ಮಾಸ್ಕೊ/ಕಿಯೆವ್:ಯೂಕ್ರೇನ್ ಮೇಲೆ ದಾಳಿಯನ್ನು ತೀವ್ರಗೊಳಿಸಿರುವ ರಷ್ಯಾ, ಶುಕ್ರವಾರ ಹೈಪರ್​ಸಾನಿಕ್ ‘ಕಿಂಜಲ್’ ಕ್ಷಿಪಣಿಯನ್ನು ಇದೇ ಮೊದಲ ಬಾರಿಗೆ ಬಳಸಿದೆ. ಗಂಟೆಗೆ 9 ಸಾವಿರ ಮೈಲು ವೇಗದಲ್ಲಿ ಈ ಕ್ಷಿಪಣಿ ಬಂದು ಅಪ್ಪಳಿಸಿದ್ದರಿಂದ ಯೂಕ್ರೇನ್​ನ ದೇಶದ ಪಶ್ಚಿಮ ಭಾಗದಲ್ಲಿದ್ದ ಶಸ್ತ್ರಾಗಾರ ಧ್ವಂಸಗೊಂಡಿದೆ. ಅಪಾರ ಸಾವು- ನೋವಿನ ವರದಿ ಆಗಿದೆ ಎಂದು ರಷ್ಯಾದ ಆರ್​ಐಎ ನೋವೋಸ್ತಿ ಸುದ್ದಿಸಂಸ್ಥೆ ಹೇಳಿದೆ. ಯೂಕ್ರೇನ್​ನ ಇವಾನೊ ಫ್ರಾಂಕಿವ್​ಸ್ ಗುಡ್ಡಗಾಡು ಪ್ರದೇಶದ ಡೆಲಿಯಾಟಿನ್ ಗ್ರಾಮದಲ್ಲಿ ನೆಲಮಾಳಿಗೆಯಲ್ಲಿ ಸಂಗ್ರಹಿಸಲಾಗಿದ್ದ ಕ್ಷಿಪಣಿ ಮತ್ತು ವೈಮಾನಿಕ ಶಸ್ತ್ರಗಳನ್ನು ನಾಶಮಾಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಕೂಡ ತಿಳಿಸಿದೆ.
ಅಪಾಯಕಾರಿ ಕ್ಷಿಪಣಿ:ರಷ್ಯನ್ ಭಾಷೆಯಲ್ಲಿ ‘ಕಿಂಜಲ್’ ಎಂದರೆ ಅಪಾಯಕಾರಿ ಎಂದರ್ಥ. ಇದನ್ನು ಒಮ್ಮೆ ಪ್ರಯೋಗಿಸಿದರೆ ಅದನ್ನು ತಡೆಯಲಾಗದು. ಗುರಿ ಮುಟ್ಟಿಯೆ ಸಿದ್ಧ. 1,250 ಮೈಲು ದೂರದವರೆಗಿನ ಗುರಿಯನ್ನು ಭೇದಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಏರೋಬಾಲಿಸ್ಟಿಕ್ ಕ್ಷಿಪಣಿಯಾದ ಇದು, ಶಬ್ದದ ವೇಗಕ್ಕಿಂತ 10 ಪಟ್ಟು ವೇಗವಾಗಿ ಸಾಗುತ್ತದೆ. 2018ರಲ್ಲಿ ಇದನ್ನು ಸೇನೆಗೆ ಸೇರ್ಪಡೆ ಮಾಡಲಾಯಿತು.
ಮಿಲಿಟರಿ ಬ್ಯಾರಕ್ ಮೇಲೆ ದಾಳಿ, 50 ಸೈನಿಕರ ಸಾವು:ಯೂಕ್ರೇನ್ ದಕ್ಷಿಣ ಭಾಗದ ಪ್ರಮುಖ ನಗರ ಮೈಕೋಲೈವ್​ನ ಮಿಲಿಟರಿ ಬ್ಯಾರಕ್ ಮೇಲೆ ನಡೆದ ದಾಳಿಯಿಂದ ಕನಿಷ್ಠ 50 ಸೈನಿಕರು ಮೃತಪಟ್ಟಿದ್ದಾರೆ. ಅವಶೇಷದ ಅಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಸೋವಿನ ಸಂಖ್ಯೆ ಹೆಚ್ಚಳ ಆಗಬಹುದು ಎಂದು ಮೂಲಗಳು ಹೇಳಿವೆ. ಈ ಬ್ಯಾರಕ್​ನಲ್ಲಿ 200 ಸೈನಿಕರು ನಿದ್ರಿಸುತ್ತಿದ್ದಾಗ ವೇಳೆ ರಷ್ಯಾ ಪಡೆಗಳು ಮಾರಣಾಂತಿಕ ಬಾಂಬ್ ದಾಳಿ ನಡೆಸಿವೆ. ಇದರಿಂದ ಬ್ಯಾರಕ್​ಗಳು ಸಂಪೂರ್ಣ ನಿರ್ನಾಮವಾಗಿವೆ ಎಂದು ಪ್ರಾದೇಶಿಕ ಆಡಳಿತ ತಿಳಿಸಿದೆ. ಈ ಮಧ್ಯೆ, ಕಿಯೆವ್ ಪ್ರಾದೇಶಿಕದ ಮಕರಿವ್ ನಗರದ ಮೇಲೆ ಮಾರ್ಟರ್ ಶೆಲ್ ದಾಳಿಗೆ ಏಳು ಜನರು ಸಾವನ್ನಪ್ಪಿದ್ದು, ಐವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಏರ್ ಡಿಫೆನ್ಸ್ ಸಿಸ್ಟಂ ಪೂರೈಕೆಯ ಭರವಸೆ:ಬಹುದೂರದವರೆಗೆ ವಾಯು ಪ್ರದೇಶದ ರಕ್ಷಣೆ ನೀಡುವಂತಹ ಏರ್ ಡಿಫೆನ್ಸ್ ಸಿಸ್ಟಂ ಯೂಕ್ರೆನ್​ಗೆ ಪೂರೈಕೆ ಮಾಡುವುದಾಗಿ ಅಮೆರಿಕ ಭರವಸೆ ನೀಡಿದೆ. ಈಗಾಗಲೇ ಭುಜದ ಮೇಲೆ ಹೊತ್ತು ಹಾರಿಸುವ ಸ್ಟಿಂಗರ್ ಕ್ಷಿಪಣಿಗಳಿಗಿಂತ ಇದು ಹೆಚ್ಚು ದೂರದವರೆಗೂ ಚಿಮ್ಮುತ್ತವೆ. ಇದಕ್ಕೆ ಅಗತ್ಯವಾದ ಬ್ಯಾಟರಿಯನ್ನು ಯೂಕ್ರೇನ್ ಹೊಂದಿಸಿಕೊಳ್ಳಬೇಕಿದೆ. ಆಕ್ರಮಣಕಾರಿಯಾಗಿರುವ ರಷ್ಯಾ ಜತೆಗೆ ನೇರ ಯುದ್ಧ ಮಾಡಲು ಬಯಸದ ಅಮೆರಿಕ ಯೂಕ್ರೇನ್​ಗೆ ಶಸ್ತ್ರಾಸ್ತ್ರ, ಆರ್ಥಿಕ ನೆರವನ್ನು ನೀಡುತ್ತಿದೆ.
ಉಸಿರುಗಟ್ಟುತ್ತಿರುವ ಕಿಯೆವ್ ನಗರ:ರಷ್ಯಾದ ಅವ್ಯಾಹತ ದಾಳಿಗೆ ತುತ್ತಾಗಿರುವ ಕಿಯೆವ್ ನಗರ ದೂಳಿನಿಂದ ಉಸಿರುಗಟ್ಟಿದಂತಾಗಿದೆ. ಇಲ್ಲಿನ ವಾಯು ಪ್ರದೂಷಣೆಯು ಮಿತಿಮೀರಿದ ಮಟ್ಟ ತಲುಪಿದೆ. ಮನೆಗಳ ಕಿಟಕಿಗಳನ್ನು ತೆರೆಯದಂತೆ ಅಥವಾ ಅನಗತ್ಯವಾಗಿ ಹೊರಬಾರದಂತೆ ಸ್ಥಳೀಯ ಆಡಳಿತ ಸೂಚಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ವಾಯು ಗುಣಮಟ್ಟ ಮಾನಕಕ್ಕಿಂತ ಕಿಯೆವ್​ನಲ್ಲಿ ವಾಯು ಮಾಲಿನ್ಯವು 27.8 ಪಟ್ಟು ಹೆಚ್ಚಳ ಆಗಿದೆ. ನಗರದ ತುಂಬ ಹೊಗೆ ಇದ್ದು, ಉಸಿರಾಟ ಕಷ್ಟವಾಗಿದೆ ಎಂದು ನೆಕ್ಸ್​ಟಾ ಮೀಡಿಯಾ ವರದಿ ಮಾಡಿದೆ. ಯುದ್ಧ ಆರಂಭವಾದ ನಂತರ ಕಿಯೆವ್​ನಲ್ಲಿ ಮಾತ್ರವಲ್ಲದೆ ದೇಶದ ಬಹುತೇಕ ಜಿಲ್ಲೆಗಳಲ್ಲೂ ವಾಯು ಮಾಲಿನ್ಯ ಏರುಗತಿಯಲ್ಲಿದೆ ಎಂದು ತಿಳಿಸಿದೆ.
ಮರಿಯುಪೋಲ್​ನಲ್ಲಿ 130 ಜನರ ರಕ್ಷಣೆ:ದಕ್ಷಿಣ ಭಾಗದ ರೇವು ಪಟ್ಟಣ ಮರಿಯುಪೋಲ್​ನಲ್ಲಿ ಬಾಂಬ್ ದಾಳಿಯಿಂದ ಧ್ವಂಸಗೊಂಡ ಥಿಯೆಟರ್​ನ ಅವಶೇಷದಡಿ ಸಿಲುಕ್ಕಿದ್ದವರ ಪೈಕಿ 130 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ ನೂರಾರು ಮಂದಿ ಸಂಕಷ್ಟದಲ್ಲಿದ್ದಾರೆ ಎಂದು ಯೂಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್​ಸ್ಕಿ ಫೇಸ್​ಬುಕ್​ನಲ್ಲಿ ಹೇಳಿದ್ದಾರೆ. ಸುಮಾರು ಒಂದು ಸಾವಿರ ಜನರು ಆಶ್ರಯ ಪಡೆದಿದ್ದ ರಂಗ ಮಂದಿರದ ಮೇಲೆ ಈ ಪೈಶಾಚಿಕ ದಾಳಿ ನಡೆದಿದೆ. ಮಕ್ಕಳು, ಮಹಿಳೆಯರ ಜೀವಕ್ಕೆ ಆಪತ್ತು ಒದಗಿದೆ ಎಂದು ಯೂಕ್ರೇನ್ ಆರೋಪಿಸಿದೆ. ಆದರೆ, ತಾನು ದಾಳಿ ನಡೆಸಿದಲ್ಲ ಎಂದು ರಷ್ಯಾ ಹೇಳಿದೆ.
65 ಲಕ್ಷ ಜನರ ವಲಸೆ:ರಷ್ಯಾ ಆಕ್ರಮಣ ಶುರುವಾಗಿ 24 ದಿನವಾಗಿದ್ದು, ಈ ಅವಧಿಯಲ್ಲಿ ಯೂಕ್ರೇನ್​ನಿಂದ ವಲಸೆ ಹೋದವರ ಸಂಖ್ಯೆ 65 ಲಕ್ಷ ದಾಟಿದೆ ಎಂದು ವಿಶ್ವಸಂಸ್ಥೆಯ ವಲಸೆ ಕುರಿತ ಅಂಗಸಂಸ್ಥೆ ಹೇಳಿದೆ. 32 ಲಕ್ಷ ಜನರು ದೇಶದಿಂದಲೇ ಹೊರಗೆ ಹೋಗಿದ್ದರೆ, ಉಳಿದವರು ದೇಶದಲ್ಲೇ ಸುರಕ್ಷಿತ ಸ್ಥಳಗಳನ್ನ ಅರಸಿ ಹೋಗಿದ್ದರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ ಹೇಳಿದೆ.
ಕ್ರಿಪ್ಟೊ ಕರೆನ್ಸಿ ದೇಣಿಗೆ:ಯೂಕ್ರೇನ್​ಗೆ ಕ್ರಿಪ್ಟೊ ಕರೆನ್ಸಿ ವರದಾನವಾಗಿದೆ. ಇದರ ಮೂಲಕ ಕೋಟ್ಯಂತರ ರೂ. ನೆರವು ಒದಗಿಬರುತ್ತಿದೆ. ವಿಶ್ವದ ವಿವಿಧೆಡೆಯಿಂದ ಹರಿದುಬರುತ್ತಿರುವ ನೆರವನ್ನು ನಿರ್ವಹಿಸಲೆಂದೆ ಪ್ರತ್ಯೇಕ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಇದುವರೆಗೂ ಸುಮಾರು 800 ಕೋಟಿ ರೂಪಾಯಿಗಳನ್ನು ಯೂಕ್ರೇನ್ ಸಂಗ್ರಹಿಸಿದ್ದು, ಇದನ್ನು ಗುಂಡು ನಿರೋಧಕ ಜಾಕೆಟ್, ಹೆಲ್ಮಟ್, ಸೈನಿಕರ ಪಡಿತರಕ್ಕೆ ವೆಚ್ಚ ಮಾಡುತ್ತಿದೆ.
ಸೇನೆ ಸೇರುವುದಾಗಿ ಹೇಳಿದ 98ರ ವೃದ್ಧೆ:ತಾಯ್ನಾಡು ರಕ್ಷಣೆಗೆ ಸೇನೆ ಸೇರುವು ದಾಗಿ ಯೂಕ್ರೇನ್​ನ 98 ವರ್ಷದ ವೃದ್ಧೆ ಓಲ್ಹಾ ಟ್ವೆಡೋಖ್ಲಿಬೋವಾ ಹೇಳಿದ್ದಾರೆ. ಆದರೆ, ಈ ಪ್ರಸ್ತಾವವನ್ನು ಸೇನೆ ತಿರಸ್ಕರಿಸಿರುವುದಕ್ಕೆ ಓಲ್ಹಾ ಬೇಸರಗೊಂಡಿದ್ದಾರೆ. ಓಲ್ಹಾ ಎರಡನೇ ವಿಶ್ವ ಯುದ್ಧದ ವೇಳೆ ಸೇನೆಯಲ್ಲಿ ಸೇವೆಸಲ್ಲಿಸಿದ್ದರು.
ಸ್ಯಾಟಲೈಟ್ ಚಿತ್ರಣ:ರಾಷ್ಯ ದಾಳಿ ಆರಂಭಿಸಿ ನಾಲ್ಕು ವಾರ ಆಗಿದ್ದು, ಇದರಿಂದ ನಲುಗಿರುವ ಯೂಕ್ರೇನ್​ನ ಸ್ಯಾಟ್​ಲೈಟ್ ಚಿತ್ರಣವನ್ನು ಅಮೆರಿಕದ ಮ್ಯಾಕ್ಸರ್ ಟೆಕ್ನಾಲಜಿ ಬಿಡುಗಡೆ ಮಾಡಿದೆ. ರಾಜಧಾನಿ ಕಿಯೆವ್​ನಲ್ಲಿ ವೈಮಾನಿಕ ದಾಳಿಯಿಂದ ಹಾನಿಗೊಂಡ ವಸತಿ ಕಟ್ಟಡಗಳು, ಅಪಾರ್ಟ್​ವೆುಂಟ್ ಬಿಲ್ಡಿಂಗ್, ದಿನಸಿ ಅಂಗಡಿಗಳು, ಮುರಿದು ಬಿದ್ದ ಇರ್ಪಿನ್ ನದಿಯ ಸೇತುವೆ, ಇನ್ನಿತರ ಮೂಲ ಸೌಕರ್ಯಗಳು, ಮರಿಯುಪೋಲ್​ನಲ್ಲಿ ವಾಣಿಜ್ಯ ಮಳಿಗೆಗಳು ಧ್ವಂಸಗೊಂಡಿರುವ ಚಿತ್ರಗಳು ಇದರಲ್ಲಿ ಇವೆ. ಹಾಸ್ಟೊಮೆಲ್, ಮೊಸ್ಚುನ್ ಪಟ್ಟಣಗಳಲ್ಲಿನ ಹಾನಿ ಛಾಯಾಚಿತ್ರಗಳನ್ನು ಮ್ಯಾಕ್ಸರ್ ಬಿಡುಗಡೆ ಮಾಡಿದೆ. ಈ ದಾಳಿಯಿಂದ 112 ಮಕ್ಕಳೂ ಸೇರಿ ಸುಮಾರು 15 ಸಾವಿರ ಸಾವು-ನೋವು ಸಂಭವಿಸಿದೆ ಎಂದು ಅಮೆರಿಕ ಹೇಳಿದೆ. ರಷ್ಯಾದ 13 ಸಾವಿರ ಸೈನಿಕರು ಹತರಾಗಿದ್ದಾರೆ ಎಂದು ಯೂಕ್ರೇನ್ ಹೇಳಿಕೊಂಡಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × three =
Remember me
