ನಾನು ಎಂ.ಕಾಂ ಓದುತ್ತಿರುವ ತರುಣಿ. ನನ್ನ ಬಾಲ್ಯ ತುಂಬಾ ದುಃಖಮಯವಾಗಿತ್ತು. ನಮ್ಮೆಲ್ಲರ ಪ್ರೀತಿಯ ತಮ್ಮ ನಿಧನನಾದ. ನಂತರ ಬೈಕ್ ಆಕ್ಸಿಡೆಂಟ್ ಆಗಿ ನಾನು ಆಸ್ಪತ್ರೆಗೆ ಸೇರಬೇಕಾಯಿತು. ಆಗ ತಪಾಸಣೆ ಮಾಡಿದಾಗ ನನ್ನ ಹೃದಯದಲ್ಲಿ ರಂಧ್ರವಿದೆಯೆಂದು ಗೊತ್ತಾಗಿ ಆಪರೇಷನ್ ಮಾಡಿಸಿದರು.
ಇವೆಲ್ಲದರ ನಡುವೆಯೂ ನನ್ನ ವಿದ್ಯಾಭ್ಯಾಸ ಸುಗಮವಾಗಿಯೇ ಸಾಗಿತು. ನನ್ನ 17ನೇ ವಯಸ್ಸಿನಲ್ಲಿ ನನ್ನ ಪ್ರೀತಿಯ ತಂದೆ ತೀರಿಕೊಂಡರು. ಆಗಂತೂ ನಾನೂ ಸಾಯಬೇಕೆಂದೇ ತೀರ್ಮಾನಿಸಿದೆ. ಆಗ ನನ್ನ ಪ್ರೀತಿಯ ಅಮ್ಮ ಹೇಳಿದರು, ಅವರು ನಿನಗೆ ಅಪ್ಪನಾಗುವ ಮೊದಲೇ ನನ್ನ ಗಂಡನಾಗಿದ್ದರು. ನಾನು ನಿನ್ನ ಮತ್ತು ನಿನ್ನಣ್ಣನಿಗಾಗಿ ಜೀವ ಹಿಡಿದಿರುವಾಗ ನೀನೆ ಸತ್ತರೆ ನಾನೇನು ಮಾಡಲಿ? ಆಗ ನಾನು ನಿಶ್ಚಯ ಮಾಡಿದೆ.
ಬದುಕಿದರೆ ಈ ಅಮ್ಮನಿಗಾಗಿ ಬದುಕುವೆ ಎಂದು. ನನ್ನ ಜೀವನದ ಉದ್ದೇಶ ಒಂದೇ. ಹೆಚ್ಚು ಓದಬೇಕು ಮತ್ತು ಒಳ್ಳೆಯ ಉದ್ಯೋಗ ಹಿಡಿದು, ಮದುವೆಯನ್ನೇ ಆಗದೆ, ನನ್ನಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂತ. ಏಕೆಂದರೆ ನನ್ನ ಅಣ್ಣ ನಿಷ್ಪ್ರಯೋಜಕ . ನನ್ನಪ್ಪನ ಅಂಗಡಿಯನ್ನೇನೋ ನಡೆಸುತ್ತಿದ್ದೇನೆ. ಆದರೆ ಅಮ್ಮ ಸಹಾಯ ಮಾಡಿದರೆ ಮಾತ್ರ. ಇಷ್ಟೆಲ್ಲಾ ಗಟ್ಟಿಮನಸ್ಸು ಮಾಡಿದವಳಿಗೆ ನನ್ನ ಹೈಸ್ಕೂಲ್​ ಸಹಪಾಠಿಯೊಬ್ಬ ಪ್ರಪೋಸ್ ಮಾಡಿಬಿಟ್ಟ. ಮೊದಮೊದಲು ಅವನನ್ನು ನಿರಾಕರಿಸಿದೆ.
ಅವನು ತೀರಾ ದುಂಬಾಲು ಬಿದ್ದ. ಒಳ್ಳೇ ವಿದ್ಯಾವಂತ. ಸಿ.ಎ ಮಾಡುತ್ತಿದ್ದಾನೆ. ಅವನ ಧರ್ಮ ಬೇರೆ. ಆದರೆ ನನಗೆ ಮೊದಲು ಮದುವೆಯಾಗುವುದಕ್ಕೆ ಇಷ್ಟವೇ ಇರಲಿಲ್ಲ. ಅದಕ್ಕೇ ತುಂಬಾ ಸತಾಯಿಸಿದೆ. ನಿಷ್ಠುರವಾಗಿ ನಡೆದುಕೊಂಡೆ. ಅವನ ಭಾವನೆಗಳನ್ನು ಅಸಹ್ಯದ ದೃಷ್ಟಿಯಿಂದ ನೋಡಿದೆ. `ಗಂಡು ಹೆಣ್ಣಿನ ಒಡನಾಟವೆಂದರೆ ಕೇವಲ ಸೆಕ್ಸ್ ಅಲ್ಲ’ ಅಂತ ವೇದಾಂತ ಹೇಳಿದೆ. ಕಡೆಗೆ ಅವನು ನನ್ನಿಂದ ವಿಮುಖನಾದ. ಈಗ ನನಗನ್ನಿಸುತ್ತಿದೆ. ನಾನು ಅವನನ್ನು ತುಂಬಾ ಪ್ರೀತಿಸುತ್ತಿದ್ದೇನೆ ಅಂತ! ನೀವು ಹೇಳಿ ಮೇಡಂ ನಾನು ಸರಿಯೋ ಅವನೇ ಸರಿಯೋ?
ಉತ್ತರ:ಅಬ್ಬಾ! ನಿಮ್ಮ ಹದಿನೆಂಟು ಪುಟದ ಪತ್ರ ಓದಿ ನಾನಂತೂ ಸುಸ್ತಾಗಿಬಿಟ್ಟೆ. ಅದೇನು ಬರೆದಿದ್ದೀರಾರೀ? ಪ್ರತಿದಿನದ ಪ್ರತಿಕ್ಷಣದ ನೆನಪುಗಳನ್ನೇ ದಾಖಲಿಸಿದ್ದೀರಲ್ಲ?
ನಿಮ್ಮ ನೆನಪಿಗೆ, ನಿಮ್ಮ ಬರವಣಿಗೆಗೆ ನನ್ನದೊಂದು ದೊಡ್ಡ ಸಲಾಂ! ಈಗ ನಿಮ್ಮ ಗೊಂದಲದ ವಿಷಯಕ್ಕೆ ಬರೋಣ. ನಿಮ್ಮ ಬಾಲ್ಯ ಕಷ್ಟದಾಯಕವಾಗಿತ್ತು ಅನ್ನುವ ಸ್ವಾನುಕಂಪ ನಿಮಗಿದೆ. ನಿಮ್ಮ ಹೃದಯದ ರಂಧ್ರದ ಆಪರೇಷನ್ ವಿಷಯವನ್ನೇ ದೊಡ್ಡದಾಗಿ ಭಾವಿಸುತ್ತಿದ್ದೀರಿ. ತನ್ನ ಏಳನೇ ವಯಸ್ಸಿನಲ್ಲಿ ಹೃದಯದಲ್ಲಿದ್ದ ರಂಧ್ರದ ಆಪರೇಷನ್‍ಗೆ ಒಳಗಾಗಿ, ನಂತರ ಯೌವನದಲ್ಲಿ ಪರ್ವತಾರೋಹಿಯಾದ ಯುವಕನೊಬ್ಬನ ಕಥೆಯನ್ನು ಇದೇ ವಿಜಯವಾಣಿಯಲ್ಲಿ ಓದಿದ್ದೆ. ನನ್ನ ಪರಿಚಿತ ಹುಡುಗನೊಬ್ಬ ಇದೇ ರೀತಿಯ ಚಿಕಿತ್ಸೆಗೆ ಒಳಗಾಗಿ ಈಗ ಹೆಂಡತಿ ಮಕ್ಕಳೊಂದಿಗೆ ಚೆನ್ನಾಗಿದ್ದಾನೆ. ನಿಮಗೇ ಡಾಕ್ಟರ್ ಹೇಳಿದ್ದರೂ ನಿಮ್ಮನ್ನು ಮದುವೆಯಾಗಲು ಬಂದವರಿಗೆಲ್ಲ ಈ ವಿಷಯ ತಿಳಿಸಿ ನೀವೇ ಗೊಂದಲವನ್ನು ಸೃಷ್ಟಿಸಿಕೊಳ್ಳುತ್ತಿದ್ದೀರಿ. ಮತ್ತೊಂದು ನಿಮ್ಮಲ್ಲಿರುವ ದ್ವಂದ್ವವೆಂದರೆ `ಕಡೆಯತನಕ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು’ ಎಂದು ನಿಮಗೆ ನೀವೇ ಮಾಡಿಕೊಂಡಿರುವ ನಿಯಮ! ಈ ಹೃದಯದ ವಿಷಯ ಮತ್ತು ಈ ನಿಮ್ಮ ನಿಯಮ ಎರಡೂ ಸೇರಿ ನಿಮ್ಮನ್ನು ಅಸಹಜ ನಡವಳಿಕೆಗೆ ಗುರಿಮಾಡುತ್ತಿದೆ.
ನಿಮ್ಮ ಗೆಳೆಯ ತನ್ನ ವಯಸ್ಸಿಗೆ ಸರಿಯಾಗಿಯೇ ನಡೆದುಕೊಳ್ಳುತ್ತಿದ್ದಾನೆ. ಸಂಗಾತಿಗಳು ಎಂದು ಒಬ್ಬರನ್ನೊಬ್ಬರು ಒಪ್ಪಿಕೊಂಡು ಗೆಳೆತನ ಸಾಕಷ್ಟು ಬಲಿತ ಮೇಲೆ ಇಬ್ಬರೂ ವೈಯುಕ್ತಿಕ ವಿಷಯ ಮಾತಾಡುವುದು, ಸೆಕ್ಸ್ ಬಗ್ಗೆ ಮಾತಾಡುವುದು ತೀರಾ ಸಹಜ. ಮತ್ತು ಇಂಥ ಮಾತುಗಳು ಪರಸ್ಪರರಲ್ಲಿ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಏಕತೆಯನ್ನು ತಂದುಕೊಡುತ್ತದೆ.
ನಿಮ್ಮ ಗೆಳೆಯನನ್ನು ಸಂಯಮಿ ಎಂದೇ ಶ್ಲಾಘಿಸಬೇಕು.ನೀವು ಇಷ್ಟು ನಿರುತ್ತೇಜಕರಾಗಿದ್ದರೂ ನಿಮ್ಮೊಂದಿಗೆ ಸಹಜವಾಗಿಯೇ ಸರಿದಾರಿಗೆ ತರಲು ಪ್ರಯತ್ನಿಸಿದ್ದಾನೆ. ನೀವೇ ಇಲ್ಲದ ಬೇಲಿಗಳನ್ನು ಮಾಡಿಕೊಂಡು ಅದರೊಳಗೆ ಸಿಲುಕಿ ಒದ್ದಾಡುತ್ತಿದ್ದೀರಿ. ನಿಮ್ಮ ತಾಯಿ `ಧೈರ್ಯವಂತೆ, ಗಟ್ಟಿಗಿತ್ತಿ’ ಎಂದೆಲ್ಲ ಬರೆದಿದ್ದೀರಿ. ಆಕೆ ಗಂಡನಿಲ್ಲದೇ ನಿಮ್ಮ ಮತ್ತು ನಿಮ್ಮಣ್ಣನ ಬದುಕನ್ನು ನೇರಗೊಳಿಸಿದ್ದಾರೆ.
ದಾರಿಬಿಟ್ಟ ಮಗನಿಗೆ ಸಹಾಯಕರಾಗಿ ನಿಂತು ಸರಿದಾರಿಗೆ ತಂದಿದ್ದಾರೆ. ಅಂಥವರು ನಿಮ್ಮ `ಸಾಕುವಿಕೆ’ ಯನ್ನು ಬಯಸುತ್ತಾರೆಯೇ? ನೀವು ಮದುವೆಯಾಗದೆ ಕಡೆಯವರೆಗೆ ಅವರಿಗಾಗಿ ಬದುಕುತ್ತೇನೆಂದರೆ ಆ ತಾಯಿಯ ಜೀವಕ್ಕೆ ಸುಖವೆನಿಸುತ್ತದೆಯೇ? ಇನ್ನಾದರೂ ಹೃದಯದ ವಿಚಾರವನ್ನು ಮರೆತುಬಿಡಿ. ವೈದ್ಯರೇ ಹೇಳಿರುವಾಗ ನಿಮ್ಮದೇನು ಕಿರಿಕಿರಿ? ತಾಯಿಯ ಬಗ್ಗೆಯ ಭ್ರಮೆಯನ್ನು ಬಿಡಿ. ತಮ್ಮ ಬದುಕನ್ನು ತಾವು ನೋಡಿಕೊಳ್ಳುವ ಸಾಮಥ್ರ್ಯ ಅವರಿಗಿದೆ. `ನಾನು ನಿನಗಾಗಿ ಮದುವೆಯಾಗುವುದಿಲ್ಲ’ ಎಂದು ಅವರನ್ನು ಅವಮಾನಿಸಬೇಡಿ. ಮತ್ತು ನೋಯಿಸ ಬೇಡಿ. ನಿಮ್ಮ ಹುಡುಗನೊಡನೆ ಮತ್ತೊಮ್ಮೆ ಮಾತಾಡಿ. ನಿಮ್ಮ `ಮಡಿವಂತಿಕೆ’ಯನ್ನೆಲ್ಲ ಪಕ್ಕಕ್ಕಿಟ್ಟು ಸಹಜ ನಡವಳಿಕೆಯಲ್ಲಿ ಸ್ನೇಹ ಮುಂದುವರಿಸಿ. ಬಾಂಧವ್ಯವೂ ಬೆಸೆಯಬಹುದು!
ಡಾ.ಶಾಂತಾ ನಾಗರಾಜ್​ ಅವರ ಆಪ್ತ ಸಲಹೆಗಾಗಿ ಕ್ಲಿಕ್ಕಿಸಿ:
https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/
ಮದುವೆಗೆ ಕೆಲವೇ ದಿನವಿದ್ದು, ಈಗ ಅಕ್ರಮ ಸಂಬಂಧದ ಬಗ್ಗೆ ಹೇಳುತ್ತಿದ್ದಾಳೆ- ತಲೆ ಕೆಟ್ಟುಹೋಗಿದೆ…

ಮಕ್ಕಳಿಗಾಗಿ ಮದುವೆಯಾದರು: ಎರಡನೇ ಪತ್ನಿಯಾದ ಮಾತ್ರಕ್ಕೆ ನನಗೆ ಬಯಕೆಗಳು ಇರುವುದು ತಪ್ಪೆ?

ಈ ಪತ್ರವನ್ನು ಗುಟ್ಟಾಗಿ ಬರೆಯುತ್ತಿದ್ದೇನೆ. ಈ ನತದೃಷ್ಟೆಗೆ ದಯವಿಟ್ಟು ನೆರವಾಗಿ ಮೇಡಂ…

ಸಂಬಳ ಕೊಡುತ್ತೇನೆಂದಾಕೆ ವಿಚ್ಛೇದನದ ಬೆದರಿಕೆ ಹಾಕುತ್ತಿದ್ದಾಳೆ: ಪತ್ನಿಯ ಆಸ್ತಿಯಲ್ಲಿ ಪಾಲು ಸಿಗುವುದೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × one =
Remember me
