|ಪಂಡಿತ್ ಪ್ರವೀಣ್ ಗೋಡ್ಖಿಂಡಿಪ್ರಸಿದ್ಧ ಸಂಗೀತಗಾರ
ಪಂಡಿತ್ ಶಿವಕುಮಾರ ಶರ್ಮಾ ಮತ್ತು ಸಂತೂರ್ ಎರಡೂ ಒಂದೇ ಎಂದು ನಾವು ಎಲ್ಲ ಸಂಗೀತಗಾರರು ಮತ್ತು ಸಂಗೀತ ರಸಿಕರು ಅಂದುಕೊಂಡಿದ್ದೇವೆ. ಏಕೆಂದರೆ, ಸಂತೂರು ಎಂದಾಕ್ಷಣ ಪಂಡಿತರ ಮುಖ ಮತ್ತು ಅವರು ನುಡಿಸಾಣಿಕೆ ಕಣ್ಣ ಮುಂದೆ ಸರಿದು ಹೋಗುತ್ತದೆ. ಅಂಥ ಮಹಾನ್ ವ್ಯಕ್ತಿ ಇಂದು ನಮ್ಮ ಜತೆ ಇಲ್ಲ ಎಂದು ನಂಬುವುದಕ್ಕೇ ಸಾಧ್ಯವಿಲ್ಲ.
ಶಿವಕುಮಾರ್ ಶರ್ಮಾ ಅವರು ಸಂತೂರ್​ಗೆ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಹೊಸ ಆಯಾಮ ಮತ್ತು ಹೊಸ ಶೈಲಿಯನ್ನು ಕಂಡುಹಿಡಿದು, ಈ ಅದ್ಭುತವಾದ ವಾದ್ಯವನ್ನು ಪರಿಚಯಿಸಿದ ಮೇರು ಕಲಾವಿದ. ಅವರ ಲಯಕಾರಿ ನನ್ನ ಮೇಲೆ ಬಹಳ ಪ್ರಭಾವ ಬೀರಿತ್ತು. ನಾನು ಚಿಕ್ಕವನಿದ್ದಾಗಿನಿಂದಲೂ ಅವರ ಸಂತೂರ್ ವಾದನವನ್ನು ಕಛೇರಿಯಲ್ಲಿ ಕುಳಿತು ಕೇಳಿದ್ದೇನೆ, ರೆಕಾರ್ಡಿಂಗ್ ಕೇಳಿದ್ದೇನೆ, ರೇಡಿಯೋದಲ್ಲಿ ಹಲವು ಬಾರಿ ಕೇಳಿದ್ದೇನೆ. ಅವರ ಎದುರಿಗೆ ಕುಳಿತು ಕೇಳುವ ಸೌಭಾಗ್ಯ ಬಂದಾಗ, ಅವರು ಮಾಡುವ ಲಯಕಾರಿ (ಒಂದು ಲಯದಿಂದ ಬೇರೆ ಅಂಗ ನುಡಿಸುವುದು) ನನಗೆ ಬಹಳ ಸ್ಪೂರ್ತಿ ನೀಡಿದೆ. ನನ್ನಂತಹ ಅನೇಕ ಸಂಗೀತಗಾರರಿಗೆ ಅವರು ಹೊಸ ದಾರಿಯನ್ನು ತೋರಿಸಿಕೊಟ್ಟಿದ್ದಾರೆ. ಮುಖ್ಯವಾಗಿ ಸಂತೂರ್​ನಲ್ಲಿ ಮೀಂಡ್, ಗಮಕ್ ಇದ್ಯಾವುದೂ ಬಾರದೇ ಇರುವುದರಿಂದ ಅಷ್ಟು ಹೊತ್ತು ಒಂದು ರಾಗದಲ್ಲಿ ಆ ತಂತಿಗಳ ಮಾಧುರ್ಯ, ಅದರ ಕಂಪನದಿಂದಲೇ ಸೆಳೆದು ಜನರ ಮನಸ್ಸು ಗೆಲ್ಲುವ ಶಕ್ತಿ ಅವರಿಗೆ ಇತ್ತು. ಹಿಂದುಸ್ತಾನಿ ಸಂಗೀತದಲ್ಲಿ ಮೀಂಡ್, ಗಮಕ್​ಗಳು, ಅಂದರೆ ಒಂದು ಸ್ವರದಿಂದ ಇನ್ನೊಂದು ಸ್ವರಕ್ಕೆ ಜಾರು ಇಲ್ಲದೆ ಹಾಡುವುದು, ನುಡಿಸುವುದು ಬಹಳ ಕಷ್ಟ. ಅಂಥದ್ದರಲ್ಲಿ ಸಂತೂರ್​ನಂತಹ ವಾದ್ಯದಲ್ಲಿ ಅವರು ಎಲ್ಲ ರಾಗಗಳನ್ನು, ಎಷ್ಟೋ ಕರ್ನಾಟಕ ಸಂಗೀತದ ರಾಗಗಳನ್ನು ಸಹ ಹಿಂದುಸ್ತಾನಿ ಸಂಗೀತಕ್ಕೆ ಅಳವಡಿಸಿ, ಅದರಲ್ಲಿ ಹೊಸಹೊಸ ರಚನೆಗಳನ್ನು ಮಾಡಿ, ಜನಪ್ರಿಯಗೊಳಿಸಿದರು. ಅವರು ನುಡಿಸುವಂತಹ ಕೀರ್ವಾಣಿ ಅದ್ಭುತವಾದ ಕೀರ್ವಾಣಿ ರಾಗ. ಅವರು ನುಡಿಸಿದ ಪ್ರತಿಯೊಂದು ರಾಗವೂ ಬಹಳ ಮಧುರವಾಗಿ ಕೇಳಿಸುತ್ತಿತ್ತು. ಜತೆಗೆ ಮೂಲತಃ ಅದು ಜನಪದ ವಾದ್ಯವಾಗಿರುವುದರಿಂದ, ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಅವರು ಸಂಯೋಜನೆ ಮಾಡುತ್ತಿದ್ದರು. ಜಾನಪದದ ಸೊಗಡು ಮತ್ತು ಶಾಸ್ತ್ರೀಯ ಸಂಗೀತದ ಘನತೆ ಇವೆರಡೂ ಆ ವಾದ್ಯದಲ್ಲಿ ಮೇಳೈಸುವಂತೆ ನುಡಿಸುತ್ತಿದ್ದರು. ಅದೇ ಅವರ ವಿಶೇಷತೆ ಮತ್ತು ದೊಡ್ಡ ಸಾಧನೆ.
ಭಾರತೀಯ ಸಂಗೀತದ ಜತೆಗೆ, ಸಿನಿಮಾ ಕ್ಷೇತ್ರಕ್ಕೂ ಅವರು ಅಪಾರ ಕೊಡುಗೆ ನೀಡಿದ್ದಾರೆ. ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಜತೆಗೆ ಸೇರಿ ಶಿವ್-ಹರಿ ಹೆಸರಲ್ಲಿ ಈ ಇಬ್ಬರು ದಿಗ್ಗಜ ಕಲಾವಿದರು ಅನೇಕ ಸಿನಿಮಾ ಗೀತೆಗಳಿಗೆ ಸಂಗೀತ ನೀಡಿದ್ದಾರೆ. ಅವು ಈಗಲೂ ಜನಪ್ರಿಯ. ಅದಕ್ಕೆ ಮೂಲ ಕಾರಣ ಮೆಲೋಡಿ. ಸುಶ್ರಾವ್ಯವಾದ ಸ್ವರ ಜೋಡಣೆಯೇ ಅವರ ನಿಜವಾದ ತಾಕತ್ತು.
ಶಿವ್​ಜಿ ಯಾವತ್ತೂ ಅಮರ. ಏಕೆಂದರೆ, ಅವರು ಮಿಡಿದ ತಂತಿಯ ನಾದ, ಅದರ ಕಂಪನಗಳು ನಮ್ಮ ಹೃದಯ, ಮನಸ್ಸು, ಕಿವಿಗಳಲ್ಲಿ ರಿಂಗಣಿಸುತ್ತಿರುತ್ತವೆ.
ಶಿವಕುಮಾರ ಶರ್ಮಾ ಅಗಲಿಕೆಯಿಂದ ನಮ್ಮ ಸಾಂಸ್ಕೃತಿಕ ಜಗತ್ತು ಬಡವಾಗಿದೆ. ಜಾಗತಿಕ ಮಟ್ಟದಲ್ಲಿ ಸಂತೂರನ್ನು ಜನಪ್ರಿಯ ಗೊಳಿಸಿದ ಶರ್ಮಾ ರೊಂದಿಗಿನ ನನ್ನ ಒಡನಾಟ ಅವಿಸ್ಮರಣೀಯ’
|ನರೇಂದ್ರ ಮೋದಿಪ್ರಧಾನಮಂತ್ರಿ
ಮುಂಬೈ:ಭಾರತೀಯ ಸಂಗೀತ ಲೋಕದ ದಿಗ್ಗಜ ರಲ್ಲಿ ಒಬ್ಬರಾದ ಸಂತೂರ್ ಮಾಂತ್ರಿಕ ಪಂಡಿತ್ ಶಿವಕುಮಾರ ಶರ್ಮಾ (83) ಮಂಗಳವಾರ ಬೆಳಗ್ಗೆ ಮುಂಬೈಯಲ್ಲಿ ಹೃದಯಾಘಾತದಿಂದ ನಿಧನರಾದರು. ಅಂತ್ಯಕ್ರಿಯೆ ಬುಧವಾರ ನಡೆಯಲಿದೆ. ಅವರು ಕಳೆದ ಆರು ತಿಂಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಶರ್ಮಾ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ, ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಇನ್ನಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸುವಿಖ್ಯಾತ ಕೊಳಲು ವಾದಕ ಹರಿಪ್ರಸಾದ್ ಚೌರಾಸಿಯಾರೊಂದಿಗೆ ಸೇರಿ ಶರ್ಮಾ ‘ಸಿಲ್​ಸಿಲಾ’, ‘ಚಾಂದನಿ’ ಮತ್ತು ‘ಡರ್’ ಮುಂತಾದ ಜನಪ್ರಿಯ ಹಿಂದಿ ಸಿನಿಮಾಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದರು. 13ನೇ ವಯಸ್ಸಿನಲ್ಲೇ ಸಂತೂರ್ ಕಲಿಯಲು ಆರಂಭಿಸಿದ್ದ ಶರ್ವ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸಹಿತ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪುರಸ್ಕಾರಗಳಿಗೆ ಭಾಜನರಾಗಿದ್ದರು. ಪದ್ಮಶ್ರೀ ಹಾಗೂ ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದರು. ಶರ್ವಗೆ ಪತ್ನಿ ಮನೋರಮಾ, ಇಬ್ಬರು ಪುತ್ರರು ಇದ್ದಾರೆ. ಮಗ ರಾಹುಲ್ ಶರ್ಮಾ ಕೂಡ ಸಂತೂರ್ ವಾದಕ.
ಸುಪ್ರಭಾತ ಅಭಿಯಾನ ಹಿಂಪಡೆದ ಶ್ರೀರಾಮಸೇನೆ; ಅದಕ್ಕೆ ಕಾರಣವಿದು…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + twenty =
Remember me
