ಪ್ರಶ್ನೆ : ನಾನು ಎಂ.ಬಿ.ಎ ಪದವೀಧರೆ. ಮದುವೆಯ ವಿಚಾರದಲ್ಲಿ ಮೋಸಹೋಗಿದ್ದೇನೆ. ಯಾವುದೋ ವಧೂವರರ ಕಾಲಂ ನೋಡಿ ದೂರದ ಊರಿನ ವರನನ್ನು ನಾಲ್ಕುವರ್ಷಗಳ ಹಿಂದೆ ಮದುವೆಯಾದೆ. ಮದುವೆಗೆ ಮೊದಲು ಒಳ್ಳೆಯ ಕೆಲಸದಲ್ಲಿದ್ದೆ. ಗಂಡ ’ ನಮ್ಮದೇ ವ್ಯಾಪಾರವ್ಯವಹಾರವಿದೆ, ಅದನ್ನೇ ನೋಡಿಕೋ ’ ಎಂದು ನಂಬಿಸಿದ್ದರಿಂದ ಬೆಂಗಳೂರಿನಲ್ಲಿದ್ದ ಕೆಲಸವನ್ನು ಬಿಟ್ಟು ಬಂದೆ.
ನಮ್ಮವರದು ಒಂದು ಅಂಗಡಿಯೇನೋ ಇದೆ. ಆದರೆ ಅವರ ತಮ್ಮಂದಿರೇ ಅದನ್ನು ನೋಡಿಕೊಳ್ಳುತ್ತಿದ್ದಾರೆ. ನನಗೇನೂ ಇಲ್ಲಿ ಕೆಲಸವಿಲ್ಲ. ಇವರು ದೊಡ್ಡ ಮಗ, ಇಬ್ಬರು ತಮ್ಮಂದಿರಿಗೂ ಮೊದಲೇ ಮದುವೆಯಾಗಿ ಮಕ್ಕಳಿದ್ದಾರೆ. ಇವರಿಗೆ ಯೌವನದಲ್ಲಿ ಏನೋ ಖಾಯಿಲೆ ಇತ್ತಂತೆ ಅದಕ್ಕೇ ಮೊದಲು ಮದುವೆಯಾಗಲಿಲ್ಲವಂತೆ. ಈಗಲೂ ಔಷಧಿಯನ್ನು ತೆಗೆದುಕೊಳ್ಳುತ್ತಾರೆ. ನಮ್ಮದು ಒಟ್ಟುಕುಟುಂಬ. ಇಲ್ಲಿ ನಾನು ತೀರಾ ಕಸಕ್ಕಿಂತಾ ಕಡೆ. ನನ್ನ ಗಂಡನಿಗೆ ಹೆಂಡತಿಯ ಬಗ್ಗೆ ಆಸಕ್ತಿಯೇ ಇಲ್ಲ. ೪ವರ್ಷಗಳಿಂದ ದೇಹಸಂಪರ್ಕವೂ ಇಲ್ಲ. ಮಕ್ಕಳಾಗುವ ಸಾಧ್ಯತೆಯೇ ಇಲ್ಲ. ಈ ಬಗ್ಗೆ ಕೇಳಿದರೆ ಬರೀ ಜಗಳ.
ಹೋಗಲಿ ಕೆಲಸಕ್ಕಾದರೂ ಹೋಗುತ್ತೇನೆಂದರೆ ಅದಕ್ಕೂ ಗಂಡ ಒಪ್ಪುವುದಿಲ್ಲ. ನನ್ನ ಗಂಡನ ತಾಯಿಗೆ ನನ್ನನ್ನು ಕಂಡರೆ ಇಷ್ಟವಿಲ್ಲ. ಮಕ್ಕಳಾಗಿದ್ದಕ್ಕೆ ನನ್ನನ್ನೇ ದೂಷಿಸುತ್ತಾರೆ. ಅವರು ನನ್ನ ಗಂಡನಿಗೆ ಏನೇನೋ ಚಾಡಿ ಹೇಳಿಕೊಟ್ಟು ಮನೆಯಿಂದ ಹೊರಗೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಡೈವೊರ್ಸ್ ಕೊಡುತ್ತೇನೆಂದು ಹೆದರಿಸುತ್ತಾರೆ. ನಾನು ಈ ವಯಸ್ಸಿನಲ್ಲಿ ಎಲ್ಲಿಗೆ ಹೋಗಲಿ? ಕೈಯಲ್ಲಿ ಪುಡಿಗಾಸೂ ಇಲ್ಲ. ವಕೀಲರ ಮುಖಾಂತರ ನ್ಯಾಯಕ್ಕಾಗಿ ಹೋರಾಡಲು ಹಣವಿಲ್ಲ. ಬದುಕಿಗೆ ಏನು ಮಾಡಲಿ? ನನಗೆ ಎಲ್ಲಿಂದ ಸಹಾಯ ಸಿಗಬಹುದು? ನನ್ನ ವಯಸ್ಸಿಗೆ ಸರ್ಕಾರೀ ಕೆಲಸವೂ ಸಿಗುವುದಿಲ್ಲ. ಸತ್ತೇ ಹೋಗೋಣ ಎನ್ನಿಸುತ್ತಿದೆ. ಏನು ಮಾಡಲಿ?
ಉತ್ತರ:ನಿಮ್ಮ ನಾಲ್ಕು ಪುಟದ ಪತ್ರ ಓದಿ ತುಂಬ ಬೇಸರವಾಯಿತು. ಅಲ್ಲ ವಿದ್ಯೆಯೆನ್ನುವುದು ನಮಗೆ ಗಟ್ಟಿ ವ್ಯಕ್ತಿತ್ವವನ್ನು ಕೊಡುತ್ತದೆಯಲ್ಲವೇ? ನೀವು ನೋಡಿದರೆ ಎಂ.ಬಿ.ಎ ಪದವೀಧರೆ! ಅದೂ ಫ಼ೈನಾನ್ಸ್ ವಿಷಯದಲ್ಲಿ! ಇಂಥಾ ನೀವು ಸ್ವಂತ ಬದುಕನ್ನು ಕಟ್ಟಿಕೊಳ್ಳಲು ಹೆದರುತ್ತಾ ವಿದ್ಯೆಯೇ ಇಲ್ಲದವರ ಹಾಗೆ ಪತ್ರದ ತುಂಬಾ ’ ಏನು ಮಾಡಲಿ? ಎಲ್ಲಿಗೆ ಹೋಗಲಿ ’ ಎಂದು ದುಃಖಿಸಿದ್ದೀರಲ್ಲ? ಇದು ನೀವೇ ನಿಮ್ಮ ವಿದ್ಯೆಗೆ ಮಾಡುತ್ತಿರುವ ಅವಮಾನವಲ್ಲವೇ? ಸ್ವಲ್ಪ ನಿಧಾನವಾಗಿ ಯೋಚಿಸಿ.
ನಿಮಗಿನ್ನೂ ೩೮ವರ್ಷ. ೪೫ ಅಲ್ಲ, ೫೦ ಅಲ್ಲ. ಕೇವಲ ೩೮. ಈ ವಯಸ್ಸಿಗೆ ದೇಹದಲ್ಲಿ ಶಕ್ತಿ, ತಲೆಯಲ್ಲಿ ವಿದ್ಯೆಯ ಶಕ್ತಿ ಎರಡೂ ಧಾರಾಳವಾಗಿ ನಿಮ್ಮ ಹತ್ತಿರ ಇದೆಯಲ್ಲವೇ? ಇಷ್ಟು ಶಕ್ತಿವಂತರಾದ ನೀವು ’ ಗಂಡ ಡೈವೊರ್ಸ್ ಕೊಡುತ್ತೇನೆಂದು ಹೆದರಿಸುತ್ತಾರೆ ’ ಎಂದು ಬರೆಯುತ್ತೀರಲ್ಲ? ನಿಜವಾಗಿ ನೋಡಿದರೆ ನೀವೇ ಅವರನ್ನು ಹೆದರಿಸಬಹುದು. ಆ ಶಕ್ತಿ ನಿಮಗೆ ಇದೆ.
ನಿಮಗೆ ಮೋಸ ಮಾಡಿರುವವರೆ ಅವರು. ಕಾನೂನಿನ ದೃಷ್ಟಿಯಿಂದಲೂ ಅವರು ಅಪರಾಧಿಗಳು. ದಾಂಪತ್ಯವನ್ನು ನಡೆಸಲು ದೈಹಿಕವಾಗಿ ಶಕ್ತಿಯಿಲ್ಲದ ವ್ಯಕ್ತಿ, ತನ್ನ ಕೊನೆಗಾಲಕ್ಕೆ ಮನೆಯ ಕೆಲಸಕ್ಕೆ ಒಬ್ಬ ಆಳಿರಲಿ ಎಂದು ಮೋಸಮಾಡಿ ನಿಮ್ಮನ್ನು ಮದುವೆಯಾಗಿದ್ದಾರೆ. ಅಲ್ಲದೇ ನಿಮ್ಮನ್ನು ಮಾನಸಿಕವಾಗಿ ಅತ್ತೆ ಮತ್ತು ಗಂಡ ಹಿಂಸಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮೂರಿನ ಪೋಲೀಸರಿಗೆ ಕಂಪ್ಲೇಂಟ್ ಕೊಡಿ.
ನಿಮ್ಮ ತವರಿನ ಬಗ್ಗೆ ನೀವು ಏನೂ ಬರೆದಿಲ್ಲ. ಮೊದಲು ಆ ಮನೆಯನ್ನು ಬಿಟ್ಟು ಬನ್ನಿ. ನೀವು ಮದುವೆಗೆ ಮುನ್ನ ಮಾಡುತ್ತಿದ್ದ ಉದ್ಯೋಗದ ಕಂಪನಿಯಲ್ಲೇ ಉದ್ಯೋಗ ಸಿಗುತ್ತದಾ ಪ್ರಯತ್ನಿಸಿ. ಸರ್ಕಾರೀ ಕೆಲಸವೇ ಏಕೆ ಬೇಕು? ಮೊದಲು ಸಣ್ಣ ಪುಟ್ಟ ಯಾವುದಾದರೂ ಕೆಲಸಕ್ಕೆ ಸೇರಿ. ನಂತರ ನಿಧಾನವಾಗಿ ಒಳ್ಳೆಯ ಕೆಲಸವನ್ನು ಹುಡುಕಿಕೊಳ್ಳಿ. ಎರಡೆರಡು ಪದವಿಗಳನ್ನು ಇಟ್ಟುಕೊಂಡಿರುವ ನೀವು ಬರೀ ಭಾವುಕರಾಗಿ ಯೋಚಿಸಬಾರದು. ನಿಮ್ಮಲ್ಲಿರುವ ಜಾಣತನವನ್ನು ಬಳಸಿ ನಿಮ್ಮ ಕಾಲಮೇಲೆ ನೀವು ನಿಲ್ಲುವ ಪ್ರಯತ್ನ ಮಾಡಿ. ನಿಮ್ಮ ಗಂಡನ ಜೊತೆ ಬದುಕುವುದರ ಬಗ್ಗೆ ಆ ನಂತರ ಯೋಚಿಸಬಹುದು. ಅದಕ್ಕೆ ವಕೀಲರೂ ನ್ಯಾಯಾಲಯವೂ ಸಹಾಯ ಮಾಡುತ್ತದೆ.
ಡಾ.ಶಾಂತಾ ನಾಗರಾಜ್​ ಅವರ ಆಪ್ತ ಸಲಹೆಗಾಗಿ ಕ್ಲಿಕ್ಕಿಸಿ:
https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/
ಇಲ್ಲೊಬ್ಬಳು ಸುಂದರಿ ಗಂಡನ ವಿರುದ್ಧ ಹೇಳಿದ್ದನ್ನೇ ಹೇಳ್ತಾ ಇರ್ತಾಳೆ- ಅವಳನ್ನು ನಿಭಾಯಿಸೋದು ಹೇಗೆ?

ಸ್ನೇಹಿತೆಯ ದೈಹಿಕ ಸಂಪರ್ಕ ಮಾಡಿ ಈಗ ಮದುವೆಯಾಗಲಾಗದೇ ಧರ್ಮಸಂಕಟದಲ್ಲಿದ್ದೇನೆ- ಏನು ಮಾಡಲಿ?

ಗಂಡ ಊರಿನಲ್ಲಿ ಇಲ್ಲದಾಗ ನನ್ನ ಕರೆದು ಏನೇನೋ ಮಾಡಿದಳು- ಈಗ ದಿಕ್ಕೇ ತೋಚದಾಗಿದೆ, ಏನು ಮಾಡಲಿ?

ಮದುವೆಯಾಗುವ ಆಸೆ- ಆದರೆ ಈ ಒಂದು ಸಮಸ್ಯೆಯಿಂದ ಕುಗ್ಗಿಹೋಗಿದ್ದೇನೆ: ಪ್ಲೀಸ್ ಪರಿಹಾರ ಹೇಳಿ

ಮೊದಲ ರಾತ್ರಿಯೇ ಪತ್ನಿಗೆ ಗುಟ್ಟು ಹೇಳಿದೆ- ಆಕೆ ಕ್ಷಮಿಸಿದರೂ ನನ್ನ ಮೇಲೆಯೇ ನನಗೆ ಅಸಹ್ಯ ಹುಟ್ಟಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 5 =
Remember me
