್ತದೆ. ಅಂದರೆ ಸರ್ಕಾರದ ಡಿವಿಡೆಂಡ್, ಆದಾಯ ಕಡಿಮೆ ಆಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + sixteen =
Remember me
