ಚಂದ್ರಾಪುರ (ಮಹಾರಾಷ್ಟ್ರ):ಮಹಾನ್​ ಸಾಧಕಿ, ವಿಶ್ವ ಸಂಸ್ಥೆಯಿಂದ ಯಂಗ್​ ಗ್ಲೋಬಲ್​ ಲೀಡರ್​ ಎಂಬ ಬಿರುದು ಪಡೆದ, ಎಂಬಿಬಿಎಸ್​ ಗೋಲ್ಡ್​ ಮೆಡಲಿಸ್ಟ್​ ಡಾ.ಶೀತಲ್ ವಿಕಾಸ್ ಆಮ್ಟೆ ಕರಜಗಿ ನಿಗೂಢವಾಗಿ ಇಂದು ಮೃತಪಟ್ಟಿದ್ದಾರೆ.
ಸಮಾಜಸೇವೆಯ ಮೂಲಕವೇ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಬಾಬಾ ಆಮ್ಟೆ ಅವರ ಮೊಮ್ಮಗಳೂ, ಆನಂದ್​ವನದಲ್ಲಿರುವ ಮಹಾರೋಗಿ ಸೇವಾ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೂ (ಸಿಇಒ) ಆಗಿದ್ದ ಡಾ.ಶೀತಲ್ ಮೃತಪಟ್ಟಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೇಲ್ನೋಟಕ್ಕೆ ಸಾಬೀತಾಗಿದೆ.
ವಿಷದ ಚುಚ್ಚುಮದ್ದನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಸತ್ಯ ಇನ್ನಷ್ಟೇ ಹೊರಬೀಳಬೇಕಿದೆ.
'War and Peace'#acrylicon canvas.30 inches x 30 inches.pic.twitter.com/yxfFhuv89z
— Dr. Sheetal Amte-Karajgi (@AmteSheetal)November 30, 2020

ಇಂದು ಬೆಳಗ್ಗೆ 5,45ಕ್ಕೆ ‘ವಾರ್​ ಆ್ಯಂಡ್​ ಪೀಸ್’​ ಹೆಸರಿನಲ್ಲಿ ಚಿತ್ರವೊಂದನ್ನು ತಮ್ಮ ಇನ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ ಶೀತಲ್​. ಇದಾದ ಕೆಲವೇ ಗಂಟೆಗಳಲ್ಲಿ ಶವವಾಗಿದ್ದಾರೆ. ಇದರ ನಿಗೂಢತೆ ಏನು ಎಂದು ತಿಳಿಯಬೇಕಿದೆ.
ಎಂಬಿಬಿಎಸ್​ ಪದವಿಯಲ್ಲಿ ಚಿನ್ನದ ಪದಕ ಪಡೆದಿರುವ ಡಾ.ಶೀತಲ್​ ಅವರಿಗೆ 2017ರಲ್ಲಿ ವಿಶ್ವಸಂಸ್ಥೆಯ ಅಂಗಸಂಸ್ಥೆ ವರ್ಲ್ಡ್​ ಎಕಾನಾಮಿಕ್​ ಫೋರಂನಿಂದ ಯಂಗ್​ ಗ್ಲೋಬಲ್​ ಲೀಡರ್​ ಪ್ರಶಸ್ತಿಯೂ ಲಭಿಸಿತ್ತು.
ಶೀತಲ್ ಅವರು ಸಿಇಒ ಆಗಿರುವ ಮಹಾರೋಗಿ ಸೇವಾ ಸಮಿತಿಯ ಅಕ್ರಮಗಳ ಬಗ್ಗೆ ಕೆಲವೊಂದು ಆರೋಪಗಳನ್ನು ಇತ್ತೀಚೆಗೆ ಮಾಡಿದ್ದರು. ಅಕ್ರಮಗಳಿಗೆ ಸಂಬಂಧಿಸಿದಂತೆ ಟ್ರಸ್ಟ್ ಮ್ಯಾನೇಜ್‌ಮೆಂಟ್ ಮತ್ತು ಅವರ ಕುಟುಂಬದ ಬಗ್ಗೆ ಆರೋಪ ಮಾಡಿದ್ದರು. ಇದರ ವಿಡಿಯೋ ಕೂಡ ಮಾಡಲಾಗಿತ್ತು. ಇದನ್ನು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಲಾಗಿತ್ತು. ಆದರೆ ಎರಡೇ ಗಂಟೆಗಳಲ್ಲಿ ಅದನ್ನು ಡಿಲೀಟ್​ ಮಾಡಲಾಗಿತ್ತು.
ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದ ಸಮಿತಿ ಇದು ನಮ್ಮ ಮೇಲೆ ಮಾಡಿರುವ ವೃಥಾ ಆರೋಪವಷ್ಟೇ ಎಂದು ಇದೇ 22ರಂದು ಮಾಧ್ಯಮಗಳಿಗೆ ಹೇಳಿಕೆ ನೀಡಿತ್ತು. ಇದೀಗ ಶೀತಲ್​ ಅವರು ಮೃತಪಟ್ಟಿದ್ದು, ಸತ್ಯಾಂಶ ಬಹಿರಂಗವಾಗಬೇಕಿದೆ.
ಡಾ.ಶೀತಲ್​ ಅವರ ಬಗ್ಗೆ ವಿಜಯವಾಣಿಯಲ್ಲಿ 2016ರ ನವೆಂಬರ್​ 30ರಂದು ಬಂದಿರುವ ವಿಶೇಷ ಲೇಖನ ಇಲ್ಲಿದೆ ನೋಡಿ…

ನಿಜ, ಬರೀ ನಮಗಾಗಿ ಬದುಕುತ್ತಿದ್ದರೆ ಅದೇನೋ ಆತ್ಮಸಂತೃಪ್ತಿ ಎಂಬುದು ಸದಾ ನಮ್ಮಿಂದ ದೂರ ಓಡುತ್ತಿರುತ್ತದೆ. ಅದೇ, ನಮ್ಮ ಸುತ್ತಮುತ್ತಲಿನವರಿಗಾಗಿ, ಸಮಾಜಕ್ಕಾಗಿ ಬದುಕಿದರೆ ಸಿಗುವ ಆನಂದ ವರ್ಣಿಸಲು ಸಾಧ್ಯವಿಲ್ಲದ್ದು. ಮಾನವೀಯ ಸೇವೆಯಲ್ಲಿ ಬಾಬಾ ಆಮ್ಟೆ ವಿಶಿಷ್ಟ ಹೆಜ್ಜೆಗುರುತುಗಳನ್ನು ಮೂಡಿಸಿದವರು. ಅವರ ಕುಟುಂಬದ ಮೂರನೇ ಪೀಳಿಗೆಯೂ ಅದೇ ಸಾರ್ಥಕ ದಾರಿಯಲ್ಲಿ ಸಾಗಿದೆ ಎಂಬುದು ವಿಶೇಷ. ಡಾ.ಶೀತಲ್ ಆಮ್ಟೆ ಈ ಸೇವಾಯಜ್ಞವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಪರಿ ನಿಜಕ್ಕೂ ಯುವಸಮುದಾಯ ಪಾಲಿಗೆ ಮಾನವೀಯತೆಯ ದೊಡ್ಡ ಪಾಠವೇ ಸರಿ.
ಆನಂದವನದಲ್ಲಿ ಸೇವೆ, ಮಾನವೀಯತೆಯ ಮಹಾಸಂಗಮ| ರವೀಂದ್ರ ಎಸ್ ದೇಶಮುಖ್
ಅದು ೨,೫೦೦ ಜನರ ದೊಡ್ಡಕುಟುಂಬ! ಆ ಕುಟುಂಬವನ್ನು ಕಂಡು ಅಂತಾರಾಷ್ಟ್ರೀಯ ವಲಯವೇ ಹೆಮ್ಮೆಪಟ್ಟಿದೆ. ಅಲ್ಲಿ ಜಾತಿಮತದ ಹಂಗಿಲ್ಲ, ಸಿರಿವಂತ-ಬಡವ ಭೇದವಿಲ್ಲ. ಹೆಣ್ಣು-ಗಂಡೆಂಬ ತಾರತಮ್ಯವೂ ಇಲ್ಲ. ಅಲ್ಲಿ ನೆಲೆಸಿರುವುದು ಶುದ್ಧ ಅಂತಃಕರಣ, ಮಾನವೀಯ ಕಾಳಜಿ. ಮನುಕುಲದ ಉದ್ಧಾರವಾಗಬೇಕಾದರೆ ಅದಕ್ಕೆ ಪ್ರೀತಿಯೊಂದೇ ಸಾಕು ಎಂಬ ಸರಳ ಫಿಲಾಸಪಿ ಇಲ್ಲಿನ ಅಂತಃಸತ್ವ. ಈ ದೊಡ್ಡ ಆದರೆ ಮಮತೆಯ ಕುಟುಂಬದ ಸದಸ್ಯರಾರು ಗೊತ್ತೆ? ಕುಷ್ಠರೋಗಿಗಳು, ಕುಷ್ಠರೋಗ ವಾಸಿಯಾದವರು, ಬುದ್ಧಿಮಾಂದ್ಯರು, ದೃಷ್ಟಿಹೀನರು, ವಿವಿಧ ಅಂಗವಿಕಲತೆ ಹೊಂದಿದವರು, ಅನಾಥ ಮಕ್ಕಳು, ಪರಿತ್ಯಕ್ತ ಮಹಿಳೆಯರು, ನಿರ್ಗತಿಕ ವೃದ್ಧರು… ಇವರೆಲ್ಲ ಜೀವನದಲ್ಲಿ ಒಂದಲ್ಲ ಒಂದು ರೀತಿ ಅಗಾಧನೋವನ್ನು ಉಂಡವರು. ಆದರೀಗ, ಆನಂದದಿಂದ ಜೀವಿಸುತ್ತಿದ್ದಾರೆ, ಆನಂದವನ್ನೇ ಹಂಚುತ್ತಿದ್ದಾರೆ. ಏಕೆಂದರೆ, ಅವರೆಲ್ಲ ಒಟ್ಟಾಗಿ ಇರುವುದೇ `ಆನಂದವನ’ದಲ್ಲಿ! ಹೌದು, ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ವರೋರಾದಿಂದ ೨ ಕಿಲೋಮೀಟರ್ ಅಂತರದಲ್ಲಿರುವ ಈ ಆನಂದವನ ಸೇವೆ, ಮಾನವೀಯತೆಯ ಮಹಾದೇಗುಲ.
೧೯೪೯ರಲ್ಲಿ ಮುರಳೀಧರ ದೇವದಾಸ ಆಮ್ಟೆ ಅವರು ಪತ್ನಿ ಸಾಧನಾ, ೨ ಮತ್ತು ೧ ವರ್ಷದ ಇಬ್ಬರು ಪುತ್ರರು, ಒಂದು ಆಕಳು ಮತ್ತು ಏಳು ಕುಷ್ಠರೋಗಿಗಳೊಂದಿಗೆ ಇಲ್ಲಿ ಬಂದು ನೆಲೆಸಿದಾಗ ಸುತ್ತಮುತ್ತ ಇದ್ದದ್ದು ಬರೀ ಕಾಡುಪ್ರಾಣಿಗಳೇ. ಅವುಗಳನ್ನೆಲ್ಲ ಅವರು ಸ್ನೇಹಿತರಾಗಿ ಮಾಡಿಕೊಂಡರು. ಕುಷ್ಠರೋಗಿಗಳಿಗೆ ಘನತೆಯ ಬದುಕು ಒದಗಿಸಿ ಕೊಡಬೇಕು ಎಂದು ಅವರು ಸ್ಥಾಪಿಸಿದ ಮಹಾರೋಗಿ ಸೇವಾ ಸಮಿತಿ ಮುಂದೆ ಸೇವೆಯ ಹೆಮ್ಮರವಾಗಿ ಬೆಳೆದು, ಮುರಳೀಧರ ಆಮ್ಟೆ `ಬಾಬಾ ಆಮ್ಟೆ’ಯಾಗಿ ಮಾನವೀಯತೆಯ ದಿವ್ಯಶಕ್ತಿಯಾಗಿ ಬೆಳೆದರು. ಈ ಸಂಸ್ಥೆಯಿಂದ ಪ್ರೇರಣೆ ಪಡೆದ ವ್ಯಕ್ತಿಗಳು ಮತ್ತು ಸಂಘಟನೆಗಳು ಸಮಾಜದ ಶಕ್ತಿಯಾಗಿ ಬದಲಾಗಿದ್ದಾರೆ. ಜಾಗತಿಕ ಮಾಧ್ಯಮಗಳು ಕೂಡ ಬರೆದಿವೆ. ಆದರೆ, ಸಂಸ್ಥೆಯ ಮೂಲಪುರುಷ ಅಥವಾ ಸ್ಥಾಪಕರ ಅಗಲುವಿಕೆ ನಂತರ ಸಾಮಾಜಿಕ ಸಂಸ್ಥೆಗಳನ್ನು ಮುನ್ನಡೆಸುವುದು, ಕಾರ್ಯವ್ಯಾಪ್ತಿಯನ್ನು ಮತ್ತಷ್ಟು ವಿಶಾಲಗೊಳಿಸಿ ಸಮಾಜದ ನೊಂದ, ದುರ್ಬಲ ವರ್ಗವನ್ನು ತಲುಪುವ ಕೆಲಸವಿದೆಯಲ್ಲ ಅದು ತುಂಬ ಕಷ್ಟಕರವಾದುದು. ವೈದ್ಯರ ಮಕ್ಕಳು ವೈದ್ಯರಾಗುತ್ತಾರೆ, ಇಂಜಿನಿಯರ್ ಮಕ್ಕಳು ಇಂಜಿನಿಯರ್ ಆಗುತ್ತಾರೆ. ಅಷ್ಟೇಕೆ, ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗುತ್ತಾರೆ. ಆದರೆ, ಸಮಾಜಸೇವಕರ ಮಕ್ಕಳು ಸಮಾಜಸೇವಕರಾಗುವುದು ಅಪೂರ್ವ ಯೋಗವೆಂದೇ ಹೇಳಬೇಕು. ಬಾಬಾ ಆಮ್ಟೆ ಎಂದೂ ಮಕ್ಕಳ ಮೇಲೆ ಯಾವುದೇ ಒತ್ತಡ ಹೇರಲಿಲ್ಲ, ಬದುಕಿಗೆ ಸಿದ್ಧಮಾದರಿಯನ್ನು ಹೇಳಿಕೊಡಲಿಲ್ಲ. ಅದಕ್ಕೆಂದೇ, ಅಲ್ಲಿನ ಸೇವೆಯ ಸಂಗಮದಿಂದಲೇ ಅವರೆಲ್ಲ ಪಾಠ ಕಲಿತರು, ಆ ಮೂಲಕ ಜೀವನದ ಸಾರ್ಥಕ ದಾರಿ ಸಮಾಜಸೇವೆಯಲ್ಲೇ ಇದೆ ಎಂದು ಕಂಡುಕೊಂಡರು.
೨೦೦೮ರಲ್ಲಿ ಬಾಬಾ ಆಮ್ಟೆ ನಿಧನದ ನಂತರ ಅವರ ಪುತ್ರರಾದ ಡಾ.ವಿಕಾಸ್ ಆಮ್ಟೆ ಮತ್ತು ಡಾ.ಪ್ರಕಾಶ್ ಆಮ್ಟೆ `ಆನಂದವನ’ ಕುಟುಂಬದ ಸಂಪೂರ್ಣ ಹೊಣೆ ಹೊತ್ತಿದ್ದಾರೆ. ವಿಕಾಸ್ ಪತ್ನಿ ಡಾ.ಭಾರತಿ ಹಾಗೂ ಪ್ರಕಾಶ್ ಪತ್ನಿ ಡಾ.ಮಂದಾಕಿನಿ, ಇವರಿಗೆ ಬೆಂಬಲವಾಗಿ ನಿಂತು, ಸೇವೆಯ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ನಕ್ಸಲ್‌ಪೀಡಿತ ಗಡಚಿರೋಲಿ ಜಿಲ್ಲೆಯ ಹೇಮಲಕಸಾದಲ್ಲಿ ಡಾ.ಪ್ರಕಾಶ್ ದಂಪತಿ ಸಮಾಜದ ದುರ್ಬಲ ವರ್ಗದವರಿಗಾಗಿ ಆಸ್ಪತ್ರೆ ಮತ್ತು ಶಾಲೆಯನ್ನು ತೆರೆದು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಶ್ರಮಿಸುತ್ತಿದ್ದಾರೆ. ಅಷ್ಟೇ ಅಲ್ಲ, ಗಾಯಗೊಂಡ ಹಾಗೂ ಅನಾರೋಗ್ಯಪೀಡಿತ ಕಾಡುಪ್ರಾಣಿಗಳ ಶುಶ್ರೂಷೆ ಮತ್ತು ಪೋಷಣೆಗಾಗಿ ಪ್ರತ್ಯೇಕ ಆರೈಕೆ ಕೇಂದ್ರವನ್ನು ನಡೆಸುತ್ತಿದ್ದಾರೆ. ಸರ್ಕಾರಿ ವೈದ್ಯೆಯಾಗಿದ್ದ ಡಾ.ಮಂದಾಕಿನಿ ನೌಕರಿಗೆ ರಾಜೀನಾಮೆ ನೀಡಿ, ಪೂರ್ಣಾವಧಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ದಂಪತಿಯ ಸೇವೆಯನ್ನು ಗುರುತಿಸಿ ೨೦೦೮ರಲ್ಲಿ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದು ಎರಡನೇ ಪೀಳಿಗೆಗೆ ನಿಂತಿಲ್ಲ. ಮೂರನೇ ಪೀಳಿಗೆಯೂ ಅಜ್ಜನ ದಾರಿಯಲ್ಲಿ ನಡೆದು, ಸಮಾಜಕ್ಕೆ ಕೊಡುಗೆ ನೀಡಲು ನಿರ್ಧರಿಸಿದೆ. ಡಾ.ಪ್ರಕಾಶ್-ಮಂದಾಕಿನಿ ಅವರ ಮಕ್ಕಳಾದ ಡಾ.ದಿಗಂತ್ ಹಾಗೂ ಅನಿಕೇತ್ ಕೂಡ ಅಂಗವಿಕಲರ ಸೇವೆಯಲ್ಲಿ ಧನ್ಯತೆ ಕಾಣುತ್ತಿದ್ದಾರೆ.
ಆಮ್ಟೆ ಕುಟುಂಬದ ಇನ್ನೊಂದು ಪ್ರತಿಭೆ ಈಗ ಅಂತಾರಾಷ್ಟ್ರೀಯ ವಲಯದ ಗಮನ ಸೆಳೆದಿದೆ. ಡಾ.ಶೀತಲ್ ಆಮ್ಟೆ-ಕರ್ಜಗಿ. ಡಾ.ವಿಕಾಸ್ ಆಮ್ಟೆಯ ಪುತ್ರಿ ಶೀತಲ್ ಎಂಬಿಬಿಎಸ್‌ನಲ್ಲಿ ಚಿನ್ನದ ಪದಕ ಪಡೆದ ಪ್ರತಿಭಾವಂತೆ. ಅಷ್ಟೇ ಅಲ್ಲ, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್‌ನಿಂದ ಸಾಮಾಜಿಕ ನವೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ.
ಶೀತಲ್ ಹುಟ್ಟಿದ್ದು ಆನಂದವನದಲ್ಲೇ. ಅವರನ್ನು ಆಡಿಸಿ, ಮುದ್ದುಮಾಡುತ್ತ ಬೆಳೆಸಿದವರು ಕುಷ್ಠರೋಗದಿಂದ ವಾಸಿಯಾದ ಹೆಣ್ಣುಮಕ್ಕಳು. ಆಚೆ ಸುತ್ತಾಡಲು ಅಂತ ಕರೆದುಕೊಂಡು ಹೋಗುತ್ತಿದ್ದವರು ಅಂಗವಿಕಲರು! ಹಾಗಾಗಿ, ಬಾಲ್ಯದಿಂದಲೇ ಇವರೊಡನೆ ಗಟ್ಟಿ ಬಾಂಧವ್ಯ ಬೆಳೆದಿತ್ತು. ಹೊರಗಡೆ ಸಮಾಜದಲ್ಲಿ ಜಾತಿ, ಮತ, ಪಂಥ, ವರ್ಣ ಮುಂತಾದವುಗಳು ಕಂದಕ ನಿರ್ಮಿಸಿ ಮಾನವೀಯತೆಗೆ ಘಾಸಿ ಮಾಡುತ್ತಿದ್ದರೆ ಇಲ್ಲಿ ಮಾತ್ರ ಸಾವಿರಾರು ಜನರು ಪ್ರೇಮಭಾವದಿಂದ ಒಟ್ಟಾಗಿ ಇದ್ದ ಪರಿ ಇವರನ್ನು ಮೋಡಿಗೊಳಿಸಿತು, ಪುಳಕಗೊಳಿಸಿತು. ಆದರೆ, ಮುಂದೇನು? ಎಂಬ ದಾರಿ ಸ್ಪಷ್ಟವಾಗಿರಲಿಲ್ಲ. ಏಕೆಂದರೆ, ಅಂಥ ಪ್ರಶ್ನೆಯನ್ನೂ ಅವರು ಹಾಕಿಕೊಂಡಿರಲಿಲ್ಲ. ಎಂಬಿಬಿಎಸ್ ಓದುವಾಗ ಶೀತಲ್ ಗೆಳತಿಯರು ತಮ್ಮ ಕನಸುಗಳನ್ನು ತೆರೆದಿಡುತ್ತ `ನಾನು ನೇತ್ರತಜ್ಞೆಯಾಗಬೇಕು, ಇಎನ್‌ಟಿ ತಜ್ಞೆಯಾಗಬೇಕು…’ ಎಂದೆಲ್ಲ ಹರಟುತ್ತಿದ್ದರು. ಆಗ ಶೀತಲ್, ಖ್ಯಾತ ಸಮಾಜಸೇವಕಿ ಹಾಗೂ ತನಗೆ ಆತ್ಮೀಯರೂ ಆದ ರಾಣಿ ಬಂಗ್ ಅವರನ್ನು ಭೇಟಿಯಾಗಿ `ಮುಂದೆ ನಾನೇನು ಮಾಡಲಿ?’ ಎಂದು ಮುಗ್ಧವಾಗಿ ಪ್ರಶ್ನಿಸಿದರು. ರಾಣಿಯವರು ನೀಡಿದ ಉತ್ತರ ಸ್ಪಷ್ಟವಾಗಿತ್ತು-`ನಿನ್ನ ಮುಂದೆ ಎರಡು ಆಯ್ಕೆಗಳಿವೆ. ವೈದ್ಯೆಯಾಗಿ ಪ್ರಾಕ್ಟಿಸ್ ಮಾಡುತ್ತ ನಿನ್ನದೇ ಆದ ಆಸ್ಪತ್ರೆಯನ್ನು ನಿರ್ಮಿಸಿ ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸುವುದು. ಇಲ್ಲವೆ, ಅದೇ ವೈದ್ಯಕೀಯ ಕೌಶಲಗಳನ್ನು ಬಳಸಿಕೊಂಡು ಸಮಾಜದ, ದೀನದಲಿತರ ಸೇವೆ ಮಾಡುವುದು’. ಶೀತಲ್ ಎರಡನೇ ಆಯ್ಕೆಯನ್ನು ತಮ್ಮದಾಗಿಸಿಕೊಂಡರು. ಆನಂದವನಕ್ಕೆ ಮರಳಿ ಅಲ್ಲಿನ ರೋಗಿಗಳು ಹಾಗೂ ಅನಾಥರ ಆರೈಕೆಯಲ್ಲಿ ತೊಡಗಿಸಿಕೊಂಡರು. ಮುಂದೆ, ಮದುವೆ ಆಗಿ ನಾಗಪುರಕ್ಕೆ ವಾಸ್ತವ್ಯ ಬದಲಾಯಿತು. ಆದರೆ, ದಿನಂಪ್ರತಿ ಜೀವನದ ಉzಶ ಹಾಗೂ ಸಾರ್ಥಕತೆಯ ಪ್ರಶ್ನೆ ಕಾಡತೊಡಗಿತು. ಅದೊಂದು ದಿನ ಪತಿಯ ಜತೆ ಚರ್ಚೆಮಾಡಿ ತನ್ನಿಂದ ಆನಂದವನ ಹಾಗೂ ಅಲ್ಲಿನ ಜನರನ್ನು ಬಿಟ್ಟು ಇರಲು ಆಗುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ಹಾಗಾಗಿ, ಪತಿ-ಪತ್ನಿ ಇಬ್ಬರೂ ಮತ್ತೆ ಸೇವಾಗ್ರಾಮಕ್ಕೆ ಮರಳಿದಾಗ ಆ ದೊಡ್ಡ ಕುಟುಂಬದಲ್ಲಿ ಕಂಡುಬಂದ ಸಂತಸ ಅಷ್ಟಿಷ್ಟಲ್ಲ.
ಪ್ರಸಕ್ತ, ಮಹಾರೋಗಿ ಸೇವಾ ಸಮಿತಿ ಸಂಘಟನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೊಣೆ ಹೊತ್ತಿರುವ ಶೀತಲ್, ಕುಷ್ಠರೋಗಿಗಳನ್ನು, ಅಂಗವಿಕಲರನ್ನು, ಅನಾಥರನ್ನು ಸ್ವಾವಲಂಬಿಯಾಗಿಸಲು ಶ್ರಮಿಸುತ್ತಿದ್ದಾರೆ. ಅಷ್ಟೇ ಅಲ್ಲ, ಆನಂದವನವನ್ನು ಸ್ಮಾರ್ಟ್ ಹಳ್ಳಿಯಾಗಿ ರೂಪಿಸಲು ಯತ್ನಿಸುತ್ತಿರುವ ಅವರು ಡಿಜಿಟಲ್ ಹೆಜ್ಜೆಗಳನ್ನು ಸೇವಾಗ್ರಾಮದವರೆಗೂ ಕರೆತಂದಿದ್ದಾರೆ. ಸಾಮಾಜಿಕ ನವೋದ್ಯಮಗಳನ್ನು ಸ್ಥಾಪಿಸಿ ಆ ಮೂಲಕ ದುಡಿಯುವ ಕೈಗಳಿಗೆ ಕೆಲಸ ನೀಡುತ್ತಿದ್ದಾರೆ. ಇವರ ಕೆಲಸದ ವ್ಯಾಪ್ತಿ `ಮಹಾರೋಗಿ ಸೇವಾ ಸಮಿತಿ’ಗೆ ಸೀಮಿತವಾಗಿಲ್ಲ. ಸಮಾಜದಲ್ಲಿ ಬೇರೆ ಬೇರೆ ಅಂಗವೈಕಲ್ಯಗಳನ್ನು ಎದುರಿಸುತ್ತಿರುವವರಿಗೆ ಶಿಕ್ಷಣ, ಉದ್ಯೋಗಾವಕಾಶ ಕಲ್ಪಿಸಲು ಶ್ರಮಿಸುತ್ತಿದ್ದಾರಲ್ಲದೆ, ಅವರ ದೈನಂದಿನ ಚಟುವಟಿಕೆಗಳನ್ನು ಸುಲಭವಾಗಿಸಲು, ಬೇರೆಯವರ ಮೇಲೆ ಅವಲಂಬನೆ ಆಗುವುದನ್ನು ತಪ್ಪಿಸಲು ಸುಲಭ ಮತ್ತ ಮಹತ್ವದ ಅನ್ವೇಷಣೆಗಳನ್ನು ಮಾಡಿ ಅವುಗಳನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ. ಅದರಲ್ಲೂ, ಮಕ್ಕಳು ಹಾಗೂ ಯುವಕರಲ್ಲಿನ ಅಂಗವಿಕಲತೆಗೆ ಸೂಕ್ತ ಚಿಕಿತ್ಸೆ ನೀಡುವ ಜತೆಗೆ ಅವರನ್ನು ಉದ್ಯೋಗರಂಗಕ್ಕೆ ಅಥವಾ ಸ್ವಉದ್ಯೋಗಕ್ಕೆ ಅಣಿಗೊಳಿಸುತ್ತಿದ್ದಾರೆ.
ಬಡ ಕುಟುಂಬಗಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವ್ಯಕ್ತಿತ್ವ ವಿಕಸನ, ನಾಯಕತ್ವ ತರಬೇತಿ ನೀಡುತ್ತಿದ್ದಾರೆ. ಬುಡಕಟ್ಟು ಪ್ರದೇಶದ ಅಭಿವೃದ್ಧಿಗೂ ಆದ್ಯತೆ ನೀಡಿರುವ ಆಮ್ಟೆ ಆರೋಗ್ಯ, ಶಿಕ್ಷಣ ರಂಗದ ಸುಧಾರಣೆ ಜತೆಗೆ ಸುಸ್ಥಿರ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿದ್ದಾರೆ. ಈ ಪ್ರದೇಶದ ಬಡವರ ಮನೆವರೆಗೂ ವೈದ್ಯಕೀಯ ಸೇವೆ ಕೊಂಡೊಯ್ಯಲು ತಮ್ಮದೇ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಇದೆಲ್ಲದರ ಫಲವಾಗಿ ಇವರ ವಿಕಾಸದ ಚಿಂತನೆಗಳು, ಅದರ ಅನುಷ್ಠಾನದ ಸೂತ್ರಗಳು ಜಗತ್ತಿನ ಕಣ್ಣುಕೋರೈಸಿವೆ. ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ವರ್ಲ್ಡ್ ಇಕನಾಮಿಕ್ ಫೋರಂ ೨೦೧೭ರ ಜನವರಿಯಲ್ಲಿ ಡಾ.ಶೀತಲ್‌ಗೆ `ಯಂಗ್ ಗ್ಲೋಬಲ್ ಲೀಡರ್’ ಗೌರವವನ್ನು ಪ್ರದಾನಿಸಿದೆ. ಅಲ್ಲದೆ, ವಿಶ್ವಸಂಸ್ಥೆ `ಅನ್ವೇಷಣಾ ರಾಯಭಾರಿ’ ಆಗಿ, ಇನೋವೇಶನ್ಸ್ ಫಾರ್ ಪೀಸ್‌ನ ಸಲಹೆಗಾರರಾಗಿಯೂ ನೇಮಿಸಿದೆ. ಇಷ್ಟೆಲ್ಲ ಜವಾಬ್ದಾರಿಗಳ ಜತೆಗೆ ಪತಿ ಗೌತಮ್ ಕರ್ಜಗಿ, ಮಗ ಶ್ರಾವಿಲ್‌ರನ್ನು ಒಳಗೊಂಡ ಕುಟುಂಬವನ್ನು ನೋಡಿಕೊಳ್ಳುತ್ತ, ತಂದೆ-ತಾಯಿಗೂ ಸಮಯ ನೀಡುತ್ತ ಆನಂದವನದಲ್ಲಿ ಸದಾ ಆನಂದ ನೆಲೆಸಿರುವಂತೆ ಮಾಡಿದ್ದಾರೆ.
ತ್ಯಾಗ ಹಾಗೂ ಸಮರ್ಪಣೆಯ ಮನೋಭಾವ ವ್ಯಕ್ತಿಯನ್ನೂ, ಸಮಷ್ಟಿಯನ್ನೂ ಅದೆಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬುದಕ್ಕೆ ಬೇರೆ ಉದಾಹರಣೆ ಬೇಕೆ?
ಮತಾಂತರವೆಂಬ ಭಯಾನಕ ನರಕ ಅನುಭವಿಸಿದ್ದೆ- ಗಾಯಕ ವಾಜಿದ್‌ ಖಾನ್​ ಪತ್ನಿ ಬಿಚ್ಚಿಟ್ಟಿದ್ದಾರೆ ಕರಾಳ ಅನುಭವ…

ಚೀನಾದಿಂದ ಇದೀಗ ಅಣೆಕಟ್ಟು ವಾರ್​ ಶುರು! ಭಾರತ, ಬಂಗ್ಲಾಕ್ಕೆ ಅಪಾಯ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − six =
Remember me
