ನವದೆಹಲಿ: ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಕಾಣಿಕೆ ಹಾಕುವುದು ಧಾರ್ಮಿಕ ಆಚರಣೆ ಇರಬಹುದು, ಆದರೆ, ಆ ಹಣವನ್ನು ಒಂದೊಮ್ಮೆ ಭಯೋತ್ಪಾದನೆ ಅಥವಾ ಕ್ಯಾಸಿನೋಗೆ ಬಳಿಸಿದರೆ ಅಂಥ ಸಂದರ್ಭದಲ್ಲಿ ಆ ಚಟುವಟಿಕೆಗಳನ್ನು ಕಾನೂನಿನ ಮೂಲಕ ನಿರ್ಬಂಧಿಸಬಹುದು. ಧಾರ್ಮಿಕ ಟ್ರಸ್ಟ್​ನ ಹಣಕಾಸು ಚಟುವಟಿಕೆಗಳು ದೇಣಿಗೆ, ಶುಚಿತ್ವ ಮತ್ತು ಆರೋಗ್ಯದ ವಿಚಾರದ್ದಾಗಿದ್ದರೆ ಅವುಗಳ ಮೇಲೂ ಕಾನೂನಿನ ಮೂಲಕ ನಿಯಂತ್ರಣ ಹೇರಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಹಿರಿಯ ನ್ಯಾಯವಾದಿ ಕೆ.ಪರಾಸರನ್​ ಮೊದಲು ವಾದ ಮಂಡನೆ ಆರಂಭಿಸಿದರು. ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಒಂಬತ್ತು ಸದಸ್ಯರ ಸಾಂವಿಧಾನಿಕ ನ್ಯಾಯಪೀಠ ಶಬರಿಮಲೆ ಕೇಸ್ ವಿಚಾರಣೆ ನಡೆಸುತ್ತಿರುವ ವೇಳೆ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ನರ ಬಲಿ, ಸತಿ ಮುಂತಾದ ಹಳೆಯ ಸಂಪ್ರದಾಯಗಳನ್ನು ಅಗತ್ಯ ಧಾರ್ಮಿಕ ಆಚರಣೆಗಳ ಪ್ರಕಾರ ತಪ್ಪಿಸಲಾಗದು. ಆದರೆ, ಕಾನೂನು ಪ್ರಕಾರ ಇವುಗಳನ್ನು ಈಗ ಕೊಲೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಧಾರ್ಮಿಕ ದೃಷ್ಟಿಕೋನವೂ ಕೂಡ ಸುಧಾರಣೆಯ ಅಂಶವೇ ಎಂಬುದನ್ನು ನಾವು ಗಮನಿಸಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಶೈವ, ವೈಷ್ಣವ, ಶಕ್ತ್​ ಮುಂತಾದ ವಿಭಿನ್ನ ಸೆಕ್ಷನ್​ಗೆ ಸೇರದೇ ಇರುವ ವ್ಯಕ್ತಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಬಹುದೇ ಎಂಬ ಪ್ರಶ್ನೆಯನ್ನು ನ್ಯಾಯಪೀಠದ ಮುಂದಿರಿಸಿ ವಾದ ಮಂಡಿಸಲಾರಂಭಿಸಿದ ಸಾಲಿಸಿಟರ್ ಜನರಲ್ ಮೆಹ್ತಾ, ಕೆಲವು ಪ್ರತ್ಯೇಕ ವ್ಯಕ್ತಿಗಳ ಗುಂಪು ನಿಶ್ಚಿತ ಸೆಕ್ಷನ್​ನವರ ಅಗತ್ಯಗಳನ್ನು ತೃಪ್ತಿಪಡಿಸಲಾಗದು ಎಂಬುದನ್ನು ವಿವರಿಸಲಾರಂಭಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಮಾಜ್ ಹೀಗೇ ಮಾಡಬೇಕು ಎಂದು ನಿಗಿದಿತ ಸಮುದಾಯದವರ ಬಳಿಕ ಹೇಳುವುದು, ಅವರ ಧಾರ್ಮಿಕ ಆಚರಣೆಯಲ್ಲಿ ಹಸ್ತಕ್ಷೇಪ ಮಾಡಿದಂತೆ ಎಂಬುದು ನಿಮ್ಮ ವಾದದ ತಾತ್ಪರ್ಯವಲ್ಲವೇ ಎಂದು ಮೆಹ್ತಾ ಅವರನ್ನು ಕೇಳಿತು.
ರಿಲಿಜಿಯನ್ ಎಂಬ ಶಬ್ದವು ಮನುಷ್ಯ ಮತ್ತು ಸೃಷ್ಟಿಕರ್ತನ ನಡುವಿನ ಸಂಬಂಧವನ್ನು ವ್ಯಾಖ್ಯಾನಿಸುವಂಥದ್ದು. ಎಲ್ಲ ಸೆಕ್ಟ್​ಗಳ ಅಥವಾ ಸಮುದಾಯಗಳ ಜನರಿಗೆ ಈ ಸಂಬಂಧ ಹೇಗಿರಬೇಕು ಎಂಬುದನ್ನು ನಿಯಂತ್ರಿಸುವ ಮತ್ತು ನಿರ್ಬಂಧಿಸುವ ಹಕ್ಕು ಇರುತ್ತದೆ. ಅಲ್ಲದೆ, ಈ ಸಮುದಾಯಕ್ಕೆ ಹೊರಗಿನವರು ಅಗತ್ಯ ಧಾರ್ಮಿಕ ಆಚರಣೆಗಳು ಏನು ಎಂಬುದನ್ನು ನಿರ್ಧರಿಸುವುದು ಸಾಧ್ಯವಾಗದು ಎಂದು ನೀವು ಹೇಳುತ್ತಿರುವುದಲ್ಲವೆ? ಎಂದು ಸಿಜೆಐ ಕೇಳಿದರು.
ಮುಸ್ಲಿಮರು ಹಿಂದುಗಳ ಆಚರಣೆಯನ್ನು ಮತ್ತು ಬೌದ್ಧರು ಮುಸ್ಲಿಮರ ಆಚರಣೆಯನ್ನು ನಿರ್ಧರಿಸುವ ಪರಿಸ್ಥಿತಿ ಇಲ್ಲ ಎಂದು ತಾನೇ ನೀವು ಹೇಳುತ್ತಿರುವುದು ಎಂದು ನ್ಯಾಯಪೀಠ ಕೇಳಿತು. ಇದಕ್ಕೆ ಪ್ರತಿಯಾಗಿ, ಒಂದೊಮ್ಮೆ ತೀರಾ ಅವಶ್ಯವಾದ ಧಾರ್ಮಿಕ ಆಚರಣೆ ಆಗಿದ್ದರೂ, ಅದು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯ ಎಂಬ ಮೂರು ಅಂಶಗಳನ್ನು ಬಾಧಿಸುವಂತೆ ಇದ್ದರೆ ಅನುಚ್ಚೇಧ 26ರ ಪ್ರಕಾರ ನಿರ್ಬಂಧಿಸಬಹುದು. ಸರ್ಕಾರ ಅಥವಾ ಕೋರ್ಟ್​ ಮಧ್ಯಪ್ರವೇಶ ಮಾಡಬಹುದು ಎಂಬ ಅಂಶದತ್ತ ಸಾಲಿಸಿಟರ್ ಜನರಲ್​ ತುಷಾರ್ ಮೆಹ್ತಾ ಗಮನಸೆಳೆದಿದ್ದಾರೆ. ಇದು ನಮ್ಮ ಸಂವಿಧಾನದ ಹಾಲ್​ಮಾರ್ಕ್ ಎಂದು ಪ್ರತಿಕ್ರಿಯಿಸಿದ ನ್ಯಾಯಪೀಠ, ನರಬಲಿ, ಸತಿ ಮುಂತಾದವುಗಳನ್ನು ಕಾನೂನುಬಾಹಿರ ಎಂದ ಅಂಶಗಳ ಉದಾಹರಣೆಯನ್ನು ನೀಡಿತ್ತು.
ಕೋರ್ಟ್ ಪರಿಗಣನೆಯಲ್ಲಿ ಎರಡು ಅಂಶಗಳಿವೆ. ಆರಾಧನೆ, ಆಚರಣೆ, ಪಾಲನೆ, ಕಾರ್ಯಕ್ರಮಗಳ ರೀತಿ ಒಂದನೇ ಅಂಶವಾದರೆ, ಕೆಲವು ನಿಶ್ಚಿತ ಆಚರಣೆಗಳು ಅಗತ್ಯ ಧಾರ್ಮಿಕ ಆಚರಣೆಯೇ ಅಥವಾ ಅಲ್ಲವೇ ಎಂಬುದರ ನಿರ್ಧಾರ ತೆಗೆದುಕೊಳ್ಳುವ ವಿಚಾರ ಇನ್ನೊಂದು ಎಂದು ಮೆಹ್ತಾ ಹೇಳಿದರು.
ಧರ್ಮದ ವಿಚಾರಕ್ಕೆ ಸಂಬಂಧಿಸಿ ಮೂಲಭೂತ ಹಕ್ಕುಗಳ ಪರಾಮರ್ಶೆಗಾಗಿ ನ್ಯಾಯಪೀಠ ಏಳು ಪ್ರಶ್ನೆಗಳನ್ನು ರಚಿಸಿದೆ. ಅಲ್ಲದೆ ನಂಬಿಕೆ ಜತೆಗೆ ಅವುಗಳ ಒಳನಂಟು, ಇವುಗಳನ್ನು ನಿರ್ವಹಿಸಲು ಕಾನೂನು ನೀತಿಗಳ ಕುರಿತ ವಿಚಾರ ವಿಮರ್ಶೆ ನಡೆಯಲಿದೆ. ಸಂವಿಧಾನದ ಅನುಚ್ಚೇಧ 25ರ ಪ್ರಕಾರ ವ್ಯಕ್ತಿಗಳ ಹಕ್ಕು ಮತ್ತು ಅನುಚ್ಚೇಧ 26ರ ಪ್ರಕಾರ ಧರ್ಮ ಪಾಲನೆಯ ಹಕ್ಕುಗಳ ಒಳಸಂಬಂಧಗಳೇನು? ಎಂಬುದು ಅಂತಹ ಒಂದು ವಿಷಯ. ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯದ ವಿಚಾರ ಅನುಚ್ಚೇಧ 26ರಲ್ಲಿ ಬರುವ ಧರ್ಮಪಾಲನೆ ಹಕ್ಕುಗಳಿಗೆ ಸಂಬಂಧಿಸಿದ್ದಾ ಎಂಬುದು ಇನ್ನೊಂದು ವಿಚಾರ. ಅಲ್ಲದೆ, ನೈತಿಕತೆ ಎಂಬ ಪದದ ವ್ಯಾಪ್ತಿ ಮತ್ತು ಹರವು ಅನುಚ್ಚೇಧ 25 ಮತ್ತು 26ರಲ್ಲಿ ಎಷ್ಟರ ಮಟ್ಟಿಗೆ ಇದೆ ಮತ್ತು ಸಾಂವಿಧಾನಿಕ ನೈತಿಕತೆ ಎಂಬುದನ್ನು ಸೇರಿಸಬೇಕೆ ಎಂಬುದು ಇನ್ನೊಂದು ವಿಚಾರ. ಹೀಗೆ ಇವುಗಳ ಪರಾಮರ್ಶೆಗಾಗಿ ನ್ಯಾಯಪೀಠ ವಿಚಾರಣೆ ಆರಂಭಿಸಿದೆ.
ಸಿಜೆಐ ನೇತೃತ್ವದ ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಆರ್. ಬಾನುಮತಿ, ಅಶೋಕ್ ಭೂಷಣ್, ಎಲ್. ನಾಗೇಶ್ವರ ರಾವ್​, ಎಂ.ಎಂ.ಶಾಂತನಗೌಡರ್, ಎಸ್.ಎ.ನಜೀರ್, ಆರ್. ಸುಭಾಷ್ ರೆಡ್ಡಿ, ಬಿ.ಆರ್.ಗವಾಯಿ, ಸೂರ್ಯಕಾಂತ್ ಇದ್ದಾರೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − nine =
Remember me
