ಮುಂಬೈ:ಹಣದ ಅಕ್ರಮ ವರ್ಗಾವಣೆಯಲ್ಲಿ ಸಿಲುಕಿರುವ ಷೇರುಪೇಟೆಯ ಸಾಮ್ರಾಜ್ಞಿಯಾಗಿ ಮೆರೆದಿದ್ದ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್‌ನ (ಎನ್​ಎಸ್​ಇ) ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಆಗಿದ್ದ ಚಿತ್ರಾ ರಾಮಕೃಷ್ಣ ಅವರಿಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್​ ನಿರಾಕರಿಸಿದೆ.
ಕಳೆದ ಮಾರ್ಚ್​ 6ರಂದು ಬಂಧನವಾಗಿದ್ದ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್​ ವಜಾ ಮಾಡಿದೆ.
ಯಾರೀ ಚಿತ್ರಾ, ಏನಿದು ಹಗರಣ?
2013ರಿಂದ ಈ ಹುದ್ದೆಯನ್ನು ಅಲಂಕರಿಸಿದ್ದ ಚಿತ್ರಾ ವೃತ್ತಿಯಲ್ಲಿ ಲೆಕ್ಕಪರಿಶೋಧಕಿ ಆಗಿದ್ದ ಅವರು, ಎನ್​ಎಸ್​ಇ ಗಣಕೀಕರಣ ಮತ್ತು ಸರ್ಕಾರ ಇಪಿಎಫ್​ಒದ ಫಂಡ್ ಅನ್ನು ಷೇರುಗಳಲ್ಲಿ ಹೂಡಿಕೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ, 2016ರಲ್ಲಿ ವೈಯಕ್ತಿಕ ಕಾರಣ ಕೊಟ್ಟು ದಿಢೀರಾಗಿ ಎನ್​ಎಸ್​ಇ ಎಂಡಿ ಮತ್ತು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
2014 ರಿಂದ 2016 ರ ಅವಧಿಯಲ್ಲಿ ಇಮೇಲ್ ಐಡಿ ಮೂಲಕ ನಡೆಸಿದ ವ್ಯವಹಾರದಲ್ಲಿ ಅಪರಿಚಿತ ವ್ಯಕ್ತಿಯೊಂದಿಗೆ ಎನ್‌ಎಸ್‌ಇಯ ಆಂತರಿಕ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಭಾರಿ ವಂಚನೆ ಎಸಗಿರುವ ಆರೋಪ ಎದುರಿಸುತ್ತಿದ್ದಾರೆ. ಎನ್​ಎಸ್​ಇನ ಕಾರ್ಪೆರೇಟ್ ಆಡಳಿತದಲ್ಲಿ ಲೋಪ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿ ಅದರ ಚೌಕಟ್ಟಿನಲ್ಲಿ ಚಿತ್ರಾ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿತ್ತು.
ಚಿತ್ರಾ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಈ ಮೊದಲು ಕೋರ್ಟ್​ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಮಾರ್ಚ್‌ 6ರಂದು ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು.
ಏನಿದು ಘಟನೆ?ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್‌ನ ಸರ್ವರ್ ವ್ಯವಸ್ಥೆಯನ್ನು ಖಾಸಗಿ ಕಂಪನಿ ದೆಹಲಿ ಮೂಲದ ಒಪಿಜಿ ಸೆಕ್ಯುರೀಟಿಸ್ ಪ್ರೈವೇಟ್ ಲಿಮಿಟೆಡ್​ನ ಮಾಲೀಕ ಸಂಜಯ್ ಗುಪ್ತಾ ಮತ್ತು ಪ್ರಮೋಟರ್​ಗಳು ಎನ್​ಎಸ್​ಇನ ಅನಾಮಧೇಯ ಅಧಿಕಾರಿಗಳ ಜತೆಗೂಡಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದೇ ರೀತಿ, ಮುಂಬೈನ ಎನ್​ಎಸ್​ಇನ ಅನಾಮಧೇಯ ಅಧಿಕಾರಿಗಳು 2010-12ರ ಅವಧಿಯಲ್ಲಿ ಸ್ಟಾಕ್ ಎಕ್ಸ್​ಚೇಂಜ್​ನ ಸರ್ವರ್​ಗೆ ಲಾಗಿನ್ ಆಗುವುದಕ್ಕೆ ಹೊರಗಿನ ಕಂಪೆನಿಗೆ ಅನುಕೂಲ ಮಾಡಿಕೊಟ್ಟಿದ್ದರು. ಈ ರೀತಿ ಮಾಡಿದ ಷೇರುಪೇಟೆಯ ಇತರ ಕಂಪನಿಗಳಿಗಿಂತ ಮೊದಲೇ ಮಾಹಿತಿ ಪಡೆಯಲು ಅವಕಾಶ ನೀಡಿದ್ದರು. ಎನ್​ಎಸ್​ಇನ ಟ್ರೇಡಿಂಗ್ ದತ್ತಾಂಶಗಳ ಪ್ರಕಾರ, ಮೊದಲು ಲಾಗಿನ್ ಆಗಿರುವ ಪ್ರಕರಣಗಳಲ್ಲಿ ಶೇಕಡ 90 ಲಾಗಿನ್ ಸಂಜಯ್ ಗುಪ್ತಾ ಹೆಸರಲ್ಲಿರುವುದಾಗಿ ಆರೋಪಿಸಲಾಗಿದೆ.
ಎಫ್‌ಐಆರ್‌ನಲ್ಲಿ ಇವರುಗಳ ವಿರುದ್ಧ ಕ್ರಿಮಿನಲ್ ಪಿತೂರಿ, ದಾಖಲೆಗಳ ನಾಶ ಅಥವಾ ಎಲೆಕ್ಟ್ರಾನಿಕ್ ದಾಖಲೆಯನ್ನು ಸಾಕ್ಷ್ಯವಾಗಿ ಪರಿಗಣಿಸುವುದನ್ನು ತಡೆಯುವ ಯತ್ನದ ಆರೋಪವನ್ನು ಹೊರಿಸಲಾಗಿತ್ತು. ಇತರ ಆರೋಪಗಳಲ್ಲಿ, ಭ್ರಷ್ಟಾಚಾರ ತಡೆ ಕಾಯಿದೆಯಡಿಯಲ್ಲಿ ಲಂಚ ನೀಡುವ ಮತ್ತು ಸ್ವೀಕರಿಸುವ ಆರೋಪ, ಅಧಿಕಾರದ ದುರುಪಯೋಗ, ಸಾಕ್ಷ್ಯ ನಾಶದ ಆರೋಪಗಳೂ ಇದ್ದವು. ಇವೆಲ್ಲ ಅಲ್ಲದೆ ಎಫ್‌ಐಆರ್‌ನಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯನ್ನು ಸಹ ಉಲ್ಲೇಖಿಸಲಾಗಿತ್ತು.
ಸೆಬಿ ಆಂತರಿಕ ತನಿಖೆ: ಎನ್​ಎಸ್​ಇ 2017ರಲ್ಲಿ ಐಪಿಒ ಬಿಡುಗಡೆ ಮಾಡಿ ಮಾರುಕಟ್ಟೆ ಪ್ರವೇಶಿಸಬೇಕಾಗಿತ್ತು. ಆದರೆ, ಸರ್ವರ್ ಅನ್ನು ಕೋ-ಲೊಕೇಶನ್ ಮೂಲಕ ಶೇರ್ ಮಾಡಿಕೊಂಡಿದ್ದ ಕಾರಣ ಎನ್​ಎಸ್​ಇ ಪ್ರಯತ್ನಕ್ಕೆ ಸೆಬಿ ತಡೆ ನೀಡಿತ್ತು. ಮೂರು ವರ್ಷಗಳ ತನಿಖೆ ಬಳಿಕ ಎನ್​ಎಸ್​ಇಗೆ 90 ದಶಲಕ್ಷ ಡಾಲರ್​ಗೂ ಅಧಿಕ ದಂಡ ವಿಧಿಸಿತು. ಅಲ್ಲದೆ ಆರು ತಿಂಗಳ ಅವಧಿಗೆ ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ಹಣ ಸಂಗ್ರಹಿಸದಂತೆ ನಿಷೇಧ ಹೇರಿತ್ತು. ಇದನ್ನು ಎನ್​ಎಸ್​ಇ ಕೋರ್ಟ್​ನಲ್ಲಿ ಪ್ರಶ್ನಿಸಿತ್ತು. ಬಳಿಕ ಐಪಿಒ ಬಿಡುಗಡೆಗೆ ಸೆಬಿಯಿಂದ ಅನುಮತಿ ಪಡೆದಿತ್ತು. ಇದಕ್ಕಾಗಿ ಸಲ್ಲಿಸಿದ ದಾಖಲೆಗಳು ಈಗ ಸೆಬಿಯ ಪರಿಶೀಲನೆಯಲ್ಲಿವೆ.
ನಿಗೂಢ ಯೋಗಿಯ ಜತೆ ಸಂಪರ್ಕ!ಕುತೂಹಲದ ವಿಷಯ ಏನೆಂದರೆ, ಚಿತ್ರಾ ಅವರಿಗೆ ಹಿಮಾಲಯದ ನಿಗೂಢ ಯೋಗಿಯ ಜತೆ ಸಂಪರ್ಕ ಇದ್ದುದು ಸೆಕ್ಯುರಿಟೀಸ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ತನಿಖೆಯಿಂದ ತಿಳಿದುಬಂದಿದೆ.ಹಿಮಾಲಯದಲ್ಲಿ ವಾಸಿಸುವ ಯೋಗಿ ಎಂದು ಹೇಳಲಾಗುವ ವ್ಯಕ್ತಿಯೊಂದಿಗೆ ಇಮೇಲ್ ಮೂಲಕ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್‌ನ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎನ್ನುವ ಆರೋಪ ಇವರ ಮೇಲಿದೆ. ಈ ತಿಂಗಳ ಆರಂಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಆನಂದ್ ಸುಬ್ರಮಣ್ಯಂ ಅವರೇ ಈ ಯೋಗಿ ಎಂಬ ಶಂಕೆ ವ್ಯಕ್ತವಾಗಿದ್ದು ಈ ಬಗ್ಗೆ ಇನ್ನಷ್ಟೇ ಸತ್ಯ ಹೊರಬರಬೇಕಿದೆ.
2013ರ ಏಪ್ರಿಲ್‌ನಲ್ಲಿ ಮುಖ್ಯ ಕಾರ್ಯತಂತ್ರದ ಸಲಹೆಗಾರರಾಗಿ ಸೇರಿದ ಆನಂದ್ ಸುಬ್ರಮಣ್ಯಂ ಅವರು, 2015-16ರಲ್ಲಿ ಎನ್‌ಎಸ್‌ಇಯ ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಚಿತ್ರಾ ರಾಮಕೃಷ್ಣ ಅವರ ಸಲಹೆಗಾರರಾಗಿದ್ದರು. ಆನಂದ್‌ ಅವರನ್ನು ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಎಂಡಿ ಸಲಹೆಗಾರರಾಗಿ ನೇಮಿಸಲು ಚಿತ್ರಾ ಅವರು ಹಿಮಾಲಯ ಶ್ರೇಣಿಗಳಲ್ಲಿ ವಾಸಿಸುವ ನಿಗೂಢ ಯೋಗಿಯಿಂದ ಮಾರ್ಗದರ್ಶನ ಪಡೆದರು ಎಂದು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾದ (ಸೆಬಿ) ಹೇಳಿದ ನಂತರ ಚಿತ್ರಾ ರಾಮಕೃಷ್ಣ ರಾಷ್ಟ್ರದ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿದ್ದರು.
ಷೇರುಪೇಟೆಯ ಯಾವುದೇ ಹೆಚ್ಚಿನ ಅನುಭವ ಇಲ್ಲದೇ ಇದ್ದರೂ ಆನಂದ್‌ ಅವರನ್ನು ಚಿತ್ರಾ ಅವರು ಹಿರಿಯ ಹುದ್ದೆಗೆ ನೇಮಕ ಮಾಡಿಕೊಂಡಿದ್ದರು. ಜೊತೆಗೆ ಅವರಿಗೆ ಹಲವು ಬಾರಿ ಪದೋನ್ನತಿ ನೀಡಲಾಗಿತ್ತು. ವಿನಾಕಾರಣ ವೇತನ ಹೆಚ್ಚಳ ಮಾಡಲಾಗಿತ್ತು. ಈ ಅವಧಿಯಲ್ಲಿಯೇ ಅವ್ಯವಹಾರಗಳು ಬೆಳಕಿಗೆ ಬಂದಿದೆ. (ಏಜೆನ್ಸೀಸ್​)
ರಾಜಕೀಯ ಚಿತ್ತ ದೆಹಲಿಯತ್ತ- ಅಗ್ನಿಪರೀಕ್ಷೆಯಲ್ಲಿ ಪಾಸಾಗುವರೇ ಕೇಜ್ರಿವಾಲ್​? ಬಹುಮತ ಸಾಬೀತಿಗೆ ಕ್ಷಣಗಣನೆ…

ಶಾಲಾ ಕಾಲೇಜುಗಳಲ್ಲಿ ಹಿಜಾಬ್​ ಬ್ಯಾನ್​- ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ನೋಟಿಸ್​, ಕೋರ್ಟ್​ ಹೇಳಿದ್ದೇನು?

VIDEO: ಸ್ಪೇಸ್‌-ಎಕ್ಸ್​ನಿಂದ ಮತ್ತೊಂದು ಸಾಧನೆ: 54 ಸ್ಟಾರ್‌ಲಿಂಕ್ ಬ್ರಾಡ್‌ಬ್ಯಾಂಡ್ ಉಪಗ್ರಹ ಯಶಸ್ವಿ ಉಡಾವಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 3 =
Remember me
