ಮುಜಾಫರ್‌ಪುರ:ದುಡ್ಡು ಕೊಟ್ಟರೆ ಯಾವುದಕ್ಕೂ ಸಿದ್ಧ ಎನ್ನುವ ಜಾಯಮಾನದ ಕೆಲವು ನಟ-ನಟಿಯರಿದ್ದಾರೆ. ಅದೇ ಇನ್ನೊಂದೆಡೆ ಸಿನಿಮಾದಲ್ಲಿ ತಮ್ಮ ನೆಚ್ಚಿನ ನಾಯಕರು ಮಾಡುವುದೆಲ್ಲಾ ನಿಜವೆಂದೇ ನಂಬಿ ಅವರನ್ನೇ ಅನುಸರಿಸಲು ಹೋಗಿ ಕೊಲೆ, ದರೋಡೆ, ರಕ್ತಪಾತಕ್ಕೂ ಸಿದ್ಧರಾಗಿರುವ ಅಭಿಮಾನಿಗಳು ಇನ್ನೊಂದೆಡೆ. ತಮ್ಮನ್ನು ಲಕ್ಷಾಂತರ ಮಂದಿ ಫಾಲೋ ಮಾಡುತ್ತಿರುವುದು ತಿಳಿದಿದ್ದರೂ ಈಗಿನ ಹೆಚ್ಚಿನ ನಾಯಕರು ಕೊಲೆ, ಸುಲಿಗೆ, ರಕ್ತಪಾತದಂಥ ದೃಶ್ಯಗಳಲ್ಲಿ ಕಾಣಿಸಿಕೊಂಡು ದೊಡ್ಡ ಮಟ್ಟದಲ್ಲಿ ಹೀರೋ ಆಗುತ್ತಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿರುವ ನಡುವೆಯೇ ಇದೀಗ ಬಾಲಿವುಡ್​ನ ಕೆಲವು ನಟರ ವಿರುದ್ಧ ಕೇಸ್​ ದಾಖಲಾಗಿದೆ.
ಬಾಲಿವುಡ್ ತಾರೆಯರಾದ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ರಣವೀರ್ ಸಿಂಗ್ ವಿರುದ್ಧ ಮುಂಬೈನ ಚೀಫ್​ ಜ್ಯುಡಿಷಿಯಲ್​​ ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಹೋರಾಟಗಾರ ತಮನ್ನಾ ಹಶ್ಮಿ ಎನ್ನುವವರು ಕೇಸ್​ ದಾಖಲು ಮಾಡಿದ್ದಾರೆ.
ಇದಕ್ಕೆ ಕಾರಣ, ಇವರೆಲ್ಲರೂ ಗುಟ್ಕಾ, ಪಾನ್ ಮಸಾಲಾ ಪ್ರಚಾರ ಮಾಡಿ ಯುವ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂಬ ಆರೋಪ ಇದೆ. ಕಳೆದ ತಿಂಗಳು ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಅವರು ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಜೊತೆಗೆ ಪಾನ್ ಮಸಾಲಾ ಟಿವಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ತೀವ್ರ ವಿರೋಧ ವ್ಯಕ್ತವಾಗಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಯಾಚಿಸಿದ್ದರು. ಈ ಜಾಹೀರಾತಿನಿಂದ ಬರುವ ಎಲ್ಲಾ ಆದಾಯವನ್ನು ದೇಣಿಗೆ ನೀಡುವುದಾಗಿಯೂ ಹೇಳಿದ್ದರು. ನಟ ಯಶ್​ ಸೇರಿದಂತೆ ಕೆಲವು ನಟರು ಎಷ್ಟೇ ದುಡ್ಡು ಕೊಟ್ಟರೂ ಈ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿ ಶಹಭಾಸ್​ಗಿರಿ ಗಿಟ್ಟಿಸಿಕೊಂಡಿದ್ದರು.
ಈ ಜಾಹೀರಾತಿನಲ್ಲಿ ನಟಿಸುತ್ತಿರುವ ನಟರ ವಿರುದ್ಧ ಈ ಹಿಂದೆ ಭಾರಿ ಅಭಿಯಾನವೇ ಶುರುವಾಗಿತ್ತು. ಐಎಎಸ್​ ಅಧಿಕಾರಿಯೊಬ್ಬರು ನಟರ ವಿರುದ್ಧ ಛೀಮಾರಿ ಹಾಕಿ ಟ್ವೀಟ್​ ಮಾಡಿದ್ದು, ಇದಕ್ಕೆ ಬೆಂಬಲಿಸಿ ಸಹಸ್ರಾರು ಮಂದಿ ಕಮೆಂಟ್​ ಮಾಡಿದ್ದರು. ಎಷ್ಟೇ ಛೀಮಾರಿ ಹಾಕಿದರೂ ಇದರ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ತಮನ್ನಾ ಹಶ್ಮಿ ದೂರು ದಾಖಲಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 467, 468, 439, ಮತ್ತು 120 ಬಿ ಅಡಿ ಪ್ರಕರಣವನ್ನು ದಾಖಲಿಸಲಾಗಿದೆ. ಇದರ ವಿಚಾರಣೆ ನಡೆಸಲು ಕೋರ್ಟ್ ಒಪ್ಪಿಕೊಂಡಿದ್ದು, ವಿಚಾರಣೆಯನ್ನು ಮೇ 27ಕ್ಕೆ ನಿಗದಿ ಪಡಿಸಿದೆ ಎಂದು ಹಶ್ಮಿ ಹೇಳಿದ್ದಾರೆ.
ಈ ನಟರಿಗೆ ಲಕ್ಷಾಂತರ ಅನುಯಾಯಿಗಳಿದ್ದು, ಅವರ ಕಾರ್ಯಗಳಿಂದ ಪ್ರಭಾವಿತರಾಗುತ್ತಾರೆ. ಆದ್ದರಿಂದ ಅವರು ಗುಟ್ಕಾ ತಿನ್ನುವುದನ್ನು ತೋರಿಸಿದಾಗ ಅದನ್ನು ಸೇವಿಸಲು ಪ್ರಾರಂಭಿಸುತ್ತಾರೆ. ಪ್ರತಿ ವರ್ಷ ಗುಟ್ಕಾದಿಂದ ಸಾವಿರಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಮೊದಲು ಕಡಿಮೆ ಸಂಖ್ಯೆಯ ಜನರು ಇದಕ್ಕೆ ವ್ಯಸನಿಯಾಗಿದ್ದರು. ಆದರೆ, ಈಗ ಇದು ಹಲವಾರು ಪಟ್ಟು ಹೆಚ್ಚಾಗಿದೆ. ಜನರು ತಮ್ಮ ಅಮೂಲ್ಯವಾದ ಜೀವನವನ್ನು ಕಳೆದುಕೊಂಡರೂ ಈ ನಟರು ಅದನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಬೇಲ್​ ಸಿಕ್ಕರೂ ಮುಗಿಯಲಿಲ್ಲ ಲಾಲೂ ಗೋಳು: ಜೈಲಿನಿಂದ ಬರುತ್ತಿದ್ದಂತೆಯೇ ಸಿಬಿಐ ಕೊಟ್ಟಿತು ಭಾರಿ ಶಾಕ್​!

ಖ್ಯಾತ ನಟಿ, ಸಂಸದೆ ನುಸ್ರತ್‌ ಮಿಸ್ಸಿಂಗ್‌: ಊರ ತುಂಬೆಲ್ಲಾ ಪೋಸ್ಟರ್‌- ನೋಡಿದವರು ಶಾಕ್‌!

ಲೈಂಗಿಕ ಸಂಪರ್ಕದಿಂದಲೂ ಹರಡುತ್ತವೆ ಮಹಾಮಾರಿ ಮಂಕಿ ಪಾಕ್ಸ್‌: ಆತಂಕಕಾರಿ ವರದಿ ಬಿಚ್ಚಿಟ್ಟ ತಜ್ಞರು

Sign in to your account
Please enter an answer in digits:2 + seventeen =
Remember me
