ನವದೆಹಲಿ:ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದು, ಈಗ ಅನರ್ಹತೆ ಭೀತಿ ಎದುರಿಸುತ್ತಿರುವ ರಾಜಸ್ಥಾನದ ಯುವ ನಾಯಕ ಸಚಿನ್ ಪೈಲಟ್ ಹಾಗೂ ಅವರ ಬೆಂಬಲಿಗ 18 ಶಾಸಕರಿಗೆ ಸುಪ್ರೀಂ ಕೋರ್ಟ್ ತುಸು ನಿರಾಳತೆ ನೀಡಿದೆ. ಬಂಡಾಯ ನಾಯಕರಿಗೆ ನೀಡಿರುವ ನೋಟಿಸ್ ಪ್ರಶ್ನಿಸಿ ಪೈಲಟ್ ಬಣ ಸಲ್ಲಿಕೆ ಮಾಡಿರುವ ಅರ್ಜಿ ಬಗ್ಗೆ ಯಾವುದೇ ತೀರ್ಪು ನೀಡದಂತೆ ರಾಜಸ್ಥಾನ ಹೈಕೋರ್ಟ್​ಗೆ ಸೂಚನೆ ನೀಡಬೇಕು ಎಂದು ಸ್ಪೀಕರ್ ಸಿ.ಪಿ. ಜೋಶಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ.
ಬಂಡಾಯ ಶಾಸಕರ ಅರ್ಜಿ ಕುರಿತಂತೆ ಹೈಕೋರ್ಟ್​ಗೆ ಯಾವುದೇ ಸೂಚನೆ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಈ ನಿರ್ಧಾರದಿಂದ ಸಚಿನ್ ಪೈಲಟ್ ಬಣ ಮೇಲುಗೈ ಸಾಧಿಸಿದೆ. ಅರ್ಜಿ ಸಲ್ಲಿಸಿದ್ದ ಸ್ಪೀಕರ್ ಜೋಶಿಗೆ ಹಿನ್ನಡೆಯಾಗಿದೆ. ಸಾಂವಿಧಾನಿಕ ಕರ್ತವ್ಯಕ್ಕೆ ನ್ಯಾಯಾಂಗ ಅಡ್ಡಿಪಡಿಸಿದರೆ ಬಿಕ್ಕಟ್ಟು ಉಂಟಾಗುತ್ತದೆ. ಜತೆಗೆ ಶಾಸಕರ ಅನರ್ಹ ಪ್ರಕರಣ ಇತ್ಯರ್ಥಪಡಿಸುವುದು ಸ್ಪೀಕರ್ ಪರಮಾಧಿಕಾರ. ಆದ್ದರಿಂದ ರಾಜಸ್ಥಾನ ಹೈಕೋರ್ಟ್​ಗೆ ತೀರ್ಪು ಪ್ರಕಟಿಸದಂತೆ ಸೂಚನೆ ನೀಡಬೇಕು ಎಂದು ಕೋರಿ ಬುಧವಾರ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಪೈಲಟ್ ಬಣ ಕೂಡ ಅರ್ಜಿ ಹಾಕಿತ್ತು.
ವಾದದ ನಡುವೆ ವಿನೋದ!
ವಾದ, ಪ್ರತಿವಾದ ಸಂದರ್ಭದಲ್ಲಿ ನ್ಯಾಯಪೀಠ ಹಾಗೂ ವಕೀಲ ಸಿಬಲ್ ನಡುವೆ ವಿನೋದಮಯ ಸಂಭಾಷಣೆಯೂ ನಡೆಯಿತು. ಕೇಂದ್ರ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕರೂ ಆಗಿರುವ ಸಿಬಲ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತಮ್ಮಲ್ಲಿ ‘ನೋವು ನಿರೋಧಕ ಶಕ್ತಿ’ ಹೆಚ್ಚುತ್ತಿದೆ ಎಂದರು. ಪಕ್ಷ ವಿರೋಧಿ ಚಟುವಟಿಕೆ ದೂರಿನ ಅನ್ವಯ ಸ್ಪೀಕರ್ ಅನರ್ಹತೆಯ ನೋಟಿಸ್ ನೀಡಿದ್ದಾರೆ. ಇದನ್ನು ಪ್ರಶ್ನಿಸಿ ಬಂಡಾಯ ಶಾಸಕರು ಕೋರ್ಟ್ ಮೊರೆ ಹೋಗಿದ್ದಾರೆ. ಇದಕ್ಕೆ ನಿಮ್ಮಲ್ಲೇಕೆ (ಸಿಬಲ್) ನೋವು ಕಾಣುತ್ತದೆ ಎಂದು ಪೀಠ ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸಿಬಲ್, ನನಗೇನೂ ನೋವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ನೋವಿನ ಅನುಭವವೇ ಆಗುತ್ತಿಲ್ಲ ಎಂದರು.
ಇಂದು ಹೈಕೋರ್ಟ್ ತೀರ್ಪು
ಅನರ್ಹತೆ ಕುರಿತಂತೆ ಸ್ಪೀಕರ್ ನೀಡಿದ ನೋಟಿಸ್ ಪ್ರಶ್ನಿಸಿ ಪೈಲಟ್ ಸಹಿತ 19 ಶಾಸಕರು ಸಲ್ಲಿಸಿರುವ ಅರ್ಜಿ ಸಂಬಂಧ ರಾಜಸ್ಥಾನ ಹೈಕೋರ್ಟ್ ಶುಕ್ರವಾರ ತೀರ್ಪು ನೀಡಲಿದ್ದು, ಭಾರಿ ಕುತೂಹಲ ಮೂಡಿಸಿದೆ. ಪೈಲಟ್ ಹಾಗೂ ಬೆಂಬಲಿಗರ ರಾಜಕೀಯ ಭವಿಷ್ಯ ನಿರ್ದರಿಸುವ ತೀರ್ಪು ಇದಾಗಿದೆ.
ಮುಂದಿನ ವಾರ ಅಧಿವೇಶನ ಸಾಧ್ಯತೆ
ಸುಪ್ರೀಂ ಕೋರ್ಟ್​ನಲ್ಲಿ ಸ್ಪೀಕರ್ ಅರ್ಜಿ ತಿರಸ್ಕೃತವಾಗಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ಕಾಂಗ್ರೆಸ್ ‘ಪ್ಲಾ್ಯನ್ ಬಿ’ ಮೊರೆಹೋಗುವ ಸಾಧ್ಯತೆ ಹೆಚ್ಚಿದೆ. ಪೈಲಟ್ ಬಣದ ಪರವಾಗಿ ಹೈಕೋರ್ಟ್ ತೀರ್ಪು ನೀಡಿದರೆ ಸರ್ಕಾರಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಮುಂದಿನ ವಾರ ತುರ್ತಾಗಿ ಅಧಿವೇಶನ ಕರೆದು, ವಿಶ್ವಾಸಮತ ಸಾಬೀತುಪಡಿಸಿ ಅಧಿಕಾರ ಭದ್ರ ಮಾಡಿಕೊಳ್ಳುವ ತಂತ್ರಗಾರಿಕೆಯನ್ನು ಸಿಎಂ ಅಶೋಕ್ ಗೆಹ್ಲೋಟ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್​ನ 88, ಬಿಟಿಪಿ 2, ಸಿಪಿಎಂ ಮತ್ತು ಆರ್​ಎಲ್​ಡಿಯ ತಲಾ 1 ಮತ್ತು 10 ಪಕ್ಷೇತರರು ಸೇರಿ 103 ಶಾಸಕರ ಬೆಂಬಲ ಸರ್ಕಾರಕ್ಕೆ ಇದೆ ಎಂದು ಗೆಹ್ಲೋಟ್ ಬೆಂಬಲಿಗರು ಹೇಳಿಕೊಂಡಿದ್ದಾರೆ.
ಅನರ್ಹನಾದರೆ ರಾಜಕೀಯ ಜೀವನ ಮುಗಿದಂತೆ
ಸುಪ್ರೀಂ ಕೋರ್ಟ್ ಆದೇಶದಿಂದ ಸಚಿನ್ ಪೈಲಟ್ ತುಸು ನಿರಾಳರಾಗಿದ್ದಾರೆ. ಶಾಸಕ ಸ್ಥಾನದಿಂದ ಅನರ್ಹನಾದರೆ ನನ್ನ ರಾಜಕೀಯ ಜೀವನವೇ ಕೊನೆಗೊಂಡಂತೆ ಎಂದು ಆಪ್ತರ ಬಳಿ ಅವರು ಹೇಳಿಕೊಂಡಿದ್ದರು. ಈ ಪ್ರಕರಣದಲ್ಲಿ ಗೆದ್ದರೆ ನನ್ನ ಹಕ್ಕಿಗಾಗಿ ಹೋರಾಟ ಮುಂದುವರಿಸಬಹುದು. ಇಲ್ಲದಿದ್ದರೆ ಅದು ಸಾಧ್ಯವಾಗುವುದಿಲ್ಲ ಎಂಬುದು ಪೈಲಟ್ ಅಭಿಪ್ರಾಯವಾಗಿದೆ ಎಂದು ಅವರ ಆಪ್ತರೊಬ್ಬರು ಹೇಳಿದ್ದಾರೆ. ನಮ್ಮ ಆಕ್ಷೇಪ ಇರುವುದು ಸರ್ಕಾರದ ನೇತೃತ್ವ ವಹಿಸಿದವರ ವಿರುದ್ಧ. ಸರ್ಕಾರದ ವಿರುದ್ಧ ಅಲ್ಲ. ಹೀಗಾಗಿ ಸರ್ಕಾರವನ್ನೇಕೆ ಬೀಳಿಸಲಿ ಎಂದು ಪೈಲಟ್ ಈ ಹಿಂದೆ ಹೇಳಿದ್ದರು.
ಸಚಿವ ಶೆಖಾವತ್ ವಿರುದ್ಧ ತನಿಖೆಗೆ ಕೋರ್ಟ್ ಆದೇಶ
ಸಂಜೀವಿನಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 884 ರೂ. ಹಗರಣ ಸಂಬಂಧ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ವಿರುದ್ಧ ತನಿಖೆ ನಡೆಸುವಂತೆ ಜೈಪುರ ಸ್ಥಳೀಯ ಕೋರ್ಟ್ ಆದೇಶಿಸಿದೆ. ಈ ಹಗರಣದ ಬಗ್ಗೆ ರಾಜಸ್ಥಾನದ ವಿಶೇಷ ಕಾರ್ಯಾಚರಣೆ ಪೊಲೀಸ್ ತಂಡ (ಎಸ್​ಒಜಿ) ಒಂದು ವರ್ಷದಿಂದ ತನಿಖೆ ನಡೆಸುತ್ತಿದೆ. ಆದರೆ, ಶೆಖಾವತ್ ಮತ್ತು ಅವರ ಪತ್ನಿ ಒಡೆತನದ ಕಂಪನಿಗಳಿಗೆ ಹಣ ವರ್ಗಾವಣೆ ಆಗಿರುವ ಬಗ್ಗೆ ತನಿಖೆ ನಡೆಸಿಲ್ಲ ಎಂದು ಅರ್ಜಿದಾರರೊಬ್ಬರು ಕೋರ್ಟ್​ಗೆ ದೂರು ನೀಡಿದ್ದರು. ಇದನ್ನು ಕೋರ್ಟ್ ಅಂಗೀಕರಿಸಿದೆ. 2008ರಲ್ಲಿ ಆರಂಭವಾದ ಸಂಜೀವಿನಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧಿಕ ದರ ಬಡ್ಡಿ ನೀಡುವುದಾಗಿ ಗ್ರಾಹಕರಿಂದ ಠೇವಣಿ ಸಂಗ್ರಹಿಸಿತು. ಈ ಹಣವನ್ನು ಸಾಲದ ರೂಪದಲ್ಲಿ ನೀಡಿ, ನಷ್ಟವಾಗಿದೆ ಎಂದು ಹೇಳಿಕೊಂಡಿತು. ಈ ಅವ್ಯವಹಾರದಲ್ಲಿ ಶೆಖಾವತ್ ಕುಟುಂಬದ ಕಂಪನಿಗಳು ಭಾಗಿಯಾಗಿವೆ ಎಂದು ಆರೋಪಿಸಲಾಗಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಶಾಸಕರನ್ನು ಸೆಳೆದು, ಸರ್ಕಾರ ಪತನಗೊಳಿಸುವ ಪ್ರಯತ್ನದಲ್ಲಿ ಸಚಿವ ಶೆಖಾವತ್ ಪಾತ್ರವೂ ಇದೆ ಎಂದು ಆಪಾದಿಸಿರುವ ಕಾಂಗ್ರೆಸ್ ನಾಯಕರು, ಈ ಕುರಿತು ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು. ಈ ಬೆನ್ನಲ್ಲೇ ಶೆಖಾವತ್ ವಿರುದ್ಧ ಎಫ್​ಐಆರ್ ಕೂಡ ದಾಖಲಾಗಿದೆ.
ನ್ಯಾಯಪೀಠ ಹೇಳಿದ್ದೇನು?
ಪಕ್ಷದ ನಾಯಕತ್ವ ವಹಿಸಿಕೊಂಡ ವ್ಯಕ್ತಿಯ ಮೇಲೆ ಕೆಲವರು ನಂಬಿಕೆ ಕಳೆದುಕೊಳ್ಳಬಹುದು. ಈ ಕಾರಣಕ್ಕೆ ಅವರನ್ನು ಅನರ್ಹರೆಂದು ಪರಿಗಣಿಸಲಾಗದು. ಇದಕ್ಕೆ ಆಸ್ಪದ ನೀಡಿದರೆ, ಇದು ಒಂದು ರಾಜಕೀಯ ಅಸ್ತ್ರವಾಗಿಬಿಡುತ್ತದೆ. ಆಗ ಯಾರೊಬ್ಬರೂ ನಾಯಕನ ಎದುರು ದನಿ ಎತ್ತಲಾಗದು. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಕ್ಕೂ ಅವಕಾಶವಿದೆ. ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಇದು ರಾಜಸ್ಥಾನದಂಥ ಇತರ ಪ್ರಕರಣಗಳಿಗೂ ಅನ್ವಯವಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಎ.ಕೆ. ಮಿಶ್ರಾ, ಬಿ.ಆರ್. ಗವಾಯಿ ಮತ್ತು ಕೃಷ್ಣ ಮುರಾರಿ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿತು. ಶಾಸಕರ ಅನರ್ಹತೆ ನೋಟಿಸ್ ವಿಚಾರದಲ್ಲಿ ಹೈಕೋರ್ಟ್​ಗೆ ಮಧ್ಯ ಪ್ರವೇಶಿಸುವ ಅಧಿಕಾರ ಇದೆಯೇ ಎಂಬ ಕುರಿತು ಸ್ಪೀಕರ್ ಜೋಶಿ ಪರ ವಕೀಲ ಕಪಿಲ್ ಸಿಬಲ್ ವಾದವನ್ನು ಆಲಿಸಿದ ನ್ಯಾಯಪೀಠ, ಹೈಕೋರ್ಟ್ ಶುಕ್ರವಾರ ತೀರ್ಪು ನೀಡಲಿದೆ. ಇನ್ನೊಂದು ದಿನ ಕಾಯಲು ಆಗುವುದಿಲ್ಲವೆ?’ ಎಂದು ಪ್ರಶ್ನಿಸಿತು.
ತೀರ್ಪಿನ ನಂತರ ಏನಾಗಬಹುದು?
VIDEO: ಮಾಸ್ಕ್​​​​ ತೆಗೆಯದೆ ತಿಂಡಿ ತಿನ್ನುವ ಸುಲಭ ವಿಧಾನ ಹೇಳಿಕೊಟ್ಟ ಬ್ರಿಟಿಷ್​ ಮಾಡೆಲ್​…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − one =
Remember me
