| ಚಿತ್ರದುರ್ಗ ಸಂಜೀವಮೂರ್ತಿ
ಹಾಸನ ಜಿಲ್ಲೆ ಹೊಳೆನರಸಿಪುರದಲ್ಲಿ ಪ್ರಸಿದ್ಧ ವೇದಾಂತ ತತ್ತ್ವಪ್ರಚಾರ ಸಂಸ್ಥೆ ಅಧ್ಯಾತ್ಮಪ್ರಕಾಶ ಕಾರ್ಯಾಲಯವಿದೆ. ಅದನ್ನು 1920ರಲ್ಲಿ ‘ಕರ್ನಾಟಕ ಶಂಕರಾಚಾರ್ಯ’ರೆಂದೇ ಪ್ರಖ್ಯಾತರಾದ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸದ್ಗುರು ಸ್ಥಾಪಿಸಿದರು. ಇಂದು ಅವರ (ಜನನ-5 ಜನವರಿ, 1880) 142ನೇ ಜಯಂತಿ.
ಚಿಕ್ಕಮಗಳೂರಿನ ಯಳ್ಳಂಬಳಸೆ ಗ್ರಾಮದಲ್ಲಿ ನಂಜುಂಡಯ್ಯ ಹಾಗೂ ಲಕ್ಷ್ಮಿದೇವಮ್ಮ ಪುತ್ರರಾಗಿ ಅವತರಿಸಿದ ವೈ.ಸುಬ್ಬರಾಯರು, ಬಾಲ್ಯವನ್ನು ಹಳ್ಳಿಯಲ್ಲೇ ಕಳೆದರು. ತಾಯಿ ಹೇಳಿಕೊಡುತ್ತಿದ್ದ ಭಕ್ತಿಗೀತೆಗಳು, ತಂದೆಯ ನೇಮಾನುಷ್ಠಾನ, ಮಂತ್ರ-ಸ್ತೋತ್ರ ಪಾಠಗಳ ಪರಿಸರ ಬಾಲಕನ ಮೇಲೆ ಪ್ರಭಾವಬೀರಿತು. 1894ರಲ್ಲಿ ವೆಂಕಟಲಕ್ಷಮ್ಮ ಜತೆ ಕಡೂರಿನಲ್ಲಿ ವಿವಾಹ. ನಂತರ ಚಿಕ್ಕಮಗಳೂರಿನಲ್ಲಿ ಹೈಸ್ಕೂಲು ಶಿಕ್ಷಣ ಮುಂದುವರಿದಾಗ, ಊಟಕ್ಕೆ ಸಮಸ್ಯೆ. ಪ್ರಧಾನಾಧ್ಯಾಪಕರಾಗಿದ್ದ ಸುಬ್ರಮಣ್ಯ ಐಯ್ಯರ್ ಆಸರೆ ನಿಟ್ಟುಸಿರು ಕೊಟ್ಟಿತು. ಆಗಿನಿಂದಲೇ ವೇದಾಂತದಲ್ಲಿ ಆಸಕ್ತಿ ಮೊಳೆಯಿತು. ಇಂಗ್ಲಿಷ್​ನಲ್ಲಿ ‘ದಿ ಫಿಲಾಸಫಿ ಆಫ್ ಟ್ರೂತ್’ ತತ್ತ್ವಜ್ಞಾನ ಗ್ರಂಥವನ್ನು ರಚಿಸಿದ್ದರು.
ಮುಂದಿನ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ, 2 ರೂಪಾಯಿಗಳ ವಿದ್ಯಾರ್ಥಿ ವೇತನ ಮತ್ತು 4 ರೂಪಾಯಿಗಳ ಖಾಸಗಿ ಪಾಠದ ಆದಾಯದಿಂದ ವಿದ್ಯಾರ್ಥಿ ಜೀವನ ಸಾಗಿತು. ಸಂಸ್ಕೃತ ಪಾಠಶಾಲೆಯಲ್ಲಿ ಪ್ರವೇಶ ದೊರಕಿದ್ದರಿಂದ ಅಲ್ಲಿ ಕೂಡ ಸ್ವಲ್ಪ ವಿದ್ಯಾರ್ಥಿ ವೇತನ ದೊರಕುತ್ತಿತ್ತು. ಸೀನಿಯರ್ ಎಫ್.ಎ. ತರಗತಿಗೆ ತೇರ್ಗಡೆಯೂ, ಸಂಸ್ಕೃತ ವ್ಯಾಸಂಗ ವಿಸ್ತಾರವೂ ಆಯಿತು. ಯಳ್ಳಂಬಳಸೆಗೆ ಹಿಂದಿರುಗಿದ ಸುಬ್ಬರಾಯರು ಅವಕಾಶ ದೊರೆತಾಗ ಹಲವಾರು ಮಕ್ಕಳಿಗೆ ಸಂಸ್ಕೃತ ಕಲಿಸತೊಡಗಿದರು. ಅಲ್ಲಿ ಪ್ಲೇಗ್ ಆವರಿಸಿದ್ದರಿಂದ ರಾಯರು ಬೆಂಗಳೂರಿಗೆ ಬಂದು, ವ್ಯಾಕರಣ ಅಭ್ಯಾಸದಲ್ಲಿ ತೊಡಗಿದರು. ಜಗಳೂರು ಸರ್ಕಾರಿ ಶಾಲೆ ಉಪಾಧ್ಯಾಯರಾಗಿ ನೇಮಕವಾದ ರಾಯರು, ಅನಂತರ ಹೊಳಲ್ಕೆರೆ, ಮೊಣಕಾಲ್ಮೂರಿನಲ್ಲಿ ಕಾಯಂ ಶಿಕ್ಷಕರಾದರು.
ದಾವಣಗೆರೆಯ ಮಾಗಾನಹಳ್ಳಿ ದೊಡ್ಡಬಸಪ್ಪ ಎಂಬುವರು ವಿವೇಕಾನಂದರ ಕೃತಿಗಳನ್ನೆಲ್ಲ ಕೊಟ್ಟು ರಾಜಯೋಗವನ್ನು ಭಾಷಾಂತರಿಸಿ ಪ್ರಕಟಿಸಬೇಕೆಂದು ಕೋರಿದರು. ಈ ಗ್ರಂಥ ಪ್ರಕಟಣೆಯಿಂದ ಆದ ಸಂಪಾದನೆಯೇ ಮುಂದೆ ಅಧ್ಯಾತ್ಮಪ್ರಕಾಶ ಕಾರ್ಯಾಲಯ ಸಂಸ್ಥೆ ಸ್ಥಾಪನೆಗೆ ಬೀಜಧನವೂ ಆಯಿತು. ಇಲ್ಲಿಂದ ಮುಂದೆ ಸತತ ಅಧ್ಯಯನ, ಅಧ್ಯಾಪನಗಳ ಫಲದಿಂದ ಪಕ್ವಗೊಂಡಿದ್ದ ಮನಸ್ಸು ಗ್ರಂಥರಚನೆಗೆ ಹೊರಳಿತು. ಜೀವನದ ಪರಮಗುರಿ, ಅಧ್ಯಾತ್ಮಜ್ಞಾನ ಮತ್ತು ಸಾಧನೆ, ಭಗವದ್ಗೀತೆಯ ಮರ್ಮ ಮುಂತಾದವುಗಳನ್ನು ಸಿದ್ಧಪಡಿಸಿದರು. ‘ಕರ್ನಾಟಕ ವಾಕ್ಯರಚನಾ ಕ್ರಮ’ ಎಂಬ ಅಪೂರ್ವ ಕೃತಿ ಸತತ 38 ವರ್ಷಗಳ ಕಾಲ ಶಾಲೆಗಳಲ್ಲಿ ಪಠ್ಯಪುಸ್ತಕವಾಗಿತ್ತು.
ಈ ಸಂಸ್ಥೆ ಅಧ್ಯಾತ್ಮ ಗ್ರಂಥಾವಳೀ ಎಂದು 250ಕ್ಕೂ ಹೆಚ್ಚು ಗ್ರಂಥಗಳನ್ನು ಅಚ್ಚಕನ್ನಡ, ಸಂಸ್ಕೃತ ಹಾಗೂ ಆಂಗ್ಲಭಾಷೆಗಳಲ್ಲಿ ಹೊರತಂದು, ವೇದಾಂತ ಬಾಲಬೋಧೆಯಿಂದ ಉಪನಿಷದ್ಭಾಷ್ಯಗಳವರೆಗೂ ಪ್ರಕಟಿಸಿ ಈಗಾಗಲೇ 75 ವರ್ಷಗಳನ್ನು ಕಂಡಿದೆ.
1935ರಲ್ಲಿ ರಾಯರಿಗೆ ಸರ್ಕಾರಿ ಸೇವೆಯಿಂದ ನಿವೃತ್ತಿ ದೊರಕಿತು. 1942ರಲ್ಲಿ ಪಿತ್ರಾರ್ಜಿತ ಆಸ್ತಿ ಮಾರಾಟದಿಂದ ಬಂದ ಹಣವನ್ನೇ ಮೂಲ ಬಂಡವಾಳವಾಗಿ ಹೂಡಿ ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಸಂಸ್ಥೆ ಪ್ರಾರಂಭಿಸಲು ಕಾರ್ಯೋನ್ಮುಖರಾದರು. ಮಾನಸಿಕವಾಗಿ ವೈರಾಗ್ಯತಾಳಿದ್ದ ಸುಬ್ಬರಾಯರು 1948ರ ಜೂನ್ 10ರಂದು ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳಾಗಿ, ಯತಿವರೇಣ್ಯರಾಗಿ ಯೋಗಪಟ್ಟ ಸ್ವೀಕರಿಸಿದರು. 68 ವರ್ಷಗಳ ಕಾಲ ಅಧ್ಯಯನ, ಬೋಧನ, ಚಿಂತನ ಮತ್ತು ಗ್ರಂಥರಚನೆ ಕಾರ್ಯ ಮಾಡಿದ ಅವರು, ಲೌಕಿಕಬಂಧನದಿಂದ ಮುಕ್ತರಾಗಿ ವೇದಾಂತಕ್ಕೆ ತಮ್ಮನ್ನು ಅರ್ಪಿಸಿಕೊಂಡರು. ಮುಖ್ಯವಾಗಿ ಶುದ್ಧಶಾಂಕರ ವೇದಾಂತದ ತಿಳಿವಿನ ಹಸಿವುಳ್ಳವರಿಗೆ ಕಾರ್ಯಾಲಯವೊಂದು ಸನ್ನಿಧಿ ಕೇಂದ್ರವಾಯಿತು.
ಇಡೀ ಭಾರತ ಪ್ರವಾಸದ ನಿರ್ಧಾರ ಮಾಡಿದಾಗ ಶ್ರೀಗಳ ವಯಸ್ಸು 87. ಈ ದಿಗ್ವಿಜಯ ಯಾತ್ರೆಯಂತೂ ಒಂದು ಸಾರ್ವಕಾಲಿಕ ದಾಖಲೆ. ಅಭಿಮಾನಿ ಶಿಷ್ಯಕೋಟಿ ಸಮ್ಮುಖದಲ್ಲಿ 96ರ ಪ್ರಾಯದಲ್ಲಿ 1975 ಆಗಸ್ಟ್ 5ರಂದು ತಮ್ಮ ಐಹಿಕ ಜೀವನವನ್ನು ಬೆಂಗಳೂರಿನಲ್ಲಿ ಮುಕ್ತಾಯಗೊಳಿಸಿದರು. ಇವರ ಸಮಾಧಿಯು ಹೊಳೆನರಸೀಪುರದ ಕಾರ್ಯಾಲಯದಲ್ಲಿಯೇ ಸ್ಥಾಪಿಸಲ್ಪಟ್ಟಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 4 =
Remember me
