|ರಾಘವ ಶರ್ಮ ನಿಡ್ಲೆನವದೆಹಲಿ

ತೆಲಂಗಾಣದ ಗ್ರೇಟರ್ ಹೈದರಾಬಾದ್ ಪಾಲಿಕೆ ಚುನಾವಣೆ (ಜಿಎಚ್​ಎಂಸಿ) ಈ ಬಾರಿ ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿಯ ಆಕ್ರಮಣಕಾರಿ ಪ್ರಚಾರಭಿಯಾನ ಆಡಳಿತಾರೂಢ ಪಕ್ಷ ತೆಲಂಗಾಣ ರಾಷ್ಟ್ರೀಯ ಸಮಿತಿ ನಾಯಕ ಮತ್ತು ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್​ಗೆ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುವಂತೆ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಷಾ, ಸಚಿವರಾದ ಸ್ಮೃತಿ ಇರಾನಿ, ಪ್ರಕಾಶ್ ಜಾವಡೇಕರ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಸೇರಿದಂತೆ ವಿವಿಧ ನಾಯಕರು ಬಿರುಸಿನ ಪ್ರಚಾರ ನಡೆಸಿದ್ದಾರೆ.
ಮಹಾನಗರ ಪಾಲಿಕೆ ಚುನಾವಣೆಯೊಂದರಲ್ಲಿ ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರು, ಹಿರಿಯ ಮುಖಂಡರು ಪ್ರಚಾರ ನಡೆಸುತ್ತಿರುವುದು ಇದೇ ಮೊದಲು. ಆದರೆ, ತೆಲಂಗಾಣದಲ್ಲಿ ಪ್ರಭಾವಿ ರಾಜಕೀಯ ಎದುರಾಳಿಯಾಗಿ ಹೊರಹೊಮ್ಮಲು ಬಿಜೆಪಿ ಮಹಾನಗರ ಪಾಲಿಕೆ ಚುನಾವಣೆಯನ್ನೇ ವೇದಿಕೆಯನ್ನಾಗಿ ಬಳಸಿಕೊಂಡಿದ್ದು, 4ರಿಂದ 40 ಸೀಟಿಗೆ ಏರಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಈ ಹೋರಾಟದ ಮೂಲಕ ರಾಜ್ಯದಲ್ಲಿ ತನ್ನ ರಾಜಕೀಯ ಹೆಜ್ಜೆಗುರುತನ್ನು ವಿಸ್ತರಿಸಿ, 2023ರ ಹಣಾಹಣಿಗೆ ಸಂಘಟನೆ ಬಲಗೊಳಿಸುವುದೇ ಬಿಜೆಪಿಯ ಮುಖ್ಯ ಗುರಿ.
ಡಿ.1ರಂದು ಜಿಎಚ್​ಎಂಸಿಯ 150 ಸೀಟುಗಳಿಗೆ ಚುನಾವಣೆ ನಡೆಯಲಿದೆ. 2018ರ ಜಿಎಚ್​ಎಂಸಿ ಚುನಾವಣೆಯಲ್ಲಿ ಬಿಜೆಪಿ 4 ಸೀಟುಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 2 ಮತ್ತು ಟಿಆರ್​ಎಸ್ 99 ಸೀಟುಗಳನ್ನು ಬಾಚಿಕೊಂಡಿತ್ತು. ಎಐಎಂಐಎಂ 44 ಸ್ಥಾನಗಳನ್ನು ಹೊಂದಿದೆ. 150 ಪಾಲಿಕೆ ಸೀಟುಗಳ ವ್ಯಾಪ್ತಿಯಲ್ಲಿ ಒಟ್ಟು 24 ವಿಧಾನಸಭಾ ಕ್ಷೇತ್ರಗಳಿವೆ. ಪಾಲಿಕೆ ಫಲಿತಾಂಶ ಈ ಕ್ಷೇತ್ರಗಳ ರಾಜಕೀಯ ಚಿತ್ರಣವನ್ನು ಬದಲಿಸಲೂಬಹುದು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 21 ಸೀಟುಗಳನ್ನು ಗೆದ್ದುಕೊಂಡಿತ್ತಾದರೂ, ಈಗ ನೆಲೆ ಕಳೆದುಕೊಳ್ಳುವ ಭೀತಿಯಲ್ಲಿದೆ. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ‘ಬಿಜೆಪಿ ನಮ್ಮ ಎದುರಾಳಿ ಅಲ್ಲವೇ ಅಲ್ಲ, ಅವರನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ’ ಎಂದಿದ್ದ ಸಿಎಂ ಚಂದ್ರಶೇಖರ ರಾವ್, 2 ವರ್ಷದ ಬಳಿಕದ ಜಿಎಚ್​ಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಬಿಜೆಪಿಯೇ ಅವರ ಪ್ರಬಲ ಎದುರಾಳಿ. ಸಿಎಂ ಕೆಸಿಆರ್ ವರ್ಚಸ್ಸು ತಗ್ಗುತ್ತಿದೆ ಎಂದು ಬಿಜೆಪಿ ಭಾವಿಸಿದ್ದು, ಕಾಂಗ್ರೆಸ್ ಸ್ಥಾನವನ್ನು ತನ್ನದಾಗಿಸಿಕೊಂಡು, ನಂತರ ಅಧಿಕೃತವಾಗಿ ರಾಜ್ಯದ ಎರಡನೇ ಬಲಿಷ್ಠ ಪಕ್ಷ ಎಂದು ಗುರುತಿಸಿಕೊಳ್ಳಲು ಯೋಜನೆ ರೂಪಿಸಿದೆ.
ಅಭಿವೃದ್ಧಿ ಮತ್ತು ಹಿಂದುತ್ವದ ಹೆಸರಲ್ಲಿ ಬಿಜೆಪಿ ಮತ ಕೇಳುತ್ತಿದೆ. ಹೈದರಾಬಾದ್​ನಲ್ಲಿ ಅಕ್ರಮವಾಗಿ ನೆಲೆಸಿರುವವರ ಬಗ್ಗೆ ಟಿಆರ್​ಎಸ್ ಸರ್ಕಾರ ಕೇಂದ್ರ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡದೆ, ದೇಶವಿರೋಧಿ ಶಕ್ತಿಗಳನ್ನು ಪೋಷಿಸುತ್ತಿದೆ ಎಂದು ಪ್ರಚಾರದ ವೇಳೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ. ಹೈದರಾಬಾದ್​ನಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್​ನ ರೋಹಿಂಗ್ಯಾ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ನೆಲೆಸಿದ್ದಾರೆಂಬುದು ಚುನಾವಣೆ ವಿಷಯವಾಗಿ ಮಾರ್ಪಟ್ಟಿದೆ. 2 ದಿನಗಳ ಹಿಂದಷ್ಟೇ ಪ್ರಚಾರದಲ್ಲಿ ಭಾಗಿಯಾಗಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಹೈದರಾಬಾದ್​ಗೆ ‘ಭಾಗ್ಯನಗರ’ ಎಂದು ನಾಮಕರಣ ಮಾಡಬೇಕು ಎಂದಿದ್ದಾರೆ. ಏತನ್ಮಧ್ಯೆ, ಹಳೆ ಹೈದರಾಬಾದ್​ನಲ್ಲಿ ಬಲಿಷ್ಠವಾಗಿರುವ ಸಂಸದ ಅಸಾದುದ್ದಿನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್ ಇತ್ತೆಹದುಲ್ ಮುಸ್ಲಿಮಿನ್ (ಎಐಎಂಐಎಂ) ಪಕ್ಷಕ್ಕೆ ಸ್ಪರ್ಧೆ ನೀಡುವ ಸಲುವಾಗಿಯೇ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ತಮ್ಮ ಪ್ರಚಾರಭಿಯಾನದಲ್ಲಿ, ‘ಎಐಎಂಐಎಂಗೆ ಮತ ಹಾಕುವುದೂ ಒಂದೇ, ರಾಷ್ಟ್ರವಿರೋಧಿಗಳನ್ನು ಉತ್ತೇಜಿಸುವುದು ಒಂದೇ’ ಎಂಬ ಮಾತುಗಳನ್ನಾಡಿದ್ದಾರೆ.
ಪಾಲಿಕೆ ಚುನಾವಣೆಯಲ್ಲಿ ಸಾಮಾನ್ಯವಾಗಿ ಸ್ಥಳೀಯ ವಿಚಾರ ಹಾಗೂ ಸಮಸ್ಯೆಗಳೇ ಚರ್ಚೆಯಾಗುತ್ತವೆ. ಆದರೆ, ಜಿಎಚ್​ಎಂಸಿ ಚುನಾವಣಾ ಅಖಾಡದಲ್ಲಿ ಸ್ಥಳೀಯೇತರ ವಿಷಯಗಳೇ ಸದ್ದು ಮಾಡುತ್ತಿರುವುದಿಂದ ಆಡಳಿತಾರೂಢ ಟಿಆರ್​ಎಸ್ ಕೂಡ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯನ್ನೇ ಟಾರ್ಗೆಟ್ ಮಾಡಿದೆ. ಒಟ್ಟಿನಲ್ಲಿ ಭಾರತೀಯ ಚುನಾವಣೆ ಇತಿಹಾಸದಲ್ಲಿ, ಪಾಲಿಕೆ ಚುನಾವಣೆಯೊಂದಕ್ಕೆ ರಾಷ್ಟ್ರೀಯ ಮಹತ್ವ ಬಂದಿರುವುದು ಒಂದೆಡೆಯಾದರೆ, ತನ್ನ ಮುಂದಿರುವ ಕೂದಲೆಳೆಯ ಅವಕಾಶವನ್ನೂ ಕೈಚೆಲ್ಲದೆ ಚುನಾವಣೆಗಳನ್ನು ಎದುರಿಸುವ ಬಿಜೆಪಿ ನಾಯಕರ ಉತ್ಸಾಹ, ಹುರುಪು ಆಂತರಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಕಾಂಗ್ರೆಸ್ಸಿಗೆ ಇನ್ನೂ ಪ್ರೇರೇಪಣೆಯಾಗದಿರುವುದು ಸೋಜಿಗವೇ ಸರಿ.
ದುಬ್ಬಕ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಗೆಲುವೇ ಬಿಜೆಪಿಗೆ ಭವಿಷ್ಯದಲ್ಲಿ ಹೊಸ ಸಾಧ್ಯತೆಗಳ ಭರವಸೆ ಮೂಡಿಸಿದೆ. ದುಬ್ಬಕ್ ಕ್ಷೇತ್ರ ಸಿಎಂ ಚಂದ್ರಶೇಖರ ರಾವ್ (ಗಜ್ವೆಲ್) ಮತ್ತು ಸಂಬಂಧಿ ಟಿ. ಹರೀಶ್ ರಾವ್ ಅವರ (ಸಿದ್ಧಿಪೇಟ್) ವಿಧಾನಸಭೆ ಕ್ಷೇತ್ರಗಳಿಗೆ ತಾಗಿಕೊಂಡೇ ಇದೆ. ಹೀಗಾಗಿ, ಈ ಕ್ಷೇತ್ರದಲ್ಲಿನ ಗೆಲುವು ಬಿಜೆಪಿಯ ನೈತಿಕ ಸ್ಥೈರ್ಯವನ್ನು ಇಮ್ಮಡಿಗೊಳಿಸಿದೆ. ಮೇಲಾಗಿ, ಭ್ರಷ್ಟಾಚಾರ ಆರೋಪ ಹಾಗೂ ಸ್ವಜಪಕ್ಷಪಾತ ಆರೋಪಗಳು ಸಿಎಂ ಮೈಗಂಟಿರುವುದು ಕೂಡ ಬಿಜೆಪಿಗೆ ಪರ್ಯಾಯ ಎದುರಾಳಿಯನ್ನಾಗಿ ರೂಪಿಸಿಕೊಳ್ಳುವ ಶಕ್ತಿ ತುಂಬಿದೆ. ಉಪ ಚುನಾವಣೆ ಗೆದ್ದಿದ್ದಕ್ಕೆ ಟ್ವೀಟ್ ಮೂಲಕ ಅಭಿನಂದನೆ ತಿಳಿಸಿದ್ದ ಪ್ರಧಾನಿ ನರೇಂದ್ರ ಮೋದಿ, ‘ಇದೊಂದು ಐತಿಹಾಸಿಕ ವಿಜಯ’ ಎಂದು ಬಣ್ಣಿಸಿದ್ದರು. ಪಾಲಿಕೆ ಚುನಾವಣೆ ಪ್ರಚಾರದಲ್ಲಿ ಮೋದಿ ಪಾಲ್ಗೊಳ್ಳದಿದ್ದರೂ, ಕರೊನಾ ಲಸಿಕೆ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್​ಗೆ ಚುನಾವಣೆ ಸಮಯದಲ್ಲೇ ಭೇಟಿ ನೀಡಿರುವುದು ಹೈದರಾಬಾದ್​ನಲ್ಲಿ ಸಂಚಲನ ಸೃಷ್ಟಿಸಿದ್ದು ಸುಳ್ಳಲ್ಲ.

ಗ್ರೇಟರ್ ಹೈದರಾಬಾದ್ ಪ್ರವೇಶಕ್ಕೆ ಬಿಜೆಪಿ ಪರವಾಗಿ ಕನ್ನಡಿಗರೂ ಕೆಲಸ ಮಾಡುತ್ತಿರುವುದು ಈ ಬಾರಿಯ ವಿಶೇಷ. ಆರೋಗ್ಯ ಸಚಿವ ಡಾ. ಸುಧಾಕರ್, ಶಾಸಕ ಸತೀಶ್ ರೆಡ್ಡಿ ಕಮಲ ಅರಳಿಸಲು ಕಸರತ್ತು ನಡೆಸಿದ್ದಾರೆ. ಸಚಿವ ಸುಧಾಕರ್ ತಮ್ಮ ತಂಡದ ಜತೆ ಹಲವು ದಿನಗಳಿಂದ ಹೈದರಾಬಾದ್​ನಲ್ಲಿಯೇ ಬೀಡುಬಿಟ್ಟಿದ್ದು 40 ಸ್ಥಾನಗಳನ್ನು ಗೆಲ್ಲುವ ಉತ್ಸಾಹ ತೋರಿದ್ದಾರೆ. ಸುಧಾಕರ್ ಅವರ ತೆಲುಗು ಸಂವಹನ ಹಾಗೂ ಆಂಧ್ರ-ತೆಲಂಗಾಣ ಭಾಗದಲ್ಲಿನ ಸಂಪರ್ಕ ಮನಗಂಡಿದ್ದ ಹೈಕಮಾಂಡ್​ಗೆ ಈ ಸಲ ಚಿಕ್ಕಬಳ್ಳಾಪುರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕ ಭರ್ಜರಿ ಗೆಲುವು ಹೊಸ ಅವಕಾಶ ಸೃಷ್ಟಿಸಿದೆ. ಸುಧಾಕರ್ ತಮ್ಮ ಕಾರ್ಯತಂತ್ರವನ್ನು ಹೈದರಾಬಾದ್​ನಲ್ಲಿಯೂ ಬಳಸಿದ್ದಾರಂತೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − fifteen =
Remember me
