ಮಾಸ್ಕೋ:ಯೂಕ್ರೇನ್ ಮೇಲಿನ ರಷ್ಯಾ ದಾಳಿ ಎರಡನೆಯ ದಿನವಾದ ಶುಕ್ರವಾರವೂ ಮುಂದುವರಿದಿದೆ. ರಷ್ಯಾ ಸೇನೆ ಯೂಕ್ರೇನ್ ರಾಜಧಾನಿ ಕಿಯೆವ್ ಸಮೀಪ ತಲುಪಿದೆ. ಕಿಯೆವ್ ಹೊರವಲಯದಲ್ಲಿರುವ ಹೋಸ್ಟೊಮೆಲ್ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದೆ. ಈ ವಿಮಾನ ನಿಲ್ದಾಣ ಕಿಯೆವ್ ಕೇಂದ್ರಸ್ಥಾನದಿಂದ ಏಳು ಕಿ.ಮೀ. ಅಂತರದಲ್ಲಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಇಗೋರ್ ಕೊನಾಶೆನ್​ಕೋವ್ ಶುಕ್ರವಾರ ತಿಳಿಸಿದರು.
ರಷ್ಯಾ ಸೇನೆಯ ಯುದ್ಧಟ್ಯಾಂಕ್​ಗಳು ಯೂಕ್ರೇನ್ ರಾಜಧಾನಿ ಕಿಯೆವ್ ಕಡೆಗೆ ಚಲಿಸುತ್ತಿವೆ. ಈಗ ಅರ್ಧದಾರಿಯಲ್ಲಿದ್ದು, ಇವಾನ್​ಕೋವ್ ಸಮೀಪ ಇವೆ. ರಷ್ಯಾದ ದಾಳಿಗೆ ಇದುವರೆಗೆ 130ಕ್ಕೂ ಹೆಚ್ಚು ಸಾವು ಸಂಭವಿಸಿವೆ ಎಂದು ಯೂಕ್ರೇನಿಯನ್ ಸೇನೆ ಕೂಡ ಹೇಳಿದೆ. ಸದ್ಯ ವಿಮಾನ ನಿಲ್ದಾಣದಲ್ಲಿ ರಷ್ಯಾ ಸೇನೆಯ 200 ಕಾಪ್ಟರ್​ಗಳು ಇಳಿದಿವೆ. ಯೂಕ್ರೇನ್​ನ ವಿಶೇಷಪಡೆಯ 200 ಯೋಧರನ್ನು ಹತ್ಯೆ ಮಾಡಲಾಗಿದೆ. ರಷ್ಯಾ ಸೇನೆ ಈಗಾಗಲೇ 74 ಸೇನಾನೆಲೆಗಳನ್ನು ನಾಶಪಡಿಸಿದೆ. ಅಲ್ಲದೆ, ಪ್ರಮುಖ ಪ್ರದೇಶಗಳನ್ನು ವಶಕ್ಕೆ ಪಡೆದಿದ್ದು, ರಾಜಧಾನಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದುವರಿದಿದೆ.
ಚನೋಬಿಲ್ ಅಣುಸ್ಥಾವರ ವಶ:ಚನೋಬಿಲ್ ಅಣುಸ್ಥಾವರವನ್ನು ರಷ್ಯಾ ಸೇನೆ ವಶಪಡಿಸಿ ಕೊಂಡಿದೆ. ಬೆಲಾರಸ್​ನಿಂದ ಕಿಯೆವ್​ಗೆ ಹೋಗುವ ಹತ್ತಿರದ ದಾರಿಯಲ್ಲಿ ಚನೋಬಿಲ್ ಇದೆ. ಕಿಯೆವ್​ನಿಂದ ಇಲ್ಲಿಗೆ 108 ಕಿ.ಮೀ. ಅಂತರವಿದೆ. ರಷ್ಯಾ ಪಡೆ ವ್ಯೂಹಾತ್ಮಕವಾಗಿ ಮುಂದುವರಿಯುತ್ತಿದ್ದು, ಆಯಕಟ್ಟಿನ ಪ್ರದೇಶಗಳನ್ನು ತನ್ನ ವಶಕ್ಕೆ ತೆಗೆದುಕೊಂಡು ಸಾಗುತ್ತಿದೆ ಎಂದು ಯೂಕ್ರೇನ್ ಮೂಲಗಳು ತಿಳಿಸಿವೆ.
ಐಎಸ್​ಎಸ್ ಭಾರತದ ಮೇಲೆ ಬೀಳಲಿದೆ:ರಷ್ಯಾದ ಮೇಲೆ ನಿರ್ಬಂಧ ಹೇರಿದರೆ ಅದರ ನೇರ ಪರಿಣಾಮ ಅಮೆರಿಕ ಮತ್ತು ಭಾರತದ ಮೇಲೆ ಆಗಲಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್​ಎಸ್)ದಲ್ಲಿ ನಾಲ್ವರು ಅಮೆರಿಕನ್ನರು, ಇಬ್ಬರು ರಷ್ಯನ್ನರು ಮತ್ತು ಒಬ್ಬ ಜರ್ಮನ್ ಗಗನ ಯಾತ್ರಿಗಳಿದ್ದಾರೆ. ಈ ಯೋಜನೆಯಿಂದ ರಷ್ಯಾ ಹೊರಬರಲಿದೆ. ಐಎಸ್​ಎಸ್ ಭಾರತ ಮತ್ತು ಅಮೆರಿಕದ ಮೇಲೆ ಹಾದು ಹೋಗುತ್ತದೆಯೇ ಹೊರತು, ರಷ್ಯಾದ ಮೇಲಲ್ಲ. 500 ಟನ್ ತೂಕದ ಅದು ಬಿದ್ದರೆ ಭಾರತ ಅಥವಾ ಅಮೆರಿಕದ ಮೇಲೆಯೇ ಬೀಳಲಿದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಎಂದು ರಷ್ಯಾ ಬಾಹ್ಯಾಕಾಶ ಕೇಂದ್ರ ‘ರೋಸ್ಕೋಸ್​ವೋಸ್’ದ ಡೈರೆಕ್ಟರ್ ಜನರಲ್ ಡಿಮಿಟ್ರಿ ರೋಗೊಝಿನ್ ಟ್ವೀಟ್ ಮೂಲಕ ಎಚ್ಚರಿಸಿದ್ದಾರೆ.
ಭಾರತದ ಮೇಲೆ ನೇರ ಪರಿಣಾಮ ಇಲ್ಲ:ರಷ್ಯಾ-ಯೂಕ್ರೇನ್ ಬಿಕ್ಕಟ್ಟಿನ ನೇರ ಪರಿಣಾಮ ವಿಶೇಷವಾಗಿ ದ್ವಿಪಕ್ಷೀಯ ವ್ಯಾಪಾರದಲ್ಲಿ ಭಾರತದ ಮೇಲೆ ಆಗುವುದಿಲ್ಲ. ಆದರೆ, ತೈಲ ಬೆಲೆಯೇರಿಕೆ ಕಾರಣ ಅದರಿಂದಾಗುವ ವಿವಿಧ ಪರಿಣಾಮಗಳನ್ನು ಭಾರತ ಎದುರಿಸಬೇಕಾಗುತ್ತದೆ. ಯುರೋಪ್​ಗೆ ಶೇಕಡ 40 ಅನಿಲ, ಶೇಕಡ 50 ಕಲ್ಲಿದ್ದಲು ಮತ್ತು ಇತರೆ ಘನ ಇಂಧನವನ್ನು, ಶೇಕಡ 25 ಕಚ್ಚಾ ತೈಲವನ್ನು ರಷ್ಯಾ ಪೂರೈಸುತ್ತದೆ. ಭಾರತದ ಮಟ್ಟಿಗೆ ಒಟ್ಟಾರೆ ಆಮದು ಪ್ರಮಾಣದಲ್ಲಿ ಶೇಕಡ 1.4 (5.5 ಶತಕೋಟಿ ಡಾಲರ್) ಆಮದು ಮಾತ್ರ ರಷ್ಯಾ ಮೇಲೆ ಅವಲಂಬಿತವಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಆಮದನ್ನು ಭಾರತ ಸುಲಭವಾಗಿ ಇತರೆ ರಾಷ್ಟ್ರಗಳಿಗೆ ವರ್ಗಾಯಿಸುವುದು ಸಾಧ್ಯವಿದೆ ಎಂದು ಬ್ಯಾಂಕ್ ಆಫ್ ಬರೋಡಾದ ಎಕನಾಮಿಕ್ ರಿಸರ್ಚ್ ರಿಪೋರ್ಟ್ ಶುಕ್ರವಾರ ಹೇಳಿದೆ.
ಸ್ಪೆಟ್ಸ್​ನಾಝ್ ರಷ್ಯಾದ ವಿಶೇಷ ಪಡೆ:ಸಿರಿಯಾ ಬಿಕ್ಕಟ್ಟು, ಚೆಚೆನ್ ಬಂಡುಕೋರರ ವಿರುದ್ಧದ ಹೋರಾಟ ಮುಂತಾದ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳಲ್ಲಿ ರಷ್ಯಾದ ವಿಶೇಷ ಪಡೆಸ್ಪೆಟ್ಸ್​ನಾಝ್ಭಾಗಿಯಾಗಿತ್ತು. ಅದು ಈ ಕಾರ್ಯಾಚರಣೆಯಲ್ಲೂ ಬೆಲಾರಸ್​ನಿಂದ ಭಾಗವಹಿಸಿದೆ. ಈ ಪಡೆಯನ್ನು ಗ್ಲಾವ್​ನೋಯೆ ರಾಝå್ವೆಡಿವಟೆಲ್​ನೋಯೆ ಉಪ್ರವ್ಲೆನಿಯೆ (ಜಿಆರ್​ಯುು) ಎಂದೂ ಗುರುತಿಸುತ್ತಾರೆ. ಸೋವಿಯತ್ ಕಾಲದಿಂದಲೇ ಇದು ಸಕ್ರಿಯವಾಗಿದ್ದು, ಅಫ್ಘಾನಿಸ್ತಾನದ ಮೇಲೆ ಆಕ್ರಮಣ ಮಾಡಿದಾಗಲೂ ಮುಂಚೂಣಿಯಲ್ಲಿತ್ತು. ಇದರ ಕಮಾಂಡೋ ಘಟಕವನ್ನು 1949ರಲ್ಲಿ ರಚಿಸಲಾಗಿದೆ. 1,500 ರಿಂದ 2000 ಯೋಧರು ಈ ವಿಭಾಗದಲ್ಲಿದ್ದಾರೆ.
ಅಮೆರಿಕ-ಭಾರತ ಮಾತುಕತೆ:ರಷ್ಯಾ-ಯೂಕ್ರೇನ್ ಬಿಕ್ಕಟ್ಟಿಗೆ ಸಂಬಂಧಿಸಿ ಅಮೆರಿಕ ಮತ್ತು ಭಾರತ ನಡುವೆ ಸಮಾಲೋಚನೆಗಳು ನಡೆಯುತ್ತಿವೆ. ಭಿನ್ನಾಭಿಪ್ರಾಯಗಳು ಇನ್ನೂ ಪೂರ್ತಿಯಾಗಿ ಬಗೆಹರಿದಿಲ್ಲ. ಅಮೆರಿಕದ ಸೆಕ್ರಟರಿ ಆಫ್ ಸ್ಟೇಟ್ ಆಂಟನಿ ಜೆ ಬ್ಲಿನ್​ಕೆನ್ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರ ಜತೆಗೆ ಮಾತುಕತೆ ನಡೆಸಿದ್ದು, ‘ಸಾಮೂಹಿಕ ಪ್ರತಿಕ್ರಿಯೆ’ಯನ್ನು ನೀಡಬೇಕಾದ ಅವಶ್ಯಕತೆ ಇದೆ ಎಂಬುದನ್ನು ಪ್ರತಿಪಾದಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಇದನ್ನು ಖಚಿತಪಡಿಸಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿರ್ಣಾಯಕ ಸಭೆ:ನ್ಯೂಯಾರ್ಕ್​ನ ಸ್ಥಳೀಯ ಕಾಲಮಾನ ಅಪರಾಹ್ನ 3 ಗಂಟೆಗೆ (ಭಾರತೀಯ ಕಾಲಮಾನ ಶನಿವಾರ ನಸುಕಿನ 1.30) ನಡೆಯಲಿದೆ. ಈ ಸಭೆಯಲ್ಲಿ ವಿಶ್ವಸಂಸ್ಥೆಯಲ್ಲಿ ಕಾಯಂ ಸದಸ್ಯತ್ವ ಮತ್ತು ವಿಟೋ ಅಧಿಕಾರ ಹೊಂದಿರುವ ರಷ್ಯಾ ವಿರುದ್ಧ ಅಮೆರಿಕ ಮತ್ತು ಅಲ್ಬೇನಿಯ ಸಲ್ಲಿಸಿರುವ ಕರಡು ಖಂಡನಾ ನಿರ್ಣಯದ ಮತದಾನ ನಡೆಯಲಿದೆ.
ವಾಹನದ ಮೇಲೆ ತಿರಂಗಾ:ರಸ್ತೆ ಮೂಲಕ ಭಾರತೀಯರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಶುರುವಾಗಿದೆ. ಹಂಗರಿ, ರೊಮಾನಿಯಾ ಮೂಲಕ ಸಾಗುವ ಭಾರತೀಯರ ವಾಹನಗಳಲ್ಲಿ ತಿರಂಗಾವನ್ನು ಎಲ್ಲರಿಗೂ ಕಾಣುವಂತೆ ಹಾರಾಡಿಸಿ. ಹಂಗರಿಯ ಗಡಿಯಲ್ಲಿ ಚೋಪ್- ಝುಹೋನಿ ಎಂಬಲ್ಲಿ, ರೊಮಾನಿಯನ್ ಗಡಿಯ ಪೋರ್ಬನ್ ಸಿರೆಟ್​ನಲ್ಲಿ ಚೆಕ್​ಪಾಯಿಂಟ್​ಗಳಿವೆ. ಸಂಘಟಿತ ಸ್ಥಳಾಂತರ ಕಾರ್ಯಾಚರಣೆ ಆದ್ದರಿಂದ ಮಾರ್ಗಸೂಚಿ ಪಾಲಿಸುವುದು ಕಡ್ಡಾಯ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಬಂದೂಕು ಚಲಾಯಿಸಲು ಬರುತ್ತಾ?:‘ಬಂದೂಕು ಚಲಾಯಿಸಲು ಬರುತ್ತಾ’ ಎಂದು ರಾಜಧಾನಿ ಕಿಯೆವ್​ನಲ್ಲಿರುವ ಜನರನ್ನು ಸೇನೆ ವಿಚಾರಿಸುತ್ತಿದೆ. ಬಂದೂಕು ಚಲಾಯಿಸಲು ಸಾಧ್ಯ ಇರುವವರನ್ನೆಲ್ಲ ಸೇನೆಗೆ ಸೇರಿಸುವ ಕೆಲಸ ಮುಂದುವರಿದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಭಾರತದ ನಿಲುವಿನತ್ತ ಎಲ್ಲರ ಚಿತ್ತ:ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆಯಲ್ಲಿ ಮತದಾನದ ವೇಳೆ ಭಾರತ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬ ಕುತೂಹಲ ಎಲ್ಲ ದೇಶಗಳಲ್ಲೂ ಇದೆ. ಅಮೆರಿಕ, ರಷ್ಯಾ ಎರಡೂ ಭಾರತದ ಓಲೈಕೆಗೆ ತೊಡಗಿವೆ. ಈ ಹಿಂದಿನ ಸಭೆಯಲ್ಲಿ ಪ್ರಸಕ್ತ ಮತದಾನಕ್ಕೆ ಇರಿಸಿರುವ ಕರಡು ನಿರ್ಣಯದ ಸಭೆಯನ್ನು ರಷ್ಯಾ ಮತ್ತು ಚೀನಾ ವಿರೋಧಿಸಿದ್ದವು. ಭಾರತ, ಕಬೋನ್, ಕೀನ್ಯಾ ಗೈರಾಗಿದ್ದವು. ನಾರ್ವೆ, ಫ್ರಾನ್ಸ್, ಅಮೆರಿಕ, ಬ್ರಿಟನ್, ಫ್ರಾನ್ಸ್, ಐರ್ಲೆಂಡ್, ಬ್ರೆಜಿಲ್, ಮೆಕ್ಸಿಕೋ ಸೇರಿ 10 ಕೌನ್ಸಿಲ್ ಸದಸ್ಯ ರಾಷ್ಟ್ರಗಳು ನಿರ್ಣಯದ ಪರ ಮತಚಲಾಯಿಸಿದ್ದವು.
ಭಾರತದ ಬೆಂಬಲ ರಷ್ಯಾ ನಿರೀಕ್ಷೆ:ವಿಶ್ವಸಂಸ್ಥೆ ಭದ್ರತಾ ಸಮಿತಿ ಸಭೆಯಲ್ಲಿ ಯೂಕ್ರೇನ್ ಮೇಲಿನ ರಷ್ಯಾದ ಸೇನಾ ಕಾರ್ಯಾಚರಣೆ ವಿಚಾರವಾಗಿ ಮಹತ್ವದ ನಿರ್ಣಯ ತೆಗೆದುಕೊಳ್ಳುವಾಗ ಭಾರತದ ಬೆಂಬಲವನ್ನು ನಿರೀಕ್ಷಿಸುತ್ತಿರುವುದಾಗಿ ರಷ್ಯಾ ಶುಕ್ರವಾರ ಹೇಳಿದೆ.
ಯುದ್ಧ ಬೇಡವೆಂದ ತಾಲಿಬಾನ್!:ರಕ್ತಪಿಪಾಸು, ಯುದ್ಧೋನ್ಮಾದಿ ತಾಲಿಬಾನ್ ಕೂಡ ರಷ್ಯಾ ನಡೆಯನ್ನು ಖಂಡಿಸಿದ್ದು, ತಾಲಿಬಾನ್ ವಿದೇಶಾಂಗ ಇಲಾಖೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ‘ಎರಡೂ ದೇಶಗಳು ಶಾಂತಿ ಕಾಯ್ದುಕೊಳ್ಳಬೇಕು, ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಬೇಕು. ಹಿಂಸೆಯನ್ನು ಇನ್ನಷ್ಟು ಹೆಚ್ಚಿಸುವಂಥ ಯಾವುದೇ ಕ್ರಮವನ್ನು ಕೈಗೊಳ್ಳ ಬಾರದು. ಯುದ್ಧದಲ್ಲಿ ಸಿಲುಕಿಹಾಕಿಕೊಂಡಿರುವ ನಾಗರಿಕರ ಬಗ್ಗೆ ನಮಗೆ ಚಿಂತೆಯಾಗುತ್ತಿದೆ. ಅಲ್ಲಿನ ಬೆಳವಣಿಗೆಗಳ ಮೇಲೆ ತಾಲಿಬಾನ್ ಪೂರ್ತಿ ಗಮನ ಇರಿಸಿದೆ. ಯುದ್ಧದಲ್ಲಿ ತಾಲಿಬಾನ್ ರಷ್ಯಾವನ್ನಾಗಲೀ, ಯೂಕ್ರೇನನ್ನಾಗಲೀ ಬೆಂಬಲಿಸದೆ, ತಟಸ್ಥ ನಿಲುವು ತಳೆಯಲಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಕಹಾರ್ ಬಾಲ್ಖಿ ಹೇಳಿದ್ದಾರೆ. ಭಯೋತ್ಪಾದಕ ಸಂಘಟನೆಯಾಗಿರುವ ತಾಲಿಬಾನ್ ಅಫ್ಘಾಪ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬರಲು 2001ರ ನಂತರ 45 ಸಾವಿರಕ್ಕೂ ಅಧಿಕ ಅಫ್ಘನ್ ಸೈನಿಕರನ್ನು ಮತ್ತು 1.11 ಲಕ್ಷ ನಾಗರಿಕರನ್ನು ಹತ್ಯೆ ಮಾಡಿತ್ತು!(ಬ್ರೌನ್ ವಿಶ್ವವಿದ್ಯಾಲಯ ವರದಿ ಪ್ರಕಾರ).
ಫೇಸ್​​ಬುಕ್​​ ಗೆಳತಿಗೆ ಸಿನಿಮಾ ನಟಿ ಮಾಡುವ ಆಮಿಷ: ಹಣ, ಚಿನ್ನಾಭರಣ ದೋಚಿದ್ದ ನಕಲಿ ಫೋಟೋಗ್ರಾಫರ್ ಬಂಧನ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + eleven =
Remember me
