ನಾನು 25ವರ್ಷದ, ಎರಡು ಮಕ್ಕಳು ಮತ್ತೆ ದೇವರಂಥ ಗಂಡ ಇರುವ ಗೃಹಿಣಿ. ನನ್ನ ತಂದೆ ಅನಕ್ಷರಸ್ಥರು. ತಾಯಿ ವಿದ್ಯಾವಂತೆ. ನನಗಿಬ್ಬರು ಅಕ್ಕಂದಿರು. ಮತ್ತು ಒಬ್ಬ ತಮ್ಮ. ನನ್ನ ಬಾಲ್ಯವೆಲ್ಲ ಅಜ್ಜಿಮನೆಯಲ್ಲಿ ಕಳೆಯಿತು. 7ನೇ ತರಗತಿ ಮುಗಿಯುತ್ತಿದ್ದ ಹಾಗೇ ಅಜ್ಜಿಯ ಪ್ರೀತಿಯ ಕಡಲಿನಿಂದ ಬಂದು ತಾಯಿಯ ಮಡಿಲು ಸೇರಿದೆ.
10ನೇತರಗತಿ ಮುಗಿಯುತ್ತಿದ್ದಂತೆ ಮದುವೆಮಾಡಿದರು. ನನ್ನ ಗಂಡ ನನ್ನ ವಿದ್ಯೆಗೆ ಪ್ರೋತ್ಸಾಹ ಕೊಟ್ಟರು. ಪಿ.ಯು.ಸಿ ಮತ್ತು ಡಿ. ಎಡ್ಮಾಡಿಸಿದರು. ಎರಡು ಪುಟ್ಟ ಮಕ್ಕಳ ತಾಯಿಯಾದ ನನ್ನನ್ನು ನೋಡಿದರೆ ಯಾರಿಗಾದರೂ ನಾನು ತುಂಬ ಸುಖಿಯೆನಿಸುತ್ತದೆ. ಆದರೆ ಸತ್ಯ ಹಾಗಿಲ್ಲ ಮೇಡಂ.
ನಿಜ ನನಗೆ ಗಂಡನಿಂದಾಗಲೀ, ಮಕ್ಕಳಿಂದಾಗಲೀ, ಹಣದ ಕಾರಣದಿಂದಾಗಲೀ ಏನೇನೂ ತೊಂದರೆಯಿಲ್ಲ. ಆದರೆ ತೊಂದರೆ ಎನ್ನುವುದು ನನ್ನೊಳಗೆ ಇದೆ. ನನಗೆ ನನ್ನ ಬಗ್ಗೆ ಕೀಳರಿಮೆಯಿದೆ. ಚೆನ್ನಾಗಿ ಮಾತಾಡೋದಿಕ್ಕೆ ಬರಲ್ಲ, ಜನರೊಂದಿಗೆ ಹೇಗೆ ಬೆರೆಯಬೇಕು ಅಂತ ಗೊತ್ತಿಲ್ಲ, ಹೊಲಿಗೆ ಕಸೂತಿ ಇಂಥ ಯಾವ ಕಲೆಗಳು ಗೊತ್ತಿಲ್ಲ. ಇಂಗ್ಲಿಷ್ ಮತ್ತು ಗಣಿತದಲ್ಲಿ ವೀಕ್ ಇದ್ದೇನೆ. ಹೀಗೇ ಹತ್ತುಹಲವು ಕೊರತೆಗಳಿವೆ. ಅಲ್ಲದೇ ನನಗೆ ಬಹಳ ಬೇಗ ಕೋಪ ಬರುತ್ತದೆ. ಕೋಪಬಂದಾಗ ನಾನು ಯಾರೊಂದಿಗೂ ಮಾತೇ ಆಡುವುದಿಲ್ಲ. ಹೀಗಾಗಿ ಬಹಳ ಜನ ನನ್ನ ತಪ್ಪುತಿಳೀತಾರೆ.
ಅಕ್ಕಪಕ್ಕದವರು ನನಗೆ ಜಂಬ ಅಂತ ತಿಳಿದುಕೊಂಡಿದ್ದಾರೆ. ನಾನು ಹಾಗಿಲ್ಲ. ಕಷ್ಟದಲ್ಲಿರುವವರಿಗೆ, ವೃದ್ಧರಿಗೆ ಬಹಳಷ್ಟು ಸಹಾಯ ಮಾಡಿದ್ದೇನೆ. ಉತ್ತಮ ಶಿಕ್ಷಕಿ ಆಗಬೇಕೆಂದು ನನ್ನ ಆಸೆ. ಆದರೆ ನನಗೇ ಆತ್ಮವಿಶ್ವಾಸವಿಲ್ಲದೆ ಇರುವುದರಿಂದ ಕೆಲಸ ಸಿಕ್ಕುತ್ತಿಲ್ಲ. ಇದರಿಂದ ಹೊರಬರಲು ಯೋಗ, ಧ್ಯಾನ, ಪ್ರಾಣಾಯಾಮ ಎಲ್ಲವನ್ನೂ ಮಾಡುತ್ತಿದ್ದೇನೆ. ಆದರೂ ಏನೂ ಉಪಯೋಗವಾಗಿಲ್ಲ. ನಾನೇನೂ ಸಾಧನೆ ಮಾಡಿಲ್ಲ, ಆದ್ದರಿಂದ ಬದುಕಲು ಯೋಗ್ಯಳಾ ಅನ್ನಿಸುತ್ತದೆ. ಏನು ಮಾಡಲಿ ಹೇಳಿ ಮೇಡಂ.
ಉತ್ತರ: ಮೊದಲನೆಯದಾಗಿ ಪತ್ರದಲ್ಲಿನ ಚೆಂದದ ಕನ್ನಡಕ್ಕೆ ನಿಮಗೆ ಅಭಿನಂದನೆಗಳು. ನಿಮ್ಮ ಐದೂ ಪುಟಗಳ ಕಾಗದವನ್ನು ಇಲ್ಲಿ ಟೈಪ್ ಮಾಡಬೇಕೆನಿಸಿತು. ಆದರೆ ಜಾಗದ ಕಾರಣದಿಂದಾಗಿ ಕೆಲವೇ ಸಾಲುಗಳನ್ನು ಇಲ್ಲಿ ಕಾಣಿಸಿದ್ದೇನೆ.
ನಿಮಗೆ ಇಂಗ್ಲಿಷ್ ಮತ್ತು ಗಣಿತ ಬರದಿದ್ದರೇನಾಯಿತು? ಕನ್ನಡ ಇಷ್ಟು ಚೆನ್ನಾಗಿ ಬರುತ್ತದಲ್ಲ? ಅದೂ ಸಹ ಒಂದು ಹೆಮ್ಮೆಯೇ ಅಲ್ಲವೇ? ಪದವಿ ಮುಗಿಸಿದ ಎಷ್ಟೋ ಜನರಿಗೆ ನಿಮ್ಮಂತೆ ಕನ್ನಡ ಬರೆಯಲು ಗೊತ್ತಿಲ್ಲ. ಇರಲಿ ಈಗ ನಿಮ್ಮ ಸಮಸ್ಯೆಯ ಕಡೆ ಗಮನಿಸೋಣ.
ನಿಮಗೆ `ಕೀಳರಿಮೆ’ ಇದೆ ಎಂದು ನೀವು ತಿಳಿದುಕೊಂಡಿದ್ದೀರಲ್ಲ? ಅದೇ ತಪ್ಪು. ಕೀಳರಿಮೆ ಎನ್ನುವುದು ಒಂದು ದೊಡ್ಡವ್ಯಾಧಿ. ಅದಿದ್ದವರು ಜೀವನದಲ್ಲಿ ಏನೂ ಮಾಡುವುದೇ ಇಲ್ಲ. ನೀವಾದರೋ ಪಿ.ಯು.ಸಿ ಮತ್ತು ಡಿ.ಎಡ್ ಮಾಡಿದ್ದೀರಲ್ಲ? ನಿಮ್ಮದು ಸ್ವಲ್ಪ ಸಂಕೋಚದ ಪ್ರವೃತ್ತಿ ಇರಬಹುದು. ಅದು ಎಷ್ಟೋ ಜನರಿಗೆ ಇರುತ್ತದೆ. ಏನೇನೂ ತೊಂದರೆಯಿಲ್ಲದ ನೀವು `ನನಗೇನೋ ಇದೆ’ ಎನ್ನುವ ಭ್ರಮೆಯನ್ನು ಹೊತ್ತುಕೊಂಡಿದ್ದೀರಿ ಅಷ್ಟೆ.
ಈ ಭ್ರಮೆಯನ್ನು ಹೋಗಲಾಡಿಸಲು ನೀವೊಂದು ಕೆಲಸಮಾಡಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಹಾಳೆಯಲ್ಲಿ `ಬೆಳಗಿನಿಂದ ರಾತ್ರಿಯವರೆಗೆ ಏನೇನು ಒಳ್ಳೆಯ ಕೆಲಸಗಳನ್ನು ಮಾಡಿದಿರಿ’ ಎಂದು ಪಟ್ಟಿ ಮಾಡಿ. ಇದರಲ್ಲಿ ಚೆನ್ನಾಗಿ ಅಡುಗೆ ಮಾಡಿದ್ದು, ಗಂಡನಿಗೆ ಇಷ್ಟವಾಗುವ ಹಾಗೆ ಬಡಿಸಿದ್ದು, ಮಗುವಿಗೆ ಚೆನ್ನಾಗಿ ಡ್ರೆಸ್ ಮಾಡಿದ್ದು, ಮಕ್ಕಳಿಗೆ ಪಾಠ ಹೇಳಿಕೊಟ್ಟದ್ದು ಎಲ್ಲವೂ ಇರಲಿ. ಹೀಗೆ ಒಂದು ವಾರಬರೆದ ಮೇಲೆ ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ. ಇಷ್ಟೊಂದು ಒಳ್ಳೆ ಕೆಲಸಗಳನ್ನು ಮಾಡುವ ನಾನು ಕೀಳೇ? ಎಂದು ಆಗ.  ನಿಮ್ಮಕೀಳರಿಮೆ ಹೇಳದೇ ಕೇಳದೇ ಓಡಿಹೋಗುತ್ತದೆ!
ಅಕ್ಕಪಕ್ಕದವರು ನೆಂಟರು ಆಡುವ ಮಾತಿಗೆ ಹೆಚ್ಚು ಬೆಲೆ ಕೊಡಬಾರದು. ಅವೆಲ್ಲ `ಚಲಿಸುವ ಮೋಡ’ ಗಳಿದ್ದಂತೆ. ಬರುತ್ತವೆ ಹೋಗುತ್ತವೆ ಅಷ್ಟೆ. `ಕೋಪ ಬಂದಾಗ ನಾನು ಮಾತೇ ಆಡುವುದಿಲ್ಲ ‘ ಎಂದು ಬರೆದಿದ್ದೀರಲ್ಲ? ಅದೆಷ್ಟು ಒಳ್ಳೆಯ ಗುಣ ಗೊತ್ತೇ? ಕೋಪವನ್ನು ತಹಬಂದಿಗೆ ತರುವ ಉತ್ತಮ ಉಪಾಯವದು. ನಿಮಗೆ ದೈವದತ್ತವಾಗಿ ಲಭಿಸಿದೆ. ನಿಮ್ಮ ಬಗ್ಗೆ ನೀವು ಹೆಮ್ಮೆ ಪಡಬಹುದು. ಇನ್ನು ಕೆಲಸ ಸಿಗುವ ಬಗ್ಗೆ ನಿಮ್ಮ ಬೇಸರಕ್ಕೆ ಒಂದು ಮಾತನ್ನು ಹೇಳಬಹುದು. ಈಗಾಗಲೇ ನೀವು ಮಕ್ಕಳಿಗೆ ಮನೆ ಪಾಠ ಮಾಡುತ್ತಿದ್ದೀರಿ. ನಿಮಗೆ ಹಣದ ಅವಶ್ಯಕತೆ ಅಷ್ಟಾಗಿ ಕಾಡುತ್ತಿಲ್ಲ. ಆದ್ದರಿಂದ ಬಡಮಕ್ಕಳಿಗೆ ಉಚಿತವಾಗಿ ಪಾಠ ಹೇಳಿದರೆ ನಿಮ್ಮ ಉದ್ಯೋಗವನ್ನು ನೀವೇ ಮನೆಯಲ್ಲಿಸೃಷ್ಟಿಸಿಕೊಂಡಂತೆ ಅಲ್ಲವೇ? ನಿಮ್ಮಿಂದ ಬಡ ಮಕ್ಕಳಿಗೆ ಸಹಾಯವೂ ಆಗುತ್ತದೆ. ಮಾತಾಡುವ ಕಲೆಯೂ ಲಭಿಸುತ್ತದೆ!
ಹೊಲಿಗೆ ಕಸೂತಿಗಳನ್ನು ಎಲ್ಲರೂ ಕಲಿಯಬೇಕಾಗಿಲ್ಲ. ಆಸಕ್ತಿಯಿದ್ದವರು ಮಾತ್ರ ಮಾಡಬಹುದಾದ ಕೆಲಸವದು. ಅದಕ್ಕಾಗಿ ನೀವು ದುಃಖಿಸಬೇಕಾಗಿಲ್ಲ. ಇನ್ನು `ಸಾಧನೆ’ಯ ಬಗ್ಗೆ ಪೇಚಾಡಿಕೊಂಡಿದ್ದೀರಿ. ಅಲ್ಲರೀ ಎಲ್ಲರೂ ‘ಸಾಧನೆ’ ಯನ್ನೇ ಮಾಡುತ್ತಾ ಇದ್ದರೆ ನಮ್ಮ ನಿಮ್ಮಂತೆ ಸಾಮಾನ್ಯ ಜನರೂ ಇರಬೇಕಲ್ಲವೆ? ಈ ಸಾಧಕರಿಗೆ ಚಪ್ಪಾಳೆ ತಟ್ಟಲು? ಇರಲಿ ಬಿಡಿ ನಾವು ಹೀಗೇ ಇರೋಣ. ನನ್ನ ದೃಷ್ಟಿಯಲ್ಲಿಒಳ್ಳೆಯ ಹೆಂಡತಿಯಾಗಿ, ಒಳ್ಳೆಯ ತಾಯಿಯಾಗಿ ನಿಯತ್ತಾಗಿ ಇರುವುದೂ ಒಂದು ದೊಡ್ಡ ಸಾಧನೆಯೇ. ಎಷ್ಟೋಜನಕ್ಕೆ ಇದೂ ಸಾಧ್ಯವಾಗುತ್ತಿಲ್ಲ ಗೊತ್ತು ತಾನೇ? ನೀವು ಈ `ನನ್ನದೊಂದು ಕಥೆ’ ಅಂಕಣ ಓದುತ್ತಿದ್ದೀರಲ್ಲ? ಇದರಲ್ಲಿ ಹುಡುಕಿದರೆ `ತಾಯಿಯಾಗದ, ಹೆಂಡತಿಯಾಗದ’ ಎಷ್ಟೋ ಜನ ನಿಮಗೆ ಸಿಗುತ್ತಾರೆ.
ಡಾ.ಶಾಂತಾ ನಾಗರಾಜ್​ ಅವರ ಆಪ್ತ ಸಲಹೆಗಾಗಿ ಕ್ಲಿಕ್ಕಿಸಿ:
https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/
ಸರ್ಕಾರಿ ಉದ್ಯೋಗ ಇಟ್ಟುಕೊಳ್ಳಲೊ? ಪ್ರಿಯಕರನ ಹಿಂದೆ ಹೋಗಲೊ? ಮನಸ್ಸು ಗೊಂದಲದ ಗೂಡಾಗಿದೆ…

ಮೂರು ಮಕ್ಕಳ ತಂದೆಯ ಪ್ರೀತಿಗೆ ಬಿದ್ದು ಮದುವೆಯಾಗಲಾರದೇ ತೊಳಲಾಡುತ್ತಿದ್ದೇನೆ- ಪ್ಲೀಸ್​ ಪರಿಹಾರ ಹೇಳಿ

ಯಾರನ್ನೇ ಮದ್ವೆಯಾದ್ರೂ ನನ್ನ ಜತೆ ಕೂಡಲೇಬೇಕು ಎಂದಿದ್ದೇನೆ- ಇದರಲ್ಲಿ ತಪ್ಪೇನಿದೆ ಮೇಡಂ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + fifteen =
Remember me
