ಪ್ರಶ್ನೆ : ನಾನು ಬಿ.ಇ ಓದುತ್ತಿರುವ ವಿದ್ಯಾರ್ಥಿನಿ. ಈಗ್ಗೆ ಎರಡು ತಿಂಗಳ ಹಿಂದೆ ನನ್ನ ಮೊಬೈಲ್‍ಗೆ ಒಂದು ಕಾಲ್ ಬಂತು. ನಂತರ ಅದು ಯಾರಿಂದಲೋ ಬಂದ ಮಿಸ್ಡ್ ಕಾಲ್ ಎಂದು ತಿಳಿಯಿತು. ಮತ್ತೆ ಅದೇ ನಂಬರಿನಿಂದ ಕರೆ ಬಂತು.
ಹೀಗೇ ಪದೇ ಪದೇ ಆಗಿ ಆ ೨೧ವರ್ಷದ ಹುಡುಗ ನನ್ನ ಫ಼್ರೆಂಡ್ ಆದ. ಈ ನಮ್ಮ ಸ್ನೇಹ, ಮೆಸೇಜ್‍ಗಳಲ್ಲಿ ಮುಂದುವರೆಯಿತು. ನಾವಿಬ್ಬರೂ ಇನ್ನೂ ಭೇಟಿಯೇ ಮಾಡಿಲ್ಲ. ಒಂದು ರಾತ್ರಿ ಆ ಹುಡುಗ ಫೋನ್ ಮಾಡಿ ” ಮೊದಲ ಬಾರಿ ನಿನ್ನ ವಾಯ್ಸ್ ಕೇಳಿದಾಗಲೇ ನನಗೆ ನಿನ್ನ ಮೇಲೆ ಪ್ರೀತಿ ಹುಟ್ಟಿತು. ನೀನು ನನ್ನನ್ನು ಮದುವೆಯಾಗುತ್ತೀಯಾ ?” ಅಂತ ಕೇಳಿದ.
ನಾನು ಏನೂ ಹೇಳಲಿಲ್ಲ. ಮತ್ತೆ ಅವನೇ ಬೆಳಿಗ್ಗೆ ಫೋನ್ ಮಾಡಿ ” ರಾತ್ರಿ ನನ್ನ ಮೂಡ್ ಹಾಳಾಗಿತ್ತು. ಅದಕ್ಕೇ ಏನೇನೋ ಮಾತಾಡಿಬಿಟ್ಟೆ ನನಗೇನೂ ನಿನ್ನ ಕಂಡರೆ ಅಂಥಾ ಯಾವ ಭಾವನೆಗಳೂ ಇಲ್ಲ” ಎಂದ. ನಾನು ಅವನನ್ನು ಕೇವಲ ನನ್ನ ಗೆಳೆಯನೆಂದೇ ಭಾವಿಸಿದೆ. ಮತ್ತೆ ಕೆಲವು ದಿನದ ನಂತರ ರಾತ್ರಿ ಹೊತ್ತು ಅದೇ ರೀತಿ ಮದುವೆಯ ಮಾತೆತ್ತಿದ. ಮರುದಿನ ರಾತ್ರಿ ಮೂಡ್ ಸರಿಯಿರಲಿಲ್ಲವೆಂದ! ನನಗೀಗ ಇವನದೇ ಚಿಂತೆಯಾಗಿದೆ. ಅವನೇನು ನನ್ನನ್ನು ಪ್ರೀತಿಸುತ್ತಾನೋ ಇಲ್ಲವೋ ಗೊತ್ತಾಗುತ್ತಿಲ್ಲ.
ನನಗೆ ಅದನ್ನು ಖಚಿತವಾಗಿ ತಿಳಿದುಕೊಳ್ಳಬೇಕಾಗಿದೆ. ಅದು ನನ್ನ ಸೇಫ಼್ಟಿಗಾಗಿ. ಏನು ಮಾಡಲಿ ತಿಳಿಸಿ. ನನಗೆ ಗೊತ್ತು ಈ ವಯಸ್ಸಿನಲ್ಲಿ ಹೀಗೆ ಆಗುತ್ತದೆ ಎಂದು ಹೇಳುತ್ತೀರಿ. ಆದರೆ ಇದನ್ನು ನಿವಾರಿಸಿ ಕೊಳ್ಳುವುದು ಹೇಗೆ? ಅದನ್ನು ತಿಳಿಸಿ.
ಉತ್ತರ:ನಾನು ಇಂಥಾ ಹಲವಾರು ಪತ್ರಗಳಿಗೆ ಇದೇ ಅಂಕಣದಲ್ಲಿ ಉತ್ತರಿಸಿದ್ದೇನೆ. ಆದರೂ ಮತ್ತೆ ಮತ್ತೆ ಉತ್ತರಿಸುತ್ತೇನೆ. ಏಕೆಂದರೆ ಇಂದಿನ ಯುವ ಪೀಳಿಗೆಯಲ್ಲಿ ಈ ಫೋನುಗಳ ಕಾರಣದಿಂದ ಉಂಟಾಗುತ್ತಿರುವ ಕ್ಷೋಭೆಗಳು ದಿನದಿನಕ್ಕೂ ಹೆಚ್ಚುತ್ತಿವೆ.
ನಾನು ಪದೇ ಪದೇ ಲೈಫ಼್ ಸ್ಕಿಲ್ ಬಗ್ಗೆಯೂ ಬರೆಯುತ್ತಿರುತ್ತೇನೆ. ಇಂದಿನ ವಿದ್ಯಾಭ್ಯಾಸದ ಕ್ರಮದಲ್ಲಿ ಮಿದುಳೊಂದು ಮಾಹಿತಿ ಕೇಂದ್ರವಾಗುತ್ತಿದೆಯೇ ವಿನಃ ’ ಕಾಮನ್‍ಸೆನ್ಸ್ ’ ಎನ್ನುವುದನ್ನು ಬೆಳೆಸುತ್ತಿಲ್ಲ. ಇಂದಿನ ಯುವ ಪೀಳಿಗೆಯೂ ತಮ್ಮದೇ ಸ್ವಾರ್ಥದಲ್ಲಿ ಮುಳುಗಿ ಹೊರ ಜಗತ್ತಿನಲ್ಲಿಯ ವ್ಯವಹಾರವನ್ನು ಗಮನಿಸುತ್ತಾ ’ ಕಾಮನ್‍ಸೆನ್ಸ್ ’ ಬೆಳೆಸಿಕೊಳ್ಳುತ್ತಿಲ್ಲ. ಈ ಕಾರಣದಿಂದಲೇ ಇಂದಿನ ಪೀಳಿಗೆ ದಿಕ್ಕುದೆಸೆಯಿಲ್ಲದೇ ಹೈರಾಣಾಗುತ್ತಿದೆ. ಗಹನವಾಗಿ ಯೋಚಿಸುವ ಶಕ್ತಿಯನ್ನೇ ಕಳೆದುಕೊಳ್ಳುತ್ತಿದೆ. ” ನನಗೆ ಗೊತ್ತು ಈ ವಯಸ್ಸಿನಲ್ಲಿ ಹೀಗಾಗುತ್ತದೆ ” ಎಂದು ನಾನು ಹೇಳುತ್ತೇನೆಂದು ನೀವು ಬರೆದಿದ್ದೀರಿ. ಖಂಡಿತಾ ನಾನು ಹಾಗೆ ಹೇಳುವುದಿಲ್ಲ. ಬದಲಾಗಿ ’ ಈ ವಯಸ್ಸಿನಲ್ಲಿ ಹೀಗೆಲ್ಲಾ ಆಗಬಾರದು, ನಿಮಗೆ ಕಾಮನ್‍ಸೆನ್ಸ್ ಇಲ್ಲದಿದ್ದರೆ ಮಾತ್ರ ಹೀಗಾಗುತ್ತದೆ ’ ಎಂದೇ ಹೇಳುತ್ತೇನೆ. ಈಗ ನಿಮ್ಮದೇ ಪತ್ರವನ್ನು ಉದಾಹರಣೆಯಾಗಿಟ್ಟುಕೊಂದು ನಿಮ್ಮ ಕಾಮನ್‍ಸೆನ್ಸ್ ಕೆಲಸಮಾಡಬೇಕಾದ ಕಡೆಯೆಲ್ಲಾ ಕೆಲಸವನ್ನೇ ಮಾಡದೇ ಹೇಗೆ ಮಲಗಿಬಿಟ್ಟಿದೆಯೆಂದು ಹೇಳುತ್ತೇನೆ ಕೇಳಿ. ನೀವು ಬಿ.ಇ ಓದುತ್ತಿರುವ ಹುಡುಗಿ. ಅಂದರೆ ಜಾಣೆಯೆಂದೇ ನನ್ನ ಲೆಕ್ಕ.
೧ ನೀವು ಕಣ್ಣಿನಿಂದಲೂ ನೋಡದ ಒಬ್ಬ ಮನುಷ್ಯ ” ನಾನು ನಿನ್ನನ್ನು ಪ್ರೀತಿಸುತ್ತೇನೆ ” ಎಂದ ಮಾತ್ರಕ್ಕೆ ನೀವು ಹೇಗೆ ನಂಬಿದಿರಿ?
೨ ನಿಮಗೆ ಫೋನ್ ಮಾಡುತ್ತಿರುವವರು ಹುಡುಗನೆಂದೇ ಹೇಗೆ ನಂಬುತ್ತೀರಿ? ಏಕೆಂದರೆ ಪ್ರತಿ ವ್ಯಕ್ತಿಗೂ ಮೂರು ರೀತಿಯ ವಯಸ್ಸು ಇರುತ್ತದೆ. ಒಂದು ದೇಹಕ್ಕಾಗುವ ವಯಸ್ಸು, ಎರಡು ಮನಸ್ಸಿನ ವಯಸ್ಸು, ಮೂರು ಕಂಠದ ವಯಸ್ಸು. ದೇಹಕ್ಕೆ ೫೦ ವಯಸ್ಸಾಗಿದ್ದರೂ ಕಂಠಕ್ಕೆ ೨೦ರ ಬನಿ ಇರಬಹುದು. ಖ್ಯಾತ ಚಲನಚಿತ್ರ ಗಾಯಕಿ ಬಿ.ಆರ್.ಛಾಯಾ ಅವರ ಕಂಠ ಕೇಳಿದ್ದೀರಾ? ಅವರು ಸಣ್ಣ ಹುಡುಗಿಗಾಗಿ ’ಉಪಾಸನೆ’ ಚಿತ್ರದಲ್ಲಿ ’ಸಂಪಿಗೆ ಮರದ ಚಿಗುರೆಲೆ ನಡುವೆ ಕೋಗಿಲೆ ಹಾಡಿತ್ತು ’ ಎನ್ನುವ ಹಾಡನ್ನು ಹಾಡಿದ್ದಾರೆ. ನಿಮ್ಮ ಈ ಗೆಳೆಯ ೫೦ರ ಆಸುಪಾಸಿನವನಾಗಿದ್ದು ನಿಮ್ಮ ಜೊತೆ ಆಟವಾಡುತ್ತಿರಬಹುದಲ್ಲವೇ?
೩ ” ರಾತ್ರಿ ಮೂಡು ಕೆಡುತ್ತದೆ, ಬೆಳಿಗ್ಗೆ ಸರಿಹೋಗುತ್ತದೆ ” ಎಂದು ಹುಚ್ಚುಚ್ಚಾಗಿ ಫೋನ್ ಮಾಡುವವನನ್ನು ಮಾನಸಿಕವಾಗಿ ಆರೋಗ್ಯವಂತನೆಂದು ಹೇಗೆ ನಂಬಿದಿರಿ? ತಲೆ ಕೆಟ್ಟಾಗ ಒಂದು ರೀತಿ ತಲೆ ಸರಿಯಿದ್ದಾಗ ಒಂದು ರೀತಿ ಮಾತಾಡುವವನನ್ನು ಯಾರಾದರೂ ಪ್ರೀತಿಸುತ್ತಾರೆಯೇ?
೪ ” ಅವನು ನನ್ನನ್ನು ಪ್ರೀತಿಸುತ್ತಾನೋ ಇಲ್ಲವೋ ಎಂದು ತಿಳಿದುಕೊಳ್ಳಬೇಕಾಗಿದೆ ” ಎಂದು ಬರೆಯುತ್ತೀರಲ್ಲ? ಈ ಕಾಮನ್‍ಸೆನ್ಸ್‍ಗೆ ಏನು ಹೇಳಲಿ? ಕಣ್ಣಿಂದ ನೋಡದ, ತಲೆಕೆಟ್ಟಂತೆ ಮಾತಾಡುವವನು ಪ್ರೀತಿಸಿದರೆಷ್ಟು ಬಿಟ್ಟರೆಷ್ಟು? ನಿಮ್ಮಂಥಾ ಜಾಣೆಯರು ಇಂಥಾ ಸ್ನೇಹಗಳನ್ನು ನಿವಾರಿಸಿಕೊಂಡು ಮುಕ್ತರಾಗುವ ಬಗ್ಗೆ ಯೋಚಿಸ ಬೇಕು. ಅದೇ ನಿಮ್ಮ ಸೇಫ಼್ಟಿ. ಅದು ಬಿಟ್ಟು ’ ಪ್ರೀತಿಸುತ್ತಾನೋ ಇಲ್ಲವೋ ’ ಎಂದು ತಳಮಳ ಪಡುವುದು ನಿಮಗೆ ಮಾನಸಿಕವಾಗಿಯೂ ಸೇಫ಼್ಟಿ ಅಲ್ಲ.
ಈಗ ಜಾಣತನದಿಂದ ಮುಂದಿನ ಹೆಜ್ಜೆಗಳನ್ನು ಇಡಿ. ಮತ್ತೊಮ್ಮೆ ಅವನು ಫೋನ್ ಮಾಡಿದಾಗ ವಾಟ್ಸ್ ಆಪ್‍ನ ಮೂಲಕ ಕ್ಯಾಮೆರಾ ಆನ್ ಮಾಡಿ ಮಾತಾಡಲು ತಿಳಿಸಿ. ಅವನ ಮೋರೆಯನ್ನಷ್ಟು ನೋಡಿ. ಅವನು ಮುದುಕನೋ ಹುಡುಗನೋ ಪತ್ತೆ ಮಾಡಿ. ಅವನು ನಿಜಕ್ಕೂ ಹುಡುಗನಾಗಿದ್ದರೂ ” ರಾತ್ರಿಯೊಂದು ರೀತಿ, ಬೆಳಿಗ್ಗೆ ಒಂದು ರೀತಿ ಮಾತಾಡುವ ನಿನ್ನ ಸ್ನೇಹವೂ ನನಗೆ ಬೇಡ” ವೆಂದು ತಿಳಿಸಿ.
ಅವನಿಗಿನ್ನೂ ೨೧ ವರ್ಷವೆಂದು ಬರೆದಿದ್ದೀರಿ. ಈ ವಯಸ್ಸಿಗೆ ಗಂಡುಮಕ್ಕಳಿಗೆ ಇನ್ನೂ ಬುದ್ಧಿ ಪ್ರೌಢವಾಗಿರುವುದಿಲ್ಲ. ಮಕ್ಕಳಂತಾಡುವ ಇಂಥವರನ್ನು ಕಟ್ಟಿಕೊಂಡು ಬದುಕುವುದು ಕಷ್ಟ. ನಿಮ್ಮ ವಯಸ್ಸೂ ಇನ್ನೂ ಚಿಕ್ಕದಿದೆ. ನಿಮ್ಮ ಮುಂದೆ ವಿದ್ಯಾಭ್ಯಾಸದ ಗುರಿಯಿದೆ. ಅದರ ಕಡೆ ಗಮನ ಹರಿಸಿ. ನಿಮಗಿನ್ನೂ ಬದುಕು ವಿಶಾಲವಾಗಿ ತೆರೆದಿದೆ. ಈಗಿನಿಂದಲೇ ಏಕೆ ಸ್ನೇಹ, ಸಖ, ಪ್ರಿಯಕರ ಎಂದೆಲ್ಲಾ ಹಲಬುತ್ತೀರಿ?
೩೦ವರ್ಷದ ನಂತರ ಓದುವುದು ಕಷ್ಟವಾಗುತ್ತದೆ. ಆದರೆ ಆಗ ಸಖನನ್ನೋ, ಪ್ರಿಯಕರನನ್ನೋ ಖಂಡಿತಾ ಪಡೆಯಬಹುದು. ಇಂಗ್ಲೀಷಿನ ಒಂದು ಸಣ್ಣ ನರ್ಸರಿ ರೈಮ್ ಕೇಳಿದ್ದೀರಾ? work while you work, play while you play, that is the game of happy and gay ಎಂದಿದ್ದಾನೆ ಕವಿ. ಯಾವಯಾವ ವಯಸ್ಸಿನಲ್ಲಿ ಏನೇನು ಮಾಡಬೇಕೋ ಅದನ್ನಷ್ಟೆ ಮಾಡಿದರೆ ಬದುಕು ಎನ್ನುವ ಈ ಆಟದಲ್ಲಿ ಸುಖ ಸಂತೋಷಗಳು ಹೆಚ್ಚುತ್ತವೆ. ನೀವೀಗ ನಿಮ್ಮವಿದ್ಯೆಯ ಕಡೆ ನಂತರ ಉದ್ಯೋಗದ ಕಡೆ ಗಮನ ಕೊಡಿ ಸಾಕು. ಮಿಕ್ಕಿದ್ದೆಲ್ಲಾ ಮುಂದೆ ತಾನಾಗಿಯೇ ಲಭಿಸುತ್ತದೆ.
https://www.vijayavani.net/ನ ಅಂಕಣ ವಿಭಾಗದ ನಂದೊಂದು ಕಥೆ ವಿಭಾಗದಲ್ಲಿ ಡಾ.ಶಾಂತಾ ನಾಗರಾಜ್‌ ಅವರು ಬರೆದಿರುವ ಇತರ ಸಲಹೆಗಳು ಲಭ್ಯ.
ಪತಿಗೆ ನನ್ನಲ್ಲಿ ಆಸಕ್ತಿಯಿಲ್ಲ- ಮಕ್ಕಳಾಗದ್ದಕ್ಕೆ ಅತ್ತೆ ನನ್ನನ್ನು ಹೀಯಾಳಿಸುತ್ತಿದ್ದಾರೆ… ಕುಗ್ಗಿ ಹೋಗಿದ್ದೇನೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 15 =
Remember me
