ಪ್ರಶ್ನೆ: ನನಗೆ ಮದುವೆಯಾಗಿ ಎರಡು ವರ್ಷಗಳಾಗಿವೆ. ನನ್ನ ಹೆಂಡತಿಯ ಅಣ್ಣ ಮತ್ತು ಸೋದರ ಮಾವ ಬಂದು ನನ್ನ ಮೇಲೆ ಧಮಕಿ ಹಾಕಿ ನನ್ನ ಹೆಂಡತಿಯನ್ನು ತವರಿಗೆ ಕರೆದುಕೊಂಡು ಹೋಗಿದ್ದಾರೆ. ಅವಳು ಈಗ ನನ್ನ ಜತೆ ತೋಟದ ಮನೆಯಲ್ಲಿ ಇರಲು ಒಪ್ಪುತ್ತಿಲ್ಲ. ಅವಳಿಗೆ ಅಲ್ಲಿ ಒಬ್ಬಳೇ ಇರಲು ಅಂಜಿಕೆ ಎಂದು ಸುಳ್ಳು ಕಾರಣ ಕೊಡುತ್ತಿದ್ದಾಳೆ. ಷಹರಿನಲ್ಲಿ ಮನೆ ಮಾಡಿದರೆ ಬರುತ್ತೇನೆ ಎನ್ನುತ್ತಿದ್ದಾಳೆ.
ಷಹರಿನಿಂದ 15 ಕಿಲೋಮೀಟರ್ ದೂರದಲ್ಲಿ ಒಂದು ಹಳ್ಳಿಯಲ್ಲಿ ನಮ್ಮ ಸುಸಜ್ಜಿತ ಮನೆಯಿದೆ. ಅದರಲ್ಲಿ ನಮ್ಮ ತಂದೆ ತಾಯಿ ಇದ್ದಾರೆ. ಅಲ್ಲಿ ಇರಲೂ ಅವಳು ಒಪ್ಪುತ್ತಿಲ್ಲ. ಬೇರೆ ಬಾಡಿಗೆ ಮನೆ ಮಾಡಿ ಷಹರಿನಲ್ಲಿ ಇಡಿ ಎನ್ನುತ್ತಾಳೆ. ಅದಕ್ಕೆ ನನ್ನ ಹತ್ತಿರ ಹಣವಿಲ್ಲ. ನಾನು ಸಾಧಾರಣ ದರ್ಜೆಯ ಕೃಷಿಕ. ವಯಸ್ಸಾದ ತಂದೆ ತಾಯಿಯನ್ನು ನಾನು ಕೈ ಬಿಡಲು ಆಗುವುದಿಲ್ಲ. ನನ್ನಿಂದ ನಮ್ಮ ಹಿರಿಯರ ಹೊಲ ಮನೆ ಮಾರಿಸಿ ನನ್ನನ್ನು ತಂದೆ ತಾಯಿಯಿಂದ ಬೇರೆ ಮಾಡುವ ಹುನ್ನಾರದಲ್ಲಿ ನನ್ನ ಹೆಂಡತಿ ಇದ್ದಾಳೆ.
ಅವಳು ಕೋರ್ಟಿಗೆ ಹೋಗುತ್ತೇನೆ ಎಂದು ಹೆದರಿಸುತ್ತಿದ್ದಾಳೆ. ಅವಳು ಕೋರ್ಟಿಗೆ ಹೋದರೆ ನ್ಯಾಯಾಲಯ ನಾನು ಬೇರೆ ಬಾಡಿಗೆ ಮನೆಯಲ್ಲಿ ಅವಳನ್ನಿಡಬೇಕು ಎಂದು ಆದೇಶ ಮಾಡುತ್ತದೆಯೇ? ನಾನು ದಾಂಪತ್ಯ ಜೀವನದ ಹಕ್ಕು ಪುನರ್ ಸ್ಥಾಪನೆಗೆ ಹಾಕಿದರೆ ಅದು ನಿಲ್ಲುತ್ತದೆಯೇ? ಅವಳು ತೀರ್ಪು ನನ್ನ ಕಡೆ ಆದರೂ , ನನ್ನ ಜತೆ ಜೀವನ ಮಾಡಲು ಬರದಿದ್ದರೆ ನಾನು ಡಿವೋರ್ಸಿಗೆ ಹಾಕಬಹುದೇ? ನನ್ನ ಹೆಸರಲ್ಲಿ ಆಸ್ತಿ ಇಲ್ಲ. ನನ್ನ ಕೂಲಿ ಒಂದು ದಿನಕ್ಕೆ 100-150 ರೂಪಾಯಿ. ಅದರಲ್ಲಿ ಅವಳಿಗೆ ಎಷ್ಟು ಕೊಡಬೇಕು? ಹಿರಿಯರ ಆಸ್ತಿಯಲ್ಲಿ ಅವಳಿಗೆ ಹಕ್ಕು ಬರುವುದೇ? ಯಾವಾಗ ಮತ್ತು ಹೇಗೆ ತಿಳಿಸಿ.
ಉತ್ತರ:ನೀವು ಅನಾವಶ್ಯಕವಾಗಿ ವಿಪರೀತವಾಗಿ ಯೋಚಿಸುವುದನ್ನು ಕೈಬಿಡಿ. ಧೈರ್ಯವಾಗಿ ದಾಂಪತ್ಯ ಜೀವನದ ಹಕ್ಕು ಪುನರ್ ಸ್ಥಾಪನೆಗೆ ಅರ್ಜಿ ಸಲ್ಲಿಸಿ. ಪ್ರಕರಣದಲ್ಲಿ ನಿಮ್ಮ ಪತ್ನಿಗೆ ನೋಟಿಸ್​ ಜಾರಿ ಆದಮೇಲೆ ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ಕೇಳಿಕೊಳ್ಳಿ. ಮಧ್ಯಸ್ಥಿಕೆಯಲ್ಲಿ ನುರಿತ ಮಧ್ಯಸ್ಥಿಕೆಗಾರರ ಸಹಾಯದಿಂದ ನಿಮ್ಮಿಬ್ಬರ ಮತ್ತು ಎರಡೂ ಕಡೆಯ ಹಿರಿಯರ ನಡುವೆ ಮಾತುಕತೆ ಆದಾಗ ನಿಮ್ಮ ಎಲ್ಲ ಸಮಸ್ಯೆಗಳಿಗೂ ಒಂದೇ ಬಾರಿಗೆ ಅಂತಿಮ ಪರಿಹಾರ ಸಿಗಬಹುದು. ಒಂದು ವೇಳೆ ನಿಮ್ಮ ಪತ್ನಿ ಯಾವುದೇ ಒಪ್ಪಂದಕ್ಕೆ ಬರದಿದ್ದರೆ ಪ್ರಕರಣವನ್ನು ನಡೆಸಿ. ಪ್ರಕರಣದಲ್ಲಿ ತೀರ್ಪು ನಿಮ್ಮ ಕಡೆ ಆದ ಮೇಲೂ ಅವಳು ಅದನ್ನು ಮಾನ್ಯ ಮಾಡದೇ ಹೋದರೆ ಆ ನಂತರ ನೀವು ವಿಚ್ಛೇದನಕ್ಕೆ ಪ್ರಕರಣವನ್ನು ದಾಖಲಿಸಬಹುದು.
ನಿಮ್ಮ ಪತ್ನಿ ನ್ಯಾಯಾಲಯಕ್ಕೆ ಹೋದರೆ, ನಿಮ್ಮ ಆರ್ಥಿಕ ಮತ್ತು ಸಾಂಸಾರಿಕ ಪರಿಸ್ಥಿತಿಯನ್ನು ಗಮನಿಸಿ ನೀವು ಆಕೆಯನ್ನು ಬೇರೆ ಬಾಡಿಗೆಯ ಮನೆಯಲ್ಲಿ ಇಡಿ ಎನ್ನುವ ಆದೇಶವನ್ನು ನಿಮ್ಮ ವಿರುದ್ಧ ನ್ಯಾಯಾಲಯ ಮಾಡುವ ಸಂಭವ ಬಹಳ ಕಡಿಮೆ ಇರುತ್ತದೆ.
ಇನ್ನು ಜೀವನಾಂಶದ ವಿಷಯಕ್ಕೆ ಬಂದರೆ, ನಿಮ್ಮ ಪತ್ನಿಗೆ ತನ್ನನ್ನು ತಾನು ಪೋಷಿಸಿಕೊಳ್ಳುವ ಚೈತನ್ಯ ಇಲ್ಲದೇ ಹೋದರೆ ನೀವು ಅವಳಿಗೆ ಜೀವನಾಂಶ ಕೊಡಬೇಕಾಗುತ್ತದೆ. ನಿಮ್ಮ ಗಳಿಕೆಯಲ್ಲಿ 1/3 ರಿಂದ 1/5 ರಷ್ಟು ಭಾಗವನ್ನು ಸಾಮಾನ್ಯವಾಗಿ ಜೀವನಾಂಶದ ರೂಪದಲ್ಲಿ ಪತ್ನಿಗೆ ಕೊಡುವಂತೆ ನ್ಯಾಯಾಲಯ ಆದೇಶ ಮಾಡುತ್ತದೆ.
ಹಿಂದು ಪತ್ನಿಗೆ ಪತಿಯ ಆಸ್ತಿಯಲ್ಲಿ ಪತಿ ಬದುಕಿರುವವರೆಗೆ ಯಾವ ಹಕ್ಕೂ ಇರುವುದಿಲ್ಲ. ಹಿಂದೂ ಪತ್ನಿಗೆ ಪತಿಯ ಹಿರಿಯರ ಆಸ್ತಿಯ ಮೇಲೆ ಸಹ ಯಾವ ಹಕ್ಕೂ ಇರುವುದಿಲ್ಲ. ನಿಮ್ಮ ತಂದೆ ತಾಯಿ ಬದುಕಿರುವುದರಿಂದ ಅವರ ಆಸ್ತಿಯನ್ನು ನಿಮ್ಮ ಪತ್ನಿ ಕೇಳಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ. ಅವರು ತೀರಿಕೊಂಡ ಮೇಲೂ ಆಸ್ತಿ ನಿಮಗೆ ಬಂದ ಮೇಲೂ ಅವಳು ಆಸ್ತಿಯಲ್ಲಿ ಹಕ್ಕನ್ನು ಕೇಳಲಾಗುವುದಿಲ್ಲ. ನಿಮ್ಮ ಪತ್ನಿಯ ಹಕ್ಕು ಕೇವಲ ಜೀವನಾಂಶಕ್ಕೆ ಮಾತ್ರ ಸೀಮಿತವಾಗಿರುತ್ತದೆ.
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ:
https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/
ಅಕ್ರಮ ಸಂಬಂಧ ಇಟ್ಟುಕೊಂಡ ಪತ್ನಿ ವಿಚ್ಛೇದನವನ್ನೂ ಕೊಡ್ತಿಲ್ಲ- ಕಾನೂನಿನಡಿ ನಾನು ಏನು ಮಾಡಬಹುದು?

ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿ ಉಯಿಲು ಬರೆದರೆ ಅದು ಮಾನ್ಯವಾಗುತ್ತಾ?

ಅಮ್ಮ ದಾನಪತ್ರದ ಮೂಲಕ ಮೊದಲು ನನಗೆ ಆಸ್ತಿ ಬರೆದಿದ್ದು, ಈಗ ಅಕ್ಕನಿಗೆ ಬರೆದಿದ್ದಾರೆ- ಯಾರಿಗೆ ಸಿಗುತ್ತೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × one =
Remember me
